ಕಾವೇರಿ ತಣಿಯುವುದೆಂದು?

ತೀರ್ಪನ್ನು ಮನ್ನಿಸಬೇಕಾದದ್ದು ಕಾನೂನನ್ನು ಗೌರವಿಸುವ ಪ್ರತಿಯೊಬ್ಬನ ಕರ್ತವ್ಯ. ತೀರ್ಪಿನಲ್ಲಿ ನಾವು ಅಂದರೆ ಕರ್ನಾಟಕ ರಾಜ್ಯವು ನೀರು ಕೊಡದಿರಬಹುದಾದ ಅಂಶಗಳನ್ನು ಕಾನೂನಿನಡಿ ಅಧ್ಯಯನ ಮಾಡಿ ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳಬೇಕೇ ಹೊರತು ಬಂದ್, ಪ್ರತಿಭಟನೆ, ಘೆರಾವೋಗಳ ಮೂಲಕ ಅಲ್ಲ. ತೀರ್ಪು ವ್ಯತಿರಿಕ್ತವಾದಾಗ ನ್ಯಾಯಾಧೀಶರತ್ತ ಚಪ್ಪಲಿ ಎಸೆಯುವ ಪುಂಡಾಟಿಕೆಗೂ ಇದಕ್ಕೂ ವ್ಯತ್ಯಾಸವಿಲ್ಲ. ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋದ ವಿಚಾರವಿದು. ಅದನ್ನು ಕಾನೂನಿನ ಚೌಕಟ್ಟಿನಿಂದ ಹೊರಗೆಳೆದು ವ್ಯವಹರಿಸುವುದು ರಾಜಕಾರಣದ ತೀಟೆಗೆ ಸರಿ; ಗೂಂಡಾಗಿರಿಗೆ ಸರಿ. ನಾಗರಿಕತೆಗೆ ಅಲ್ಲ; ಸಲ್ಲ.

Update: 2023-10-05 04:41 GMT

‘ಕಾವೇರಿಯಿಂದಮಾ ಗೋದಾವರಿವರಮಿರ್ದ...’ ಎಂದು ಕನ್ನಡನಾಡಿನ ಗಡಿಗಳನ್ನು ಗುರುತಿಸಿದ ಕವಿಗೆ ನಾಡಿನ ಗಡಿಯನ್ನು ಗುರುತಿಸುವುದೇ ಮುಖ್ಯವಾಗಿತ್ತೆಂದು ಕಾಣುತ್ತದೆ. ರಾಜ್ಯರಾಜ್ಯಗಳ ನಡುವಣ ಗಡಿ ವಿವಾದವಾಗಲೀ, ಭಾರತದ ಎಲ್ಲ ನದಿಗಳು ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತವೆಂಬ ದೂರದೃಷ್ಟಿಯಾಗಲೀ ಅವನಿಗೆ ಇದ್ದಿರಲಿಕ್ಕಿಲ್ಲ. ರವಿ ಕಾಣದ್ದನ್ನು ಕವಿ ಕಾಣಲಿಲ್ಲ. ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಃ’ ಎಂದು ತಲೆಯ ಮೇಲೆ ಸಾಂಕೇತಿಕವಾಗಿ ಜಲಪ್ರೋಕ್ಷಣೆ ಮಾಡಿಕೊಂಡ ಕರ್ಮಠರಿಗೂ ತಾವು ವಿವಾದವನ್ನು ತಲೆಯ ಮೇಲೆ ಎಳೆದುಹಾಕಿಕೊಳ್ಳುತ್ತಿದ್ದೇವೆಂಬ ಅರಿವು ಇದ್ದಿರಲಿಕ್ಕಿಲ್ಲ.

