ವಾರಂಟಿ ಕಳೆದುಕೊಳ್ಳುತ್ತಿರುವ ಗ್ಯಾರಂಟಿಗಳು ಮತ್ತು ನಾಗರಿಕ ಸಮಾಜದ ಆತ್ಮವಂಚಕ ಮೌನ!

ಗ್ಯಾರಂಟಿ ಯೋಜನೆಗಳು ಈ ಕಷ್ಟ ಕಾಲದಲ್ಲಿ ಊರುಗೋಲು. ಅದು ಮುಂದುವರಿಯಬೇಕು. ಆದರೆ ಸರಕಾರ ಬಡವರ ಎಡಗೈ ಜೇಬಿನಿಂದ ಕಸಿದು ಬಲಗೈ ಜೇಬಿಗೆ ಹಾಕುವ ಕುತಂತ್ರ ಮಾಡಬಾರದು. ಗ್ಯಾರಂಟಿಗೆ ಬೇಕಿರುವ ಸಂಪನ್ಮೂಲಗಳನ್ನು ಗ್ಯಾರಂಟಿ ಫಲಾನುಭವಿಗಳ ಮೇಲಿನ ಹೊರೆಯೇರಿಸಿ ಕ್ರೋಡೀಕರಿಸುವುದು ಸಾಮಾಜಿಕ ಅನ್ಯಾಯ. ಆರ್ಥಿಕ ಅನ್ಯಾಯ.

Update: 2024-07-10 04:48 GMT
Editor : Thouheed | Byline : ಶಿವಸುಂದರ್

ಲೋಕಸಭಾ ಚುನಾವಣೆಯ ನಂತರ ಕರ್ನಾಟಕದ ಕಾಂಗ್ರೆಸ್ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಅನುಸರಿಸುತ್ತಿರುವ ನೀತಿಗಳು ಮೋದಿ ಸರಕಾರದ ನಕಲಿನಂತೆ ಕಾಣತೊಡಗಿದೆ. ಕಾರ್ಪೊರೇಟ್ ಪರ ಹಾಗೂ ಜನವಿರೋಧಿ ಆರ್ಥಿಕ ನೀತಿಗಳು, ಮೃದು ಹಿಂದುತ್ವವಾದ ಧೋರಣೆಗಳು ಹಾಗೂ ಆಡಳಿತದಲ್ಲಿ ಫ್ಯೂಡಲ್ ಮತ್ತು ಅಧಿಕಾರ ಶಾಹಿ ಧೋರಣೆಗಳು ಸಿದ್ದು ಸರಕಾರವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವವರಲ್ಲೂ ಇರಿಸುಮರಿಸು ಹುಟ್ಟಿಸುತ್ತಿದೆ. ಇದರ ಬಗ್ಗೆ ಆಶ್ಚರ್ಯ ಪಡುವುದಕ್ಕೇನೂ ಇಲ್ಲವಾದರೂ ಬಿಜೆಪಿಯೆಂಬ ಪೆಡಂಭೂತದ ವಿರುದ್ಧ ಅನಿವಾರ್ಯವಾಗಿ ಆದರೆ ಮೈಮರೆತು ಕಾಂಗ್ರೆಸ್ ಜೊತೆ ಕೈಜೋಡಿಸಿದವರಲ್ಲಿ ಹಾಗೂ ರಾಹುಲ್ ಗಾಂಧಿಯ ನಿರ್ಭೀತ ವಾಗ್ದಾಳಿಯ ಸಹಜ ಮೋಹಕ್ಕೂ ಒಳಗಾದವರಲ್ಲಿ ಈ ಬೆಳವಣಿಗೆಗಳು ಕಸಿವಿಸಿ ಹುಟ್ಟಿಸಿದೆ.

ಈ ಕೆಲ ಬೆಳವಣಿಗೆಗಳನ್ನು ಗಮನಿಸಿ:

ಗ್ಯಾರಂಟಿಗಳ ಪರೋಕ್ಷ ಹಿಂದೆಗೆತದ ಕ್ರಮಗಳು:

ಅನರ್ಹ ಬಿಪಿಎಲ್ ಕಾರ್ಡ್ ರದ್ದೋ?

ಗ್ಯಾರಂಟಿ ಫಲಾನುಭವಿಗಳ ಕಡಿತವೋ?

ಈ ಬಾರಿ ಕರ್ನಾಟಕದ ಜನತೆ ಸಿದ್ದು ಸರಕಾರವನ್ನು ಆಯ್ಕೆ ಮಾಡಿದ್ದಕ್ಕೆ ಪ್ರಧಾನ ಕಾರಣಗಳಲ್ಲಿ ಒಂದು ಗ್ಯಾರಂಟಿ ಯೋಜನೆಗಳು. ಈ ಯೋಜನೆಗಳಿಂದ ಸರಕಾರದ ಬೊಕ್ಕಸಕ್ಕೆ 52,000 ಕೋಟಿ ರೂ. ಹೊರೆಯಾಗುತ್ತದೆಂದು ಸ್ವತಃ ಹಣಕಾಸು ಮಂತ್ರಿಯೂ ಆಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ತಿಳಿದೇ ಇತ್ತು. 2023-24ರ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಾ ಸಿದ್ದರಾಮಯ್ಯನವರು:

