ದೇಶವೊಂದು-ಚುನಾವಣೆ ಒಂದೇ?
ಬಗೆಹರಿಸಲಾಗದ ಆದರೆ, ಬಗೆಹರಿಸಲೇಬೇಕಾದ ಸಮಸ್ಯೆಗಳು ದೇಶದಲ್ಲಿ ಬೇಕಷ್ಟಿವೆ. ಮಣಿಪುರ ಒಂದಲ್ಲ, ಹತ್ತಾರಿವೆ. ಒಕ್ಕೂಟ ಸರಕಾರಕ್ಕೆ ಜಿ-೨೦, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಮುಂತಾದ ಅವರ ದೃಷ್ಟಿಯ ಪ್ರಮುಖ ಕಾರ್ಯಸೂಚಿಗಳು ಅಪೇಕ್ಷಿತ ಪರಿಣಾಮಗಳನ್ನೂ ಮತದಾರನ ಒಲವನ್ನೂ ತರಲಾರದೆಂಬ ಅನುಮಾನವಿದೆ. ೨೦೨೪ ಪ್ರತಿಪಕ್ಷಗಳಿಗೆ ಹೇಗೆ ನಿರ್ಣಾಯಕವೋ ಆಡಳಿತ ಪಕ್ಷಕ್ಕೂ ನಿರ್ಣಾಯಕವೇ. ಹಿಂದುತ್ವದ ಬಿಸಿ ತಣಿಯುತ್ತಿದೆ. ಜಾತೀಯತೆ, ಮತಾಂಧತೆ ಈಗ ಮತನಿರ್ಣಾಯಕವಾಗಿ ಉರಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಹೊಸ ಸಮಸ್ಯೆಯು ಜನಮನವನ್ನು ಕದಡುತ್ತದೆಂದು ಒಕ್ಕೂಟ ಸರಕಾರವು ತಪ್ಪುಗ್ರಹಿಕೆಯನ್ನು ಹೊಂದಿದೆಯೆನ್ನಿಸುತ್ತದೆ. ಹದ್ದುಗಳು ಹೋಗದಲ್ಲಿ ಮೂರ್ಖರು ಹೋಗಲಿಚ್ಛಿಸುತ್ತಾರಾದ್ದರಿಂದ ಇವನ್ನೂ ಕಾದು ನೋಡಬಹುದು.
ಸೆಪ್ಟಂಬರ್ 2ರಂದು ಮೋದಿ ಸರಕಾರ ಒಂದು ಮಹತ್ವದ ಅಭಿಪ್ರಾಯವನ್ನು ಸ್ಥಿರೀಕರಿಸಿತು. ದೇಶ ತನ್ನ ಒಕ್ಕೂಟ ವ್ಯವಸ್ಥೆಯನ್ನು ಕಳಚಿಕೊಂಡು ಕೇಂದ್ರೀಕೃತ ಅಖಂಡ ಭಾರತವಾಗಬೇಕಾದರೆ ದೇಶದ ಚುನಾವಣೆಯೂ ಅಖಂಡವಾಗಬೇಕೆಂಬ ಆಶಯದೊಂದಿಗೆ ಎಲ್ಲ- ಲೋಕಸಭೆ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಚುನಾವಣೆಗಳೂ ಏಕಕಾಲಕ್ಕೆ ನಡೆಯುವ ಕುರಿತು ವರದಿ ಸಲ್ಲಿಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಇದಕ್ಕಿಂತ ಉನ್ನತ ಮಟ್ಟದ ಸಮಿತಿ ರಚನೆಯಾಗುವಂತಿಲ್ಲ; ಏಕೆಂದರೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ, ಸಂಸದ ಗುಲಾಮ್ ನಬಿ ಆಝಾದ್, ಖ್ಯಾತ/ಹಿರಿಯ ನ್ಯಾಯವಾದಿ ೬೯ರ ಯುವಕ ಹರೀಶ್ ಸಾಳ್ವೆ, ಜಾಗೃತ ಆಯೋಗದ ಮಾಜಿ ಆಯುಕ್ತ ಸಂಜಯ್ ಕೊಠಾರಿ, ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಸುಭಾಶ್ ಸಿ.ಕಶ್ಯಪ್ ಸದಸ್ಯರಾಗಿರುತ್ತಾರೆ. ಜೊತೆಗೆ ಹೆಸರು ನಮೂದಿಸದ ಕಾನೂನು ಮತ್ತು ನ್ಯಾಯ ಮಂತ್ರಾಲಯದ ರಾಜ್ಯ ಸಚಿವರು ಆಹ್ವಾನಿತರಾಗಿರುತ್ತಾರೆ. (ಇವರ ಭೂಮಿಕೆಯೇನೆಂದು ಸ್ಪಷ್ಟವಾಗಿಲ್ಲ. ಒಂದು ರೀತಿಯಲ್ಲಿ ಕ್ರಿಕೆಟ್ ತಂಡದ ೧೨ನೇ ಆಟಗಾರನಂತಿರುತ್ತಾರೇನೋ?) ಈ ಸಮಿತಿ ಇಂತಹ ಅದ್ವೈತ ಚುನಾವಣೆಯನ್ನು ನಡೆಸುವ ರೀತಿ ರಿವಾಜುಗಳು ಮತ್ತು ಅದಕ್ಕೆ ಪೂರಕವಾಗಿ ಸಂವಿಧಾನ ಮಾತ್ರವಲ್ಲ, ೧೯೫೦/೧೯೫೧ರ ಜನಪ್ರತಿನಿಧಿ ಕಾಯ್ದೆ ಮತ್ತಿತರ ಕಾಯ್ದೆಗಳಿಗೆ ಮಾಡಬೇಕಾದ ತಿದ್ದುಪಡಿಯ, ಇಂತಹ ತಿದ್ದುಪಡಿಗಳಿಗೆ ರಾಜ್ಯಗಳ ಒಪ್ಪಿಗೆ ಬೇಕೇ? ಅತಂತ್ರ ಸಂಸತ್ತು/ ವಿಧಾನಸಭೆಯ ಸಂದರ್ಭಗಳನ್ನು ಎದುರಿಸುವುದು ಹೇಗೆ? ಪಕ್ಷಾಂತರದಂತಹ ರಾಜಕೀಯ ಪಿಡುಗುಗಳ ನಿವಾರಣೆ ಹೇಗೆ? ಮುಂತಾದವುಗಳನ್ನು ಪರಿಶೀಲಿಸಲಿದೆ. ಈ ಕುರಿತು ಅಧ್ಯಯನ ಮಾಡಿ ವರದಿನೀಡಬೇಕಾಗಿದೆ. ಈ ಪೈಕಿ ಅಧೀರ್ ರಂಜನ್ ಚೌಧುರಿ ಮಾತ್ರ ತಾನು ಈ ಸಮಿತಿಗೆ ಹೊಂದದ ಪದವೆಂಬುದನ್ನು ಅರ್ಥಮಾಡಿಕೊಂಡು ಸಮಿತಿಯ ಸ್ಥಾನವನ್ನು ನಿರಾಕರಿಸಿದ್ದಾರೆ. ಉಳಿದ ಸದಸ್ಯರಿಗೆ ಒಪ್ಪಿಗೆ ಸಹಿ ಹಾಕಲು ಈಗಾಗಲೇ ಆದೇಶವಾಗಿ ಅವರು ಅದಕ್ಕಾಗಿ ತುದಿಗಾಲಿನಲ್ಲಿರಬಹುದು.
