ಭಾರತೀಯ ಶಿಕ್ಷಣ ವ್ಯವಸ್ಥೆ: ಸಮೀಕ್ಷೆಗಳು ಬಿಚ್ಚಿಟ್ಟ ಸತ್ಯ!
ಪ್ರತೀ ರಾಜ್ಯದಲ್ಲಿ ಒಂದು ಗ್ರಾಮಾಂತರ ಜಿಲ್ಲೆಯನ್ನು ಸಮೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಅದು ತೆರೆದಿಟ್ಟಿರುವ ಸತ್ಯ ಮಾತ್ರ ನಿಜಕ್ಕೂ ಕಳವಳ ಮೂಡಿಸುವಂಥದ್ದು. ಕನಸುಗಳೇ ಇಲ್ಲದ ವಿದ್ಯಾರ್ಥಿಗಳು ನಾಳೆಯ ತಮ್ಮ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬಲ್ಲರು ಎಂಬುದು ಸಣ್ಣ ಪ್ರಶ್ನೆಯಲ್ಲ. ಬದುಕಿನ ಬಗ್ಗೆ ಕನಸೇ ಇಲ್ಲದ ಅವರು ಏನಾದಾರು ಎಂಬುದನ್ನು ನೆನೆದರೇ ಭಯವಾಗುತ್ತದೆ.
ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಗ್ಗೆ ದೊಡ್ಡ ದೊಡ್ಡ ಮಾತನಾಡಲಾಗುತ್ತಿದೆ. ತಮಾಷೆಯೆಂದರೆ, ಪರಿಣಿತರನ್ನೂ ಮೀರಿಸುವಂತೆ ರಾಜಕಾರಣಿಗಳು ಶಿಕ್ಷಣ ವ್ಯವಸ್ಥೆ ಬಗ್ಗೆ ಕೊಚ್ಚಿಕೊಳ್ಳುತ್ತಾರೆ.
ವಿದ್ಯಾರ್ಥಿಗಳು ಹೇಗೆ ಪರೀಕ್ಷೆಗೆ ತಯಾರಾಗಬೇಕು, ಹೇಗೆ ಪರೀಕ್ಷೆ ಬರೆಯಬೇಕೆಂಬುದನ್ನು ಇತ್ತೀಚೆಗೆ ಈ ರಾಜಕಾರಣಿಗಳೇ ಹೆಚ್ಚು ಹೇಳುತ್ತಿದ್ದಾರೆ.
ಆದರೆ ವಾಸ್ತವ ಬೇರೆಯೇ ಇದೆ ಎಂದು ಅಂತರ್‌ರಾಷ್ಟ್ರೀಯ ಸಮೀಕ್ಷೆಗಳು ಸತ್ಯ ಬಿಚ್ಚಿಟ್ಟರೂ ಅದನ್ನು ಸುಳ್ಳು ಎನ್ನುವಲ್ಲಿಯೂ ಈ ರಾಜಕಾರಣಿಗಳು ನಿಷ್ಣಾತರು.
ವಿಪರ್ಯಾಸವೆಂದರೆ, ತಮಗೆ ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ನೀಡುವ ಯಾವುದೇ ವಿದೇಶಿ ಹೆಸರಿನ ಸಂಸ್ಥೆಯನ್ನು ಕೂಡಲೇ ಸ್ವೀಕರಿಸುವ ಇವರು, ತಮ್ಮ ಪೊಳ್ಳುತನ ಬಯಲು ಮಾಡುವ ಯಾವುದೇ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ವರದಿಗಳನ್ನೂ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಶಿಕ್ಷಣ ವ್ಯವಸ್ಥೆ ಕುರಿತ ವಿಚಾರದಲ್ಲಿಯೂ ಹಾಗೆಯೇ.
ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂಬುದನ್ನು ದೇಶೀ ಮಾದರಿಯಲ್ಲಿಯೇ ಗುರುತಿಸುವ ಎಎಸ್‌ಇಆರ್ ವರದಿ ಅಥವಾ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯು ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಕಳಪೆಯಾಗಿದೆ ಎಂಬ ಆತಂಕಕಾರಿ ವಾಸ್ತವಗಳನ್ನು ಅಂಕಿಅಂಶಗಳ ಮೂಲಕ ತೆರೆದಿಟ್ಟಿದೆ.
ಈಗಾಗಲೇ ಗೊತ್ತಿರುವ ವಾಸ್ತವವೆಂದರೆ,
ಇವತ್ತಿನ ಶಿಕ್ಷಣ ವ್ಯವಸ್ಥೆ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿಲ್ಲ ಎಂಬುದು ಒಂದೆಡೆಯಾದರೆ, ಇಂಗ್ಲಿಷ್ ಬಿಡಿ, ಪ್ರಾದೇಶಿಕ ಭಾಷೆಯಲ್ಲೂ ಅವರು ತಮ್ಮ ಸಾಮರ್ಥ್ಯ ತೋರಿಸಲಾರದ ಸ್ಥಿತಿಯಲ್ಲಿರುವುದು ಆತಂಕಕಾರಿಯಾಗಿದೆ.
ಶಿಕ್ಷಣವನ್ನು ವ್ಯಾವಹಾರಿಕ ಬದುಕಿನಲ್ಲಿ ಅನ್ವಯಿಸಲಾರದಂತೆ ನಮ್ಮ ಶಿಕ್ಷಣ ವ್ಯವಸ್ಥೆ ಯುವ ಜನಾಂಗವನ್ನು ದಡ್ಡರನ್ನಾಗಿ ಮಾಡುತ್ತಿದೆಯೇ ಎಂಬ ಕಳವಳ ಉಂಟಾಗುವುದು ಇದೇ ಕಾರಣದಿಂದಾಗಿ.
ಒಂದೆಡೆ ಕಳಪೆ ಗುಣಮಟ್ಟದ ಶಿಕ್ಷಣ, ಮತ್ತೊಂದೆಡೆ ನಾಳೆ ಬದುಕಿಗೆ ಏನು ಮಾಡಬೇಕು ಎಂದು ನಿರ್ಧರಿಸಲಾರದ ಸ್ಥಿತಿಗೆ ವಿದ್ಯಾರ್ಥಿಗಳನ್ನು ತಳ್ಳುವುದು, ತಮ್ಮ ಬದುಕನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಯೋಚಿಸಲಾರದ ಮಟ್ಟಿಗೆ ಅವರನ್ನು ಅತಂತ್ರರನ್ನಾಗಿಸುವುದು ಇವತ್ತಿನ ವ್ಯವಸ್ಥೆಯಲ್ಲಿ ಆಗುತ್ತಿದೆ.
ಈ ಕಟು ಸತ್ಯವನ್ನು ಬಿಯಾಂಡ್ ಬೇಸಿಕ್ಸ್ ಹೆಸರಿನ 2023ರ ಎಎಸ್‌ಇಆರ್ ವರದಿ ಅಂಕಿಅಂಶಗಳೊಂದಿಗೆ ತೆರೆದಿಟ್ಟಿದೆ. ಅದು ಹೇಳುವ ಕೆಲವು ಸತ್ಯಗಳಂತೂ ನಿಜಕ್ಕೂ ಆತಂಕಕಾರಿ.
ಎಎಸ್‌ಇಆರ್ ವರದಿಯ ಪ್ರಕಾರ,
ಇಲ್ಲಿನ ಗ್ರಾಮೀಣ ಪ್ರದೇಶಗಳ ಹತ್ತನೇ ತರಗತಿಯ ಮಕ್ಕಳ ಮಟ್ಟ ಮೂರನೇ ತರಗತಿಯ ಗಣಿತವನ್ನೂ ಮಾಡಲಾಗದ ಸ್ಥಿತಿಯಲ್ಲಿದೆ.
