ಸತ್ಯ ಮತ್ತು ಸುಳ್ಳಿನ ನಡುವೆ

ನಮ್ಮನ್ನು ಯಾರಾದರೂ ಹಳಿದರೆ, ನಿಂದಿಸಿದರೆ, ಅವಮಾನಿಸಿದರೆ ನಾವು ಅದಕ್ಕೆ ಪಾತ್ರರಾಗುವ ಅಯೋಗ್ಯರಲ್ಲ, ತಮಗೂ ಅರ್ಹತೆಯಿದೆ, ತಮ್ಮ ಕುರಿತು ಬಂದಿರುವ ಅಂತಹ ಅಭಿಪ್ರಾಯಗಳನ್ನು ಸುಳ್ಳಾಗಿಸುತ್ತೇವೆ ಎಂಬ ಮನೋದಾರ್ಢ್ಯವಿರಬೇಕು. ಸಂಕಲ್ಪಬಲವಿರಬೇಕು. ಆದರೆ ಈಗ ನಡೆಯುತ್ತಿರುವುದೇ ಬೇರೆ. ತಮ್ಮ ಕುರಿತಾದ ಯಾವುದೇ ಅವಮಾನದ ನುಡಿಗೆ ತಾವು ಅರ್ಹರು ಎಂಬುದನ್ನು ಸಾಬೀತುಪಡಿಸಲು ಸಾಮೂಹಿಕ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸತ್ಯ ಹೇಳಿದರೂ ಒಂದೇ; ಸುಳ್ಳು ಹೇಳಿದರೂ ಒಂದೇ. ಹೇಳಬೇಕಾದ್ದನ್ನು ಜನರ ನೆತ್ತಿಯ ಮೇಲೆ ಅವರ ಅನುಭವಕ್ಕೆ ದಕ್ಕದಂತೆ, ಅವರಿಗೆ ಅರ್ಥವಾಗದಂತೆ, ಆಕಾಶವಾಣಿಯಾಗಿ ಹೇಳುವುದೇ ದಕ್ಷತೆ; ದಕ್ಷತೆಯಲ್ಲದಿದ್ದರೂ ಬದುಕುವ ಚಾಕಚಕ್ಯತೆ.

Update: 2023-10-19 03:43 GMT

ಮಹಾಭಾರತದಲ್ಲಿ ದ್ರೋಣರ ಸಾವಿಗೆ ಕಾರಣವಾದದ್ದು ಯುಧಿಷ್ಠಿರನು ಹೇಳಿದನೆಂಬ ಒಂದು ಸುಳ್ಳು. ನಿಜಕ್ಕೂ ಅದು ಸುಳ್ಳಲ್ಲ. ಆತ ಹೇಳಿದ ವಾಕ್ಯ ಪೂರ್ಣವಾಗುವ ಮೊದಲು ಕೃಷ್ಣನು ಪಾಂಚಜನ್ಯವನ್ನೂದಿದನೆಂಬ ಪ್ರಕ್ಷಿಪ್ತ ಕಥೆಯಿದೆ. ಇರಲಿ: ಮೂಲವನ್ನೇ ಶೋಧಿಸೋಣ: ವ್ಯಾಸಭಾರತದ 190ನೇ ಅಧ್ಯಾಯದಲ್ಲಿ ಬರುವ ದ್ರೋಣಪರ್ವದಲ್ಲಿ ಈ ಪ್ರಸಂಗ ಹೀಗಿದೆ: ದ್ರೋಣರು ಕೌರವ ಸೇನಾಧಿಪತಿಯಾಗಿ ಭೀಕರ ಯುದ್ಧವನ್ನು ಮಾಡಿ ಪಾಂಡವ ಸೇನೆಯನ್ನು ತಲ್ಲಣಿಸುತ್ತಾರೆ. ಆಗ ಶ್ರೀಕೃಷ್ಣನು ದ್ರೋಣರನ್ನು ಯುದ್ಧದ ಮೂಲಕ ಜಯಿಸಲು ಸಾಧ್ಯವಾಗದೆಂದು ತಿಳಿಸಿ ಅನ್ಯಮಾರ್ಗೋಪಾಯವನ್ನು ಹುಡುಕುತ್ತಾನೆ. ದ್ರೋಣನ ಪ್ರಿಯಪುತ್ರನಾದ ಅಶ್ವತ್ಥಾಮನು ಹತನಾದರೆ ದ್ರೋಣರು ಮುಂದೆ ಯುದ್ಧಮಾಡಲಾರರು. ಆದ್ದರಿಂದ ಮಗನು ಹತನಾದನೆಂಬುದನ್ನು ಯಾರಾದರೂ ದ್ರೋಣರಿಗೆ ತಿಳಿಸಲಿ ಎನ್ನುತ್ತಾನೆ. ಕೃಷ್ಣ ಹೇಳಿದರೆ ಯಾರೂ ನಂಬುವುದಿಲ್ಲವೆನ್ನುವುದು ಆಗಲೇ ಸರ್ವವಿದಿತವಾಗಿತ್ತೆಂದು ಕಾಣಿಸುತ್ತದೆ. ಈ ಕುಟಿಲೋಪಾಯ ಅರ್ಜುನನಿಗೆ ಹಿಡಿಸದಿದ್ದರೂ ಧರ್ಮರಾಯನಿಗೆ ಕಷ್ಟದಿಂದ ಒಪ್ಪಿಗೆಯಾಗುತ್ತದೆ; ಇತರ ಪಾಂಡವರಿಗೆ ಬೇಷರತ್ತಾಗಿ ಒಪ್ಪಿಗೆಯಾಗುತ್ತದೆ. ಆನಂತರ ಭೀಮಸೇನನು ತನ್ನ ಪಡೆಯ ಮಾಳವದೇಶೀಯನಾದ ಇಂದ್ರವರ್ಮನ ಅಶ್ವತ್ಥಾಮನೆಂಬ ಹೆಸರಿನ ಒಂದು ಆನೆಯನ್ನೇ ಸಂಹರಿಸುತ್ತಾನೆ. ಆನಂತರ ಲಜ್ಜೆಯಿಂದಲೇ ದ್ರೋಣರ ಬಳಿ ಹೋಗಿ ‘‘ಅಶ್ವತ್ಥಾಮನು ಹತನಾದನು, ಇನ್ನಾದರೂ ಯುದ್ಧದಿಂದ ವಿರಮಿಸಿ’’ ಎನ್ನುತ್ತಾನೆ. ವ್ಯಾಕುಲಗೊಂಡರೂ ಒಂದು ಕ್ಷಣ ದೇಹ ಶಿಥಿಲವಾದರೂ ಭೀಮನ ಮಾತನ್ನು ಶಂಕಿಸುತ್ತಾರೆ. ತನ್ನ ಮಗನ ಬಗ್ಗೆ ಅಪಾರ ವಿಶ್ವಾಸವಿದ್ದ ಮತ್ತು ಭೀಮನ ಬಗ್ಗೆ ವಿಶ್ವಾಸವಿಲ್ಲದ ದ್ರೋಣರು ಯುದ್ಧವನ್ನು ಮುಂದುವರಿಸುತ್ತಾರೆ. ಆಗ ಯಜ್ಞೇಶ್ವರನ ಮುಂದಾಳತ್ವದಲ್ಲಿ ಸಪ್ತರ್ಷಿಗಳು ಆಗಮಿಸಿ ಧರ್ಮದ್ರೋಹವಾದ ಯುದ್ಧವನ್ನು ಮಾಡದಿರುವಂತೆ ಮತ್ತು ಶಸ್ತ್ರಸನ್ಯಾಸ ಮಾಡುವಂತೆ ದ್ರೋಣರನ್ನು ಒಲಿಸಲು ಯತ್ನಿಸುತ್ತಾರೆ. ಋಷಿವಾಕ್ಯವನ್ನು ಕೇಳಿದ ದ್ರೋಣರು ಉದಾಸೀನ ಮನಸ್ಕರಾಗಿ ತನ್ನ ಮಗ ಸತ್ತಿರುವುದಕ್ಕೆ ಇವರು ಹೀಗೆ ಹೇಳುತ್ತಿದ್ದಾರೇನೋ ಎಂಬ ಸಂದೇಹ ನಿವಾರಣೆಗಾಗಿ ಸತ್ಯಾಂಶವನ್ನು ತಿಳಿಯುವುದಕ್ಕಾಗಿ ಸತ್ಯವಂತನೆಂದು ಲೋಕಪ್ರಸಿದ್ಧಿಯಾದ ಧರ್ಮರಾಯನನ್ನು ಅಶ್ವತ್ಥಾಮನು ಸತ್ತಿರುವನೇ ಇಲ್ಲವೇ ಎಂದು ಪ್ರಶ್ನಿಸುತ್ತಾರೆ. ಈ ವಿಚಾರ ಕೃಷ್ಣನ ಕಿವಿಗೆ ಬಿದ್ದು ಧರ್ಮರಾಯನನ್ನುದ್ದೇಶಿಸಿ ‘‘ನೀನೀಗ ನಮ್ಮೆಲ್ಲರನ್ನೂ ದ್ರೋಣರಿಂದ ರಕ್ಷಿಸಬೇಕು; ಕೆಲವು ಸಂದರ್ಭಗಳಲ್ಲಿ ಸುಳ್ಳುಮಾತೇ ಶ್ರೇಷ್ಠವಾದುದು; ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ಸುಳ್ಳು ಹೇಳಿದರೆ ಅದರ ಪಾಪದಿಂದ ಲಿಪ್ತನಾಗುವುದಿಲ್ಲ’’ ಎಂದು ಮುಂತಾಗಿ ಬೋಧಿಸುತ್ತಾನೆ. ಭೀಮನೂ ಧ್ವನಿಗೂಡಿಸಿ ತಾನು ‘ಅಶ್ವತ್ಥಾಮ’ನನ್ನು (ಅರ್ಥಾತ್ ಅಶ್ವತ್ಥಾಮನೆಂಬ ಆನೆಯನ್ನು) ಕೊಂದಿರುವುದಾಗಿ ಮತ್ತು ಅದನ್ನು ದ್ರೋಣರು ನಂಬಿಲ್ಲವೆಂದು ಹೇಳುತ್ತಾನೆ. ಕೊನೆಗೆ ಬಲವಂತಕ್ಕೆ ಸಿಕ್ಕ ಯುಧಿಷ್ಠಿರನು ‘ಅಶ್ವತ್ಥಾಮಾ’ ಎಂಬುದನ್ನು ಗಟ್ಟಿಯಾಗಿ ಹೇಳಿ ಆನಂತರ ಸ್ಪಷ್ಟವಾಗಿ ಕೇಳಿಸದ ರೀತಿಯಲ್ಲಿ ‘ಹತಃ ಕುಂಜರಃ’ ಎಂಬ ಶಬ್ದವನ್ನು ಸೇರಿಸುತ್ತಾನೆ. ಸತ್ಯವಂತನ ಸುಳ್ಳು ದ್ರೋಣರ ಸಂಶಯವನ್ನು ನಿವಾರಿಸುತ್ತದೆ; ತುಸು ಸಮಯದಲ್ಲಿ ಅವರು ಶಸ್ತ್ರವನ್ನು ತ್ಯಜಿಸಿ ಯೋಗಚಿತ್ತರಾಗಿ ಕುಳಿತಾಗ ಧೃಷ್ಟದ್ಯುಮ್ನನು ಅವರನ್ನು ಸಂಹರಿಸಿದನೆಂದು ಕಥೆ ಹೇಳುತ್ತದೆ. ಜೊತೆಗೇ ನೆಲದಿಂದ ನಾಲ್ಕು ಅಂಗುಲಗಳಷ್ಟು ಮೇಲಿದ್ದ ಯುಧಿಷ್ಠಿರನ ರಥವು ಆ ಕ್ಷಣದಲ್ಲೇ ಕುಸಿದು ಭೂಮಿಗಿಳಿಯಿತೆಂದು ಕವಿ ಹೇಳುತ್ತಾನೆ. ಸುಳ್ಳಿಗೂ ಕಾಲವಿದೆ; ಹಾಗೆಯೇ ಸತ್ಯಕ್ಕೂ ಕಾಲವಿದೆ.

