675 ಕೋಟಿ ರೂ.ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಝಮೀರ್ ಅಹ್ಮದ್ ಮನವಿ

Update: 2023-12-19 14:23 GMT

ಹೊಸದಿಲ್ಲಿ: ರಾಜ್ಯಕ್ಕೆ ಹೊಸದಾಗಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣಕ್ಕೆ 675 ಕೋಟಿ ರೂ.ಅನುದಾನ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಸಂಸತ್ ಭವನದಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಝಮೀರ್ ಅಹ್ಮದ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಬೇಡಿಕೆ ಇದ್ದು 19 ಶಾಲೆಗಳಿಗೆ 475 ಕೋಟಿ ರೂ.ಗಳು ಹಾಗೂ 50 ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಕೋರಿದರು.

2.93 ಲಕ್ಷ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ವಿದ್ಯಾರ್ಥಿ ವೇತನ ಮೊತ್ತ ಬಿಡುಗಡೆಗೆ ಬಾಕಿ ಇದ್ದು ತಕ್ಷಣ ಬಿಡುಗಡೆ ಮಾಡಬೇಕು. 2023-24ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಇಲಾಖೆ ವತಿಯಿಂದ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆಯೂ ಕೇಂದ್ರ ಸಚಿವರಿಗೆ ಝಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು. ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News