ವೈಚಾರಿಕ ಸ್ಪಷ್ಟತೆಯ ‘ಸಿದ್ಧಮಾದರಿಗಳಾಚೆ’

Update: 2024-02-29 06:35 GMT

ಹೊಸದಾಗಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವುದಕ್ಕೆ ಬಹಳ ಧೈರ್ಯಬೇಕು. ಗಿರಿಜಾ ಶಾಸ್ತ್ರಿಯವರು ಮುಂಬೈಯಲ್ಲಿದ್ದರೂ ಕನ್ನಡದ ಬಗ್ಗೆ ಅವರಿಗಿರುವ ಅಭಿಮಾನಕ್ಕೆ ಹಾಗೂ ಕನ್ನಡ ಸಾಹಿತ್ಯವೆಂಬ ಸಾಗರಕ್ಕೆ ತಮ್ಮ ಬೊಗಸೆಯಿಂದಲೂ ಕೆಲ ಹನಿಗಳನ್ನು ಇದಕ್ಕೆ ಸುರಿದಿದ್ದಾರೆ. ಇತ್ತೀಚಿನ ಅವರ ‘ಸಿದ್ಧಮಾದರಿಗಳಾಚೆಗೆ’ ಎಂಬ ಕೃತಿಯಲ್ಲೂ ಅವರು ವೈಚಾರಿಕ ಸ್ಪಷ್ಟತೆಯಿಂದ ಕೂಡಿದ ಮತ್ತು ಕನ್ನಡದ ಸಾಹಿತ್ಯಕ್ಕೆ ತಮ್ಮದೇ ಆದ ಭಿನ್ನಲೋಕವೊಂದನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಇಂದು ಸಾಹಿತ್ಯವೆಂಬುದು ಮನರಂಜನೆಯ ಸರಕಾಗುವ ಅಪಾಯ ನಮ್ಮ ಕಣ್ಣೆದುರಿಗಿರುವಾಗ ಸತ್ಯ ಹೇಳುವುದಕ್ಕೆ ಬಹಳ ಧೈರ್ಯ ಬೇಕು. ಆ ಧೈರ್ಯವನ್ನು ಗಿರಿಜಾರವರು ತೋರಿದ್ದಾರೆ. ಸಾಹಿತ್ಯವೆಂಬುದು ಕೇವಲ ಆ ಕ್ಷಣದ ಮಾತಿನ ಸರಕಾಗುವಂತಹ ಸನ್ನಿವೇಶದಲ್ಲಿ ಸಾಹಿತ್ಯ ಜವಾಬ್ದಾರಿಯನ್ನು ಲೇಖಕಿ ಬಹಳ ನಿಷ್ಠೆಯಿಂದ ನಿಭಾಯಿಸಿದ್ದಾರೆೆ. ಲೇಖಕಿ ಪುಸ್ತಕದ ಮುಖಪುಟದಲ್ಲಿಯೇ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಲೇಖಕಿಯೇ ಹೇಳುವಂತೆ ಅಪ್ಪಟ ಸಾಮಾಜಿಕ ಪ್ರಜ್ಞೆಯಿಂದಲೇ ಬರೆದ ಬರಹಗಳಿವು. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಇಂತಹ ಚಿಂತನೆಗಳಿಗೆ ತಮ್ಮದೇ ಆದ ಮಹತ್ವವಿದೆ. ಅವು ಇಂದು ನಾನಾ ಕಾರಣಕ್ಕೆ ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ಅವುಗಳನ್ನು ಸರಿಪಡಿಸಿಯೇನೆಂಬ ದಾರ್ಷ್ಟ್ಯವಿಲ್ಲ. ಹೋರಾಟದ ಸಾಗರಕ್ಕೆ ನನ್ನದೊಂದು ಹನಿಯಷ್ಟೇ ಎಂದು ಹೇಳುವಲ್ಲಿ ಅವರ ಪ್ರಾಮಾಣಿಕತೆ ಎದ್ದುಕಾಣುತ್ತದೆ. ಇವತ್ತು ಬಂಡಾಯ ಹೂಡುವುದು, ಹೋರಾಟ ಮಾಡುವುದು, ನ್ಯಾಯ ಕೇಳುವುದು ಅಪರಾಧವಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ದಮನದೆದುರು ತಲೆಯೆತ್ತಿ ನಿಲ್ಲುವುದು ಬಹಳ ಕಷ್ಟದ ಕೆಲಸ. ಸತ್ಯ ಹೇಳುವವರನ್ನು, ಪ್ರಭುತ್ವದ ನಡೆಯನ್ನು ಟೀಕಿಸುವವರನ್ನು ಜೈಲಿಗಟ್ಟುತ್ತಿರುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಸತ್ಯ ನುಡಿಯುವುದಕ್ಕೂ ಎಂಟೆದೆಯ ಛಾತಿ ಬೇಕು. ಈ ಧೈರ್ಯವನ್ನು ಗಿರಿಜಾ ಶಾಸ್ತ್ರಿಯವರು ತೋರಿದ್ದಾರೆ.