‘‘ಕರ್ನಾಟಕದ ಬಜೆಟ್ಟಿನ ಗಾತ್ರ 3.5 ಲಕ್ಷ ಕೋಟಿ ರೂ. ಇದರಲ್ಲಿ ಬಡಜನರ ಕಲ್ಯಾಣಕ್ಕೆ 52,000 ಕೋಟಿ ರೂ. ಎತ್ತಿಡುವುದು ಸಮಸ್ಯೆಯೇ ಅಲ್ಲ. ಬಿಜೆಪಿ ಕಾಲದಲ್ಲಿ ನಡೆದ ಶೇ. 40ನ್ನು ಮೀರಿದ ಆಡಳಿತ ಭ್ರಷ್ಟಾಚಾರವನ್ನು ನಿಗ್ರಹಿಸಿದರೇ ಸಾಕು ಗ್ಯಾರಂಟಿಗೆ ಬೇಕಿರುವ ಹಣ ದೊರಕುತ್ತದೆ. ಇದಲ್ಲದೆ ಸೋರಿಕೆಯ ತಡೆ, ರಾಜ್ಯದ ಸ್ವಸಂಪನ್ಮೂಲಗಳ ಮೇಲಿನ ದಕ್ಷ ತೆರಿಗೆ ಸಂಗ್ರಹ, ಆರ್ಥಿಕತೆಯ ಬೆಳವಣಿಗೆ ಇತ್ಯಾದಿಗಳ ಮೂಲಕ ಗ್ಯಾರಂಟಿಗೆ ಬೇಕಿರುವ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುವುದು. ಈ ವೆಚ್ಚದಿಂದ ಅಭಿವೃದ್ಧಿ ವೆಚ್ಚಗಳಿಗೆ ಯಾವ ತಡೆಯೂ ಆಗುವುದಿಲ್ಲ’’ ಎಂದು ಘೋಷಿಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ಯಾರಂಟಿಗೆ ಯಾವುದೇ ಧಕ್ಕೆ ಬಾರದಂತೆ ಸರಕಾರ ಸಾಲಗಳ ಮೂಲಕವೂ ಸಂಪನ್ಮೂಲ ಸಂಗ್ರಹಿಸಿತು.

ಆದರೆ ಲೋಕಸಭಾ ಚುನಾವಣೆಯಾದ ಕೂಡಲೇ ಗ್ಯಾರಂಟಿ ಫಲಾನುಭವಿ ವರ್ಗಗಳ ಮೇಲೆಯೇ ಹೆಚ್ಚಿನ ಆರ್ಥಿಕ ಹೊರೆ ಹೇರುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಬಡವರು ಬಳಸುವ ಅರ್ಧ ಲೀಟರ್ ಹಾಲಿಗೂ ಹೆಚ್ಚುವರಿ ಹಾಲಿನ ನೆಪವೊಡ್ಡಿ ಹೆಚ್ಚು ಬೆಲೆತೆತ್ತು ಖರೀದಿಯನ್ನು ಕಡ್ಡಾಯ ಮಾಡುವ ಮೂಲಕ ಹಾಲಿನ ದರ ಏರಿಕೆ, ಇತ್ಯಾದಿ ಕ್ರಮಗಳನ್ನು ಪ್ರಾರಂಭಿಸಿದೆ.

ಇದರ ಜೊತೆಗೆ ಮೊನ್ನೆ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಕಟ್ಟುನಿಟ್ಟಿನ ನಿರ್ದೇಶನವನ್ನು ಮಖ್ಯಮಂತ್ರಿಗಳು ಅಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಅದಕ್ಕೆ ಅವರು ಬಳಸಿಕೊಂಡಿರುವುದು ಯಥಾವತ್ ಮೋದಿ ಸರಕಾರದ ವಾದಗಳನ್ನೇ!

ಚುನಾವಣೆಗೆ ಮುನ್ನ ಗ್ಯಾರಂಟಿಗಳ ಅಗತ್ಯವನ್ನು ಪ್ರತಿಪಾದಿಸುತ್ತಾ ಹೇಗೆ ಕಳೆದ ಹತ್ತು ವರ್ಷಗಳ ಮೋದಿ ಸರಕಾರ ಬಡತನವನ್ನು ಮತ್ತು ಬಡತನದ ದಾರುಣತೆಯನ್ನು ಹೆಚ್ಚಿಸಿದೆ ಎಂಬ ಕಾರಣಗಳನ್ನು ನೀಡಿತ್ತು ಮತ್ತು ಗ್ಯಾರಂಟಿಗಳು ಬಡವರ ಬದುಕನ್ನು ಸಹ್ಯಗೊಳಿಸುವಷ್ಟು ಸಂಪನ್ಮೂಲವನ್ನು ಬಡಕುಟುಂಬಗಳಿಗೆ ಒದಗಿಸುತ್ತದೆ ಎಂದು ಸಮರ್ಥಿಸಿಕೊಂಡಿತ್ತು. ಹಾಗೂ ಗ್ಯಾರಂಟಿಗಳ ಫಲಾನುಭವಿಗಳನ್ನು ಗುರುತಿಸಲು ಬಿಪಿಎಲ್ ಮಾನದಂಡವನ್ನು ಬಳಸಿಕೊಂಡಿತ್ತು ಮತ್ತು ಅದನ್ನು ಆಧರಿಸಿಯೇ ಗ್ಯಾರಂಟಿ ಯೋಜನೆಗಳಿಗೆ ಆ ಪ್ರಮಾಣದ ಮೊತ್ತವನ್ನು ನಿಗದಿ ಮಾಡಿತ್ತು.