ಮೊನ್ನೆ ‘ಕನ್ನಡನಾಡಿನ ಜೀವನದಿ’ಯೆಂದು ಸಿನೆಮಾದವರಿಂದ ಹೊಗಳಿಸಿಕೊಂಡ ಕಾವೇರಿಯ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಪಣತೊಟ್ಟು ಕನ್ನಡದ ಸ್ವಯಂಘೋಷಿತ ಕಟ್ಟಾಳುಗಳು ಮತ್ತು ರಾಜಕಾರಣವಾಗಿ ವಿರೋಧಿಸಲೇಬೇಕೆಂಬ ಹಠತೊಟ್ಟ ಪ್ರತಿಪಕ್ಷಗಳು ಬೆಂಗಳೂರು ಬಂದ್‌ಗೆ ಕರೆಕೊಟ್ಟವು. ಕಾವೇರಿಯ ಕುರಿತ ‘ಹೋರಾಟ’ದಲ್ಲಿ (ಅನೇಕ ಕನ್ನಡಿಗರು ಈ ಪದವನ್ನು ‘ಓರಾಟ’ ಎನ್ನುತ್ತಾರೆ!). ಹುಟ್ಟು ಹೋ(ಓ)ರಾಟಗಾರರಾದ ವಾಟಾಳ್ ಮತ್ತು ರೈತರ ಪರವಾಗಿ ಎಂಬಂತಿರುವ ಹತ್ತು ಹಲವು ಸಂಸ್ಥೆಗಳು ಇದರಲ್ಲಿ ‘ಧುಮುಕಿದವು’. ಎಷ್ಟು ಜನರು ತೇಲಿದರೋ ಮುಳುಗಿದರೋ ಗೊತ್ತಿಲ್ಲ. ನಮ್ಮ ಮಾಧ್ಯಮಗಳು ಎಂದಿನಂತೆಯೇ ‘ಬಂದ್ ಯಶಸ್ವಿಯಾಯಿತು’ ಎಂದು ವರದಿ ಮಾಡಿದವು. ನನಗಂತೂ ಈ ಯಶಸ್ಸು ಏನೆಂದು ಅರ್ಥವಾಗಲಿಲ್ಲ. ‘ಆತನು ಅನುತ್ತೀರ್ಣವಾಗುವಲ್ಲಿ ಯಶಸ್ಸನ್ನು ಪಡೆದನು’ ಅಥವಾ ‘ಆತನ ಆತ್ಮಹತ್ಯೆಯ ಯತ್ನವು ಯಶಸ್ವಿಯಾಯಿತು’ ಎಂಬ ಹಾಗೆ ಅನ್ನಿಸಿತು. ಇರಲಿ. ‘ಕಲರವ’ದಿಂದ ‘ಸಂಶಯದ ಹುತ್ತ ಎಲ್ಲರ ಸುತ್ತ’ ಇರುವಾಗ ಇವೆಲ್ಲ ನಾವು ಅರಿತುಕೊಳ್ಳಲೇಬೇಕಾದ ನೋವು ಎಂದೂ ಅನ್ನಿಸಿತು. ಬೆಂಗಳೂರಿನ ಬಂದ್ ಏನಾಯಿತೋ ಗೊತ್ತಿಲ್ಲ. ಪ್ರತ್ಯಕ್ಷವೊಂದು; ಮಾಧ್ಯಮದ ವರದಿಗಳು ಇನ್ನೊಂದು ಆಗಿರುವ ಈ ಕಾಲದಲ್ಲಿ ಯಾವುದನ್ನು, ಯಾರನ್ನು ನಂಬುವುದು?

ಇದು ಸಾಲದೆಂಬಂತೆ ಅದಾಗಿ ಮೂರೇ ದಿನಗಳಿಗೆ ‘ಕರ್ನಾಟಕ ಬಂದ್’ಗೆ ಕರೆ ಕೊಡಲಾಯಿತು. ಇದು ಮತ್ತೆ ‘ರಾಜ್ಯಾದ್ಯಂತ ಯಶಸ್ವಿಯಾಯಿತು’! ಕಾವೇರಿ ಕರ್ನಾಟಕದಲ್ಲಿ ಹರಿಯುವುದು 7 ಜಿಲ್ಲೆಗಳಲ್ಲಿ (ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳು) ಮಾತ್ರ. ಉಳಿದ ಜಿಲ್ಲೆಗಳೇಕೆ ಈ ಬಂದ್‌ನಲ್ಲಿ ಪಾಲ್ಗೊಳ್ಳಬೇಕು? ಇತರ ಪ್ರದೇಶಗಳ ವಿವಾದಗಳಲ್ಲಿ ಬೆಂಗಳೂರು ಭಾಗವಹಿಸಿದ್ದು ಅಷ್ಟರಲ್ಲೇ ಇದೆ. ನಾನಿರುವ, ಕಾವೇರಿಯ ಮೂಲನೆಲೆಯಾದ ಕೊಡಗಿನಲ್ಲಿ ಖಾಸಗಿ ಬಸ್‌ಗಳು ತಮ್ಮ ನಿಗದಿತ ಯಾನವನ್ನು ನಿಲ್ಲಿಸಿದ್ದು ಬಿಟ್ಟರೆ ಇನ್ನೇನೂ ನಡೆಯಲಿಲ್ಲ. ವ್ಯಂಗ್ಯವಿಷಾದವೆಂದರೆ ಕಾವೇರಿಯ ನೀರು ಕೆಲವು ನದೀತೀರದ ಖಾಸಗಿ ಕೃಷಿ ನೀರಾವರಿಗೆ (ಅದೂ ಸಂಶಯವೇ!) ಹೊರತು ಪಡಿಸಿ ಕೊಡಗಿಗೆ ಉಪಯೋಗವಾಗುವುದೇ ಇಲ್ಲ. ಕಾವೇರಿ ಕೊಡಗಿನ, ಕೊಡವರ ಮಟ್ಟಿಗೆ ಆರಾಧ್ಯ ದೈವ. ತಾಯಿ. ಪೂಜೆ-ಪುನಸ್ಕಾರಗಳ ಬಳಿಕ ಆಕೆ ನಿತ್ಯೋಪಯೋಗಿಯಲ್ಲ. ಮಾಮೂಲಾಗಿ ವಿಕ್ಷಿಪ್ತ್ತತೆಯನ್ನು ಆರೋಪಿಸಿ ‘ಮನೆಗೆ ಮಾರಿ, ಪರರಿಗೆ ಉಪಕಾರಿ’ ಎಂಬುದನ್ನು ನದಿಗೆ ಹೇಳಲಾಗದು. ಎಷ್ಟಾದರೂ ನದಿ; ಓಡುವ ನದಿ ಸಾಗರವ ಸೇರಲೇಬೇಕು. ಹರಿವ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ?

ಬಂದ್‌ಗಳು ಮತ್ತು ಅದರಲ್ಲೂ ಬಂದ್ ಕರೆಗಳನ್ನು ನೀಡುವುದು ಕಾನೂನಿನ ಉಲ್ಲಂಘನೆಯೆಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದರೂ ಸರಕಾರ ಹೇಳದ ಹೊರತು ಅದು ನಿಲ್ಲದು. ಪ್ರತಿಭಟನೆಯೆಂದರೆ ಇಂದು ಸಾಮಾನ್ಯವಾಗಿ ಮೆರವಣಿಗೆ ಇಲ್ಲವೇ ಬಂದ್ ಆಗಿದೆ. ದಿನಗೂಲಿಗಳು, ಆಟೋ, ಟ್ಯಾಕ್ಸಿ ಮುಂತಾದ ಸ್ವಂತವಾಹನ ಚಾಲಕರು, ಸ್ವಯಂಉದ್ಯೋಗಿಗಳು, ಸ್ವಯಂವೃತ್ತಿಪರರು, ಉದ್ದಿಮೆಗಳು ಇವುಗಳ ಹೊರತಾಗಿ ಇನ್ಯಾರಿಗೂ ಅದರಿಂದ ನಷ್ಟವಿಲ್ಲ; ಸಂಬಳ ಬರುತ್ತಿರುತ್ತದೆ. ಒಂದರ್ಥದಲ್ಲಿ ಲಾಭವೇ. ನಿರುದ್ಯೋಗಿಗಳು ಇದರಲ್ಲಿ ಸ್ವಂತ ಕರ್ತವ್ಯವೆಂಬಂತೆ ಭಾಗವಹಿಸುತ್ತಾರೆ. ಇನ್ನೊಬ್ಬರ ನಿರುದ್ಯೋಗದಲ್ಲಿ ಸಂತಸಪಡುವ ನಿರುದ್ಯೋಗಿಗಳೂ ಇದ್ದಾರೆ. ಆದ್ದರಿಂದ ‘ಬಂದ್’ಗಳು ಬಂದಾಗುವುದು ಸಾಧ್ಯವೇ ಇಲ್ಲ.