ಮಾಜಿ ರಾಷ್ಟ್ರಪತಿಯೊಬ್ಬರು ಸರಕಾರಕ್ಕೆ ವರದಿ ನೀಡಲು ಸಿದ್ಧರಾಗುವುದು ಈ ದೇಶದ ಪ್ರಜಾಪ್ರಭುತ್ವವು, ಸಾಂವಿಧಾನಿಕ ಸ್ಥಾನಗಳು ಕಳೆದುಕೊಂಡಿರುವ ಮಾನ, ಇವುಗಳ ಅಳತೆಗೋಲಾಗಬಹುದು. ವಿಶೇಷವೆಂದರೆ ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರುಗಳಿಲ್ಲ. ಕಾನೂನು ಖಾತೆಗೆ ಸಂಪುಟ ದರ್ಜೆ ಸಚಿವರೇ ಇಲ್ಲದಿರುವುದು ಒಕ್ಕೂಟ ಸರಕಾರದ ದಯನೀಯ, ಶೋಚನೀಯ ವ್ಯವಸ್ಥೆಯನ್ನು ಅನಾವರಣಮಾಡುವಂತಿದೆ. ಗುಲಾಮ್ ನಬಿ ಆಝಾದ್ ಬಿಜೆಪಿಯ ನಿಷ್ಠಾವಂತ ವಿರೋಧಿಯೆಂದು ಹೆಸರು ಮಾಡಿದವರು. ಉಳಿದವರು ಪರಿಚಿತ ಆಡಳಿತ ಬೆಂಬಲಿಗರು. ಇಷ್ಟೊಂದು ಮಹತ್ವದ ವಿಚಾರಗಳನ್ನೊಳಗೊಂಡ ಸಮಿತಿಯಲ್ಲಿ ರಾಜ್ಯಗಳ ಪ್ರತಿನಿಧಿಗಳಿಲ್ಲದಿರುವುದೂ ಒಕ್ಕೂಟ ವ್ಯವಸ್ಥೆಯ ದುರಂತಗಳಲ್ಲೊಂದು. ಸಮಿತಿಯು ಸರಕಾರದ ನಿಯಂತ್ರಣ ತಪ್ಪಿಹೋಗದಂತೆ ಅಮಿತ್ ಶಾ ಇದ್ದಾರೆ.
ಈಗಾಗಲೇ ತಮಿಳುನಾಡು ತನ್ನ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದೆ. ಭಾಜಪೇತರ ಸರಕಾರಗಳಿರುವ ಇತರ ಸರಕಾರಗಳೂ ಭಿನ್ನ ಪ್ರತಿಕ್ರಿಯೆಗಳನ್ನು ನೀಡಿದೆ. ಇಂತಹ ಒಂದು ಸಾಧ್ಯತೆ ಬಹಳ ವರ್ಷಗಳಿಂದ ಪ್ರಸ್ತಾವಿಸಲ್ಪಟ್ಟಿದೆ. ಲೋಕಸಭೆ ಮತ್ತು ವಿಧಾನಸಭೆಗಳ ಮೊದಲ ೩-೪ ಚುನಾವಣೆಗಳು ಇದೇ ರೀತಿ ನಡೆದಿವೆ. ಆನಂತರ ವಿವಿಧ ಕಾರಣಗಳಿಂದ (ಮುಖ್ಯವಾಗಿ ನೀತಿ ಮತ್ತು ಮೌಲ್ಯ ಪತನ ಆರಂಭವಾದಲ್ಲಿಂದ) ಸರಕಾರಗಳು ಬಾಲಾರಿಷ್ಟ ದೋಷದಿಂದ ತಮ್ಮ ನಿಗದಿತ ಆಯುಸ್ಸನ್ನು ಕಳೆದುಕೊಂಡು ಶೂನ್ಯ ಸಂಪಾದನೆಯನ್ನು ಆರಂಭಿಸಿದ್ದರಿಂದ ಈ ತಾಳ-ಮೇಳ ತಪ್ಪಿತು. ಪರಿಣಾಮವಾಗಿ ಮತದಾರರಿಗೆ ಪದೇ ಪದೇ ಮತದಾನ ಮಾಡುವ ಭಾಗ್ಯವು ದಕ್ಕಿತು. ಜೊತೆಗೆ ಮನೆಮನೆಗೂ ಅಲ್ಲದಿದ್ದರೂ ಗ್ರಾಮದ ಹಂತದ ವರೆಗೆ ರಾಜಕೀಯ (ಅಂದರೆ ರಾಜಕಾರಣಿಗಳ ಕುತಂತ್ರ) ತಲುಪಿದ್ದರಿಂದ ರಾಜಕಾರಣದ ಸುಟ್ಟ ವಾಸನೆ ಮನೆಮನೆಗಳನ್ನೂ ವ್ಯಾಪಿಸಿತು. ಇತ್ತೀಚೆಗಿನ ವರ್ಷಗಳಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಧನೋವೈದ್ಯರಾಗಿ ಆಪರೇಷನ್ ಮಾಡಲಾರಂಭಿಸಿದ ಮೇಲೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. (ಇದರ ಕುರಿತು ಪ್ರತ್ಯೇಕ ಅಧ್ಯಯನವಾಗಬೇಕಾಗಿದೆ.)