ಆದರೆ ಈಗ ಲೋಕಸಭಾ ಚುನಾವಣೆಯಾದ ನಂತರದಲ್ಲಿ ಮೊನ್ನೆ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ‘‘ಕೇಂದ್ರದ ಓiಖಿi ಆಯೋಗವು ಕರ್ನಾಟಕದಲ್ಲಿ ಬಡತನ ಕಡಿಮೆಯಾಗಿದೆಯೆಂದು ಹೇಳಿದ್ದರೂ ಕರ್ನಾಟಕದಲ್ಲಿ ಶೇ. 80ರಷ್ಟು ಜನರನ್ನು ಬಿಪಿಎಲ್ ಎಂದು ಏಕೆ ಪರಿಗಣಿಸಲಾಗಿದೆ?’’ ಎಂದು ಕೇಳಿದ್ದಾರೆ. ದೇಶದಲ್ಲಿ ಮೋದಿ ಅವಧಿಯಲ್ಲಿ ಬಡತನವು ಶೇ. 25ರಿಂದ ಶೇ. 8ಕ್ಕೆ ಇಳಿದಿದೆ ಎಂಬ ಮೋದಿ ಸರಕಾರದ ಹಾಗೂ ಆಯೋಗದ ವಾದವನ್ನು ಈ ದೇಶದ ಎಲ್ಲಾ ಪ್ರಜ್ಞಾವಂತರು ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಖಂಡತುಂಡವಾಗಿ ಖಂಡಿಸುತ್ತಾ ಬಂದಿತ್ತು. ಏಕೆಂದರೆ ದೇಶದಲ್ಲಿ ಬಡತನ ಕಡಿಮೆಯಾಗಿದ್ದರೆ ಮೋದಿ ಸರಕಾರ ದೇಶದ 80 ಕೋಟಿ ಬಡವರಿಗೆ ತಿಂಗಳಿಗೆ 5 ಕೆ.ಜಿ. ಆಹಾರ ಧಾನ್ಯ ಒದಗಿಸುವ ‘ಗರೀಬ್ ಕಲ್ಯಾಣ್’ ಯೋಜನೆಯನ್ನು ಮುಂದುವರಿಸಿದ್ದೇಕೆ ಎಂದು ಸ್ವಯಂ ಕಾಂಗ್ರೆಸ್ ನಾಯಕರೇ ಮೋದಿ ಸರಕಾರದ ಸುಳ್ಳುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈಗ ಸ್ವತಃ ಕಾಂಗ್ರೆಸ್ ಮುಖ್ಯಮಂತ್ರಿಗಳೇ ಅಯೋಗದ ಹೇಳಿಕೆಯನ್ನು ಒಪ್ಪಿಕೊಂಡು ಅದರಂತೆ ಕರ್ನಾಟಕದಲ್ಲಿ ಬಿಪಿಎಲ್ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದರ ಜೊತೆಗೆ ತಮಿಳುನಾಡಿನಲ್ಲಿ ಬಿಪಿಎಲ್ ಫಲಾನುಭವಿಗಳ ಸಂಖ್ಯೆ ಶೇ. 40 ಇರುವಾಗ ಕರ್ನಾಟಕದಲ್ಲಿ ಶೇ. 80 ಏಕೆ ಎಂದು ಕೇಳಿರುವ ಮುಖ್ಯಮಂತ್ರಿಗಳು ಪರೋಕ್ಷವಾಗಿ ಬಿಪಿಎಲ್ ಫಲಾನುಭವಿಗಳ ಸಂಖ್ಯೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಲು ಪರೋಕ್ಷ ಸೂಚನೆ ನೀಡುತ್ತಿದ್ದಾರೆಯೇ?

ಹಾಗೆ ನೋಡಿದರೆ NiTi ಆಯೋಗದ ಪ್ರಕಾರ ಕರ್ನಾಟಕದಲ್ಲಿ ಬಡವರ ಸಂಖ್ಯೆ ಕೇವಲ ಶೇ. 5. ಇದನ್ನು ಕೂಡ ಸಿದ್ದರಾಮಯ್ಯ ಸರಕಾರ ಒಪ್ಪಿಕೊಳ್ಳುವುದೇ?

ಸಿದ್ದು ಸರಕಾರ ತಾನೇ ವಿರೋಧಿಸಿದ್ದ ಆಯೋಗದ ವಿಶ್ಲೇಷಣೆಯನ್ನು ತಾನೇ ಒಪ್ಪಿಕೊಳ್ಳಲು ಕಾರಣ ಗ್ಯಾರಂಟಿಗಳ ವೆಚ್ಚದ ಕಡಿತ. ಹಲವಾರು ಗ್ಯಾರಂಟಿಗಳಿಗೆ ಬಿಪಿಎಲ್ ಆಗಿರುವುದು ಅತ್ಯವಶ್ಯ. ಹೀಗಾಗಿ ಬಿಪಿಎಲ್ ಫಲಾನುಭವಿಗಳ ಸಂಖ್ಯೆಯನ್ನೇ ಕಡಿಮೆ ಮಾಡುತ್ತಾ ಗ್ಯಾರಂಟಿ ವೆಚ್ಚ ಕಡಿಮೆ ಮಾಡುವುದು ಇದರ ಹಿಂದಿನ ತಾತ್ಪರ್ಯ.

