ಕ್ರೀಡೆಯ ಗಡಿರೇಖೆಗಳು
ಒಳ್ಳೆಯ ಕ್ರಿಕೆಟಿಗನನ್ನು ನಮ್ಮ ಎದುರಾಳಿಯೆಂಬ ಕಾರಣಕ್ಕೆ ಹಳಿಯುವುದು ಕ್ರಿಕೆಟ್ ಅಪೇಕ್ಷಿಸುವ ಸಜ್ಜನಿಕೆಗೆ, ಸಭ್ಯತೆಗೆ ಮಾಡುವ ಅಪಚಾರ. ಭಾರತದ ಕ್ರಿಕೆಟಿಗರು ಇದನ್ನು ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಪ್ರೇಕ್ಷಕರು ಮತ್ತು ಕೆಲವು ವೀಕ್ಷಕ ವಿವರಣೆಗಾರರು ಒಮ್ಮೊಮ್ಮೆ ಅಪಾರ ಮತ್ತು ಅನುಚಿತ ದೇಶಪ್ರೇಮವನ್ನು ವ್ಯಕ್ತಪಡಿಸುವುದಿದೆ. ಎದುರಾಳಿ ಬೇರೆ; ವೈರಿ ಬೇರೆ. ಭೂಮಿಗೆ ನಾವು ಸೃಷ್ಟಿಸಿದ ಕೃತಕ ಗಡಿಗಳು ಕ್ರೀಡೆಯನ್ನೊಡೆಯಬಾರದು. ಅದೇ ಕ್ರೀಡೆಗೆ ನೀಡುವ ಮನ್ನಣೆ. ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಭಾರತ ಗೆಲ್ಲಲಿ ಎಂದು ಹಾರೈಸೋಣ. ಭಾರತವನ್ನು ಬೆಂಬಲಿಸೋಣ. ಆದರೆ ಈ ಹಾರೈಕೆಗೆ, ಬೆಂಬಲಕ್ಕಷ್ಟೇ ನಮ್ಮ ದೇಶಾಭಿಮಾನ ಸೀಮಿತವಾಗಬೇಕು. ಎಷ್ಟಾದರೂ ಇದು ಸೀಮಿತ ಓವರ್‌ಗಳ ಕ್ರಿಕೆಟ್!
ಭಾರತದಲ್ಲಿ ಸದ್ಯ ಏಕದಿನ ಪಂದ್ಯಗಳೆಂದು ಗುರುತಾಗಿರುವ 50 ಓವರ್‌ಗಳ ಕ್ರಿಕೆಟಿನ ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆೆ. ‘ಟಿ-20’ ಎಂದು ಗುರುತಿಸಲ್ಪಡುವ 20 ಓವರ್‌ಗಳ ‘ಮಿನಿ’ ಕ್ರಿಕೆಟ್ ಮತ್ತು ‘ಟೆಸ್ಟ್’ ಪಂದ್ಯವೆಂದು ಗುರುತಾಗಿರುವ 5 ದಿನಗಳ ಮೆಗಾ ಕ್ರಿಕೆಟ್‌ನ ನಡುವೆ ಈ ಏಕದಿನ ಸೀಮಿತ 50 ಓವರ್‌ಗಳ ಪಂದ್ಯವಿರುವುದರಿಂದ ಇದನ್ನು ‘ಮಿಡಿ’ಕ್ರಿಕೆಟ್ ಎಂದು ಕರೆಯಬಹುದು. ಟೆಸ್ಟ್ ಅಂದರೆ ಪರೀಕ್ಷೆ. ನಿಜಾರ್ಥದಲ್ಲೂ ಇದು ಸತ್ಯವೇ. ಒಬ್ಬ ಕ್ರಿಕೆಟ್ ಆಟಗಾರನ ನೈಜ ಪ್ರತಿಭೆ ಮತ್ತು ಚಾಣಾಕ್ಷತೆ ಅನಾವರಣಗೊಳ್ಳುವುದೇ ‘ಟೆಸ್ಟ್’ ಮುಖಾಂತರ.