ಹಲವು ಪ್ರಶ್ನೆಗಳನ್ನು ಒಡ್ಡುವ ಪ್ರಸಂಗವಿದು: ಸತ್ಯವಂತನೆಂದು ಖ್ಯಾತಿಹೊತ್ತ ಧರ್ಮರಾಯನ ಸುಳ್ಳು, ಕೃಷ್ಣ, ಭೀಮರನ್ನು ಸಮಾಜ ನಂಬದಿರುವ ಸ್ಥಿತಿ, ಯುದ್ಧರಂಗದಲ್ಲೂ ಮಗನ ಕುರಿತ ದ್ರೋಣರ ವ್ಯಾಮೋಹ, ಮುಂತಾದ ಮೌಲ್ಯಗಳ ಮಜಲುಗಳನ್ನು ಅಧ್ಯಯನಮಾಡಬಹುದು.

ಮುಖ್ಯವಾಗಿ ಸತ್ಯವಂತನ ಸುಳ್ಳನ್ನು ಸಮಾಜ ನಂಬುತ್ತದೆ; ಹಾಗೆಯೇ ಸುಳ್ಳುಹೇಳುವವನು ಸತ್ಯವನ್ನೇ ಹೇಳಿದರೂ ಸಮಾಜ ಆತನನ್ನು ನಂಬುವುದಿಲ್ಲ. ಮಡಿವಾಳನನ್ನು ಮೊಸಳೆ ನುಂಗಿದ ಕಥೆ ವಿವರಣೆಯ ಅಗತ್ಯವಿಲ್ಲದೆಯೇ ಇಂದಿಗೂ ಪ್ರಸ್ತುತ.

ಸಂಸ್ಕೃತ ಮಹಾಭಾರತದ ಈ ಸಂಪುಟಕ್ಕೆ (ಭಾರತ ದರ್ಶನ ಪ್ರಕಾಶನ, ಬೆಂಗಳೂರು, 1979) ಕವಿ ಗೋಪಾಲಕೃಷ್ಣ ಅಡಿಗರು ಮುನ್ನುಡಿಯನ್ನು ಬರೆದಿದ್ದರು. ಅದು ಅವರ ಸಮಗ್ರ ಬರಹಗಳಲ್ಲಿ ಬಂದಂತಿಲ್ಲ. ಅವರು ಹೇಳಿದಂತೆ ಹಿಂದೆ ಗುರುಹಿರಿಯರಿಂದಲೇ ಕೇಳಿ ಕಲಿಯುತ್ತಿದ್ದ ಪುರಾತನ ಜ್ಞಾನವನ್ನು ಸ್ವತಃ ಓದಿ ತಿಳಿಯಬೇಕಾದ ಕಾಲ ಈಗ ಬಂದಿದೆ. ತನ್ನ ವ್ಯಕ್ತಿತ್ವದ ವಿಕಾಸವನ್ನು ಬಯಸಿ ತಿಳಿವಳಿಕೆಯನ್ನು ಹುಡುಕಿಹೊರಟವನ ಮುಂದೆ ಮಾನವ ಜನಾಂಗದ ಎಲ್ಲ ಕಾಲಗಳ ಅತ್ಯುತ್ತಮ ಕೃತಿಗಳೂ ಇರಬೇಕಾದ್ದು ಈಗ ಅತ್ಯವಶ್ಯ. ಈ ಆಧುನಿಕ ಯುಗ ವ್ಯಕ್ತಿತ್ವದ ಯುಗ ಹೇಗೋ ಹಾಗೆ ಮಾನವತೆಯ ಯುಗವೂ ಹೌದು.

ಒಂದು ಜಾನಪದ ಪ್ರಸಂಗದಲ್ಲಿ ಮುದುಕಿಯೊಬ್ಬಳು ತಾನು ಕಳೆದುಕೊಂಡ ಸೂಜಿಯನ್ನು ಮನೆಯೆದುರಿನ ಬೀದಿದೀಪದಡಿ ಹುಡುಕುತ್ತಿದ್ದಳು. ಹಾದಿಹೋಕನೊಬ್ಬ ಅವಳನ್ನು ಕಂಡು ಮರುಕಗೊಂಡು ವಿಚಾರಿಸಿದನು. ಆಕೆ ತಾನು ಸೂಜಿಯನ್ನು ಕಳೆದುಕೊಂಡ ವಿಚಾರವನ್ನು ಹೇಳಿದಳು. ಆತ ಆಕೆಗೆ ಸಹಾಯಮಾಡಲು ತಾನೂ ಹುಡುಕಿ ಸಿಕ್ಕದಿದ್ದಾಗ ‘‘ಎಲ್ಲಿ ಹೋಯಿತು ಸೂಜಿ?’’ ಎಂದು ಮತ್ತೊಮ್ಮೆ ಕೇಳಿದ. ಆಗ ಆಕೆ ‘‘ಅದು ಇಲ್ಲಿ ಕಳೆದುಹೋದದ್ದಲ್ಲ, ಮನೆಯೊಳಗೆ ಕಳೆದುಹೋದದ್ದು’’ ಎಂದಳು. ‘‘ಮತ್ಯಾಕೆ ಇಲ್ಲಿ ಹುಡುಕುತ್ತಿರುವೆ?’’ ಎಂದು ಆತ ಪ್ರಶ್ನಿಸಿದಾಗ ಆಕೆ ‘‘ಮನೆಯಲ್ಲಿ ಬೆಳಕಿಲ್ಲ ಅದಕ್ಕಾಗಿ ಇಲ್ಲಿ-ಬೆಳಕಿರುವಲ್ಲಿ ಹುಡುಕುತ್ತಿದ್ದೇನೆ’’ ಎಂದಳು.

ಸಮಾಜದಲ್ಲಿ ಬಹುಪಾಲು ಮಂದಿ ಹೀಗಿರುವವರು. ತಮ್ಮ ಅನುಕೂಲವೇ ಅವರಿಗೆ ಸತ್ಯ. ಅದನ್ನೇ ಅವರು ಹುಡುಕುವವರು. ಇನ್ನೊಂದು ವರ್ಗವಿದೆ: ನಾಯಕರು ಮತ್ತು ತಿಳಿದವರೆಂದು ಗುರುತಿಸಿಕೊಂಡವರು ಏನನ್ನಾದರೂ ಹೇಳಿದರೆ ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸದೆ, ಅನ್ವೇಷಿಸದೆ, ಅದನ್ನು ಚಾಚೂ ತಪ್ಪದೆ ಅನುಸರಿಸುವ (ಮತ್ತು ಬಹುಪಾಲು ಅನುಕರಿಸುವ) ಮುಗ್ಧರು; ಮೂರ್ಖರು; ಧೂರ್ತರೂ ಇದ್ದಾರೆ. ಹೀಗಾಗಿ ಸತ್ಯಾನ್ವೇಷಣೆ ಅಸ್ಪಶ್ಯರಂತೆ ದೂರವೇ ಉಳಿಯುತ್ತದೆ. ಆದರೆ ಸತ್ಯದ ಮತ್ತು ಅರಿವಿನ ಹಿಂಬಾಲಕರು ಸವೆದ ಹಾದಿಯಲ್ಲಿ ಹೋಗದೆ ತಮ್ಮ ಸತ್ಯಾನ್ವೇಷಣೆಗೆ ಅನುಕೂಲವಾದ ಮತ್ತು ಅಗತ್ಯವಾದ ಹಾದಿಯನ್ನು ಅದೆಷ್ಟೇ ದುರ್ಗಮವಾದರೂ ಹುಡುಕುತ್ತಾರೆ.