ಇದರ ಅರ್ಥ ಬಿಪಿಎಲ್ ಯೋಜನೆಯ ಫಲವನ್ನು ಅನರ್ಹರು ಪಡೆದುಕೊಳ್ಳುತ್ತಿಲ್ಲ ಎಂದಲ್ಲ. ಹಲವು ಕಡೆ ಮಹಲುಗಳ ಮಾಲಕರು ಹಲವು ಇತರ ಬಗೆಯ ಲಾಭಗಳನ್ನು ಪಡೆದುಕೊಳ್ಳಲು ಬಿಪಿಎಲ್ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇವರುಗಳು ಅನರ್ಹರೇ. ಇವರನ್ನು ತೆಗೆಯಲೇ ಬೇಕು. ಆದರೆ ದೇಶದಲ್ಲಿ ಈ ಬಗೆಯಲ್ಲಿ ದುರ್ಬಳಕೆ ಮತ್ತು ಸೋರಿಕೆಯನ್ನು ತಡೆಯುವ ದೃಷ್ಟಿಯಿಂದ ಜನಕಲ್ಯಾಣ ಯೋಜನೆಗಳನ್ನು Targetted ಮಾಡಿದಾಗ ಹಾಗೂ ತಂತ್ರಜ್ಞಾನಾಧಾರಿತ ಷರತ್ತುಗಳನ್ನು ವಿಧಿಸಿದಾಗ ನೈಜ ಫಲಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹೊರದೂಡಲ್ಪಡುತ್ತಾರೆ. ಆದರೆ ಯೋಜನೆಗಳನ್ನು Universal-ಸಾರ್ವತ್ರಿಕ ಮಾಡಿದಾಗ ಅನರ್ಹರೂ ಅದರ ಲಾಭವನ್ನು ಪಡೆದುಕೊಂಡರೂ ಅರ್ಹರು ಯಾರೂ ಹೊರಗುಳಿಯುವುದಿಲ್ಲ.

ಹೀಗಾಗಿ ಅನರ್ಹರಿದ್ದರೂ ನೈಜ ಫಲಾನುಭವಿಗಳಿಗೆ ಷರತ್ತುಗಳನ್ನು ವಿಧಿಸದೆ ಸೌಕರ್ಯ ಒದಗಿಸುವ Universal ವ್ಯವಸ್ಥೆಯನ್ನು ಅನುಸರಿಸಬೇಕೆಂದು ಈ ಹಿಂದೆ ಪ್ರಗತಿಪರರು ಸಕಾರಣವಾಗಿ ಮೋದಿ ಸರಕಾರಕ್ಕೆ ಒತ್ತಾಯಿಸಿದ್ದರು. ಕಾಂಗ್ರೆಸ್ ಕೂಡ ಅದೇ ಒತ್ತಾಯವನ್ನು ಮಾಡಿತ್ತು.

ಈಗ ಸಿದ್ದು ಸರಕಾರ ಮತ್ತೊಮ್ಮೆ ಮೋದಿ ಮಾರ್ಗ ಹಿಡಿದು ಮೋದಿಯಂತೆ ಬಡತನ ಕಡಿಮೆಯಾಗಿದೆ ಎಂಬ ರಾಗ ಹಾಡುತ್ತಿದೆ. ಅಲ್ಲದೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವಾಗ ಮತ್ತು ಅದಕ್ಕೆ ಬಜೆಟ್‌ನಲ್ಲಿ ಮೊತ್ತ ಎತ್ತಿಡುವಾಗ ಬಿಪಿಎಲ್‌ನಲ್ಲಿ ಅನರ್ಹರೂ ಇದ್ದಾರೆ ಎಂಬುದು ಸಿದ್ದು ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದ್ದೇ ಘೋಷಿಸಿದ್ದಲ್ಲವೇ?

ಗ್ಯಾರಂಟಿಗಳಿಗೆ SCSP ಮತ್ತು TSP ಹಣ ಬಳಕೆಯ ಕುತಂತ್ರ

ಅದೇ ರೀತಿ ಇತ್ತೀಚಿನ ಕ್ಯಾಬಿನೆಟ್ ಮೀಟಿಂಗಿನಲ್ಲಿ ಸಿದ್ದು ಸರಕಾರ ಪರಿಶಿಷ್ಟರ SCSP (ಪರಿಶಿಷ್ಟ ಜಾತಿಗಳ ಉಪ ಯೋಜನೆ) ಮತ್ತು TSP(ಪರಿಶಿಷ್ಟ ವರ್ಗಗಳ ಉಪ ಯೋಜನೆ)ಗೆ ನಿಗದಿಯಾದ 39,121 ಕೋಟಿ ರೂ. ಮೊತ್ತದಲ್ಲಿ 14,282 ಕೋಟಿ ರೂ.ಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಿದೆ. 2023ರಲ್ಲೂ ಸರಕಾರ ಇದೇ ರೀತಿ SಅSP ಮತ್ತುSCSP ಸೇರಿದ 11 ಸಾವಿರ ಕೋಟಿ ರೂ.ಯನ್ನು ಗ್ಯಾರಂಟಿ ನಿರ್ವಹಿಸಲು ವರ್ಗಾಯಿಸಿಕೊಂಡಿತ್ತು. ಆಗ ಸರಕಾರ ಪರಿಶಿಷ್ಟ ಸಮುದಾಯಗಳ ಗ್ಯಾರಂಟಿ ವೆಚ್ಚವನ್ನು ಮಾತ್ರ ಇದರಿಂದ ಭರಿಸಲಾಗುವುದು ಎಂದು ಸಬೂಬು ಕೊಟ್ಟಿತ್ತು. ಈಗಲೂ ಸರಕಾರ ಅದೇ ಸಬೂಬು ಕೊಡುತ್ತಿದೆ.