ಕ್ರೀಡಾಸ್ಫೂರ್ತಿಗೆ ಅಕ್ಷಾಂಶ-ರೇಖಾಂಶಗಳ, ರಾಜಕೀಯ, ಭೌಗೋಳಿಕ ಗಡಿಗಳ ಮಿತಿಯಿಲ್ಲ. ಅದು ಪ್ರೀತಿಯಂತೆ ವಿಶ್ವವ್ಯಾಪಿ. ವಸುಧೈವ ಕುಟುಂಬಕಂ ಎಂಬುದಕ್ಕೆ ‘ಮನುಜಜಾತಿ ತಾನೊಂದೆ ವಲಂ’ ಎಂಬ ಉದಾತ್ತ ನಿಲುವಿಗೆ ಕ್ರೀಡೆಗಿಂತ ಸುಲಭದ ಉದಾಹರಣೆ ಸಿಕ್ಕದು. ಭಾರತದಲ್ಲಿ ಹುಟ್ಟಿ, ಬೆಳೆದ ಅನೇಕ ಕ್ರೀಡೆಗಳಿದ್ದರೂ ಭಾರತೀಯ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಎಂಬುದೇ ಸಾಮ್ರಾಟ. ಹಾಕಿ, ಚೆಸ್, ಮುಂತಾದ ಹೊರಾಂಗಣ, ಒಳಾಂಗಣ ಕ್ರೀಡೆಗಳು ಬಡವಾಗುತ್ತಿವೆ. ಕ್ರಿಕೆಟ್‌ನ ಮೂಲಕ ಸಿಗುವ ಸಂಪತ್ತು, ಕ್ರಿಕೆಟ್ ಕಾರಣವಾಗಿ ಸಿಗುವ ಜಾಹೀರಾತು ಮುಂತಾದ ಧನ-ಕನಕ ವಸ್ತುವೈಭವ, ಪ್ರತಿಷ್ಠೆಯಿಂದಾಗಿ ಕ್ರಿಕೆಟ್ ಬಹಳಷ್ಟು ಮಂದಿ ಕ್ರೀಡಾಪಟುಗಳಿಗೆ ಆದ್ಯತೆಯ ಕ್ರೀಡೆ. ಕ್ರಿಕೆಟ್ ಎಂಬುದು ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತಾಗಿದೆ. ಕ್ರಿಕೆಟ್ ಎಂಬುದು ಸುಶಿಕ್ಷಿತರ ಕ್ರೀಡೆಯೆಂಬ ಕಾಲ ಸಂದಿದೆ. ಈಗ ಅದು ಒಂದು ಉದ್ಯಮ. ಸಹಜವಾಗಿಯೇ ಉದ್ಯಮಿಗಳು, ರಾಜಕಾರಣಿಗಳು ಮುಂತಾದ ಕ್ರಿಕೆಟ್ ಕೆಲಸಕ್ಕೆ ಬಾರದವರು ಅದರಲ್ಲಿ ತಲೆತೂರಿಸುವಂತಾಗಿದೆ.
ಮೇಲಾಗಿ ಭಾರತದ ಜನಸಂಖ್ಯೆ ಮತ್ತು ಸುಲಭ ಸೌಲಭ್ಯದ ಕ್ರಿಕೆಟ್‌ನಿಂದಾಗಿ ಜನರ ಸೋಮಾರಿತನಕ್ಕೆ ಪುಕ್ಕ ಕೆದರಿದೆ. ಹಿಂದೆಲ್ಲ 5 ದಿನ ಕ್ರಿಕೆಟ್ ನೋಡಬೇಕಾಗಿತ್ತು; ಫಲಿತಾಂಶ ಬರಲೇ ಬೇಕೆಂಬ ಹಠ ಮತ್ತು ಸೋಮಾರಿತನಕ್ಕೆ ಅವಕಾಶ ಕಡಿಮೆ ಮಾಡುವ ತವಕಗಳಿಂದಾಗಿ 1970ರ ದಶಕದಲ್ಲಿ ಅದರ ಸ್ಥಾನವನ್ನು 60 ಓವರ್‌ಗಳಿಗೆ ಸೀಮಿತವಾದ ಕ್ರಿಕೆಟ್ ಆಕ್ರಮಿಸಿತು. ಅದು 50 ಓವರ್‌ಗಳಿಗೆ ಇಳಿಯಿತು. ಹಣ ಸಂಪಾದನೆಗೆ ಈ ಕುಬ್ಜ ಕ್ರಿಕೆಟ್ ಸುಲಭದ ಮಾರ್ಗೋಪಾಯವಾಯಿತು. ಫಲಿತಾಂಶ ಬರುವಂತಹ ತಂತ್ರಗಳನ್ನು ಸಂಶೋಧಿಸಲಾಯಿತು. ಅದೀಗ 20 ಓವರ್‌ಗಳಿಗೆ ಇಳಿದ ಮೇಲಂತೂ ಹೇಗಾದರೂ ಫಲಿತಾಂಶ ಬರುವ ಜೂಜಾಯಿತು. ನನ್ನ ಸ್ನೇಹಿತರೊಬ್ಬರು ಫ್ರಾನ್ಸ್‌ಗೆ ಹೋಗಿದ್ದರು. ಅವರಿಗೆ ಸಿಕ್ಕ ಫ್ರೆಂಚನೊಬ್ಬ ತಾವು ಫುಟ್‌ಬಾಲ್ ಪ್ರೇಮಿಗಳೆಂದೂ ಅದನ್ನೇ 90 ನಿಮಿಷಗಳ ಕಾಲ ನೋಡುವುದಕ್ಕೂ ಸಮಯ ಸಿಗುವುದಿಲ್ಲವೆಂದೂ, ಭಾರತೀಯರು (ಮತ್ತು ಕ್ರಿಕೆಟ್ ದೇಶಗಳ ಇತರ ಕ್ರಿಕೆಟ್ ಪ್ರೇಕ್ಷಕರು/ಅಭಿಮಾನಿಗಳು) ಅದು ಹೇಗೆ 5 ದಿನಗಳ ಕಾಲ ಕುಳಿತು