ಇದು ಸುಗಮ ಯುಗ. ಎಲ್ಲವೂ ಸುಲಭದಲ್ಲೇ ದಕ್ಕಬೇಕು. ಒಂದೆಡೆ ಸಾಮಾಜಿಕ ವಲಯದಲ್ಲಿ ಎಲ್ಲರೂ ಸುಲಭವಾಗಿ ದಕ್ಕಿದ್ದು ತಾತ್ಕಾಲಿಕ; ಕಷ್ಟಪಟ್ಟು ಪಡೆದದ್ದು ಶಾಶ್ವತ ಎಂಬ ಪ್ರಮೇಯವನ್ನು ಸ್ವೀಕರಿಸುತ್ತಾರಾದರೂ ಅದು ಗಂಟಲಿನಿಂದ ಕೆಳಗಿಳಿಯುವುದಿಲ್ಲ. ಸ್ಥಾನದ ಮೂಲಕ ಮಾನವನ್ನು ಪಡೆಯುವುದು ವರ್ತಮಾನದ ಸಂಕಟಗಳಲ್ಲೊಂದು. ನೀವೆಷ್ಟೇ ಒಳ್ಳೆಯ ಉಪನ್ಯಾಸಕರಾಗಿದ್ದರೂ ವೇದಿಕೆಯಲ್ಲಿ ರಾಜಕಾರಣಿಯೋ, ಹೆಚ್ಚು ಪದವಿಗಳನ್ನು ಹೊತ್ತವನೋ ಇದ್ದರೆ ಆತನಿಗೇ ಪ್ರಾಶಸ್ತ್ಯ. ಅರಿವಿನ ಅಗತ್ಯ ಸೇರಿದವರಿಗಿರುವುದಿಲ್ಲ. ಅವರಿಗೆ ಸಮಯ ಕಳೆಯಲೊಂದು ಸಂದರ್ಭ, ಪ್ರಸಂಗ ಬೇಕು, ಅಷ್ಟೇ. ಅರ್ಥವಾಗಬೇಕಾಗಿಲ್ಲ; ಕೊನೆಗೆ ಅನುಭವವೂ ಆಗಬೇಕಾಗಿಲ್ಲ.

ಸಮಾಜದಲ್ಲಿ ಇಂದಿಗೂ ಧರ್ಮಕ್ಷೇತ್ರಗಳನ್ನು, ದೇಗುಲಗಳನ್ನು ಅಂದರೆ ಪೂಜಾಸ್ಥಾನಗಳನ್ನು- ಅವು ಯಾವುದೇ ಧರ್ಮ, ಮತ, ಜಾತಿಗೆ ಸೇರಿರಲಿ- ಸಂದರ್ಶಿಸುವವರನ್ನು ಮುಗ್ಧರು, ಮೂರ್ಖರು, ಧೂರ್ತರು ತಮ್ಮ ತಮ್ಮ ಕಾರಣಗಳಿಗಾಗಿ ಮತ್ತು ಕೆಲವೊಮ್ಮೆ ವಿನಾಕಾರಣವಾಗಿ ಗೌರವಿಸುತ್ತಾರೆ. ಇಂದು ಸಮಾಜಕ್ಕೆ ಕಂಟಕವನ್ನು ತರುವ ಬಹಳಷ್ಟು ಮಂದಿ ಈ ವರ್ಗದವರು. ಸಮಾಜವನ್ನು ವಿಸ್ಮತಿಗೆ ತಳ್ಳುವುದಕ್ಕೆ ಇವು ಕಾರಣವಾಗುತ್ತವೆ. ನ್ಯಾಯಾಲಯಗಳಲ್ಲೂ ಹೀಗೆ ದೈವಶ್ರದ್ಧೆಯನ್ನು ಹೊಂದಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದವರನ್ನು ನಂಬುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಷ್ಟೇ ಆಧುನಿಕರೆಂದು ಬೆನ್ನುತಟ್ಟಿಕೊಂಡರೂ ನಮ್ಮ ಮೌಢ್ಯವು ನಮ್ಮ ಪ್ರತಿಭೆ, ಪ್ರಖರತೆಗೆ ಮೋಡದಂತೆ ಮುಚ್ಚಿಕೊಂಡು ಕತ್ತಲನ್ನೇ ಬೆಳಕೆಂದು ತಿಳಿಯುವ ಹವ್ಯಾಸ ಮತ್ತು ಅದೇ ಅಭ್ಯಾಸವಾಗಿ, ಚಟವಾಗಿ ಮುಂದುವರಿಯುವುದನ್ನು ಕಾಣಬಹುದು.