ಕಳೆದ ಕೆಲವು ವರ್ಷಗಳಲ್ಲಿ ಇಂತಹ ಪತನಾಭಿವೃದ್ಧಿಯೊಂದಿಗೇ ಜನರ ಕಣ್ಣಿಗೆ ಮಣ್ಣೆರಚಲು ಹಲವಾರು ಆಯೋಗಗಳು, ಸಮಿತಿಗಳು ರಚನೆಗೊಂಡವು. ಸಂಸದೀಯ ಸ್ಥಾಯೀ ಸಮಿತಿಯು ೨೦೧೫ರಲ್ಲೂ ಕಾನೂನು ಆಯೋಗವು ೨೦೧೮ರಲ್ಲೂ, ನೀತಿ ಆಯೋಗವು ಕಳೆದ ವರ್ಷವಷ್ಟೇ ನೀಡಿದ ವರದಿಗಳು ಸರಕಾರದ (ಕಸದ) ಬುಟ್ಟಿಯಲ್ಲಿವೆ. ಇವುಗಳು ಹೊರಚೆಲ್ಲಬಹುದಾದ ದುರ್ಗಂಧದ ತ್ಯಾಜ್ಯಕ್ಕೆ ಇನ್ನಷ್ಟು ಸೇರ್ಪಡೆಗಾಗಿ ಹೀಗೊಂದು ಹೊಸ ಸಮಿತಿ ನಿರ್ಮಾಣಗೊಂಡಿದೆಯೆಂದರೆ ಅಧಿಕಾರಶಾಹಿಗೆ ಹೆಚ್ಚು ಸಂತೋಷವಾಗಿರಬಹುದು. ಏಕೆಂದರೆ ಅವರಿಗೆ ಇನ್ನೊಂದು ಕೆಲ ತಿಂಗಳು ಇದಕ್ಕೆ ಬೇಕಾದ ಮಾಹಿತಿ, ಅಂಕೆ-ಸಂಖ್ಯೆ ಇತ್ಯಾದಿ ವಿವರಗಳನ್ನು ಸಂಪಾದಿಸುವಲ್ಲಿ ಕಾಲಕಳೆಯಬಹುದು.
ಸಾಮಾನ್ಯ ಚುನಾವಣೆ ಬೇಕೇ ಬೇಡವೇ ಎಂಬುದಕ್ಕಿಂತಲೂ ಇದರ ಉದ್ದೇಶವೇನೆಂಬುದನ್ನು ಈ ಸಮಿತಿಯ ವರದಿಯಿಂದ ಪೂರ್ಣವಾಗಿ ಕಂಡುಹಿಡಿಯಬಹುದಾದರೂ ಈಗಲೇ ಒಂದಷ್ಟು ಅಭಿಮತಗಳನ್ನು ಜನಸಾಮಾನ್ಯರು, ಚಿಂತಕರು ವ್ಯಕ್ತಪಡಿಸಿದ್ದರ ಮೇಲೆ ಒಂದು ಸ್ಥೂಲ ಅಭಿಪ್ರಾಯಗಳನ್ನು ಮಾಡಬಹುದು. ಮೊದಲನೆಯದು ರಾಜಕಾರಣ: ಸದ್ಯ ಒಕ್ಕೂಟ ಸರಕಾರಕ್ಕೆ ವಿವಾದಗಳೇ ಜೀವವಾಯು. ಜನರ ಮುಂದೆ ಈಗಿರುವ ಸಮಸ್ಯೆಗಳನ್ನು ಮರೆಸಲು ಇದಕ್ಕಿಂತ ದೊಡ್ಡ ವಿವಾದಾಂಶ ಬೇರೆ ಇಲ್ಲ. ಎಲ್ಲ ಕಡೆ ‘ಒಂದು ದೇಶ, ಒಂದು ಚುನಾವಣೆ’ ಎಂಬ ಕೂಗಿನೊಂದಿಗೆ ಜನರಿಗೆ ಹಸಿವು, ಬಾಯಾರಿಕೆ, ವಸತಿ, ಶಿಕ್ಷಣ, ಆರೋಗ್ಯ ಮುಂತಾದವನ್ನು ಅಲಕ್ಷಿಸಲು ಹೇಳಬಹುದು. ಪ್ರಜಾಪ್ರಭುತ್ವದ ಉಳಿವಿಗೆ ದೇಶ ಮುಖ್ಯ, ಚುನಾವಣೆ ಮುಖ್ಯ. ಇತರ ಸಂಗತಿಗಳು, ವಿಚಾರಗಳು ಇಷ್ಟು ಪ್ರಧಾನವಾದದ್ದಲ್ಲ ಎಂಬ ಮಾತುಗಾರಿಕೆಗೆ ಚಪ್ಪಾಳೆ ತಟ್ಟದಿದ್ದರೆ ಜನರಿಗೆ ಎರಡು ಕೈಗಳಿದ್ದೇನು ಫಲ?