ವೀಕ್ಷಿಸುತ್ತಾರೋ ಎಂದು ಅಚ್ಚರಿ ವ್ಯಕ್ತಪಡಿಸಿದರಂತೆ! ಇರಲಿ, ಇತರರ ಬಗ್ಗೆ ಗೊತ್ತಿಲ್ಲ, ನಾವು ಭಾರತೀಯರು- ಆಯುರ್ವೇದ ಪದ್ಧತಿಯ, ಹಿಂದೂಸ್ಥಾನೀ ಸಂಗೀತದ, ಜನಕರು; ನಿಧಾನವಾಗಿಯೇ ಎಲ್ಲವನ್ನೂ ಎದುರಿಸುವವರು, ಆಸ್ವಾದಿಸುವವರು. ನಮ್ಮಲ್ಲಿ ಮದುವೆಯೆಂದರೆ ಅದು ದಿನಗಟ್ಟಲೆ ಸಪ್ತಾಹದ ವರೆಗೂ ನಡೆಯುತ್ತದೆ. ಆದ್ದರಿಂದ ಈ 5 ದಿನಗಳು ನಮ್ಮ ಕಾಲಮಾನದಲ್ಲಿ (ಅದು ಬ್ರಹ್ಮನ ‘ಕಲ್ಪ’ಕ್ಕಿಂತ ಸ್ವಲ್ಪ ಕಡಿಮೆಯದ್ದು!) ಇದೇನೂ ದೊಡ್ಡ ಕಾಲವಲ್ಲ!
ಈಗ ಏಕದಿನ ಕ್ರಿಕೆಟ್ ಬಂದ ಬಳಿಕ ಮತ್ತು ಅದಾದ ಮೇಲಿನ 20 ಓವರ್‌ಗಳ ಕ್ರಿಕೆಟ್ ಬಂದ ಬಳಿಕವಂತೂ ಎಲ್ಲರೂ ಖ್ಯಾತರೇ. ‘ಏಕ್ ದಿನ್ ಕಾ ಸುಲ್ತಾನ್’ರಂತೆ ಒಂದು ಪಂದ್ಯದಿಂದಲೇ ಕ್ರಿಕೆಟ್ ವಿಖ್ಯಾತರಾದವರಿದ್ದಾರೆ. ಜೊತೆಗೇ ನೈಜ ಗುಣಮಟ್ಟದ ಕ್ರಿಕೆಟಿಗರು ಯಾರೆಂದು ಇಂದು ನಿರ್ಧರಿಸಲು ಸಾಧ್ಯವೇ ಇಲ್ಲವಾಗಿದೆ. ಐಪಿಎಲ್ ನಂತಹ ದಂಧೆ ಆರಂಭವಾದ ಮೇಲಂತೂ ಹನಿಗವಿಗಳಂತೆ ಎಲ್ಲರೂ ಒಂದೊಂದು ಸಾಲಿನ ಬ್ಯಾಟಿಂಗ್, ಬೌಲಿಂಗ್‌ಗಳಲ್ಲಿ ಮಿಂಚಿ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಕ್ರಿಕೆಟಿಗರಾಗುವಂತಾಗಿದೆ. ಒಂದೇ ಒಂದು ಪಂದ್ಯದ ವೀರರು ಯಕ್ಷಗಾನದಲ್ಲಿ ಒಂದು ಪದ್ಯಕ್ಕೆ ಕುಣಿಯುವ ವೀರರಂತಾಗಿದ್ದಾರೆ. ಅನ್ನ ಬೆಂದಿದೆಯೇ ಎಂದು ಪರೀಕ್ಷಿಸಲು ಒಂದಗುಳು ಸಾಕೆಂಬಂತೆ ಇದನ್ನೂ ಅವಸರದಿಂದಲೇ ನಿರ್ಧರಿಸುವ ಪರಿಪಾಠ ಬಂದಿದೆ. ಈಗ ನಮ್ಮ ರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗುವ ಬಹಳಷ್ಟು ಮಂದಿ ಐಪಿಲ್ ಅಥವಾ ಒಂದು ದಿನದ ಕೂಸುಗಳು; ಇವರಿಗೆ ಟೆಸ್ಟ್ ಕ್ರಿಕೆಟೆಂಬ ಮೈದಾನಕ್ಕೆ ಕಾಲಿಡಲು ಇವು ಬಾಗಿಲುಗಳು; ಇನ್ನು ಕೆಲವರಿಗೆ ಕಿಟಿಕಿಗಳು. ಇದರಿಂದಾಗಿ ಅನೇಕ ನೈಜ ಪ್ರತಿಭೆಗಳು ಅವಕಾಶವಂಚಿತರಾಗಿದ್ದಾರೆ, ಇಲ್ಲವೇ ಆಯ್ಕೆಗೆ ತೀವ್ರ ಪೈಪೋಟಿಯನ್ನು ಎದುರಿಸಿ ಸೋಲುತ್ತಿದ್ದಾರೆ. ಭಾರತದಲ್ಲಂತೂ ಒಂದಲ್ಲ, ಎರಡಲ್ಲ, ಹತ್ತಾರು ತಂಡಗಳನ್ನು ಕಟ್ಟುವಷ್ಟು ಸಮಾನಪ್ರತಿಭೆಯ ಕ್ರಿಕೆಟಿಗರಿದ್ದಾರೆ. ಆದರೆ ಸ್ಥಾನವಿರುವುದು ಆಡುವ 11 ಮಂದಿಗೆ- ಮತ್ತು ಇತರರೆಂಬ ಇನ್ನೊಂದು 4-5 ಮಂದಿಗೆ ಮಾತ್ರ! ಪ್ರಶಸ್ತಿ ಬಂದರೆ ಅದರ ಫಲವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆಂಬ ಸಂತೋಷವಷ್ಟೇ ಅವರಿಗೆ.