ಈಚೆಗೆ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಸಂಗದಲ್ಲಿ ಶಿಕ್ಷಣ, ಧರ್ಮಶ್ರದ್ಧೆಯಿದ್ದರೆ ಒಳ್ಳೆಯವನು ಎನ್ನಲಾಗದು ಎಂಬ ಎಚ್ಚರಿಕೆಯ ಮಾತನ್ನು ಹೇಳಿದೆ. ವ್ಯಕ್ತಿಯು ನಡತೆಯನ್ನು ರೂಪಿಸಿಕೊಳ್ಳಬೇಕು ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳಬೇಕು. ನಡತೆಯ ಕಾರಣಕ್ಕೆ ಖ್ಯಾತಿ ದೊರೆಯಬಹುದು. ಆದರೆ ಎರಡೂ ಭಿನ್ನ ವಿಷಯಗಳು ಎಂದು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯದ ವರದಿಗಳು ಬಂದಿವೆ. ಇದು ವಿವೇಕಧ್ವನಿ. ಚಾರಿತ್ರ್ಯ ನಿರ್ಣಯಕ್ಕೆ ಇವಲ್ಲದೆ ಅನೇಕ ಇತರ ಮೌಲ್ಯಗಳು ಅಗತ್ಯವಿವೆ ಎಂಬುದನ್ನು ನ್ಯಾಯಾಲಯಗಳು ಹೇಳುವ ಪರಿಸ್ಥಿತಿ ಬಂದಿದೆಯೆಂದಾದರೆ ನಾವು ಎಂತಹ ದುರಂತಕ್ಕೀಡಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳಬಹುದು.

ಇವೆಲ್ಲ ಉದ್ಭವವಾಗಿರುವುದು ಸತ್ಯಾನ್ವೇಷಣೆಯ ಮಾರ್ಗ ಮುಚ್ಚಿದೆಯೆಂದಲ್ಲ. ಜನರು ತಮ್ಮ ಅನುಕೂಲ-ಬಹುಪಾಲು ರಾಜಕೀಯ ಮತ್ತು ಇನ್ನುಳಿದ ಸ್ವಲ್ಪ ಪಾಲು ಆರ್ಥಿಕ ಅನುಕೂಲವನ್ನೇ ಬಯಸುತ್ತಾರೆ. ಇತರ ಷಡ್ವೈರಿಗಳು ಪೋಷಕ ಪಾತ್ರವನ್ನು ವಹಿಸುತ್ತಾರೆ. ಜೊತೆಗೆ ಯಾವುದರ ಕುರಿತು ಸ್ವಂತ ಅಭಿಪ್ರಾಯವನ್ನು ತಾಳಬೇಕೋ ಅಂತಹ ಸಂದರ್ಭಗಳಲ್ಲಿ ತಲೆಯಾಡಿಸುವ ಬಸವಣ್ಣಗಳಾಗಿ ಎಲ್ಲಿ ಅಲಕ್ಷಿಸಿ ತಮ್ಮ ಪಾಡಿಗೆ ಸುಮ್ಮನಿರಬೇಕೋ ಅಲ್ಲಿ ಮೂಗು ತೂರಿಸುವ ಸಂದರ್ಭಗಳು ಇಂದು ಹೇರಳವಾಗಿವೆ. ಜನರ ಈ ಪ್ರವೃತ್ತಿಯನ್ನು ನಾಯಕರೆನ್ನಿಸಿಕೊಂಡವರು/ಕೊಳ್ಳುವವರು ತಮ್ಮ ಅನುಕೂಲಕ್ಕಾಗಿ ನಿರ್ದಯವಾಗಿ ಪೋಷಿಸುತ್ತಾರೆ; ಶೋಷಿಸುತ್ತಾರೆ.

ಈಚೆಗೆ ಕೃತಕ ಬುದ್ಧಿಮತ್ತೆಯೆಂಬ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ. ಕವಿಕಲ್ಪನೆಯನ್ನೂ ಮೀರಿ ಇದರ ಮೂಲಕವಾಗಿ ಕೃತಿಯನ್ನೂ ವಿಕೃತಿಯನ್ನೂ ಸೃಷ್ಟಿಸಬಹುದು. ಹೀಗೂ ಇರಬಹುದೇ ಎನ್ನಿಸುವ ರೀತಿಯಲ್ಲಿ ಸಾಹಿತ್ಯ ಸೃಷ್ಟಿಯಾದದ್ದುಂಟು; ಚಿತ್ರ, ನಾಟಕ, ಶಿಲ್ಪಗಳು ಸೃಷ್ಟಿಯಾದದ್ದುಂಟು. ಇವೆಲ್ಲವನ್ನೂ ಮೀರಿಸಿದ ಈ ಹೊಸ ಬುದ್ಧಿಮತ್ತೆಯ ಅಗತ್ಯ ಮನುಷ್ಯರಿಗೆ ಬಂದಿರುವುದು ಸಹಜ ಬುದ್ಧಿ ಕೆಲಸಮಾಡದಿರುವುದರಿಂದ; ಮುಷ್ಕರ ಹೂಡಿದ್ದರಿಂದ. ಸಮಾಜದಲ್ಲಿ ಸಂದರ್ಭರಹಿತ ಅನಗತ್ಯ ಮತ್ತು ಅನುಚಿತವಾದ ಉಲ್ಲೇಖಗಳು- ಅವೆಷ್ಟೇ ಸತ್ಯವಾದರೂ- ಹುಟ್ಟಿಕೊಂಡಾಗ ಪ್ರಜ್ಞಾಶೂನ್ಯತೆ ಆವರಿಸುತ್ತದೆ. ಹುಡುಕಾಟದ ದಿಕ್ಕು ದೆಸೆ ಬದಲಾಗುತ್ತದೆ.