ಇವೆಲ್ಲ ಹಗುರೆನಿಸಿದರೆ ಬಂದ್‌ಗೆ ಮೂಲ ಒರತೆಯಾಗಿರುವ ಕಾವೇರಿ ಜಲ ವಿವಾದವನ್ನು ಇಷ್ಟು ಹಗುರಾಗಿ ಚರ್ಚಿಸಲಾಗದು. ಕಾವೇರಿಯ ಕುರಿತು 1730ರಲ್ಲಿ ಕವಿರಂಗ ವಿರಚಿತ ‘ಕಾವೇರಿ ಮಹಾತ್ಮೆ’ಯಿಂದ ಮೊದಲ್ಗೊಂಡು ಕಳೆದ ಶತಮಾನದ ಉತ್ತರಾರ್ಧದಲ್ಲಿ ಎದುರ್ಕಳ ಕೆ.ಶಂಕರನಾರಾಯಣ ಭಟ್ ಬರೆದ ‘ಶ್ರೀ ಕಾವೇರಿ ವೈಭವ’ ಕೃತಿ, ಮತ್ತು ಇತ್ತೀಚೆಗೆ ಒ.ಕೆ.ಜೋಣಿ ಮಲೆಯಾಳದಲ್ಲಿ ಬರೆದು ವಿಕ್ರಂ ಕಾಂತಿಕೆರೆ ಕನ್ನಡಾನುವಾದಿಸಿದ ‘ಕಾವೇರಿ ತೀರದ ಪಯಣ’ ಮುಂತಾದವು ಲೋಪಾಮುದ್ರೆಯಾಗಿದ್ದ ಕವೇರ ಮುನಿಯ ಪುತ್ರಿ ಕಾವೇರಿ ನದಿಯು ಪುರಾಣದಿಂದ ಇತಿಹಾಸದ ಮೂಲಕ ವರ್ತಮಾನಕ್ಕೆ ಜನರೊಂದಿಗೆ ಭಕ್ತಿ-ಭಾವನಾತ್ಮಕವಾಗಿ ಹರಿದು ಬಂದಿದ್ದಾಳೆ. (ಇನ್ನೂ ಅನೇಕ ಕೃತಿಗಳಿವೆ. ಅವೆಲ್ಲವನ್ನೂ ಹೆಸರಿಸಲು ಇಲ್ಲಿ ವ್ಯವಧಾನವಿಲ್ಲ.) 804 ಕಿ.ಮೀ.ದೂರವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಗಿ ಹೋಗುವ ಕಾವೇರಿ ಹಿಂದೂ ಮಹಾಸಾಗರವನ್ನು ತಲುಪುತ್ತಾಳೆ. ಇದರೊಂದಿಗೆ ಸೇರಿ ಹರಿಯುವ ಹೇಮಾವತಿ, ಕಬಿನಿ ಮುಂತಾದ ಅನೇಕ ಉಪನದಿಗಳಿವೆ. ವಿಶೇಷವೆಂದರೆ ಪಶ್ಚಿಮಕ್ಕೆ ಹರಿದಿದ್ದರೆ ಕೇವಲ 84 ಕಿ.ಮೀ. ನೇರ ಅಂತರದಲ್ಲಿ ಅರಬಿ ಸಮುದ್ರವನ್ನು ಸೇರಬಹುದಾಗಿದ್ದ ಕಾವೇರಿ ಪೂರ್ವಕ್ಕೆ ಹರಿದದ್ದೂ ಇಂದಿನ ವಿವಾದಕ್ಕೆ, ‘ಬಂದ್’ಗೆ ಕಾರಣವೇ? ಕಾವೇರಿ ಜಲಾನಯನ ಪ್ರದೇಶಗಳ ಪೈಕಿ ಅಂದಾಜು ಶೇ. 42.2 ಕರ್ನಾಟಕದಲ್ಲೂ, ಶೇ. 54.3 ತಮಿಳುನಾಡಿನಲ್ಲೂ, ಶೇ. 3.5 ಕೇರಳದಲ್ಲೂ ಹರಿಯುತ್ತಿದೆ. ಸುಮಾರು 64 ಕಿ.ಮೀ.ಗಳಷ್ಟು ದೂರ ಇದು ಕರ್ನಾಟಕ-ತಮಿಳುನಾಡುಗಳ ಸೀಮಾರೇಖೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಕಾಲಮಾನದಲ್ಲಿ ಎಂದೂ ಅಳಿಯದೆ ಉಳಿಯುವ ಸಂಗತಿಗಳಿವೆ. ದ್ವೇಷದ ಹಾಗೆ ವಿವಾದವೂ. ಈ ವಿವಾದವು 1892 ಮತ್ತು 1924ರ ಎರಡು ಅಂತರ್‌ರಾಜ್ಯ ಒಪ್ಪಂದಗಳ (ಅಥವಾ ಇಬ್ಬರು ರಾಜರ ನಡುವಣ ಒಪ್ಪಂದಗಳ) ಪರಿಣಾಮ ಮತ್ತು ಫಲಿತಾಂಶವೆಂಬುದನ್ನು ಮನಗಂಡರೆ ಈ ವಿಚಾರ ಅರ್ಥವಾಗಬಹುದು. 