ಇನ್ನೂ ಆತಂಕದ ಸಂಗತಿಯೆಂದರೆ, ಹೆಚ್ಚಿನ ವಿದ್ಯಾರ್ಥಿಗಳು ನಾಳೆ ತಾವೇನಾಗಲು ಬಯಸುತ್ತೇವೆ, ಎಂಥ ಉದ್ಯೋಗ ತಮ್ಮ ಗುರಿಯಾಗಿದೆ ಎಂಬ ಸ್ಪಷ್ಟತೆಯೇ ಇಲ್ಲದವರಾಗಿದ್ದಾರೆ ಎಂಬುದು.
ಗ್ರಾಮಾಂತರ ಭಾಗದ 14ರಿಂದ 18 ವರ್ಷದ ಬಹುಪಾಲು ಮಕ್ಕಳು 3ನೇ ತರಗತಿ ಗಣಿತವನ್ನೂ ಮಾಡಲಾರದವರಾಗಿದ್ದಾರೆ. ಅದೇ ವಯೋಮಾನದ ಶೇ.25ರಷ್ಟು ಮಕ್ಕಳು ಪ್ರಾದೇಶಿಕ ಭಾಷೆಯಲ್ಲಿನ 2ನೇ ತರಗತಿಯ ಪಠ್ಯವನ್ನೂ ನಿರರ್ಗಳವಾಗಿ ಓದಲಾರರು.
ದೇಶದಲ್ಲಿನ 10ನೇ ತರಗತಿ ಮತ್ತು ಹೈಯರ್ ಸೆಕೆಂಡರಿ ಹಂತದ ಅಂದರೆ 11 ಮತ್ತು 12ನೇ ತರಗತಿಯ ಮಕ್ಕಳು ಪಠ್ಯ ಓದುವುದಕ್ಕೆ ಮತ್ತು ಅಂಕಗಣಿತದ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಒದ್ಡಾಡುವ ಸ್ಥಿತಿ ಇದೆ.
ಗ್ರಾಮೀಣ ಭಾಗದಲ್ಲಿ 14ರಿಂದ 18ರ ವಯೋಮಾನದ ಅರ್ಧಕ್ಕಿಂತ ಹೆಚ್ಚು ಮಕ್ಕಳು 3-4ನೇ ತರಗತಿಯಲ್ಲಿ ಕಲಿಸುವ ಸರಳವಾದ ಮೂರು ಅಂಕಿಯ ಗಣಿತದ ಸಮಸ್ಯೆಯನ್ನೂ ಬಿಡಿಸುವ ಸಾಮರ್ಥ್ಯ ಹೊಂದಿಲ್ಲ.
ಇನ್ನು ಕೆಲವೇ ವರ್ಷಗಳಲ್ಲಿ ಕೆಲಸ ಹುಡುಕಿಕೊಳ್ಳಬೇಕಾದ ಹಂತದಲ್ಲಿರುವ ಈ ಹದಿಹರೆಯದವರಲ್ಲಿ ಕೌಶಲ್ಯ ಕೊರತೆ ದೊಡ್ಡ ಮಟ್ಟದಲ್ಲಿದೆ ಎಂಬುದನ್ನು ಸಂಶೋಧನೆಗಳು ಹೇಳುತ್ತಿವೆ.
ಇವರ ಓದುವ ಸಾಮರ್ಥ್ಯ ಎಷ್ಟು ನಿರಾಶಾದಾಯಕವಾಗಿದೆ ಎಂಬುದನ್ನು ನೋಡಿದರೆ,
ಸುಮಾರು ಕಾಲುಭಾಗದಷ್ಟು ಅಂದರೆ ಶೇ.26.5 ಮಕ್ಕಳು ತಮ್ಮ ಪ್ರಾದೇಶಿಕ ಭಾಷೆಯಲ್ಲಿ 2ನೇ ತರಗತಿಯ ಪಠ್ಯಪುಸ್ತಕವನ್ನು ನಿರರ್ಗಳವಾಗಿ ಓದಲಾರರು.