ಯಾವುದೇ ವಿಚಾರವನ್ನೂ ಉಲ್ಲೇಖಿಸಬೇಕಾದರೆ ಅದು ಸಾಂದರ್ಭಿಕವಾಗಿರಬೇಕು; ಔಚಿತ್ಯಪೂರ್ಣವಾಗಿರಬೇಕು; ಅಗತ್ಯವೂ ಇರಬೇಕು. ಕಾಲ/ದೇಸಕ್ಕೆ ಸಂಬಂಧಿಸಿದಂತೆ ಹತ್ತಿರದ ಒಂದು ಚಿಕ್ಕ ಉದಾಹರಣೆಯೆಂದರೆ ಮೈಸೂರಿನ ಪ್ರೊ. ಭಗವಾನ್ ಅವರು ಉಲ್ಲೇಖಿಸಿದ ಕುವೆಂಪು ಅವರ ಮಾತಿನದ್ದು. ಕುವೆಂಪು ಯಾವುದೋ ಸಂದರ್ಭದಲ್ಲಿ ಹೇಳಿದರೆನ್ನಲಾದ ಮಾತು ಈಗ ತನ್ನ ಆಗಿನ ಸಹಜ ಮತ್ತು ಸಾಂದರ್ಭಿಕ ಅರ್ಥವನ್ನು ಕಳೆದುಕೊಂಡು ಅಪ್ರಸ್ತುತವಾಗಿದೆ. ಹಳೆಯ ಗಾದೆಗಳನ್ನು ಇಂದು ಉಲ್ಲೇಖಿಸುವಂತಿಲ್ಲ. ಅಂಥವುಗಳನ್ನು ಆದಷ್ಟು ದೂರವಿಟ್ಟು ನುಡಿಯುವುದು, ದಾಖಲಿಸುವುದು ಒಳ್ಳೆಯದು. ಏಕೆಂದರೆ ಇಂದು ಮನುಷ್ಯ ಅಗತ್ಯಗಳಿಗೆ ಕಿವುಡನೂ ಅನಗತ್ಯಗಳಿಗೆ ಸೂಕ್ಷ್ಮ ಹೃದಯಿಯೂ (ಹೃದಯವೆಂಬುದೊಂದಿದ್ದರೆ!) ಆಗಿದ್ದಾನೆ. ಯಾವ ಪದಗಳು ನಮ್ಮ ಜಾನಪದವನ್ನು, ಗ್ರಾಮೀಣ ಪರಿಸರವನ್ನು ವರ್ಣಿಸಲು ಪರಿಕರವಾಗಿ ಒದಗುತ್ತಿತ್ತೋ ಅವೀಗ ದೂಷಣಾಕಾರಣವಾಗುತ್ತಿವೆ. ಜನರು ಯಾವುದನ್ನು ವಿರೋಧಿಸಿದರೆ, ದ್ವೇಷಿಸಿದರೆ ಅನುಕೂಲವಾಗುತ್ತದೆಯೆಂದು ಯೋಚಿಸುತ್ತಾರೆಯೇ ಹೊರತು ಇದರ ಕುರಿತು ಗಮನ ಅಗತ್ಯವಿದೆಯೇ ಎಂದು ಪರಾಮರ್ಶೆಮಾಡುವುದಿಲ್ಲ. ಭಗವಾನ್ ಇದನ್ನು ಉಲ್ಲೇಖಿಸುವ ಅಗತ್ಯವಿತ್ತೇ ಎಂಬುದನ್ನು ಅವರೇ ಹೇಳಬೇಕು. ಆದರೆ ಪರಿಣಾಮ ಅನಾಹುತದ್ದಾಗುತ್ತದೆಯೆಂದು ಬುದ್ಧಿವಂತರಿಗೆ ಗೊತ್ತಿರಬೇಕು. ಉಗ್ರಾಣದಲ್ಲಿ ಇಲಿಯಿದೆಯೆನ್ನುವುದಕ್ಕಾಗಿ ಅದಕ್ಕೆ ಯಾರೂ ಬೆಂಕಿಯಿಡುವುದಿಲ್ಲ. ಎಷ್ಟು ಬೇಕೋ ಅಷ್ಟನ್ನು ಬಳಸಲು ಗೊತ್ತಿದ್ದರೆ, ಭಾಷೆಯೂ ಸಾರ್ಥಕ, ಸಾಹಿತ್ಯವೂ ಸಾರ್ಥಕ, ಮಾತೂ, ಕೃತಿಯೂ ಸಾರ್ಥಕ. ಕುವೆಂಪು ಸ್ವತಃ ಒಕ್ಕಲಿಗರಾಗಿ ತಮ್ಮ ಸಮುದಾಯದ ಕುರಿತು ಹೇಳಿದ್ದನ್ನು ಇತರರು ಬಳಸಿದಾಗ ಒಕ್ಕಲಿಗರನೇಕರು ಎಚ್ಚೆತ್ತುಕೊಂಡರು. ಕುವೆಂಪು ಮಾತಿನ ಸತ್ಯಾಸತ್ಯತೆಯ ಬಗ್ಗೆ ಈಗ ಚರ್ಚೆಯಾಗುತ್ತಿಲ್ಲ. ಅದರ ಬದಲಿಗೆ ಹೀಗೆ ಹೇಳುವುದರಿಂದ ತಮಗೆ ಅವಮಾನವಾಗಿದೆ ಎಂಬುದೇ ಪ್ರತಿಭಟನೆಯ ಧ್ವನಿಯಾಗಿದೆ.