ಆದರೆ ಈಗ ಗಾಯ, ಸ್ನಾಯು ಸೆಳೆತ, ಇನ್ನಿತರ ಸಮಸ್ಯೆಗಳು ಎದುರಾಗಿ ಆಡಲು ಅಸಮರ್ಥರಾಗಿ ಪಂದ್ಯಾವಳಿಗಳಲ್ಲಿ ಆಡದಿರುವ ಆಟಗಾರರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಕ್ರಿಕೆಟ್ ಪಂಡಿತರು ಹುಡುಕಬೇಕು. ಮಹಾಭಾರತದ ಶಸ್ತ್ರವಿದ್ಯಾ ಪರೀಕ್ಷೆಯ ಬಿಲ್ವಿದ್ಯೆಯಲ್ಲಿ ಮರದ, ಮರದ ಗೆಲ್ಲುಗಳ, ಗೆಲ್ಲುಗಳಲ್ಲಿರುವ ಎಲೆಗಳನ್ನು, ಆ ಎಲೆಗಳ ನಡುವೆ ಕುಳಿತ ಹಕ್ಕಿಯನ್ನು ಅದರ ತಲೆಯನ್ನು ಅಲಕ್ಷಿಸಿ ಆ ಹಕ್ಕಿಯ ಕಣ್ಣನ್ನಷ್ಟೇ ಗಮನಿಸಿ ಬಾಣವನ್ನೆಸೆದು ವಿಜಯಿಯಾದ ಅರ್ಜುನನಂತೆ ಚೆಂಡನ್ನೇ ದೃಷ್ಟಿಸುವ ಏಕಾಗ್ರತೆಯಿಲ್ಲದೆ ಮೈಮೇಲೆ ಚೆಂಡನ್ನೆಳೆದುಕೊಳ್ಳುವ ಖಯಾಲಿಯ ಆಟಗಾರರು ಅನೇಕ. ಅರ್ಜುನನಂತಿರುವ ಆಟಗಾರರೂ ಸದಾ ಯಶಸ್ವಿಯಾಗುತ್ತಾರೆಂದೇನಿಲ್ಲ. ಡಾನ್‌ಬ್ರಾಡ್‌ಮನ್, ವಿವಿಯನ್ ರಿಚರ್ಡ್ಸ್, ಸಚಿನ್ ತೆಂಡುಲ್ಕರ್, ಬ್ರಿಯಾನ್‌ಲಾರಾ, ವಿರಾಟ್ ಕೊಹ್ಲಿಯವರಂತಹ ಪರಿಣತ ಶ್ರೇಷ್ಠರೂ ಹಲವು ಬಾರಿ ವಿಫಲರಾದದ್ದಿದೆ. (ಬ್ರಾಡ್‌ಮನ್ ತನ್ನ ಕೊನೆಯ ಇನಿಂಗ್ಸಿನಲ್ಲಿ ಶೂನ್ಯಸಂಪಾದನೆ ಮಾಡದಿರುತ್ತಿದ್ದರೆ ಆತನ ಸರಾಸರಿ ಸ್ಕೋರ್ 100 ತಲುಪುತ್ತಿತ್ತು!) ಬದಲಾಗುತ್ತಿರುವ ಜೀವನಶೈಲಿಯಲ್ಲಿ ವೈಫಲ್ಯಗಳಿಗೆ ಕಾರಣ ಬೇಡ. ದೈಹಿಕ, ಮಾನಸಿಕ, ಬೌದ್ಧಿಕ ಆಕರ್ಷಣೆಗಳು ಮಾತ್ರವಲ್ಲ, ಪರಿಣಾಮದ ಒತ್ತಡಗಳೂ ಈ ವೈಫಲ್ಯದ ಹಾದಿಯಾಗಲು ಸಾಧ್ಯ!