ಸಿದ್ದು ಸರಕಾರ ಆ ಮೂಲಕ ಪರಿಶಿಷ್ಟ ಸಮುದಾಯಗಳಿಗೆ ಎರಡು ಬಗೆಯ ವಂಚನೆಯನ್ನು ಮಾಡುತ್ತಿದೆ.

ಮೊದಲನೆಯದಾಗಿ ಮತ್ತು ಅತ್ಯಂತ ಮುಖ್ಯವಾಗಿ ಈ ರೀತಿ ಪರಿಶಿಷ್ಟರ ಉಪಯೋಜನೆಗಳ ನಿಧಿಯನ್ನು ಸಾಮಾನ್ಯ ವರ್ಗದ ಯೋಜನೆಗಳಿಗೆ ವರ್ಗಾಯಿಸುವುದು SCSP ಮತ್ತು TSP ಉದ್ದೇಶಗಳನ್ನೇ ವಿಫಲಗೊಳಿಸುತ್ತದೆ.

ಏಕೆಂದರೆ:

SCSP ಮತ್ತು TSP ಯೋಜನೆಗಳು ಒಟ್ಟಾರೆ ಸಮಾಜದ ಬಡತನ ನಿವಾರಣಾ ಯೋಜನೆಗಳ ಭಾಗವಲ್ಲ. ಏಕೆಂದರೆ ಸರಕಾರವು ರೂಪಿಸುವ ಇತರ ಬಡತನ ನಿರ್ಮೂಲನ ಯೋಜನೆಗಳು ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕ ತಾರತಮ್ಯಗಳ ಕಾರಣಗಳಿಂದಾಗಿ ಹಿಂದುಳಿದ ಪರಿಶಿಷ್ಟರಿಗೆ ಆದ್ಯತೆಯನ್ನು ನೀಡುವುದಿಲ್ಲ ಹಾಗೂ ಐತಿಹಾಸಿಕ ತಾರತಮ್ಯಗಳ ಕಾರಣದಿಂದಾಗಿ ಪರಿಶಿಷ್ಟ ಸಮುದಾಯವು ಅನುಭವಿಸುವ ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯಿಂದಾಗಿ ಸಾಮಾನ್ಯ ಬಡತನ ಹಾಗೂ ಅಭಿವೃದ್ಧಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಪರಿಶಿಷ್ಟ ವರ್ಗಗಳು ಹೊಂದಿರುವುದಿಲ್ಲ. ಹೀಗಾಗಿ ಏನೇ ಅಭಿವೃದ್ಧಿಯಾದರೂ ಪರಿಶಿಷ್ಟರಿಗೂ ಮತ್ತು ಉಳಿದ ಸಮಾಜಕ್ಕೂ ಇರುವ ಅಭಿವೃದ್ಧಿ ಅಂತರ ಮುಂದುವರಿಯುತ್ತಲೇ ಇರುತ್ತದೆ ಎಂಬುದು 70-80ರ ದಶಕದಿಂದಲೇ ಸರಕಾರದ ಗಮನಕ್ಕೆ ಬರತೊಡಗಿತು.

ಹೀಗಾಗಿ ಉಳಿದ ಸಮಾಜಕ್ಕೂ ಹಾಗೂ ಪರಿಶಿಷ್ಟ ಸಮಾಜಕ್ಕೂ ಇರುವ ಈ ಅಭಿವೃದ್ಧಿ ಅಂತರವನ್ನು ಕಡಿಮೆಮಾಡುವ ಸಲುವಾಗಿ SCSP ಮತ್ತು TSP ರೂಪಿತಗೊಂಡಿತು. ಈ ನಿಧಿ ಸಾಮಾನ್ಯ ಬಡತನ ನಿವಾರಣಾ ಮತ್ತು ಅಭಿವೃದ್ಧಿ ಯೋಜನೆಗಳ ಭಾಗವಲ್ಲ. ಈ ಪ್ರತ್ಯೇಕ ಉಪಯೋಜನೆಗಳ ಮೂಲಕ ಅಭಿವೃದ್ಧಿಯ ಲಾಭವನ್ನು ಪಡೆದುಕೊಳ್ಳಲು ಅಗತ್ಯವಿರುವ ಸಾಮರ್ಥ್ಯವನ್ನು ಹಾಗೂ ಪೂರಕ ಅಗತ್ಯಗಳನ್ನು ಪೂರೈಸುವುದು ಈ ಉಪಯೋಜನೆಗಳ ಉದ್ದೇಶ.