ಇಡೀ ದೇಶದ ಚುನಾವಣೆ ಮಾಡುವುದು ತಪ್ಪಲ್ಲ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಆಡಳಿತದ ಮಹತ್ವ ಬೇರೆ; ರಾಜ್ಯಗಳ ಆಡಳಿತದ ಮಹತ್ವ ಬೇರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮಹತ್ವವೇ ಬೇರೆ. ಭಾರತದಂತಹ ಭಿನ್ನತೆ, ವೈವಿಧ್ಯಗಳ, ಬಹುತ್ವ ದೇಶಕ್ಕೆ ಭೌಗೋಳಿಕ ಸಮಾನತೆ ಸಿಕ್ಕಲು ಸಾಧ್ಯವಿಲ್ಲ. ಇನ್ನೆಲ್ಲೂ ಕಾಣದ ರೀತಿಯ ಹವಾಮಾನ ವೈಪರೀತ್ಯ ಈ ದೇಶದಲ್ಲಿದೆ. ಒಂದೆಡೆ ಗಾಳಿ-ಮಳೆಯ ತೀವ್ರತೆಯಿಂದ ಜೀವಹಾನಿ, ಆಸ್ತಿಹಾನಿಯಾಗುತ್ತಿದ್ದರೆ, ಇನ್ನೊಂದೆಡೆ ಧಗಧಗಿಸುವ ಬಿಸಿಲಿನ ಉಷ್ಣತೆಗೆ ಜನರು ಬಸವಳಿದು ಹೋಗುವುದು ಭಾರತದಲ್ಲಿ ಸಾಮಾನ್ಯ. ಆಡಳಿತದಲ್ಲಿ ಇವೆಲ್ಲ ಸಾಮಾನ್ಯ ಎಂದು ಹಾರಿಕೆಯ, ಜಾರಿಕೆಯ ಉತ್ತರ ನೀಡಬಹುದು.
ಇಂತಹ ಪ್ರಾಕೃತಿಕ ವಿಕೋಪಗಳು ಒಂದೆಡೆಯಾದರೆ, ಮನುಷ್ಯ ನಿರ್ಮಿತ ಪ್ರಯಾಸಗಳೇ ಬೇರೆ. ಯಾರನ್ನೇ ಆಯ್ಕೆ ಮಾಡಿ; ಆತ ದೇಶನಿಷ್ಠೆ ಹೋಗಲಿ, ಪಕ್ಷಕ್ಕಾಗಲೀ ಕ್ಷೇತ್ರಕ್ಕಾಗಲೀ ನಿಷ್ಠನಾಗಿರುತ್ತಾನೆಂದು ನಂಬುವಂತಿಲ್ಲ. ಸಂವಿಧಾನದ ಹೆಸರಿನಲ್ಲಿ ಮಾಡುವ ಪ್ರಮಾಣವು ಆ ಜನಪ್ರತಿನಿಧಿ ಹಾಕಿದ ಸಹಿ ಒಣಗುವ ಮೊದಲೇ ಆವಿಯಾಗಿ ಹೋಗಿರುತ್ತದೆ. ಅಲ್ಲಿಂದ ನಂತರ ಎಲ್ಲವೂ ಅಧಿಕಾರದ ಸಂಗೀತ ಕುರ್ಚಿಯ ಕಥೆ. ಮಧ್ಯಪ್ರದೇಶ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆದಾಗ ಅನೇಕ ಪಕ್ಷಾಂತರದ ಪಕ್ಷಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಿಜೆಪಿಯನ್ನು ಸೇರಿದವು. ರೆಸಾರ್ಟ್‌ಗಳು ತುಂಬಿ ತುಳುಕಿದವು. ಇದರಿಂದಾಗಿ ಚುನಾವಣೆಗಳು ನಡೆದವು. ಇದೇನೂ ಉಚಿತವಾಗಿ ನಡೆದಿರಲಿಲ್ಲ. ಇದನ್ನೆಲ್ಲ ಮರೆಸುವ ಪರ್ಯಾಯ ವ್ಯವಸ್ಥೆಗಾಗಿ ಸರಕಾರ ಕಾಯುತ್ತಲೇ ಇದೆ. ಈಗ ಅದರ ಹೊಸ ಪ್ರಯೋಗಕ್ಕೆ ಒಕ್ಕೂಟ ಸರಕಾರವು ಸಿದ್ಧವಾಗಿದೆ.