*
ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಅನೇಕ ಪ್ರಶ್ನೆಗಳನ್ನು ಒಡ್ಡಿದೆ. ಭಾರತ-ಪಾಕಿಸ್ತಾನದ ನಡುವಣ ರಾಜಕೀಯ ಹೊಯ್‌ಕೈ ಕ್ರಿಕೆಟಿಗೂ ತಗಲಿದೆ. ಪಂದ್ಯಕ್ಕೆ ಪಾಕಿಸ್ತಾನದ ಆಟಗಾರರಿಗೆ ವೀಸಾ ಸಿಗುವ ಆತಂಕದಿಂದ ಅವರನ್ನು ಇಲ್ಲಿ ಹೇಗೆ ಸ್ವಾಗತಿಸಬೇಕು ಎಂಬಂತಹ ಕ್ಷುಲ್ಲಕ ಪ್ರಶ್ನೆಗಳೇ ಮುಖ್ಯವಾದವು. ಕ್ರಿಕೆಟ್ ಹಿಂದೆ ಸರಿಯಿತು. ಈಗ ಈ ಸ್ಪರ್ಧೆಯು ರಾಜಕೀಯ ಮತ್ತು ಜನಮಾನಸದಲ್ಲಿ ವೈರದ ಹಂತಕ್ಕೆ ತಲುಪಿದೆ. ಪಾಕಿಸ್ತಾನವನ್ನು ಸೋಲಿಸಿದರೆ ಸಾಕು ಕಪ್ ಗೆಲ್ಲದಿದ್ದರೂ ಸರಿ ಎಂಬಂತೆ ವಾದಿಸುವವರೂ ಭಾರತದಲ್ಲೂ ಪಾಕಿಸ್ತಾನದಲ್ಲೂ ತುಂಬಿದ್ದಾರೆ- ಅದಕ್ಕೆ ಧರ್ಮದ ಆಯಾಮ ಬೇರೆ! ಭಾರತ-ಪಾಕಿಸ್ತಾನ ಪಂದ್ಯಕ್ಕೆ ಆಯಕಟ್ಟಿನ ಗುಜರಾತಿನ ಕ್ರೀಡಾಂಗಣವನ್ನು ಆಯ್ಕೆ ಮಾಡಿದ್ದನ್ನು ಗಮನಿಸಿದರೆ ಕ್ರಿಕೆಟ್ ಪ್ರಧಾನಿ ಕಚೇರಿಯವರೆಗೂ ತಲುಪಿದೆ ಅಥವಾ ಅಲ್ಲಿಂದಲೇ ಆರಂಭವಾಗಿದೆ ಅನ್ನಿಸುತ್ತದೆ. ಚಂದ್ರಯಾನದ ಹಾಗೆ ಈ ಪಂದ್ಯಾವಳಿಯನ್ನೂ ರಾಜಕಾರಣಕ್ಕೆ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಕ್ರೀಡಾಸ್ಫೂರ್ತಿಯೊಂದನ್ನು ಹೊರತುಪಡಿಸಿ ಭಾರೀ ಮತೀಯ, ಜಾತೀಯ, ರಾಜಕೀಯ ಪಕ್ಷೀಯ ಚರ್ಚೆ ನಡೆಯುತ್ತಿರುವ ಹಾಗಿದೆ. ಮೊನ್ನೆ ನಡೆದ ಪಂದ್ಯದಲ್ಲಿ ಭಾರತದ ಅಭಿಮಾನಿಗಳಿದ್ದರು. ಪಾಕಿಸ್ತಾನದ ಬೆಂಬಲಿಗರಿಗೆ ವೀಸಾ ದೊರಕದೆ ಹೋದದ್ದರಿಂದ ಅವರ ಸುಳಿವಿರಲಿಲ್ಲ. ಕ್ರಿಕೆಟ್ ಅಭಿಮಾನಿಗಳೆಂದರೆ ಅಲ್ಲಿದ್ದ ಎರಡೂ ತಂಡಗಳ ಆಟಗಾರರು. ವೀಕ್ಷಕ ವಿವರಣೆಗಾಗಿ ಕುಳಿತವರೂ ತಮ್ಮ ರಾಷ್ಟ್ರಾಭಿಮಾನವನ್ನು ಅಡಗಿಸಿಡಲಿಲ್ಲ. ಕ್ರಿಕೆಟಿನ ನಡುವೆ ಜೈ ಶ್ರೀರಾಮ್, ಕೇಸರಿಶಾಲು ಮುಂತಾದವು ಸಭ್ಯರ ಆಟವೆಂದು ಪ್ರಸಿದ್ಧಿ ಪಡೆದಿದ್ದ ಕ್ರಿಕೆಟಿಗೆ ಮಸಿ ಬಳಿದವು.
