ಅತ್ಯಂತ ಮೇಧಾವಿ ಭಾರತೀಯ

ನನ್ನ ‘Democrats and Dissenters’ ಪುಸ್ತಕದಲ್ಲಿ ವಿದ್ವತ್ತಿಗೆ ಪ್ರೊ.ಬೆಟೆಲ್ ಅವರ ಹೆಗ್ಗುರುತಿನ ಕೊಡುಗೆಗಳ ಬಗ್ಗೆ ನಾನು ಸ್ವಲ್ಪ ದೀರ್ಘವಾಗಿ ಬರೆದಿದ್ದೇನೆ. ಇಲ್ಲಿ ನಾನು ಹೆಚ್ಚು ವೈಯಕ್ತಿಕ ನೆಲೆಯಲ್ಲಿ ಬರೆಯಲು ಬಯಸುತ್ತೇನೆ. ನಮ್ಮ ಸ್ನೇಹ ನನಗೆ ಅರ್ಥವಾಗಿರುವ ಬಗೆಯನ್ನು ಹೇಳುತ್ತೇನೆ. ನಾನು ಅವರನ್ನು ಮೊದಲು ಭೇಟಿಯಾದದ್ದು 1988ರಲ್ಲಿ ಮತ್ತು ಅಂದಿನಿಂದ ನಾವು ಸಂಪರ್ಕದಲ್ಲಿದ್ದೇವೆ. ಅವರ ಬರಹಗಳು ಮತ್ತು ನಮ್ಮ ಮಾತುಕತೆಗಳು ನನ್ನ ದೇಶ ಮತ್ತು ನನ್ನ ಕೆಲಸದ ಬಗ್ಗೆ ನಾನು ಯೋಚಿಸುವ ರೀತಿಯನ್ನು ಆಳವಾಗಿ ರೂಪಿಸಿವೆ.

Update: 2024-09-07 05:00 GMT

ನಾನು ಬಹಳ ಮೆಚ್ಚುವ ಭಾರತೀಯ ವಿದ್ವಾಂಸ ಪ್ರೊ.ಆಂಡ್ರೆ ಬೆಟೆಲ್ ಅವರಿಗೆ ಇದೇ ಸೆಪ್ಟಂಬರ್ 15ಕ್ಕೆ ತೊಂಭತ್ತು ತುಂಬುತ್ತದೆ. ಬಂಗಾಳದಲ್ಲಿ ಹುಟ್ಟಿ ಬೆಳೆದ ಅವರು ಕೋಲ್ಕತಾ ವಿಶ್ವವಿದ್ಯಾನಿಲಯದಲ್ಲಿ ಎಂಎ ನಂತರ ದಿಲ್ಲಿಗೆ ಹೋದರು. ಅಂದಿನಿಂದ ಅಲ್ಲಿಯೇ ನೆಲೆಸಿದ್ದಾರೆ. ನಾಲ್ಕು ದಶಕಗಳ ಕಾಲ ಅವರು ದಿಲ್ಲಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದರು. ಜೊತೆಗೆ ಹಲವಾರು ಪುಸ್ತಕಗಳು ಮತ್ತು ಲೇಖನಗಳನ್ನು ಬರೆದರು. ನಿವೃತ್ತಿ ಬಳಿಕ ಅವರು ಅಶೋಕ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿದ್ದರು. ತಮ್ಮ ಯೌವನ ಕಾಲ ಮತ್ತು ಶಿಕ್ಷಣದ ಕುರಿತ ಸೊಗಸಾದ ಆತ್ಮಚರಿತ್ರೆ, ಹಾಗೆಯೇ ವಿದ್ವತ್ಪೂರ್ಣ ಕೃತಿಗಳನ್ನು ಅವರು ಪ್ರಕಟಿಸಿದ್ದು ಇದೇ ಹೊತ್ತಿನಲ್ಲಿ.