ಹಾಗಾದರೆ ಚುನಾವಣೆಯೇ ಬೇಡವೇ ಎಂಬ ಪ್ರಶ್ನೆ ಎದುರಾಗಬಹುದು.
ಒಂದೆರಡು ಉದಾಹರಣೆಗಳೊಂದಿಗೆ ಈ ವಿಚಾರವನ್ನು ಪರಿಶೀಲಿಸಬಹುದು: ಈಗಷ್ಟೇ ಪೂರ್ಣವಾಗಿರುವ ಸಂವಿಧಾನದ ೩೭೦ನೇ ವಿಧಿಯ ಕುರಿತ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸರ್ವೋಚ್ಚ ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವಾಗ ಚುನಾವಣೆಯನ್ನು ಮಾಡುತ್ತೀರಿ ಮತ್ತು ಈಗ ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತನೆಗೊಂಡ ಸ್ವರೂಪವನ್ನು ಮತ್ತೆ ಹಳೆಯ/ರಾಜ್ಯವಾಗಿಸುವುದು ಯಾವಾಗ ಎಂದು ಪ್ರಶ್ನಿಸಿದಾಗ ಉತ್ತರಿಸಲು ಸಾಲಿಸಿಟರ್ ಜನರಲ್ ಅವರಿಗೂ ಕಷ್ಟವಾಯಿತು. ಆ ರಾಜ್ಯದ ಅಭಿವೃದ್ಧಿ ಶರವೇಗದಲ್ಲಿ ಆಗುತ್ತಿದೆಯೆಂದು ಹೇಳುತ್ತಲೇ ಅವರು ಪರಿಸ್ಥಿತಿ ತಿಳಿಗೊಂಡಾಗ ಈ ಚುನಾವಣೆ, ರಾಜ್ಯರೂಪ ಮುಂತಾದ ವಿಚಾರಗಳನ್ನು ಕೈಗೊಳ್ಳಲಾಗುವುದು ಎಂದರು. ಅಕಸ್ಮಾತ್ತಾಗಿ ಈ ಮೊದಲೇ ‘ಒಂದು ದೇಶ-ಒಂದು ಚುನಾವಣೆ’ಯ ಕಾನೂನು ಕಡ್ಡಾಯವಾಗಿರುತ್ತಿದ್ದರೆ ಮೆಹ್ತಾ ಹೀಗೆ ಹೇಳಬಹುದಿತ್ತೇ? ಅಥವಾ ‘ಒಂದು ದೇಶ-ಒಂದು ಚುನಾವಣೆ’ಯ ಆಶಯವನ್ನು ಘೋಷಿಸಿಕೊಂಡ ಒಕ್ಕೂಟ ಸರಕಾರ ಇಂತಹ ನೆಪವನ್ನು ಹೇಳುವುದು ಸರಿಯೇ? ಅದೊಂದು ಗಡಿಪ್ರದೇಶದ ರಾಜ್ಯವೆಂದು ನಂಬಿಸುವ ಒಕ್ಕೂಟ ಸರಕಾರವು ವಿಶ್ವದಲ್ಲೆಲ್ಲೂ ಗಡಿಗಳಿಲ್ಲದೆ ದೇಶವಿಲ್ಲವೆಂಬುದನ್ನು ಒಪ್ಪುತ್ತದೆಯೇ? ಈ ದೇಶಕ್ಕಿಲ್ಲದ ದುಸ್ತರತೆ ಒಂದು ರಾಜ್ಯಕ್ಕಿದೆಯೆಂದು ಸರಕಾರವೇ ಒಪ್ಪಿಕೊಂಡು ತೆರೆಮರೆಯಲ್ಲಿ ಒಂದು ದೇಶ-ಒಂದು ಚುನಾವಣೆಯ ಕಾರಸ್ಥಾನ ನಡೆಸುವುದು ದುರದೃಷ್ಟದಿಂದ ನಮ್ಮ ಅನಕ್ಷರಸ್ಥ-ಅಕ್ಷರಸ್ಥ ಭಿನ್ನತೆಯಿಲ್ಲದೆ ಬದುಕುತ್ತಿರುವ ಮೂರ್ಖರಿಗೆ ಅರ್ಥವಾಗದು.