ಭಾರತದಲ್ಲಿ ವಿಶ್ವ ಕಪ್ ನಡೆಯುತ್ತಿದೆಯೆಂದರೆ ‘ಅದು ಭಾರತಕಪ್’ ಅಲ್ಲವೆಂದೂ ‘ವಿಶ್ವಕಪ್’ ಎಂದೂ, ಭಾರತವೆಂಬುದು ಈ ಬಾರಿ ವಿಶ್ವ ಕಪ್ ನಡೆಯುವ ಒಂದು ಕ್ಷೇತ್ರವೆಂದೂ ಅದಕ್ಕೆ ಗಡಿರೇಖೆಗಳ ನಿರ್ಬಂಧವಿಲ್ಲವೆಂದೂ ನಮ್ಮ ಜನರಿಗೆ ಹೋಗಲಿ, ಸರಕಾರಕ್ಕೂ ಗೊತ್ತಿದ್ದಂತಿಲ್ಲ. ಜನರ ಒಲವನ್ನು ಗಳಿಸುವ ಹುಚ್ಚು ಓಟದಲ್ಲಿ ಕ್ರಿಕೆಟ್ ಅಭಿಮಾನಿಗಳ ಅದೃಷ್ಟಕ್ಕೆ ಪಾಕಿಸ್ತಾನ ಭಾಗವಹಿಸಬಾರದೆಂಬ ನಿರ್ಬಂಧವನ್ನು ಭಾರತ ಸರಕಾರ ಹೇರದಿದ್ದದ್ದೇ ಪರಮಪುಣ್ಯ! ಹೀಗೆ ಮಾಡಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ. ನಮ್ಮ ಕುಸ್ತಿ ಫೆಡರೇಷನ್ ಅಧ್ಯಕ್ಷರಿಂದ ಮಹಿಳಾ ಕುಸ್ತಿಪಟುಗಳಿಗಾದ ಹಿಂಸೆಗೆ ಸರಕಾರ ಏನೂ ಕ್ರಮವನ್ನು ಕೈಗೊಳ್ಳದೆ ತನ್ನ ಹೊಣೆಯನ್ನು ‘ಅಕ್ರಮ’ದ ಹಂತಕ್ಕೆ ತಲುಪಿಸಿತು. ಸಂಸದರಾಗಿ ಆಳುವ ಪಕ್ಷದ ಪ್ರಭಾವಿ ರಾಜಕೀಯ ಕುಸ್ತಿಪಟುವಾದ ಭಾರತದ ಫುಟ್‌ಬಾಲ್ ಫೆಡರೇಷನ್‌ನ ಅಧ್ಯಕ್ಷರು ಪದತ್ಯಾಗ ಮಾಡದೆ ಅಧಿಕಾರಕ್ಕೆ ಅಂಟಿ ಕುಳಿತರು. ಅವರು ಪ್ರಬಲರಾಗಿರುವುದರಿಂದ ಅವರ ಭೂಕೈಲಾಸದ ಕುರ್ಚಿಯಿಂದ ಕದಲಿಸಲು ಸಾಧ್ಯವಾಗದೆ ಸರಕಾರ ಮೌನ ತಾಳಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜಾಗತಿಕ ಕುಸ್ತಿ ಸಂಸ್ಥೆಯು ಭಾರತವನ್ನು ಅಮಾನತುಗೊಳಿಸಿತು. ಆದರೆ ಕ್ರಿಕೆಟ್ ಹಾಗಲ್ಲ. ವಿಶ್ವದ ಕ್ರಿಕೆಟ್ ದಿಕ್ಪಾಲಕರಲ್ಲಿ ಭಾರತ ಕುಬೇರ. ಒಟ್ಟು ಸಂಪತ್ತಿನ ಸುಮಾರು ಶೇ. 