ಹೇಳಬೇಕಾದ್ದನ್ನೂ ಹಿತವಾಗಿ ಹೇಳಬಹುದು. ಹೇಳಬೇಕಾದವರು ಹೇಳಿದರೆ ಅದು ಅಹಿತವಾದರೂ ಜೀರ್ಣವಾಗುತ್ತದೆ- ವೈದ್ಯರು ನೀಡಿದ ಕಹಿ ಔಷಧಿಯಂತೆ. ಸಭೆಯೊಂದರಲ್ಲಿ ಭಾಷಣಕಾರರು ‘‘ಇಲ್ಲಿರುವವರ ಪೈಕಿ ಅರ್ಧಾಂಶ ಜನರು ಮೂರ್ಖರು’’ ಎಂದರು. ತಕ್ಷಣ ಸಭಿಕರು ಪ್ರತಿಭಟಿಸಿದರು. ಜ್ಞಾನೋದಯವಾದ ಆ ಬುದ್ಧಿವಂತ ಭಾಷಣಕಾರರು ‘‘ತಪ್ಪಾಯಿತು; ಕ್ಷಮಿಸಿ; ಸರಿಪಡಿಸಿಕೊಳ್ಳುತ್ತೇನೆ; ಇಲ್ಲಿರುವವರ ಪೈಕಿ ಅರ್ಧಾಂಶ ಜನರು ಮೂರ್ಖರಲ್ಲ’’ ಎಂದರು. ಜನಜಂಗುಳಿಯ ಅಸಮಾಧಾನ ಶಮನವಾಯಿತು.

ಈಗ ಬಂದಿರುವ ಸಮಸ್ಯೆ ಇಷ್ಟೇ ಅಲ್ಲ. ನಮ್ಮನ್ನು ಯಾರಾದರೂ ಹಳಿದರೆ, ನಿಂದಿಸಿದರೆ, ಅವಮಾನಿಸಿದರೆ ನಾವು ಅದಕ್ಕೆ ಪಾತ್ರರಾಗುವ ಅಯೋಗ್ಯರಲ್ಲ, ತಮಗೂ ಅರ್ಹತೆಯಿದೆ, ತಮ್ಮ ಕುರಿತು ಬಂದಿರುವ ಅಂತಹ ಅಭಿಪ್ರಾಯಗಳನ್ನು ಸುಳ್ಳಾಗಿಸುತ್ತೇವೆ ಎಂಬ ಮನೋದಾರ್ಢ್ಯವಿರಬೇಕು. ಸಂಕಲ್ಪಬಲವಿರಬೇಕು. ಆದರೆ ಈಗ ನಡೆಯುತ್ತಿರುವುದೇ ಬೇರೆ. ತಮ್ಮ ಕುರಿತಾದ ಯಾವುದೇ ಅವಮಾನದ ನುಡಿಗೆ ತಾವು ಅರ್ಹರು ಎಂಬುದನ್ನು ಸಾಬೀತುಪಡಿಸಲು ಸಾಮೂಹಿಕ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸತ್ಯ ಹೇಳಿದರೂ ಒಂದೇ; ಸುಳ್ಳು ಹೇಳಿದರೂ ಒಂದೇ. ಹೇಳಬೇಕಾದ್ದನ್ನು ಜನರ ನೆತ್ತಿಯ ಮೇಲೆ ಅವರ ಅನುಭವಕ್ಕೆ ದಕ್ಕದಂತೆ, ಅವರಿಗೆ ಅರ್ಥವಾಗದಂತೆ, ಆಕಾಶವಾಣಿಯಾಗಿ ಹೇಳುವುದೇ ದಕ್ಷತೆ; ದಕ್ಷತೆಯಲ್ಲದಿದ್ದರೂ ಬದುಕುವ ಚಾಕಚಕ್ಯತೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News