ಆಂಡ್ರೆ ಬೆಟೆಲ್ ಅರ್ಧ ಫ್ರೆಂಚ್, ಅರ್ಧ ಬಂಗಾಳಿ ಮತ್ತು ಪೂರ್ಣ ಭಾರತೀಯ. ಬಂಗಾಳಿ ಬುದ್ಧಿಜೀವಿಗಳಲ್ಲಿ ಅಪರೂಪಕ್ಕೆ ಕಾಣಿಸುವಂತೆ ಅವರು ತನ್ನ ದೇಶದ ಬಗ್ಗೆ ಪ್ರೀತಿ ಹೊಂದಿದ್ದರು. ಬಂಗಾಳಿಗಳು ದ್ವೀಪಗಳಂತೆ ಇರುವವರೇ ಅಲ್ಲ. ಅವರು ಇತರ ಜನರ ಬಗ್ಗೆ ಆಸಕ್ತಿ ಹೊಂದಿದ್ದರೆ, ಅದು ಇತರ ಭಾರತೀಯರ ಕುರಿತಾಗಿರುವುದಿಲ್ಲ. ನಾನು ಒಮ್ಮೆ ಎಲ್ಲಾ ಪ್ರಸಿದ್ಧ ಬಂಗಾಳಿಗಳಿಗೆ ಎರಡು ರಾಷ್ಟ್ರೀಯತೆಗಳಿವೆ ಎಂದು ತಮಾಷೆ ಮಾಡಿದ್ದೆ. ನಿರಾದ್ ಸಿ. ಚೌಧುರಿ ಬಂಗಾಳಿ ಮತ್ತು ಇಂಗ್ಲಿಷ್; ಸತ್ಯಜಿತ್ ರೇ ಬಂಗಾಳಿ ಮತ್ತು ಫ್ರೆಂಚ್; ಜ್ಯೋತಿ ಬಸು ಬಂಗಾಳಿ ಮತ್ತು ರಶ್ಯನ್; ಚಾರು ಮಜುಂದಾರ್ (ನಕ್ಸಲೀಯ ನಾಯಕ) ಬಂಗಾಳಿ ಮತ್ತು ಚೈನೀಸ್. ಬಂಗಾಳಿ ಮತ್ತು ಭಾರತೀಯ ಎರಡೂ ಆಗಿದ್ದ ಕೊನೆಯ ಪ್ರಸಿದ್ಧ ಬಂಗಾಳಿ ರವೀಂದ್ರನಾಥ ಟಾಗೋರ್ ಇರಬಹುದು ಎಂದು ನಾನು ಹೇಳಿದ್ದೆ.

ಟಾಗೋರ್ ಅವರಂತೆ ಪ್ರೊ.ಬೆಟೆಲ್ ಪ್ರಪಂಚದ ಬಗ್ಗೆ ಮತ್ತು ಭಾರತದ ಉಳಿದ ಭಾಗಗಳ ಬಗ್ಗೆ ಕುತೂಹಲ ಹೊಂದಿದ್ದರು. ಅವರು ತಮಿಳುನಾಡಿನ ತಂಜಾವೂರಿನಲ್ಲಿ ತಮ್ಮ ಡಾಕ್ಟರೇಟ್ ಕ್ಷೇತ್ರಕಾರ್ಯವನ್ನು ಮಾಡಿದರು. ಅವರ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಮುಂಬೈಯ ಒಬ್ಬ ಬಂಗಾಳಿ, ಜೆಮ್‌ಶೆಡ್‌ಪುರದ ಓರ್ವ ತಮಿಳಿಗ, ಲಡಾಖ್ ಕುರಿತು ಅಧ್ಯಯನ ಮಾಡಿದ ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ಅಧ್ಯಯನ ಮಾಡಿದ ಪಂಜಾಬಿ ಸೇರಿದ್ದಾರೆ. ಸ್ವತಃ ಅವರಿಗೆ ತಮ್ಮದೇ ಮಾರ್ಕ್ಸ್ ಮತ್ತು ವೆಬರ್, ತಮ್ಮದೇ ಇವಾನ್ಸ್-ಪ್ರಿಚರ್ಡ್, ತಮ್ಮದೇ ಲೆವಿ ಸ್ಟ್ರಾಸ್, ಹಾಗೆಯೇ ತಮ್ಮದೇ ನೆಹರೂ ಮತ್ತು ಅಂಬೇಡ್ಕರ್ ಬಗ್ಗೆಯೂ ಗೊತ್ತಿತ್ತು.