85 ಹಣ ಭಾರತವೊಂದರಿಂದಲೇ ಹರಿದು ಬರುತ್ತಿದೆಯಂತೆ! (ನಮ್ಮ ಜನಗಳ ದಡ್ಡತನದ ಸಾಮರ್ಥ್ಯ ಇದು!) ಆದ್ದರಿಂದ ಭಾರತ ಕ್ರಿಕೆಟ್ ಮಂಡಳಿಯ ಮಾತನ್ನು ‘ಅಂತರ್‌ರಾಷ್ಟ್ರೀಯ’(ಇದು ಜಾಗತಿಕ ಅಲ್ಲ!) ಕ್ರಿಕೆಟ್ ಮಂಡಳಿ ಚಾಚೂ ತಪ್ಪದೆ ಪಾಲಿಸಬೇಕಾದ ದುಸ್ಥಿತಿಯಲ್ಲಿದೆ. ಆದ್ದರಿಂದ ಕ್ರಿಕೆಟ್‌ನಲ್ಲಿ ಪಾಕಿಸ್ತಾನವು ಇದೆಯೆಂಬುದೇ ಅದರ ವೈರಿಗಳಿಗೂ ಸಂತೋಷ ತರಬೇಕಾದ ವಿಚಾರ. ಭಾರತದಲ್ಲಿ ಕ್ರಿಕೆಟ್ ಮಂಡಳಿಯೆಂಬುದು ಈಗ ರಾಜಕಾರಣಿಗಳ ಚಾವಡಿ. (ನಮ್ಮ ಗೃಹಮಂತ್ರಿಗಳ ಮಗನೇ ಅದಕ್ಕೆ ಸೂತ್ರಧಾರ. ರಾಜಕೀಯಕ್ಕಿಂತ ದೊಡ್ಡ ಕ್ರೀಡೆಯಿಲ್ಲವಾದರೂ ಅವರೂ ಕ್ರಿಕೆಟ್ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆಂದೂ, ಅಲ್ಪಸ್ವಲ್ಪ ಕ್ರಿಕೆಟ್ ಕಲಿಯುತ್ತಿದ್ದಾರೆಂದೂ ನಮ್ಮ ಕ್ರಿಕೆಟ್ ಆಟಗಾರರಿಗೆ ಕ್ರಿಕೆಟಿನ ಒಳಸುಳಿಗಳನ್ನು ಕಲಿಸುತ್ತಿದ್ದಾರೆಂದೂ ಮಾಹಿತಿಯಿದೆ!) ಇವೆಲ್ಲದರ ನಡುವೆಯೂ ವಿಶ್ವಕಪ್ ಇಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ.
ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಯಾವ ತಂಡವೂ ಇಲ್ಲಿನ ಪಂದ್ಯಗಳ ಅನುಸೂಚಿಯ ಕುರಿತು ಗುಮಾನಿಯನ್ನೆತ್ತಿಲ್ಲ. ಕೆಲವು ಪಿಚ್‌ಗಳ ಬಗ್ಗೆ ಅನುಮಾನಗಳು ಎದ್ದವಾದರೂ ಅವನ್ನು ಅಲ್ಲೇ ಸುಮ್ಮನಾಗಿಸಲಾಯಿತು. ಭಾರತವು ತನಗೆ ಬೇಕಾದಂತೆ ಪಂದ್ಯಗಳನ್ನು ಜೋಡಿಸಿತೇ ಎಂಬ ಸಂಶಯವೂ ಇದೆ. ಪ್ರಬಲ ಸ್ಪರ್ಧಿಗಳ ವಿರುದ್ಧ ಚೆನ್ನೈನಂತಹ ಸ್ಪಿನ್‌ಪಿಚ್‌ಗಳನ್ನೇ ಆರಿಸಿತೇಕೆ ಎಂಬ ಪ್ರಶ್ನೆಗಳೂ ಎದ್ದಿವೆ. ಇವೆಲ್ಲ ಗಾತ್ರದಲ್ಲಿ ಪುಟ್ಟದಾಗಿರುವ ಇಂಗ್ಲೆಂಡ್, ನ್ಯೂಝಿಲ್ಯಾಂಡ್, ವಿಂಡೀಸ್ ಅಥವಾ ಅಲಿಪ್ತ ಕ್ರೀಡಾಂಗಣಗಳಿರುವ ಯುಎಇ ಮುಂತಾದ ರಾಷ್ಟ್ರಗಳಲ್ಲಿರುವುದಿಲ್ಲ. ಅಲ್ಲಿ ಎಲ್ಲರೂ ಒಂದೇ ರೀತಿಯ ಅವಕಾಶಗಳನ್ನೆದುರಿಸುತ್ತಾರೆ.