ಈ ಕೃತಿಯಲ್ಲಿಯ ಬರಹಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. 1) ಶಕ್ತಿಸ್ವರೂಪ 2) ಕೃತಿ ಪರಿಚಯ 3) ಬೇರುಂಟೆ ಜಗದೊಳಗೆ ಎಂಬ ಮೂರು ವಿಭಾಗಗಳಲ್ಲಿ ಗಿರಿಜಾರವರು ತಮ್ಮ ಲೇಖನಗಳನ್ನು ವಿಂಗಡಿಸಿದ್ದಾರೆ. ಮೊದಲ ಭಾಗದಲ್ಲಿ ಸಿ.ಪಾರ್ವತಮ್ಮ, ಬೆಟ್ಟಿ ಫ್ರೀಡಾ, ಫ್ಲೇವಿಯಾ ಅಗ್ನೆಸ್, ಸಿಂಧುತಾಯಿ, ಮೇರಿಕೋಮ್, ಮಸಣದಲ್ಲಿ ಹೊಂಡ ತೋಡುವ ನೀಲಮ್ಮ, ಮೇರಿ ಲೋಬೋ, ರಿಝ್ವಾನಾ ಬಾನು, ಪ್ರಗತಿಪರ ಚಿಂತಕ ನರೇಂದ್ರ ದಾಭೋಲ್ಕರ್, ಸುರೇಂದ್ರ ಕೌಲಗಿ, ಆಮ್ಟೆ ದಂಪತಿ ಮತ್ತು ಭಿಕ್ಷುಕರ ದೇವರು ಮತ್ತು ಡಾಕ್ಟರುಗಳಾದ ಡಾ.ಅಭಿಜಿತ್, ಮನೀಷಾ ಸೋನಾವಣೆ ಎಂಬ ಇಬ್ಬರು ವೈದ್ಯರನ್ನು ‘ಡಾಕ್ಟರ್ಸ್‌ ಫಾರ್ ಬೆಗ್ಗರ್ಸ್‌’ ಎಂದು ಗುರುತಿಸಲಾಗುವ ವೈದ್ಯರ ಕುರಿತ ಬರಹಗಳಿವೆ. ಎರಡನೇ ಭಾಗದಲ್ಲಿ ಭಗವತಿಯ ಸ್ವಗತ, ಹೆಣ್ಣಿನ ನಿರ್ವಾಣ, ಪರ್ದಾ ಮತ್ತು ಪಾಲಿಗಮಿ, ಎದೆಗೆ ಬಿದ್ದ ಅಕ್ಷರ, ಗೊಂದಲಿಗ್ಯಾ ಕೃತಿ, ಹೆಣ್ಣಿನ ಯೋನಿಛೇದದ ಕುರಿತ ಕಾದಂಬರಿ ‘ಸಫಾ’ ಕುರಿತ ವಿಶ್ಲೇಷಣೆಯಿದೆ.

ಈ ಕೃತಿಯ ಮೂರನೇ ಭಾಗ ನನಗೆ ಬಹಳ ಮಹತ್ವದ್ದು ಎನಿಸಿತು. ಮೈಸೂರಿನ ಬಡೇಮಿಯಾ, ಸಾಧು ಕರೀಮುದ್ದೀನ, ಎ.ವಿ. ಸೂರ್ಯನಾರಾಯಣಸ್ವಾಮಿ, ಕನ್ನಡಪ್ರೇಮಿ ಸೈಯದ್ ಇಸಾಕ್, ನಿಸಾರ್ ಅಹಮದ್, ರಿಹಾನಾ ಮುಹಮ್ಮದ್, ಮುಸ್ಲಿಮ್ ಯುವಜನರ ಸಮಸ್ಯೆ, ಸವಾಲುಗಳು ಮತ್ತು ಪರ್ಯಾಯಗಳು ಇತ್ಯಾದಿ. ನಮ್ಮ ಸಮಾಜದಲ್ಲಿ ಮುಸ್ಲಿಮರನ್ನು ಇನ್ನಿಲ್ಲದಂತೆ ಅಪಮಾನಿಸುವ, ಸಂಶಯದಿಂದ ಕಾಣುವ ಅವರ ಬದುಕಿನ ಆಧಾರಗಳನ್ನು ಕಸಿಯುತ್ತ ಬರೀ ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುತ್ತಿರುವವರ ನಡುವೆ ಹೆದರಬೇಡ ನಾನಿರುವೆ ಎನ್ನುವ ಕತ್ತಲೆಯ ನಡುವಿನ ಬೆಳಕಿನ ಕಿರಣಗಳು ನಮಗಿಂದು ಬಹಳ ಅವಶ್ಯವಾಗಿಬೇಕಾಗಿವೆ. ಅಂತಹ ಭರವಸೆಯ ಕಿರಣವಾಗಿವೆ ಗಿರಿಜಾ ಶಾಸ್ತ್ರಿಯವರ ಬರಹಗಳು.