ನನ್ನ ‘Democrats and Dissenters’ ಪುಸ್ತಕದಲ್ಲಿ ವಿದ್ವತ್ತಿಗೆ ಪ್ರೊ.ಬೆಟೆಲ್ ಅವರ ಹೆಗ್ಗುರುತಿನ ಕೊಡುಗೆಗಳ ಬಗ್ಗೆ ನಾನು ಸ್ವಲ್ಪ ದೀರ್ಘವಾಗಿ ಬರೆದಿದ್ದೇನೆ. ಇಲ್ಲಿ ನಾನು ಹೆಚ್ಚು ವೈಯಕ್ತಿಕ ನೆಲೆಯಲ್ಲಿ ಬರೆಯಲು ಬಯಸುತ್ತೇನೆ. ನಮ್ಮ ಸ್ನೇಹ ನನಗೆ ಅರ್ಥವಾಗಿರುವ ಬಗೆಯನ್ನು ಹೇಳುತ್ತೇನೆ. ನಾನು ಅವರನ್ನು ಮೊದಲು ಭೇಟಿಯಾದದ್ದು 1988ರಲ್ಲಿ ಮತ್ತು ಅಂದಿನಿಂದ ನಾವು ಸಂಪರ್ಕದಲ್ಲಿದ್ದೇವೆ. ಅವರ ಬರಹಗಳು ಮತ್ತು ನಮ್ಮ ಮಾತುಕತೆಗಳು ನನ್ನ ದೇಶ ಮತ್ತು ನನ್ನ ಕೆಲಸದ ಬಗ್ಗೆ ನಾನು ಯೋಚಿಸುವ ರೀತಿಯನ್ನು ಆಳವಾಗಿ ರೂಪಿಸಿವೆ.

ನಾನು ಒಮ್ಮೆ ಆಂಡ್ರೆ ಬೆಟೆಲ್ ಅವರನ್ನು ‘ಭಾರತದ ಅತ್ಯಂತ ಮೇಧಾವಿ ವ್ಯಕ್ತಿ’ ಎಂದು ಕರೆದಿದ್ದೆ. ಭಾರತದಲ್ಲಿ ಮೇಧಾವಿ ಮಹಿಳೆ ಇರಬಹುದು ಅಥವಾ ವಿದೇಶದಲ್ಲಿ ವಾಸಿಸುವ ಮೇಧಾವಿ ಭಾರತೀಯ ಇರಬಹುದು ಎಂಬ ಎರಡು ಎಚ್ಚರಿಕೆಗಳನ್ನು ಪದಗಳು ಸೂಚಿಸುತ್ತಿದ್ದರೂ, ಇದೊಂದು ಬಗೆಯ ವಿಶಿಷ್ಟ ಅಜಾಗರೂಕ ತೀರ್ಪು. ನಾನು ಅವರ ಕಡೆಗೆ ಏಕೆ ಆಕರ್ಷಿತನಾಗಿದ್ದೇನೆ ಎಂಬುದು ಸ್ವತಃ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ನನ್ನ ಮೆಚ್ಚುಗೆಗೆ ಪ್ರೀತಿಯಿಂದ ಉತ್ತರಿಸುತ್ತಾ ಅವರೇಕೆ ಪ್ರತಿಕ್ರಿಯಿಸಿದರು? ನನ್ನ ಬೌದ್ಧಿಕ ಪಥ ಅವರಿಗಿಂತ ತುಂಬಾ ಭಿನ್ನವಾಗಿರುವುದು ಇದಕ್ಕೆ ಕಾರಣವಾಗಿರಬಹುದು. ನಾವು ಮೊದಲು ಭೇಟಿಯಾದಾಗ, ಅವರು ಅದೇ ಕೆಲಸದಲ್ಲಿ ಮೂವತ್ತು ವರ್ಷಗಳನ್ನು ಪೂರೈಸಿದ್ದರು; ನಾನು ಏಳು ವರ್ಷಗಳಲ್ಲಿ ನನ್ನ ನಾಲ್ಕನೇ ಕೆಲಸಕ್ಕೆ ಸೇರಿದ್ದೆ. ನಾನು ಉತ್ಸುಕನಾಗಿದ್ದೆ, ದುಡುಕುತನ ಸಾಮಾನ್ಯವಾಗಿತ್ತು. ಅವರು ಶಾಂತರಾಗಿದ್ದರು, ಪ್ರಶ್ನೆಯ ಎಲ್ಲಾ ಬದಿಗಳನ್ನು ಪರಿಶೀಲಿಸಿದ ನಂತರ ತೀರ್ಮಾನಿಸಬಲ್ಲವರಾಗಿದ್ದರು. ನಾನು ನನ್ನ ಸಹ ವಿದ್ವಾಂಸರೊಂದಿಗೆ ವಿವಾದಾತ್ಮಕ ವಾದವನ್ನು ಇಷ್ಟಪಡುತ್ತಿದ್ದೆ. ಅವರು ಮಾತುಕತೆಯಲ್ಲೂ ಬರವಣಿಗೆಯಲ್ಲೂ ಸಂಯಮದಿಂದ ಇರುತ್ತಿದ್ದರು. ನಾನು ಒಬ್ಬ ಯುವ ವಿದ್ವಾಂಸನಾಗಿದ್ದುದು ಮತ್ತು ಸ್ವಭಾವದಲ್ಲಿ ಅವರಿಗಿಂತ ತುಂಬಾ ಭಿನ್ನವಾಗಿದ್ದುದು ಅವರು ನನ್ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳಲು ಕಾರಣವಾಗಿದ್ದಿರಬಹುದು. ವ್ಯತಿರಿಕ್ತತೆಯೇ ಅವರನ್ನು ಆಕರ್ಷಿಸಿತ್ತು ಮತ್ತು ಬಹುಶಃ ನಮ್ಮ ಮಾತುಕತೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸಿತ್ತು.