ಈಗಿನ್ನೂ ಪಂದ್ಯಗಳು ಮಧ್ಯಂತರವನ್ನು ದಾಟಿ ಮುಂದುವರಿಯುತ್ತಿರುವಾಗ ಚಿತ್ರ ಗಂಭೀರವಾಗುತ್ತಿದೆ. ಮಾಧ್ಯಮದವರಿಗೆ ‘ಹಣಾಹಣಿ’, ‘ರಣರಂಗ’, ‘ಸೆಣಸಾಟ’ ಮುಂತಾದ ಪದಗಳನ್ನು ಬಳಸಿ ಕ್ರಿಕೆಟನ್ನು ಮಣ್ಣುಪಾಲಾಗಿಸಲು ಸದವಕಾಶ. ಕ್ರಿಕೆಟಿನ ಓಘವನ್ನು ಗಮನಿಸಿದರೆ ಸಾಕು. ಭಾರತ ಅಜೇಯವಾಗಿ ಉಳಿದಿದೆ. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಇನ್ನೂ 3 ಪಂದ್ಯಗಳಿವೆ. ಭಾರತ, ದ.ಆಫ್ರಿಕಾ, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಅನುಕ್ರಮವಾಗಿ ಮೊದಲ 4 ಸ್ಥಾನದಲ್ಲಿದ್ದರೆ, ಪಾಕಿಸ್ತಾನ, ಅಫ್ಘಾನಿಸ್ಥಾನ, ಶ್ರೀಲಂಕಾ ಮತ್ತು ನೆದರ್‌ಲ್ಯಾಂಡ್ಸ್ ತಲಾ 4 ಅಂಕಗಳೊಂದಿಗೆ ಆನಂತರದ ಸ್ಥಾನಗಳಲ್ಲಿವೆ. ಭಾರತವನ್ನೊಂದನ್ನು ಹೊರತುಪಡಿಸಿ ಈ ಸ್ಥಾನಗಳು ಪರಸ್ಪರ ಪಲ್ಲಟಗೊಳ್ಳುವ ಅವಕಾಶಗಳು ಬೇಕಷ್ಟಿವೆ. ಹಾಗಾಗಿ ಕೊನೆಯ 2 ಸ್ಥಾನದಲ್ಲಿರುವ ಬಾಂಗ್ಲಾದೇಶ ಮತ್ತು ಇಂಗ್ಲೆಂಡನ್ನು ಹೊರತುಪಡಿಸಿ ಉಳಿದೆಲ್ಲ ತಂಡಗಳು ಉಪಾಂತ್ಯವನ್ನು ತಲುಪುವ ಸಾಧ್ಯತೆಯಿದೆ. ಈ ಬಾರಿ ವಿಶ್ವಕಪ್‌ನಲ್ಲಿ ವಿಂಡೀಸ್ ತಂಡವು ಇಲ್ಲವೆಂಬ ಬೇಸರ ನನಗಂತೂ ಇದೆ.
ದೇಶಪ್ರೇಮವಿರಬೇಕು. ಕ್ರೀಡೆಯಲ್ಲಿ ಅದು ಬೇರಿನಂತೆ ನೆಲದೊಳಗಿರಬೇಕು. ಪ್ರತ್ಯಕ್ಷವಾದರೆ ನಿಷ್ಪಕ್ಷಪಾತವಾಗಿರಬೇಕು. ಪಾಕಿಸ್ತಾನ ಬೇರೊಂದು ರಾಷ್ಟ್ರದೊಂದಿಗೆ ಆಡುವಾಗ ಉದ್ದೇಶಪೂರ್ವಕವಾಗಿ ಆ ಇನ್ನೊಂದು ತಂಡವನ್ನು (ನೀವದರ ಅಭಿಮಾನಿಯಲ್ಲದೆ ಹೋದರೂ) ಬೆಂಬಲಿಸುವುದು, ಹುರಿದುಂಬಿಸುವುದು ಕ್ರೀಡಾಭಿಮಾನವಾಗಲಾರದು. ಒಳ್ಳೆಯ ಕ್ರಿಕೆಟಿಗನನ್ನು ನಮ್ಮ ಎದುರಾಳಿಯೆಂಬ ಕಾರಣಕ್ಕೆ ಹಳಿಯುವುದು ಕ್ರಿಕೆಟ್ ಅಪೇಕ್ಷಿಸುವ ಸಜ್ಜನಿಕೆಗೆ, ಸಭ್ಯತೆಗೆ ಮಾಡುವ ಅಪಚಾರ. ಭಾರತದ ಕ್ರಿಕೆಟಿಗರು ಇದನ್ನು ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಪ್ರೇಕ್ಷಕರು ಮತ್ತು ಕೆಲವು ವೀಕ್ಷಕ ವಿವರಣೆಗಾರರು ಒಮ್ಮೊಮ್ಮೆ ಅಪಾರ ಮತ್ತು ಅನುಚಿತ ದೇಶಪ್ರೇಮವನ್ನು ವ್ಯಕ್ತಪಡಿಸುವುದಿದೆ. ಎದುರಾಳಿ ಬೇರೆ; ವೈರಿ ಬೇರೆ. ಭೂಮಿಗೆ ನಾವು ಸೃಷ್ಟಿಸಿದ ಕೃತಕ ಗಡಿಗಳು ಕ್ರೀಡೆಯನ್ನೊಡೆಯಬಾರದು. ಅದೇ ಕ್ರೀಡೆಗೆ ನೀಡುವ ಮನ್ನಣೆ. ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಭಾರತ ಗೆಲ್ಲಲಿ ಎಂದು ಹಾರೈಸೋಣ. ಭಾರತವನ್ನು ಬೆಂಬಲಿಸೋಣ. ಆದರೆ ಈ ಹಾರೈಕೆಗೆ, ಬೆಂಬಲಕ್ಕಷ್ಟೇ ನಮ್ಮ ದೇಶಾಭಿಮಾನ ಸೀಮಿತವಾಗಬೇಕು. ಎಷ್ಟಾದರೂ ಇದು ಸೀಮಿತ ಓವರ್‌ಗಳ ಕ್ರಿಕೆಟ್!