ಉದಾಹರಣೆಗೆ ಸರಕಾರದ ಸಾಮಾನ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿ ನೂರು ಕೋಟಿ ರೂ. ವೆಚ್ಚದಲ್ಲಿ ದೂರದ ಹೋಬಳಿಯಲ್ಲಿ ಹೆದ್ದಾರಿಯೋ, ಆಸ್ಪತ್ರೆಯೋ ಅಥವಾ ಕಾಲೇಜೋ ನಿರ್ಮಾಣವಾದರೆ ಆ ಭಾಗದಲ್ಲಿ ಶೇ. 24 ರಷ್ಟು ಪರಿಶಿಷ್ಟ ಸಮುದಾಯದವರೂ ವಾಸಿಸುತ್ತಾರೆ ಎಂಬ ಕಾರಣಕ್ಕೆ ನೂರು ಕೋಟಿಯಲ್ಲಿ 25 ಕೋಟಿ ರೂ.ಯನ್ನು SCSP ಮತ್ತು TSP ನಿಧಿಯಿಂದ ಎತ್ತಿಡುವುದು ಈ ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಸರಕಾರದ ಸಾಮಾನ್ಯ ವೆಚ್ಚದಲ್ಲಿ ನಿರ್ಮಾಣವಾದ ಈ ಸೌಲಭ್ಯಗಳನ್ನು ಪರಿಶಿಷ್ಟ ಸಮುದಾಯಗಳು ಬಳಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ನಿರ್ಮಾಣ ಮಾಡಲು ಈ ಉಪಯೋಜನೆ ಬಳಕೆಯಾಗಬೇಕೇ ವಿನಃ ಇಡೀ ಸಮಾಜಕ್ಕಾಗಿ ನಿರ್ಮಾಣವಾದ ಕಾಲೇಜಿನ ನಿರ್ಮಾಣಕ್ಕಲ್ಲ. ಉದಾಹರಣೆಗೆ ಆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದರೆ ಅಗತ್ಯವಾಗಿರುವ ಪರಿಶಿಷ್ಟರ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನಕ್ಕೆ ಉಪಯೋಜನೆಯ ಹಣ ವಿನಿಯೋಗವಾಗಬೇಕು. ಕಾಲೇಜು ನಿರ್ಮಾಣಕ್ಕಲ್ಲ.

ಹೀಗೆ SCSP ಮತ್ತು TSP ಯೋಜನೆಗಳು ಇತರ ಬಡತನ ನಿವಾರಣೆ ಯೋಜನೆಗಳ ಜೊತೆಗೆ, ಹೆಚ್ಚುವರಿಯಾಗಿ ಮತ್ತು ಪ್ರತ್ಯೇಕವಾಗಿ ಪರಿಶಿಷ್ಟರ ಅಭಿವೃದ್ಧಿ ಅಂತರವನ್ನು ಕಡಿತಗೊಳಿಸಲು ರೂಪಿಸಲಾಗಿದೆ. ಆದ್ದರಿಂದ ಇತರ ಬಡತನ ನಿವಾರಣಾ ಯೋಜನೆಗಳ ಜೊತೆಗೆ ಹೆಚ್ಚುವರಿಯಾಗಿ SCSP ಮತ್ತು TSP ಯೋಜನೆಗಳಿರಬೇಕೇ ವಿನಃ ಬಡತನ ನಿವಾರಣಾ ಯೋಜನೆಗಳಲ್ಲಿ ಪರಿಶಿಷ್ಟರ ಬಡವರ ಪಾಲು ಎಂದು ಎತ್ತಿಡುವುದರಿಂದ ಈ ಅಂತರ ನಿವಾರಣೆ ಎಂಬ ವಿಶೇಷ ಉದ್ದೇಶವೇ ವಿಫಲವಾಗುತ್ತದೆ.

ಗ್ಯಾರಂಟಿ ಯೋಜನೆಗಳು ನಾಡಿನ ಒಟ್ಟಾರೆ ಬಡತನ ನಿವಾರಣಾ ತಾತ್ಕಾಲಿಕ ಯೋಜನೆಗಳಾಗಿವೆ. ನಾಡಿನ ಎಲ್ಲಾ ಬಡವರಂತೆ ಬಡ ಪರಿಶಿಷ್ಟರೂ ಅದರ ಫಲಾನುಭವಿಗಳಾಗಬೇಕು. ಅದು ಸರಕಾರದ ಒಟ್ಟಾರೆ ವೆಚ್ಚದ ಭಾಗವಾಗಬೇಕೇ ವಿನಾ SCSP ಮತ್ತು TSPಯ ಹಣವು ಈ ವೆಚ್ಚಗಳ ಭಾಗವಾಗಬಾರದು.

ಹಾಗೆ ಮಾಡುವುದು ಸಾಮಾಜಿಕ ನ್ಯಾಯದ ಕ್ರಮವಲ್ಲ. ಸಾಮಾಜಿಕ ಅನ್ಯಾಯದ ಕ್ರಮವಾಗುತ್ತದೆ. ಆದ್ದರಿಂದ ಸರಕಾರ ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ SಅSP ಮತ್ತು ಖಿSPಯ ಹಣವನ್ನು ವರ್ಗಾಯಿಸಬಾರದು.

ಈ ವಿಷಯದಲ್ಲಿ ಸರಕಾರ ಕೊಡುತ್ತಿರುವ ಮತ್ತೊಂದು ಸಮರ್ಥನೆ ಪರಿಶಿಷ್ಟರ ಗ್ಯಾರಂಟಿ ವೆಚ್ಚಕ್ಕೆ ಮಾತ್ರ SCSP ಮತ್ತು TSPಯಿಂದ ಹಣವನ್ನು ಬಳಸಲಾಗುತ್ತದೆ ಎನ್ನುವುದು. ಈಗಾಗಲೇ ಹೇಗೆ ಅದನ್ನು ಗ್ಯಾರಂಟಿಗಳಿಗೆ ವರ್ಗಾಯಿಸುವುದೇ ತಪ್ಪು ಎಂದು ವಿವರಿಸಲಾಗಿದೆ. ಆದ್ದರಿಂದ ಪರಿಶಿಷ್ಟರ ಗ್ಯಾರಂಟಿ ವೆಚ್ಚಕ್ಕೂ SಅSP ಮತ್ತು ಖಿSP ಹಣ ಬಳಸುವುದು ತಪ್ಪು.