ಈಗ ಹಲವು ವರ್ಷಗಳಿಂದ, ನನ್ನ ಪುಸ್ತಕಗಳಲ್ಲಿ ಆಂಡ್ರೆ ಬೆಟೆಲ್ ಅವರ ಪ್ರಕಟಿತ ಬರಹಗಳನ್ನು ನೆನಪಿಸಿಕೊಂಡಿದ್ದೇನೆ ಮತ್ತು ನನ್ನ ಅಂಕಣಗಳು ಮತ್ತು ಭಾಷಣಗಳಲ್ಲಿ ನಮ್ಮ ಮಾತುಕತೆಗಳನ್ನು ಉಲ್ಲೇಖಿಸಿದ್ದೇನೆ. ಜವಾಹರಲಾಲ್ ನೆಹರೂ ಪ್ರತಿಷ್ಠೆಗೆ ಹೇಗೆ ಅವರ ಮರಣಾನಂತರದ ಸಂದರ್ಭದಲ್ಲಿ ಧಕ್ಕೆಯಾಗಿತ್ತು ಎಂಬುದನ್ನು ರಾಜೀವ್ ಗಾಂಧಿ ಬದುಕಿದ್ದ ಹೊತ್ತಿನಲ್ಲಿಯೇ ಆಂಡ್ರೆ ನನಗೆ ಹೇಳಿದ್ದರು. ಈ ಸಂದರ್ಭದಲ್ಲಿ, ತಂದೆಯ ಪಾಪಗಳು ಅವರ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಾಡುವ ಬದಲು, ಮಗಳು ಮತ್ತು ಮೊಮ್ಮಗನ ಪಾಪಗಳು ನೆಹರೂ ವ್ಯಕ್ತಿತ್ವಕ್ಕೆ ಪೀಡಕಗಳಾಗಿದ್ದವು. ಅಂದರೆ, ಗಣರಾಜ್ಯ ನಿರ್ಮಾಣಕ್ಕೆ ನೆಹರೂ ಅವರು ನೀಡಿದ್ದ ಗಮನಾರ್ಹ ಕೊಡುಗೆಗಳು ಅವರ ವಂಶಸ್ಥರ ತಪ್ಪುಗಳಿಂದ ಮರೆಮಾಚಲ್ಪಟ್ಟವು ಮತ್ತು ಅಪವಿತ್ರಗೊಂಡವು. ಸೋನಿಯಾ ಗಾಂಧಿ ಮತ್ತು ನಂತರ ರಾಹುಲ್ ಗಾಂಧಿ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ, ಆಂಡ್ರೆ ಬೆಟೆಲ್ ಅವರ ಹೇಳಿಕೆಯ ಹಿಂದಿನ ವಿವೇಕ ಇನ್ನಷ್ಟು ಸ್ಪಷ್ಟವಾಯಿತು. ಈಗಾಗಲೇ ನಾನು ಅದನ್ನು ಬಹಿರಂಗವಾಗಿ ಕನಿಷ್ಠ ಹತ್ತಾರು ಬಾರಿ ಬಳಸಿರಬಹುದು.