ಲೇಖಕಿ ಇಲ್ಲಿ ಸಮಾಜದ ಪರಂಪರಾಗತ ರೂಢಿಗತ ಮೌಲ್ಯಗಳನ್ನು ಧಿಕ್ಕರಿಸುತ್ತಾ, ಸಿದ್ಧ ಮಾದರಿಗಳನ್ನು ಪ್ರಶ್ನಿಸುತ್ತಾ, ಅಮಾನವೀಯ ನಡೆಗಳನ್ನು ಖಂಡಿಸುತ್ತಾ, ಇತ್ತೀಚೆಗೆ ಅತಿಯಾಯಿತು ಎನಿಸುವಂತಿರುವ ಮೂಲಭೂತವಾದವನ್ನು ಅಲ್ಲಗಳೆಯುತ್ತ ತಮ್ಮ ಗೃಹಿಕೆಯ ಲೋಕವನ್ನು ವಿಸ್ತರಿಸಿಕೊಂಡಿದ್ದಾರೆ. ಮಹಿಳಾಪರ, ದಲಿತಪರ, ದಮನಿತ ಲೋಕದ ಪರ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವಂತಹ ಸೌಹಾರ್ದದ ನೆಲೆಗಳನ್ನು ಬಹಳಷ್ಟು ಸ್ಪಷ್ಟವಾಗಿ, ನಿಖರವಾಗಿ ಮತ್ತು ಅಪ್ಪಟ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆಯಿಂದ ಕೂಡಿದ ‘ಸಿದ್ಧ ಮಾದರಿಗಳಾಚೆಗೆ’ ಓದಿದ ನಂತರ ನನಗ ಥಟ್ಟನೆ ಮೈಸೂರಿನವರಾದ ವಿಜಯಾ ದಬ್ಬೆಯವರ ನೆನಪಾಯಿತು. ಅವರೂ ಗಿರಿಜಕ್ಕನವರಂತೆಯೇ ಇಂದಿನ ಕಾಲಘಟ್ಟಕ್ಕಿಂತಲೂ ಕಾಲು ಶತಮಾನ ಮುಂದೆ ಹೋಗಿಯೇ ಮಾತಾಡುತ್ತಿದ್ದರು. ಮಹಿಳಾ ಬರಹಕ್ಕೊಂದು ಚರಿತ್ರೆ ಕಟ್ಟಲು ಹೆಣಗಿದವರು ವಿಜಯಾ ದಬ್ಬೆಯವರು. ಆನಂತರದಲ್ಲಿ ಎಚ್.ಎಸ್.ಶ್ರೀಮತಿಯವರು ತಮ್ಮ ನೇತೃತ್ವದಲ್ಲಿ ಮಹಿಳಾ ಸಾಹಿತ್ಯ ಚರಿತ್ರೆಯನ್ನು ರಚಿಸುವಂತಹ ಮಹತ್ವದ ಕೆಲಸವನ್ನು ಮಾಡಿದರು.