ಅರ್ಧಕ್ಕಿಂತ ಸ್ವಲ್ಪ ಕಡಿಮೆ (ಶೇ.42.7) ಮಕ್ಕಳು ಇಂಗ್ಲಿಷ್‌ನಲ್ಲಿ ವಾಕ್ಯಗಳನ್ನು ಓದಲಾರದವರಾಗಿದ್ಧಾರೆ. ಹಾಗೆ ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲವರಲ್ಲಿ ಕಾಲು ಭಾಗದಷ್ಟು (ಶೇ.26.5) ಮಕ್ಕಳು ತಾವು ಓದಿದ್ದನ್ನು ಅರ್ಥ ಮಾಡಿಕೊಳ್ಳಲಾರರು.
ಗಣಿತ ವಿಷಯ ಕೂಡ ಆ ಮಕ್ಕಳಿಗೆ ದೊಡ್ಡ ಸವಾಲಾಗಿದೆ.
ಸಮೀಕ್ಷೆಗೆ ಒಳಪಟ್ಟಿದ್ದವರಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು (ಶೇ.56.7) 3 ಅಂಕಿಯನ್ನು ಒಂದಂಕಿಯಿಂದ ಭಾಗಿಸುವ ಸರಳ ಭಾಗಾಕಾರ ಸಮಸ್ಯೆಯನ್ನೂ ಬಿಡಿಸಲಾರದವರಾಗಿದ್ದರು.
ಮತ್ತು ಅವರಲ್ಲಿ ಅರ್ಧಕ್ಕೂ ಹೆಚ್ಚಿನ ಮಕ್ಕಳು ತಮ್ಮ ಓದು ಮತ್ತು ಗಣಿತ ಕೌಶಲವನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸುವ ಸಾಮರ್ಥ್ಯವೇ ಇಲ್ಲದವರಾಗಿದ್ದಾರೆ ಎಂಬುದು ಇನ್ನೂ ಆತಂಕ ಮೂಡಿಸುವ ಸಂಗತಿಯಾಗಿದೆ.
ಒಂದು ಸ್ಕೇಲ್‌ನಲ್ಲಿ ಯಾವುದೇ ವಸ್ತುವನ್ನು ‘ಸೊನ್ನೆ’ ಯಲ್ಲಿ ಇಟ್ಟರೆ ಅದರ ಉದ್ದ ಎಷ್ಟು ಎಂದು ಸರಿಯಾಗಿ ಹೇಳಬಲ್ಲವರು ಶೇ. 85 ಆಗಿದ್ದರೆ,
ಅದೇ ವಸ್ತುವನ್ನು ಸೊನ್ನೆಯಿಂದ ತೆಗೆದು ಸ್ಕೇಲ್‌ನ ಬೇರೆ ಸಂಖ್ಯೆಯ ಬಳಿ ಇಟ್ಟರೆ ಅದರ ಉದ್ದವನ್ನು ಸರಿಯಾಗಿ ಹೇಳುವವರು ಶೇ. 40ಕ್ಕಿಂತ ಕಡಿಮೆ !
ಎಎಸ್‌ಇಆರ್ ಕೊಟ್ಟ ಹೆಚ್ಚಿನ ಟೆಸ್ಟ್‌ಗಳಲ್ಲಿ ಹುಡುಗಿಯರಿಗಿಂತ ಹುಡುಗರು ತುಸು ಮುಂದಿದ್ದುದು ಕೂಡ ಕಂಡುಬಂತು ಎಂಬುದನ್ನು ವರದಿ ಉಲ್ಲೇಖಿಸಿದೆ.