ಆಂಡ್ರೆ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದರು ಮತ್ತು ಅಪರೂಪಕ್ಕೆ ಜನಪ್ರಿಯ ಉಪನ್ಯಾಸವನ್ನೂ ನೀಡಿದ್ದರು. ಆದರೆ ಅವರು ತಮ್ಮನ್ನು ಒಬ್ಬ ವಿದ್ವಾಂಸನೆಂದು ನೋಡಿದರೇ ಹೊರತು ಬುದ್ಧಿಜೀವಿ ಎಂದಲ್ಲ. ತಮ್ಮನ್ನೇ ಹೆಚ್ಚು ಬಿಂಬಿಸಿಕೊಳ್ಳಲು ಇಷ್ಟಪಡುವವರು ಸಾಮಾನ್ಯವಾಗಿ ಹೆಚ್ಚು ತೋರಿಕೆಯವರು ಮತ್ತು ಕಡಿಮೆ ಬುದ್ಧಿವಂತರು ಎಂದು ಅವರು ಹೇಳಿದ್ದರು. ‘‘ಮಾಧ್ಯಮ ಪ್ರಚಾರವು ಪಾಂಡಿತ್ಯದ ಶತ್ರು ಮಾತ್ರವಲ್ಲ, ಅದು ನೈತಿಕ ಸಮಗ್ರತೆಯ ಶತ್ರುವೂ ಆಗಿದೆ’’ ಎಂದು ಅವರೊಮ್ಮೆ ನನಗೆ ಹೇಳಿದ್ದರು. ಅವರ ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳು, ತರಗತಿಯಲ್ಲಿನ ಅವರ ಬೋಧನೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮಾರ್ಗದರ್ಶನ ಇವೆಲ್ಲವೂ ಅವರ ವೃತ್ತಿಯನ್ನು ವ್ಯಾಖ್ಯಾನಿಸಿದ್ದವೇ ಹೊರತು ಅವರ ಪತ್ರಿಕಾ ಬರಹಗಳಲ್ಲ. ಸಮಾಜಶಾಸ್ತ್ರದಲ್ಲಿನ ಅವರ ಪರಿಣತಿ ನಿರ್ದಿಷ್ಟ ಸರಕಾರಿ ನೀತಿಗಳನ್ನು ಟೀಕಿಸಲು ಅವರನ್ನು ಸಜ್ಜುಗೊಳಿಸಿತ್ತು. ಆದರೆ ತಮ್ಮದೇ ಆದ ಪರ್ಯಾಯ ನೀತಿಗಳನ್ನು ಅವರು ಎಂದಿಗೂ ನೀಡಲಿಲ್ಲ. ಅವರ ಶಿಸ್ತಿನ ತಾಂತ್ರಿಕ ಸ್ವರೂಪವು ನೀತಿ ನಿರೂಪಣೆ ಮತ್ತು ನೀತಿ ಸೂಚನೆಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಅರ್ಥಶಾಸ್ತ್ರಜ್ಞರು ಹೊಂದಿರುವಂಥದ್ದಾಗಿತ್ತು. ಕೆಲವು ಸಮಾಜಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಅಧಿಕಾರದಲ್ಲಿ ಮತ್ತು ಹೊರಗೆ ತಾವು ರಾಜಕಾರಣಿಗಳ ಬೆಂಬಲ ಹೊಂದಿರುವುದಾಗಿ ತೋರಿಸಿಕೊಳ್ಳುವ ಮೂಲಕ ಈ ವಿಷಯದಲ್ಲಿ ಅರ್ಥಶಾಸ್ತ್ರಜ್ಞರನ್ನು ಅನುಸರಿಸಲು ಬಯಸಿದ್ದರು. ಆದರೆ ಆಂಡ್ರೆ ಎಂದೂ ಹಾಗೆ ಮಾಡಲಿಲ್ಲ. ಅವರು ಬಹಳ ಸಾಂದರ್ಭಿಕವಾಗಿ ನೀತಿ ವಿಶ್ಲೇಷಣೆಯಲ್ಲಿ ತೊಡಗುತ್ತಿದ್ದರು. ಆದರೆ ಎಂದಿಗೂ ನೀತಿ ನಿರೂಪಿಸುವುದಕ್ಕೆ ಹೋಗಲಿಲ್ಲ.