ಅಷ್ಟು ಮಾತ್ರವಲ್ಲ . ಸರಕಾರ ಇದರ ಬಗ್ಗೆ ಸುಳ್ಳನ್ನೂ ಕೂಡ ಹೇಳುತ್ತದೆ ಎಂಬುದು ವಿವರಗಳನ್ನು ನೋಡಿದರೆ ಗೊತ್ತಾಗುತ್ತದೆ.

-ಈ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ಸರಕಾರ 52 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಮೊನ್ನೆಯ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ SಅSP ಮತ್ತು ಖಿSP ಯೋಜನೆಗಳಿಗೆ ನಿಗದಿಯಾಗಿರುವ 39,121 ಕೋಟಿ ರೂ. ಮೊತ್ತದಲ್ಲಿ 14,282 ಕೋಟಿ ರೂ.ಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಲಾಗಿದೆ.

ಅಂದರೆ ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿಗಳಿಗಾಗಿ ವ್ಯಯವಾಗಲಿರುವ ರೂ. 52 ಸಾವಿರ ಕೋಟಿಯಲ್ಲಿ 14,282 ಕೋಟಿಯನ್ನು ಅಂದರೆ ಒಟ್ಟಾರೆ ಗ್ಯಾರಂಟಿ ವೆಚ್ಚದ ಶೇ. 26.6ರಷ್ಟು ಹಣವನ್ನು ಪರಿಶಿಷ್ಟರಿಗೆಂದೇ ಮೀಸಲಿಡಬೇಕಿರುವ SCSP ಮತ್ತು TSP ನಿಧಿಯಿಂದ ವೆಚ್ಚವಾಗುತ್ತಿದೆ ಎಂದಾಯಿತು.

ಆದರೆ 2011ರ ಸೆನ್ಸಸ್ ಪ್ರಕಾರ ಕರ್ನಾಟಕದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯಾ ಪ್ರಮಾಣ 24.1 ಮಾತ್ರ. ಹಾಗಿದ್ದಲ್ಲಿ ಈ ಗ್ಯಾರಂಟಿ ಯೋಜನೆಗಳಲ್ಲಿ ಶೇ. 27ರಷ್ಟು ಫಲಾನುಭವಿಗಳು ಪರಿಶಿಷ್ಟರು ಎಂಬ ಅಧ್ಯಯನವನ್ನೇನಾದರೂ ಸರಕಾರ ಮಾಡಿದೆಯೇ?

ಉದಾಹರಣೆಗೆ ಈ ಕೋಷ್ಟಕವನ್ನು ನೋಡಿ:

ಮೇಲಿನ ಕೋಷ್ಟಕದ ಕೊನೆಯ ಕಂಬಸಾಲು ಸ್ಪಷ್ಟಪಡಿಸುವಂತೆ ಪರಿಶಿಷ್ಟರ ಹಣದಿಂದ ಪರಿಶಿಷ್ಟರ ಗ್ಯಾರಂಟಿ ವೆಚ್ಚವನ್ನು ಮಾತ್ರ ಪೂರೈಸುತ್ತಿಲ್ಲ. ಸಿದ್ದು ಸರಕಾರ ಗ್ಯಾರಂಟಿ ವೆಚ್ಚಗಳನ್ನು ಪೂರೈಸಲು ಸುಳ್ಳು ಹೇಳುತ್ತಿದೆ.

ಆದರೆ ಗ್ಯಾರಂಟಿ ಯೋಜನೆಗಳು ಈ ಕಷ್ಟ ಕಾಲದಲ್ಲಿ ಊರುಗೋಲು. ಅದು ಮುಂದುವರಿಯಬೇಕು. ಆದರೆ ಸರಕಾರ ಬಡವರ ಎಡಗೈ ಜೇಬಿನಿಂದ ಕಸಿದು ಬಲಗೈ ಜೇಬಿಗೆ ಹಾಕುವ ಕುತಂತ್ರ ಮಾಡಬಾರದು. ಗ್ಯಾರಂಟಿ ಗೆ ಬೇಕಿರುವ ಸಂಪನ್ಮೂಲಗಳನ್ನು ಗ್ಯಾರಂಟಿ ಫಲಾನುಭವಿಗಳ ಮೇಲಿನ ಹೊರೆಯೇರಿಸಿ ಕ್ರೋಡೀಕರಿಸುವುದು ಸಾಮಾಜಿಕ ಅನ್ಯಾಯ. ಆರ್ಥಿಕ ಅನ್ಯಾಯ.