ಉದಾಹರಣೆಗೆ, ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ.45 ಹುಡುಗರು ಭಾಗಾಕಾರದಂಥ ಸಮಸ್ಯೆಯನ್ನು ಬಿಡಿಸಬಲ್ಲವರಾಗಿದ್ದರೆ, ಹುಡುಗಿಯರಲ್ಲಿ ಈ ಪ್ರಮಾಣ ಶೇ.41.8ರಷ್ಟು ಮಾತ್ರವಿತ್ತು.
ಹಾಗೆಯೇ ಒಂದು ಸಂದರ್ಭಕ್ಕೆ ಅನ್ವಯಿಸಿ ಸಮಯವನ್ನು ಲೆಕ್ಕ ಹಾಕುವ ಟೆಸ್ಟ್‌ನಲ್ಲಿ ಶೇ.50.5ರಷ್ಟು ಹುಡುಗರು ಕೌಶಲ ತೋರಿಸಿದರೆ, ಶೇ.41.1ರಷ್ಟು ಹುಡುಗಿಯರಲ್ಲಿ ಮಾತ್ರವೇ ಆ ಕೌಶಲ ಕಂಡಿತು.
ಹಿಂದೆಂದಿಗಿಂತಲೂ ಹೆಚ್ಚಿನ ಸಮಯವನ್ನು ಮಕ್ಕಳು ಈಗ ಶಾಲೆಯಲ್ಲಿ ಕಳೆಯುತ್ತಾರೆ. ಹಾಗಿದ್ದೂ ಅವರ ಪ್ರಾಥಮಿಕ ಕೌಶಲ ತೀರಾ ಕಳಪೆ ಮಟ್ಟದಲ್ಲಿದೆ.
ಎಎಸ್‌ಇಆರ್ 2023 ರ ಪ್ರಕಾರ,
ಒಟ್ಟಾರೆ 14ರಿಂದ 18 ವರ್ಷ ವಯಸ್ಸಿನ ಶೇ.86.8ರಷ್ಟು ಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಜೀವನೋಪಾಯದ ಸಮಸ್ಯೆಯಿಂದಾಗಿ ಶಾಲೆ ಬಿಡುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿಯೇ ಇದೆ.
ಶೇ. 25ರಷ್ಟು ಹುಡುಗರು ಶಿಕ್ಷಣ ಮುಂದುವರಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ದರೆ, ಶೇ. 20ರಷ್ಟು ಹುಡುಗಿಯರು ಕುಟುಂಬದ ಸಮಸ್ಯೆಗಳನ್ನು ಹೇಳುತ್ತಾರೆ.
ಇನ್ನು ಕೆಲವರು ಆರ್ಥಿಕ ಸಮಸ್ಯೆಗಳು ಮತ್ತು ಪರೀಕ್ಷೆಯಲ್ಲಿ ವೈಫಲ್ಯದ ಕಾರಣಗಳನ್ನು ನೀಡಿದ್ದಾರೆ.
ಗ್ರಾಮೀಣ ಭಾಗದ ಈ ವಯೋಮಾನದ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ.10ನೇ ತರಗತಿ ಬಳಿಕ ಕಲಾ ವಿಭಾಗವನ್ನು ಆಯ್ದುಕೊಳ್ಳುವ ಗ್ರಾಮೀಣ ವಿದ್ಯಾರ್ಥಿಗಳು ಶೇ.55.7ರಷ್ಟು.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಅಂದರೆ ಎಸ್‌ಟಿಇಎಂ ಆಯ್ದುಕೊಂಡಿರುವವರು ಶೇ.31.7ರಷ್ಟು. ವಾಣಿಜ್ಯ ವಿಭಾಗವನ್ನು ಆಯ್ದುಕೊಂಡವರು ಶೇ.9.4ರಷ್ಟು .