1799ರಲ್ಲಿ ಒಂದು ಒಪ್ಪಂದವಾಗಿತ್ತಾದರೂ ಆನಂತರ ಮೈಸೂರು ಆಡಳಿತವೂ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತಕ್ಕೆ ಬಂದ ಮೇಲೆ ವಿವಾದಕ್ಕೆ ಹೊಸ ಆಯಾಮಗಳು ಮತ್ತು ಮಿತಿಗಳು ಲಭಿಸಿದವು. ಅಯೋಧ್ಯೆಯ ರಾಮಮಂದಿರ ವಿವಾದವೂ ಇದೇ ರೀತಿಯದ್ದು. ಆದರೆ ಅದು ಎರಡು ಮತಬಣಗಳ ನಡುವಿನದ್ದು. ಅಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಗೌರವ ಸಿಕ್ಕಿತು. ಆದರೆ ನಮ್ಮ ಕಾವೇರಿಗೆ ಸಂಬಂಧಿಸಿದಂತೆ ಅಂತಹ ಮನ್ನಣೆ ಸಿಗಲಿಲ್ಲ. ಏಕೆಂದರೆ ಇದು ಕಾಲೋಚಿತವಾದದ್ದು. ಶಿಶರವಸಂತೌ ಪುನರಾಯಾತಃ. ನೀರು ಇರಬಹುದು ಇಲ್ಲದಿರಬಹುದು; ನೆರೆ ಬರಬಹುದು; ಬರವೂ ಬರಬಹುದು. ಆದ್ದರಿಂದ ಮನುಷ್ಯನ ಸಂಸ್ಕೃತಿ, ನಾಗರಿಕತೆ, ವರ್ತನೆ ಇವನ್ನು ಆಧರಿಸಿದೆ.

ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿ ಮೈಸೂರು ಮತ್ತು ಮದ್ರಾಸ್ (ಈಗ ಇವೆರಡೂ ಕರ್ನಾಟಕ ಮತ್ತು ತಮಿಳುನಾಡು ಆಗಿವೆ) ಕೊನೆಗೂ ಒಂದು ಒಪ್ಪಂದಕ್ಕೆ ಬಂದು ‘ಹೊಸ ನೀರಾವರಿ ಜಲಾಶಯಗಳನ್ನು’ ಪರಸ್ಪರ ಸಮ್ಮತಿಯಿಲ್ಲದೆ ಕೈಗೊಳ್ಳಬಾರದೆಂದು ನಿರ್ಧರಿಸಲಾಯಿತು. ಇದು ಎಲ್ಲ ಗೊಂದಲಗಳನ್ನು ಪರಿಹರಿಸುತ್ತದೆಂಬ ಅಭಿಪ್ರಾಯ ಸುಳ್ಳಾಯಿತು. ಎರಡು ರಾಜ್ಯಗಳೂ ‘ಆಧುನಿಕ’ವಾದಂತೆ ‘ಸಮ್ಮತಿ’ಗಾಗಿ ಅವುಗಳ ಬೇಡಿಕೆ ಹೆಚ್ಚಾಯಿತು. ಇವು ಜಲಾನಯನ ಪ್ರದೇಶಗಳ ಅಣೆಕಟ್ಟುಗಳಿಗೆ/ಜಲಾಶಯಗಳಿಗೆ/ಜಲಾನಯನ ಪ್ರದೇಶಗಳಿಗೆ ಮಾತ್ರವಲ್ಲ, ಕೋಲಾರ ಚಿನ್ನದ ಗಣಿ ಉದ್ಯಮವೂ ಸೇರಿದಂತೆ ಉಭಯತರ ಸ್ವಹಿತಾಸಕ್ತಿಯ ವಾದಗಳೂ ತರ್ಕಬದ್ಧವಾಗಿದ್ದವು; ಆದರೆ ನದಿ ಇವನ್ನು ಕೇಳಬೇಕಲ್ಲ!