ಅವರು ರಾಷ್ಟ್ರದ ರಾಜಧಾನಿಯಲ್ಲಿ ವಾಸಿಸುತ್ತಿದ್ದರೂ, ಇತರ ಕೆಲವು ದಿಲ್ಲಿ ಬುದ್ಧಿಜೀವಿಗಳಂತೆ ಎಂದಿಗೂ ದೂರದಿಂದಲೂ ಪ್ರಮುಖ ಅಥವಾ ಪ್ರಬಲ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಲು ಅಥವಾ ಪ್ರಭಾವ ಬೀರಲು ಆಸಕ್ತಿ ತೋರಿಸಲಿಲ್ಲ. ಸಚಿವರ ಅಥವಾ ವಿರೋಧ ಪಕ್ಷದ ನಾಯಕರ ಕಿವಿಯಲ್ಲಿ ಸಲಹೆಯನ್ನು ಪಿಸುಗುಟ್ಟುವ ರಾಜಗುರುವಿನಂತಾಗದೆ, ಸಂಶೋಧನೆ, ಬರವಣಿಗೆ ಅಧ್ಯಾಪನದಲ್ಲಿ ತೊಡಗಿದರು. ಪ್ರಕಾಶನ ಕೂಟಗಳಲ್ಲಾಗಲೀ ಅಥವಾ ರಾಜತಾಂತ್ರಿಕ ಕೂಟಗಳಲ್ಲಾಗಲೀ ಅವರೆಂದೂ ಕಾಣಿಸಿಕೊಂಡಿದ್ದಿಲ್ಲ. ಅವರ ಕೆಲಸದ ಹೊರತಾಗಿ ಅವರಿಗೆ ಯಾವುದೇ ಆಸಕ್ತಿಗಳಿಲ್ಲ ಎಂದು ಇದರ ಅರ್ಥವಲ್ಲ. ಕಾವ್ಯ ಅವರ ಅಚಲವಾದ ಪ್ರೀತಿಗಳಲ್ಲಿ ಒಂದು. ಈ ಕಾವ್ಯಾಸಕ್ತಿ ಅವರ ಮೂರೂ ಭಾಷೆಗಳಲ್ಲಿದೆ; ಇಂಗ್ಲಿಷ್‌ನಲ್ಲಿ ಎಲಿಯಟ್ ಮತ್ತು ಮ್ಯಾಕ್‌ನೀಸ್, ಫ್ರೆಂಚ್‌ನಲ್ಲಿ ಮಲ್ಲಾರ್ಮೆ, ಬಂಗಾಳಿಯಲ್ಲಿ ಟಾಗೋರ್ ಮತ್ತು ಜಿಬನಾನಂದ ದಾಸ್.

ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತ, ನಾನು ಸಾರ್ವಜನಿಕ ಕ್ಷೇತ್ರದಲ್ಲಿ ವಿಪರೀತ ಸಕ್ರಿಯನಾಗಿದ್ದೇನೆ, ಹಲವಾರು ಭಾಷಣಗಳನ್ನು ನೀಡುತ್ತೇನೆ, ದೂರದರ್ಶನದಲ್ಲಿ ಆಗಾಗ ಕಾಣಿಸಿಕೊಳ್ಳುತ್ತೇನೆ ಮತ್ತು ಬೇಡದ ವಿವಾದಗಳಿಗೆ ಸಿಲುಕಿದ್ದೇನೆ ಎಂದು ಆಂಡ್ರೆ ಬೆಟೆಲ್ ಭಾವಿಸುತ್ತಾರೆ. 2012ರ ಬೇಸಿಗೆಯಲ್ಲಿ ನಾನು ರಸ್ತೆ ಅಪಘಾತಕ್ಕೆ ತುತ್ತಾಗಿ, ಚೇತರಿಸಿಕೊಳ್ಳಲು ಹಲವು ತಿಂಗಳುಗಳವರೆಗೆ ವಿಶ್ರಾಂತಿ ಪಡೆಯಬೇಕಾಯಿತು. ಇದನ್ನು ತಿಳಿದ ಆಂಡ್ರೆ, ಈ ಅಪಘಾತ ನನ್ನ ಪಾಲಿಗೆ ವರವಾಗಿ ಬಂದಿದೆ ಎಂದು ಭಾವಿಸುವುದಾಗಿ ಬರೆದಿದ್ದರು. ಅವರ ಮೇಲ್ ಹೀಗಿತ್ತು:

‘‘ಇದು ನಿಮ್ಮ ಬರವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರದು. ವಾಸ್ತವವಾಗಿ ಇದು ನಿಮ್ಮ ಪ್ರಯಾಣ ಮತ್ತು ನಿಮ್ಮ ಉಪನ್ಯಾಸಗಳನ್ನು ಕಡಿಮೆಯಾಗಿಸಿ, ನಿಮ್ಮ ಆಲೋಚನೆ ಮತ್ತು ಬರವಣಿಗೆಯ ಮೇಲೆ ಕೇಂದ್ರೀಕರಿಸಲು ನೆರವಾಗುವುದರಿಂದ ಹೆಚ್ಚು ಪ್ರಯೋಜನಕಾರಿಯೇ ಆಗುತ್ತದೆ. ನೀವು ತುಂಬಾ ಪ್ರಯಾಣಿಸುತ್ತಿದ್ದೀರಿ. ಆದರೆ ನಿಮ್ಮ ಸ್ವಂತ ಒಳಿತು ಮತ್ತು ನಿಮ್ಮ ಬರವಣಿಗೆಯ ಒಳಿತಿನ ದೃಷ್ಟಿಯಿಂದ ತಪ್ಪು ಮಾಡುತ್ತಿದ್ದೀರಿ ಎಂದು ಭಾವಿಸುತ್ತೇನೆ. ನಿಮ್ಮ ತುಂಬಾ ಮೆಚ್ಚುವ ಸೋದರ ಸಂಬಂಧಿ (ಇತಿಹಾಸಕಾರ ಧರ್ಮ ಕುಮಾರ್) ನನ್ನದು ತುಂಬಾ ಶಿಸ್ತು ಮತ್ತು ಕಲ್ಪಿಸಿಕೊಳ್ಳುವಿಕೆ ತುಂಬಾ ಕಡಿಮೆ ಎಂದು ಹೇಳುತ್ತಿದ್ದರು. ನಿಮ್ಮ ಆಲೋಚನೆ ಮತ್ತು ಬರವಣಿಗೆಯಲ್ಲಿ ನಿಮಗೆ ಸ್ವಲ್ಪ ಹೆಚ್ಚು ಶಿಸ್ತು ಬೇಕು ಎಂದು ನಾನು ನಿಜವಾಗಿಯೂ ನಂಬುತ್ತೇನೆ ಮತ್ತು ನೀವು ಒಂದೇ ಸ್ಥಳದಲ್ಲಿ ಕುಳಿತು ಯೋಚಿಸಿದರೆ ಮತ್ತು ಬರೆಯುತ್ತಿದ್ದರೆ ಮಾತ್ರ ಅದು ಬರಬಹುದು.’’

ಆಂಡ್ರೆ ನನಗೆ ಬರೆದ ಪತ್ರವನ್ನು ಉಲ್ಲೇಖಿಸಿದ ನಂತರ, ನಾನು ಅವರಿಗೆ ಬರೆದಿದ್ದ ಒಂದನ್ನು ಈಗ ಉಲ್ಲೇಖಿಸುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ, ಭಾರತದಲ್ಲಿಯೇ ಜೀವಿತಾವಧಿಯನ್ನು ಕಳೆದಿರುವ, ಹೆಚ್ಚಾಗಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನಲ್ಲಿ ಕೆಲಸ ಮಾಡಿದ ಮಾರ್ಕ್ ಟುಲಿಯನ್ನು ಭೇಟಿಯಾದೆ. ಅವರು ಆಂಡ್ರೆಯ ಬಗ್ಗೆ ತಿಳಿದಿರುವುದಾಗಿ ಹೇಳಿದ್ದರ ಬಗ್ಗೆ ಉಲ್ಲೇಖಿಸಿ ನಾನು ಆಂಡ್ರೆಗೆ ಹೀಗೆ ಬರೆದಿದ್ದೆ: ‘‘ವರ್ಷಗಳ ಹಿಂದೆ ಕೆಲವು ಬಿಬಿಸಿ ಕಾರ್ಯಕ್ರಮಕ್ಕಾಗಿ ಅವರು ನಿಮ್ಮ ಸುದೀರ್ಘ ಸಂದರ್ಶನ ಮಾಡಿದ್ದಾಗಿ ಹೇಳಿದರು. ಅವರು ನಿಮ್ಮನ್ನು ನಿಜವಾದ ವಿದ್ವಾಂಸ ಎಂದು ನೆನಪಿಸಿಕೊಳ್ಳುತ್ತಾರೆ. ಅವರು ಹೇಳಿದಂತೆ ರೇಡಿಯೊ ಪತ್ರಿಕೋದ್ಯಮ ಮುದ್ರಣ ಪತ್ರಿಕೋದ್ಯಮಕ್ಕಿಂತ ಕಡಿಮೆಯದ್ದು ಮತ್ತು ಮುದ್ರಣ ಪತ್ರಿಕೋದ್ಯಮವು ಪಾಂಡಿತ್ಯಕ್ಕಿಂತ ಕಡಿಮೆಯದ್ದು ಎಂಬುದು ಅವರ ಗ್ರಹಿಕೆ. ಈ ಎರಡೂ ವಿಷಯಗಳಲ್ಲಿ ನೀವು ಖಂಡಿತವಾಗಿಯೂ ಸರಿ!’’