ಇಡೀ ದೇಶದ ಚುನಾವಣೆಯು ಒಟ್ಟಿಗೇ ನಡೆಯಲು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಧ್ಯವೇ ಇಲ್ಲ. ಕಿಸೆಗಳ್ಳರನ್ನಾದರೂ ನಂಬಬಹುದು, ನಮ್ಮ ಜನಪ್ರತಿನಿಧಿಗಳನ್ನು ನಂಬಲಾಗದೆಂಬುದನ್ನು ಬಹಳಷ್ಟು ಸಂಸದರು, ಶಾಸಕರು ನಿರೂಪಿಸಿದ್ದಾರೆ. ಆದರ್ಶ ಬೇರೆ; ವಾಸ್ತವ ಬೇರೆ. ಚುನಾವಣೆ ಘೋಷಣೆಯಾದ ಮೇಲೆ ನಾಮಪತ್ರ ಸ್ವೀಕೃತವಾದ ಮೇಲೆ ಕಾಲವಾದ ಅಭ್ಯರ್ಥಿಗಳಿದ್ದಾರೆ. ಆಗ ಒಂದೇ ಚುನಾವಣೆ ಹೇಗೆ ನಡೆಯುತ್ತದೆ? ಚುನಾವಣೆಯ ಬಳಿಕ ಒಬ್ಬ ಪ್ರತಿನಿಧಿ ಕಾಲವಾದರೆ ಉಳಿದ ಅವಧಿಗೆ ಚುನಾವಣೆ ನಡೆಯಬೇಕೇ ಬೇಡವೇ? ಕಾನೂನು ಪರಿಸ್ಥಿತಿ ಕೈಮೀರಿದಾಗ, ಇಲ್ಲವೇ ಕೈಮೀರಿದ ನಾಟಕಪ್ರದರ್ಶನವಾದಾಗ, ಅಂತರ್ಜಾಲ ವ್ಯವಸ್ಥೆಯೂ ಇಲ್ಲದಾಗ ಇಂದಿನ ಜಗತ್ತಿನಲ್ಲಿ ಒಂದೇ ಬಾರಿಗೆ ಚುನಾವಣೆ ಹೇಗೆ ನಡೆದೀತು? ಹೋಗಲಿ, ಒಂದು ದೇಶ-ಒಂದು ಚುನಾವಣೆಯ ಜೊತೆಗೆ ರಾಷ್ಟ್ರಪತಿ-ಉಪರಾಷ್ಟ್ರಪತಿ, ರಾಜ್ಯಸಭೆ, ವಿಧಾನಪರಿಷತ್ತು ಇವುಗಳ ಚುನಾವಣೆ ನಡೆಯಬೇಕಲ್ಲವೇ? ಆ ಸ್ಥಾನಗಳಿಗೆ ಬೇರೆ ನೆಪವನ್ನು ಹೇಗೆ ಸಮರ್ಥಿಸುತ್ತೀರಿ?
ಘೋಷಣೆಗಳು ಆಕರ್ಷಕ. ಅವನ್ನು ಈಡೇರಿಸುವಾಗ ಎದುರಾಗುವುದು ನಿಜವಾದ ಸವಾಲು. ಈ ದೇಶದಲ್ಲಿ ಚುನಾವಣೆಯು ಹೇಗೆ ನಡೆಯುತ್ತದೆ ಯೆಂಬುದನ್ನು ಎಲ್ಲರೂ ಬಲ್ಲರು. ಆದರೂ ನಮ್ಮ ಚುನಾವಣೆಗಳು ಶಾಂತಿಯುತವೆಂದು ಬಣ್ಣಿಸುತ್ತೇವೆ. ದೇಶಕ್ಕಿಡೀ ಬೇಕಾದ ಇವಿಎಮ್, ವಿವಿ-ಪ್ಯಾಟ್ ಯಂತ್ರೋಪಕರಣಗಳನ್ನು ಸಿದ್ಧಗೊಳಿಸುವುದು, ಅಣಿಗೊಳಿಸು ವುದು, ಗುಡ್ಡಗಾಡುಗಳಲ್ಲಿ, ಕುಗ್ರಾಮಗಳಿಗೆ, ಅವುಗಳ ಮತ್ತು ಅಗತ್ಯ ಸಿಬ್ಬಂದಿಯ ಸಾಗಾಟ, ನಡುವೆ ಅವುಗಳು ತಾಂತ್ರಿಕ ವೈಫಲ್ಯಗಳನ್ನನುಭವಿಸುವುದು, ಅವುಗಳ ಅಪಹರಣದ ಪ್ರಕರಣಗಳು, ಇವನ್ನೆಲ್ಲ ನಿಭಾಯಿಸುವ ಸಾಮರ್ಥ್ಯ ನಮ್ಮ ಆಡಳಿತಕ್ಕಿದೆಯೇ?