ಅಂತೂ ಇಂತೂ ಈ ವಿವಾದವು ಮುನ್ನಡೆದು 18-02-1924ರ ಒಪ್ಪಂದದಲ್ಲಿ ಪರ್ಯಾವಸಾನವಾಯಿತು. ಇದರಿಂದಾಗಿ ಕೃಷ್ಣರಾಜಸಾಗರದ ಅಣೆಕಟ್ಟಿನ ನಿರ್ಮಾಣ ಮತ್ತು ನಿರ್ವಹಣೆ ಸಾಧ್ಯವಾಯಿತು. ಮದ್ರಾಸ್‌ರಾಜ್ಯಕ್ಕೂ ಅನೇಕ ಅನುಕೂಲಗಳಾದವು. ಭವಾನಿ, ಅಮರಾವತಿ ಮತ್ತು ನೋಯಿಲ್ ನದಿಗಳ ಕಾಮಗಾರಿಗಳನ್ನು ಅದು ಮಾಡಿತು. ಒಂದು ಮುಖ್ಯ ಅಂಶವೆಂದರೆ ಮೈಸೂರು ರಾಜ್ಯಕ್ಕೆ ತನ್ನಲ್ಲಿ ಹರಿದುಹೋಗುವ ಕಾವೇರಿಯ ಉಪನದಿಗಳಲ್ಲಿ ಮದ್ರಾಸ್ ರಾಜ್ಯದ ಜಲಾಶಯದ ಶೇ. 60 ಮಾತ್ರ ಸಾಮರ್ಥ್ಯವಿರುವ ಜಲಾಶಯವನ್ನು ನಿರ್ಮಿಸುವ ಅವಕಾಶ ಸಿಕ್ಕಿತು. (ಹೆಚ್ಚಿನ ವಿವರಗಳಿಗೆ ‘ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು’ ಎಂಬ 5 ಸಂಪುಟಗಳ ಕೃತಿಯ 2ನೆಯ ಸಂಪುಟವನ್ನು ಓದಬಹುದು. ಇದು (1) ವಿವಾದದ ಹಿನ್ನೆಲೆ, ವಿವಾದಾಂಶಗಳು, (2) 1892 ಮತ್ತು 1924ರ ಒಪ್ಪಂದಗಳು, (3) ನೀರಿನ ಲಭ್ಯತೆ, (4) ಕಾವೇರಿ ನದಿ ನೀರಿನ ಹಂಚಿಕೆಯ ಸೂತ್ರಗಳು ಮತ್ತು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನೀರಾವರಿ ಸೌಲಭ್ಯವಿರುವ ಪ್ರದೇಶಗಳ ನಿರ್ಧರಣೆ ಹಾಗೂ (5) ಕಾವೇರಿ ನದಿಯ ನೀರಿನ ಹಂಚಿಕೆ ಇವುಗಳನ್ನು ಒಳಗೊಂಡಿದೆ. (ಪ್ರಕಟಣೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2010. ಮೂಲ ಇಂಗ್ಲಿಷ್. 2ನೇ ಸಂಪುಟದ ಕನ್ನಡಾನುವಾದ: ವಿ.ನಾಗರಾಜ ರಾವ್. ಇದೇ ಕೃತಿಯ 5ನೆಯ ಸಂಪುಟವನ್ನು ನಾನು ಕನ್ನಡಾನುವಾದಿಸಿದ್ದೇನೆ.)