ಅವರ ವಿಮರ್ಶಕರು ಕೆಲವೊಮ್ಮೆ ಆಂಡ್ರೆ ಬೆಟೆಲ್ ಕೇವಲ ಒಂದು ವಿಷಯಕ್ಕೆ ಗಮನ ಕೊಟ್ಟಿದ್ದಾಗಿ ದೂರಿದ್ದಿದೆ. ಆದಾಗ್ಯೂ, ಅದು ಬಹಳ ಶಕ್ತಿಯುತ ವಿಷಯವಾಗಿತ್ತು ಮತ್ತು ಬಹುಶಃ ಬಹಳ ಪ್ರಮುಖ ವಿಷಯ ಕೂಡ. ಅದು, ಸಾಮಾಜಿಕ ಅಸಮಾನತೆಯ ಉತ್ಪಾದನೆ ಮತ್ತು ಪುನರುತ್ಪಾದನೆ. ಅವರು ತಮಿಳು ಹಳ್ಳಿಯೊಂದರಲ್ಲಿನ ಜಾತಿ, ಕೃಷಿಯ ವರ್ಗ ರಚನೆ, ಪೂರ್ವ ಮತ್ತು ಪಶ್ಚಿಮದಲ್ಲಿನ ಅಸಮಾನತೆಯ ತುಲನಾತ್ಮಕ ವಿಶ್ಲೇಷಣೆ, ಹಿಂದುಳಿದ ವರ್ಗಗಳ ಏರಿಕೆ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಥಿಕ ಸಮಗ್ರತೆಯ ಹಕ್ಕುಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಶ್ರೇಣೀಕರಣವನ್ನು ಆರ್ಥಿಕ ಅಂಶಗಳ ಆಧಾರದ ಮೇಲೆ ನೋಡುವುದಕ್ಕಿಂತ ಹೆಚ್ಚಾಗಿ, ಸ್ಥಾನಮಾನ ಮತ್ತು ಅಧಿಕಾರದ ಆಯಾಮಗಳನ್ನು ಅವರು ಅಧ್ಯಯನ ಮಾಡಿದ್ದಾರೆ.

ಆಂಡ್ರೆ ಬೆಟೆಲ್ ಅವರ ಬರಹಗಳು ನಿರಂತರ ಪ್ರಸ್ತುತತೆಯನ್ನು ಹೊಂದಿವೆ. ಅವರ ಕೃತಿಗಳ ಬಗ್ಗೆ ಪರಿಚಯವಿಲ್ಲದ ಓದುಗರು ಅವರ ಪತ್ರಿಕಾ ಲೇಖನಗಳ ಸಂಗ್ರಹದೊಂದಿಗೆ ಓದನ್ನು ಆರಂಭಿಸಬೇಕು. ವಿದ್ವಾಂಸರಾದವರು ಅವರ ‘Caste, Class and Power; Society and Poltics in India’ ಮತ್ತು ‘The Idea of Natural Inequality and Other Essays’ ಈ ಪುಸ್ತಕಗಳನ್ನು ಓದಬಹುದು. ಅಲ್ಲದೆ, ನಾನು ಶಿಫಾರಸು ಮಾಡಬಯಸುವ ಇನ್ನೊಂದು ಕೃತಿಯೆಂದರೆ, ‘Ideology and Social Science’ ಎಂಬ ಹೆಸರಿನ ಅವರ ಪತ್ರಿಕಾ ಬರಹಗಳ ಮತ್ತೊಂದು ಸಂಗ್ರಹ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News