ಪ್ರಾಯಃ ಒಕ್ಕೂಟ ಸರಕಾರವು ಆಡಳಿತ ಪಕ್ಷದಲ್ಲಿರುವ ಅಪಾರ ಧನಸಂಪತ್ತಿನ ಮತ್ತು ಸದ್ಯ ಅವರು ನಂಬಿರುವ ಒಬ್ಬ ನಾಯಕನ ಅಧಾರದಲ್ಲಿ ಪ್ರತಿಪಕ್ಷಗಳಿಗಿಲ್ಲದ ಸೌಕರ್ಯಗಳನ್ನು ಅನುಭವಿಸಿಕೊಂಡು ಚುನಾವಣೆ ನಡೆದರೆ ತಾವು ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ ಹಾಕಿರಬಹುದು. ಆದರೆ ೧೯೭೭ನ್ನು ಜ್ಞಾಪಿಸಿಕೊಂಡರೆ ಈ ದೇಶದ ಮತದಾರರನ್ನು ನಂಬಲಾಗದೆಂದು ಬುದ್ಧಿಯಿರುವ ಯಾವನೇ ರಾಜಕಾರಣಿಯಾದರೂ ಗೊತ್ತುಮಾಡಬಹುದು.
ಬಗೆಹರಿಸಲಾಗದ ಆದರೆ, ಬಗೆಹರಿಸಲೇಬೇಕಾದ ಸಮಸ್ಯೆಗಳು ದೇಶದಲ್ಲಿ ಬೇಕಷ್ಟಿವೆ. ಮಣಿಪುರ ಒಂದಲ್ಲ, ಹತ್ತಾರಿವೆ. ಒಕ್ಕೂಟ ಸರಕಾರಕ್ಕೆ ಜಿ-೨೦, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಮುಂತಾದ ಅವರ ದೃಷ್ಟಿಯ ಪ್ರಮುಖ ಕಾರ್ಯಸೂಚಿಗಳು ಅಪೇಕ್ಷಿತ ಪರಿಣಾಮಗಳನ್ನೂ ಮತದಾರನ ಒಲವನ್ನೂ ತರಲಾರದೆಂಬ ಅನುಮಾನವಿದೆ. ೨೦೨೪ ಪ್ರತಿಪಕ್ಷಗಳಿಗೆ ಹೇಗೆ ನಿರ್ಣಾಯಕವೋ ಆಡಳಿತ ಪಕ್ಷಕ್ಕೂ ನಿರ್ಣಾಯಕವೇ. ಹಿಂದುತ್ವದ ಬಿಸಿ ತಣಿಯುತ್ತಿದೆ. ಜಾತೀಯತೆ, ಮತಾಂಧತೆ ಈಗ ಮತನಿರ್ಣಾಯಕವಾಗಿ ಉರಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಹೊಸ ಸಮಸ್ಯೆಯು ಜನಮನವನ್ನು ಕದಡುತ್ತದೆಂದು ಒಕ್ಕೂಟ ಸರಕಾರವು ತಪ್ಪುಗ್ರಹಿಕೆಯನ್ನು ಹೊಂದಿದೆಯೆನ್ನಿಸುತ್ತದೆ. ಹದ್ದುಗಳು ಹೋಗದಲ್ಲಿ ಮೂರ್ಖರು ಹೋಗಲಿಚ್ಛಿಸುತ್ತಾರಾದ್ದರಿಂದ ಇವನ್ನೂ ಕಾದು ನೋಡಬಹುದು.