ಸದ್ಯ ನ್ಯಾಯಾಧಿಕರಣದ ಮುಂದೆ ಏನು ನಡೆಯಿತು ಎನ್ನುವುದಕ್ಕಿಂತಲೂ ಏನು ನಿರ್ಧಾರವಾಯಿತು ಎಂಬುದು ಮುಖ್ಯ. ‘ತುಂಬಾ ಗಹನವಾದ 5ನೆಯ ಸಂಪುಟದಲ್ಲಿ ಒಂಭತ್ತು ಅಧ್ಯಾಯಗಳಿವೆ. ಕರ್ನಾಟಕ ಮತ್ತು ತಮಿಳುನಾಡಿನ ಬೆಳೆಗಳು ಮತ್ತು ನೀರಿನ ಅವಶ್ಯಕತೆಗಳು; ಕಾವೇರಿ ನದಿ ಮತ್ತು ಅದರ ಉಪನದಿಗಳ ನೀರಿನ ಕಣಿವೆಯಾಂತರ ವರ್ಗಾವಣೆ; ತಮಿಳುನಾಡು ಮತ್ತು ಕರ್ನಾಟಕಗಳ ನೀರಾವರಿಗೆ ಕಾವೇರಿ ನೀರಿನ ಹಂಚಿಕೆ; ಕರ್ನಾಟಕ ಮತ್ತು ತಮಿಳುನಾಡುಗಳ ಗೃಹೋಪಯೋಗ ಮತ್ತು ಕೈಗಾರಿಕೆಗಳಿಗೆ ಕಾವೇರಿ ನೀರಿನ ಅವಶ್ಯಕತೆ, ಪರಿಸರ ಸಂರಕ್ಷಣೆ ಮತ್ತು ಸಮುದ್ರಕ್ಕೆ ಅನಿವಾರ್ಯ ಹರವಿನ ನೀರಿನ ಅಗತ್ಯಗಳು, ಕೇರಳ ಮತ್ತು ಪಾಂಡಿಚೇರಿಗೆ ಕಾವೇರಿ ನೀರಿನ ಪಾಲು, ನಾಲ್ಕೂ ರಾಜ್ಯಗಳ ನಡುವೆ ಕಾವೇರಿ ನೀರಿನ ಪಾಲುಗಳ ಅಖೈರು ನಿರ್ಧಾರ ಮತ್ತು ಮಾಹೆಯಾನ ನೀರು ಬಿಡುಗಡೆ ಪಟ್ಟಿ, ನ್ಯಾಯಾಧಿಕರಣದ ಅಂತಿಮ ತೀರ್ಮಾನ/ಆದೇಶಗಳ ಅನುಷ್ಠಾನಕ್ಕಾಗಿ ವ್ಯವಸ್ಥೆ, ಇವನ್ನು ಇನ್ನುಳಿದ ಅಧ್ಯಾಯಗಳಲ್ಲಿ ಹೇಳಲಾಗಿದೆ’ ಎಂದು ಸಂಪಾದಕರ ಮುನ್ನುಡಿಯಲ್ಲಿ ನ್ಯಾಯಶಾಸ್ತ್ರಜ್ಞ ಸಿ.ಕೆ.ಎನ್.ರಾಜ ಉಲ್ಲೇಖಿಸಿದ್ದಾರೆ.

ತೀರ್ಪನ್ನು ಮನ್ನಿಸಬೇಕಾದದ್ದು ಕಾನೂನನ್ನು ಗೌರವಿಸುವ ಪ್ರತಿಯೊಬ್ಬನ ಕರ್ತವ್ಯ. ತೀರ್ಪಿನಲ್ಲಿ ನಾವು ಅಂದರೆ ಕರ್ನಾಟಕ ರಾಜ್ಯವು ನೀರು ಕೊಡದಿರಬಹುದಾದ ಅಂಶಗಳನ್ನು ಕಾನೂನಿನಡಿ ಅಧ್ಯಯನ ಮಾಡಿ ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳಬೇಕೇ ಹೊರತು ಬಂದ್, ಪ್ರತಿಭಟನೆ, ಘೆರಾವೋಗಳ ಮೂಲಕ ಅಲ್ಲ. ತೀರ್ಪು ವ್ಯತಿರಿಕ್ತವಾದಾಗ ನ್ಯಾಯಾಧೀಶರತ್ತ ಚಪ್ಪಲಿ ಎಸೆಯುವ ಪುಂಡಾಟಿಕೆಗೂ ಇದಕ್ಕೂ ವ್ಯತ್ಯಾಸವಿಲ್ಲ. ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋದ ವಿಚಾರವಿದು. ಅದನ್ನು ಕಾನೂನಿನ ಚೌಕಟ್ಟಿನಿಂದ ಹೊರಗೆಳೆದು ವ್ಯವಹರಿಸುವುದು ರಾಜಕಾರಣದ ತೀಟೆಗೆ ಸರಿ; ಗೂಂಡಾಗಿರಿಗೆ ಸರಿ. ನಾಗರಿಕತೆಗೆ ಅಲ್ಲ; ಸಲ್ಲ.