ಎಸ್‌ಟಿಇಎಂ ಆಯ್ದುಕೊಳ್ಳಲು ಒಲವು ತೋರುವ ಹುಡುಗರ ಪ್ರಮಾಣ ಶೇ.36.3 ಇದ್ದರೆ, ಹುಡುಗಿಯರ ಪ್ರಮಾಣ ಶೇ.28.1ರಷ್ಟಿದೆ.
ಎಎಸ್‌ಇಆರ್ ವರದಿ ಪ್ರಕಾರ, ಪ್ರತೀ ಐದು ಯುವಕರಲ್ಲಿ ಒಬ್ಬರಿಗೆ ತಾವೇನು ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳುವ ಸಾಮರ್ಥ್ಯ ಇಲ್ಲ.
ಇದು ನಾಳೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆಯೇ ಇಲ್ಲವಾಗಿರುವುದನ್ನು ಹೇಳುತ್ತದೆ.
ಅವರು ತಮ್ಮ ಭವಿಷ್ಯದ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲಾರದವರಾಗಿದ್ದಾರೆ. ಏನು ಅಧ್ಯಯನ ಮಾಡಬೇಕು, ಎಲ್ಲಿಯವರೆಗೆ ಮುಂದೆ ಓದಬೇಕು, ಯಾವ ರೀತಿಯ ಕೆಲಸವನ್ನು ತಾವು ಮಾಡಬಹುದು, ಯಾವ ರೀತಿಯ ಉದ್ಯೋಗಗಳಿಗೆ ಬೇಡಿಕೆಯಿದೆ?
-ಇಂಥ ಯಾವುದರ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ತಿಳಿವಳಿಕೆ ಇಲ್ಲದಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ವಿದ್ಯಾರ್ಥಿಗಳಲ್ಲಿ ಅಂಥ ಸ್ಪಷ್ಟತೆಯನ್ನು ಮೂಡಿಸಲು ಬೇಕಿರುವ ಸಂಪನ್ಮೂಲಗಳು, ಸಂವಹನದ ಕೊರತೆ ಕೂಡ ಅವರೆದುರು ಇದೆ.
ಸಮೀಕ್ಷೆಗೆ ಒಳಪಟ್ಟಿದ್ದವರಲ್ಲಿ ಶೇ.42.5ರಷ್ಟು ಹುಡುಗರು ಮತ್ತು ಶೇ.48.3ರಷ್ಟು ಹುಡುಗಿಯರು ನಾಳೆ ತಾವೇನಾಗಬೇಕು ಎಂಬ ಸ್ಪಷ್ಟತೆ ಹೊಂದಿರಲಿಲ್ಲ.
ಎಎಸ್‌ಇಆರ್ ಸಮೀಕ್ಷೆಯನ್ನು 26 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, 14ರಿಂದ 18 ವರ್ಷ ವಯಸ್ಸಿನ 34,745 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಪ್ರತೀ ರಾಜ್ಯದಲ್ಲಿ ಒಂದು ಗ್ರಾಮಾಂತರ ಜಿಲ್ಲೆಯನ್ನು ಸಮೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಅದು ತೆರೆದಿಟ್ಟಿರುವ ಸತ್ಯ ಮಾತ್ರ ನಿಜಕ್ಕೂ ಕಳವಳ ಮೂಡಿಸುವಂಥದ್ದು.
ಕನಸುಗಳೇ ಇಲ್ಲದ ವಿದ್ಯಾರ್ಥಿಗಳು ನಾಳೆಯ ತಮ್ಮ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬಲ್ಲರು ಎಂಬುದು ಸಣ್ಣ ಪ್ರಶ್ನೆಯಲ್ಲ. ಬದುಕಿನ ಬಗ್ಗೆ ಕನಸೇ ಇಲ್ಲದ ಅವರು ಏನಾದಾರು ಎಂಬುದನ್ನು ನೆನೆದರೇ ಭಯವಾಗುತ್ತದೆ.