ಗ್ಯಾರಂಟಿಗೆ ಬೇಕಿರುವ ಸಂಪನ್ಮೂಲಗಳನ್ನು ಸಿದ್ದು ಸರಕಾರ ಪ್ರಾರಂಭದಲ್ಲೇ ಹೇಳಿದಂತೆ ಭ್ರಷ್ಟಾಚಾರ ನಿಗ್ರಹ, ಅಧಿಕಾರಿ ಹಾಗೂ ಶಾಸಕರ ಐಷಾರಾಮಿ ವೆಚ್ಚಗಳ ಕಡಿತ, ಶ್ರೀಮಂತ ವರ್ಗಗಳ ವಿಲಾಸಿ ವೆಚ್ಚಗಳ ಮೇಲೆ ತೆರಿಗೆ, ಶುಲ್ಕ ದಂಡಗಳ ಮೂಲಕ ಸಂಗ್ರಹಿಸಬೇಕೇ ವಿನಃ ಮೋದಿ ಮಾಡಿದಂತೇ.. ಬಡವರು ಕಡಿಮೆಯಾಗಿದ್ದಾರೆ. ಬಡತನ ಕಡಿಮೆಯಾಗಿದೆ ಎಂದು ಸುಳ್ಳು ಹೇಳಬಾರದು.

ನಾಗರಿಕ ಸಮಾಜದ ಆತ್ಮವಂಚಕ ಮೌನ

ಆದರೆ ಹಾಗೆ ಮಾಡಲು ಕಾಂಗ್ರೆಸ್ ಸರಕಾರವು ಅನುಸರಿಸುತ್ತಿರುವ ವೆಲ್ಫೇರ್ ಮುಸುಕಿನ ಕಾರ್ಪೊರೇಟ್ ಆರ್ಥಿಕ ನೀತಿ ಬದಲಾಗಬೇಕು. ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಲೇ ದೇಶದ ಅಭಿವೃದ್ಧಿ ಎಂದು ಭಾವಿಸಿಕೊಂಡಿರುವ ಪಕ್ಷ ಗ್ಯಾರಂಟಿಗಳಂತಹ ಯೋಜನೆಗಳನ್ನು ಮುಂದುವರಿಸಲು ಕಾರ್ಪೊರೇಟ್‌ಗಳಿಂದ ಸಂಪನ್ಮೂಲ ಸಂಗ್ರಹಿಸಲು ಮುಂದಾಗುವುದಿಲ್ಲ. ಆಗ ಜನರಿಂದಲೇ ಕಿತ್ತು ಜನರಿಗೆ ನೀಡುವ ಬೂಟಾಟಿಕೆ ಮತ್ತು ರಾಜಕೀಯ ವಂಚನೆಗಳಿಗೆ ಅನಿವಾರ್ಯವಾಗಿ ಮುಂದಾಗುತ್ತದೆ.

ಅದೇ ಕಾಂಗ್ರೆಸ್ ಸರಕಾರ ಕೂಡ ಮಾಡುತ್ತಿದೆ. ಆದ್ದರಿಂದಲೇ ಇತ್ತೀಚೆಗೆ ಎನ್‌ಡಿಟಿವಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಸಿದ್ದು ಸರಕಾರದ ಮಂತ್ರಿಗಳಾದ ಕೃಷ್ಣ ಭೈರೇಗೌಡರು ‘‘ಸದ್ಯಕ್ಕೆ ಗ್ಯಾರಂಟಿ ಯೋಜನೆಗಳನ್ನು ಪುನರ್ವಿಮರ್ಶೆ ಮಾಡುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಆದರೆ ಸರಕಾರದ ನೀತಿಗಳು ಬದಲಾಗುವುದೇ ಇಲ್ಲ ಎಂದೇನಲ್ಲ’’ ಎಂದು ಗ್ಯಾರಂಟಿಗಳ ವಾರಂಟಿ ಮುಗಿಯುತ್ತಿರುವ ಸೂಚನೆಯನ್ನೂ ಕೊಟ್ಟಿದ್ದಾರೆ.

(https://www.youtube.com/watch?v=ua9tqdr_l2U)

ಕಾಂಗ್ರೆಸ್ ಹಿತವನ್ನಲ್ಲದೆ, ಜನ ಹಿತವನ್ನು ಕಾಳಜಿಯನ್ನಾಗಿಸಿಕೊಂಡಿರುವ ಪ್ರಗತಿಪರರು ಈಗ ಸಿದ್ದು ಸರಕಾರದ ಈ ಧೋರಣೆಯನ್ನು ವಿರೋಧಿಸಬೇಕಲ್ಲವೇ?

ಇದೇ ನೀತಿ ಮತ್ತು ತರ್ಕಗಳನ್ನು ಬಿಜೆಪಿ ಮಾಡಿದಾಗ ಮಾತ್ರ ವಿರೋಧಿಸಿ ಕಾಂಗ್ರೆಸ್ ಮಾಡಿದಾಗ ಮೌನವಾಗುಳಿಯುವುದರಿಂದ ಪ್ರಗತಿಪರರ ನೈತಿಕತೆ ಪ್ರಶ್ನಾರ್ಹವಾಗುವುದಿಲ್ಲವೇ?

ಆಗ ವಂಚಿತ ಜನರಿಗೆ ಬಿಜೆಪಿಯ ಸೋಗಲಾಡಿ ಮತ್ತು ದುರುದ್ದೇಶದ ವಿರೋಧವೇ ಆಪ್ತವೆನಿಸತೊಡಗುವುದಿಲ್ಲವೇ?

ಆಗ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಬೆಂಬಲವೆಂಬ ಪ್ರಗತಿಪರರ ನೈಜ ಉದ್ದೇಶಕ್ಕೂ ಭಂಗ ಬರುವುದಿಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News