ವಿನಿಯೋಗವಾಗುವ ಅಂದಾಜು 726 ಟಿಎಂಸಿ ನೀರಿನ ಪ್ರಮಾಣದಲ್ಲಿ ತಮಿಳುನಾಡು 419 ಟಿಎಂಸಿ ನೀರಿನ ಹಕ್ಕನ್ನು ಪಡೆದರೆ, ಕರ್ನಾಟಕವು 270 ಟಿಎಂಸಿ ನೀರಿಗೆ ಹಕ್ಕುಪಡೆಯುತ್ತದೆ; ಕೇರಳಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿಗೆ 7 ಟಿಎಂಸಿ ನೀರಿನ ಹಕ್ಕನ್ನು ನೀಡಲಾಗಿದೆ. ಸುಮಾರು 14 ಟಿಎಂಸಿ ನೀರು ಪರಿಸರ ರಕ್ಷಣೆ ಮತ್ತು ಸಮುದ್ರಕ್ಕೆ ಹರಿದು ಹೋಗುವುದೆಂದು ಅಂದಾಜಿಸಲಾಗಿದೆ. ವರದಿ/ಆದೇಶದ 5ನೇ ಸಂಪುಟದ 9ನೇ ಅಧ್ಯಾಯದಲ್ಲಿ ಅಂತಿಮ ಆದೇಶದ ಕಲಂ-7ರಲ್ಲಿ ‘ಸಂಕಷ್ಟದ ವರ್ಷವೊಂದರಲ್ಲಿ ಕಾವೇರಿ ಜಲಾನಯನ ಪ್ರದೇಶದಿಂದ (ನೀರಿನ) ಲಭ್ಯತೆ ಕಡಿಮೆಯಾದರೆ, ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯ ನಡುವೆ ನಿಗದಿಯಾಗಿರುವ (ನೀರಿನ) ಪ್ರಮಾಣಗಳನ್ನು ಅದೇ ಅನುಪಾತದಲ್ಲಿ ಕಡಿಮೆ ಮಾಡಲಾಗುವುದು.’ ಎಂದಿದೆ. ಇದೇ ರಾಮಬಾಣವೋ ಸಂಜೀವಿನಿಯೋ ಸರ್ವಸ್ವವೋ ಅಲ್ಲವಾದರೂ ಈ ಮತ್ತು ಇಂತಹ ಉಲ್ಲೇಖಗಳನ್ನು ನ್ಯಾಯಾಧಿಕರಣದ ಮತ್ತು ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನಿಸಬಾರದೇಕೆ?

ಇದೆಲ್ಲ ಚಿಂತಕರನ್ನು, ಸಾಹಿತಿಗಳನ್ನು, ಬುದ್ಧಿಜೀವಿಗಳನ್ನು ಆಶ್ರಯಿಸಿ ಪಡೆವ ಪರಿಹಾರವಲ್ಲ. ಸೂಕ್ತ ಕಾನೂನಿನ ತಿಳಿವಳಿಕೆ ಬೇಕು. ಹೊಸ ಯೋಚನೆಗಳ ಒರತೆ ಬೇಕು. ಮಾಧ್ಯಮದ ವರ್ಣರಂಜಿತ ಮನರಂಜನೆ ಕಡಿಮೆಯಾಗಬೇಕು. ಅನುಭವಿ ಕೃಷಿಕರೂ, ಸೃಜನಶೀಲ ವಕೀಲರೂ ಈ ಕುರಿತು ಚರ್ಚಿಸಿ ಮುನ್ನಡೆಯಬೇಕು. ಸ್ವಾರ್ಥವೆಂಬ ಕಸವನ್ನು ಬದಿಗಿಡಬೇಕು. ತಮಿಳುನಾಡು ಮತ್ತು ಕರ್ನಾಟಕಗಳು ಮುಖ್ಯ ಪಾಲುದಾರರಾಗಿರುವುದರಿಂದ ಅವು ವಿವೇಕಯುತವಾಗಿ ವರ್ತಿಸಬೇಕಾಗಿದೆ. ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯುತ್ತಿದೆಯೆಂದು ಭವಿಷ್ಯ ನುಡಿಯುವವರು ಕಾವೇರಿಯನ್ನು ಉದ್ದೇಶಿಸಿರಲಿಕ್ಕಿಲ್ಲ. ಕಾವೇರಿ ನೀರು ಹರಿಸಿ ಮನುಷ್ಯ, ಪ್ರಾಣಿ-ಪಕ್ಷಿ-ಮರಗಿಡ ಹೀಗೆ ಪ್ರಕೃತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಎಂಬಂತೆ ಹರಿಯುತ್ತಾಳೆಯೇ ಹೊರತು ರಕ್ತದಾಹಕ್ಕಾಗಿ, ಕಣ್ಣೀರಿನ ಹರಿವಿಗಾಗಿ ಹರಿಯುತ್ತಿಲ್ಲವೆಂಬುದನ್ನು ಮನುಷ್ಯರು ಮತ್ತು ಈಗಾಗಲೇ ದಿವಾಳಿಯಾಗಿರುವ ರಾಜಕಾರಣ ಅರ್ಥಮಾಡಿಕೊಳ್ಳಬೇಕಾಗಿದೆ. ಇಂದಿನ ಸ್ಥಿತಿ-ಗತಿಗಳನ್ನು ಅಂದೇ ಊಹಿಸಿದ್ದರೆ ಹೆಣ್ಣು ಹೊಳೆಯಾಗಿ ಹರಿಯುತ್ತಲೇ ಇರಲಿಲ್ಲವೇನೋ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News