ಈ ಮೊದಲು ಮಹಿಳಾ ಸಾಹಿತ್ಯವೆಂದರೆ ಅಡುಗೆಮನೆ ಸಾಹಿತ್ಯವೆಂದು ಪುರುಷ ಲೋಕ ಜರಿಯುತ್ತಿತು. ಕನ್ನಡ ಸಾಹಿತ್ಯ ವಿಮರ್ಶಕರೂ ಮಹಿಳಾ ಬರಹವನ್ನು ಪ್ರೋತ್ಸಾಹಿಸದೆ, ಅವರ ಕೃತಿಗಳನ್ನು ವಿಮರ್ಶೆಗಾಗಿ ಕೈಗೆತ್ತಿಕೊಳ್ಳದೆ ಮೂಲೆಗುಂಪು ಮಾಡಿದರು. ದಲಿತ, ಬಂಡಾಯ ಚಳವಳಿಗಳ ಮೂಲಕ ಬಂದಂತಹ ಬರಹಗಾರರು ನಮ್ಮ ಪರಂಪರಾಗತ ನೆಲೆಯನ್ನು ಬಿಟ್ಟು ಭಿನ್ನ ನೆಲೆಯಿಂದ ಚಿಂತಿಸತೊಡಗಿದರು. ಬರಹಗಳನ್ನು ರಚಿಸತೊಡಗಿದರು. ಆನಂತರದಲ್ಲಿ ಮಹಿಳಾ ಬರಹವೂ ಕೂಡ ಸೊಂಪಾಗಿ ಬೆಳೆಯತೊಡಗಿತ್ತು. ಇಂದು ಮಹಿಳೆಯರಿಗೆ ದೊರೆಯುತ್ತಿರುವ ಉನ್ನತ ಶಿಕ್ಷಣ, ಉನ್ನತ ಹುದ್ದೆಗಳ ಪರಿಣಾಮ ಅವರ ಅನುಭವ ಕ್ಷೇತ್ರವೂ ವಿಸ್ತೃತಗೊಳ್ಳುತ್ತಿದೆ. ಬರಹದ ಕ್ಷೇತ್ರವೂ ವಿಸ್ತಾರವಾದ ಅನುಭವ ದ್ರವ್ಯಗಳನ್ನು ಅಂತರ್ಗತ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಪುರುಷಾನುಭವಗಳಿಗೆ ವಿರುದ್ಧವಾದ ಸ್ತ್ರೀಯಾತ್ಮಕ ಸೂಕ್ಷ್ಮಾತಿಸೂಕ್ಷ್ಮವಾದ ಒಳಪದರುಗಳನ್ನು ಅವರು ಬಿಚ್ಚಿ ಹೇಳುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸುತ್ತಲೇ ಈ ನೆಲದಲ್ಲಿ ಮಹಿಳಾ ಸಾಹಿತ್ಯ ಚರಿತ್ರೆ, ಮಹಿಳಾ ಹೋರಾಟಗಳು, ಮಹಿಳಾ ಅಧ್ಯಯನಗಳು ಪ್ರಬುದ್ಧ ಮಹಿಳಾ ಬರಹಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿವೆ. ಇಲ್ಲಿಯ ಲೇಖಕಿಗೂ ಸಾಮಾಜಿಕ ಕಾರ್ಯಕರ್ತೆಯಾಗಬೇಕೆಂಬ ಮಹದಾಸೆ ಇತ್ತು. ಆದರೆ ಅದಕ್ಕೆ ಬೇಕಾದ ಧೈರ್ಯ ಸಾಲದು ಎಂಬ ಹಿಂಜರಿಕೆಯಿಂದಾಗಿ ಬರಹದ ಮೂಲಕ ಆ ಕೊರತೆಯನ್ನು ನೀಗಿಸುತ್ತಿರುವುದಾಗಿ ಹೇಳುವುದರಲ್ಲಿ ಅವರ ಪ್ರಾಮಾಣಿಕತೆ ಇದೆ.

ಅನೇಕ ಸಲ ಸಾಹಿತ್ಯ ಕುರಿತ ಮಾತುಗಳೂ ರಾಜಕೀಯ ವಿದ್ಯಮಾನಗಳ ಮಾತುಗಳೂ ಆಗಿರುತ್ತವೆ. ಲಜ್ಜೆಗೆಟ್ಟ ವ್ಯವಸ್ಥೆಯಲ್ಲಿ ಎಲ್ಲವೂ ಮಾರಾಟದ ಸರಕಾಗುತ್ತದೆ. ಅದು ತನ್ನ ಲಾಭಕೋರತನವನ್ನೇ ಗುರಿಯಾಗಿರಿಸಿಕೊಂಡಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಸರಕಾರಗಳು, ಅವರನ್ನು ಆಯ್ಕೆ ಮಾಡಿ ಕಳಿಸುವ ಜನರನ್ನು ವಿಸ್ಮತಿಗೆ ತಳ್ಳುತ್ತವೆ. ರಾಜಕಾರಣವು ಧರ್ಮನಿಯಂತ್ರಿತ ಆಗುತ್ತಿರುವುದರಿಂದ ಮಠಮಾನ್ಯಗಳ ಅನಗತ್ಯ ಪ್ರವೇಶದಿಂದಾಗಿ ಪ್ರಜಾಪ್ರಭುತ್ವದ ಕಲ್ಪನೆಯೇ ಅಪಹಾಸ್ಯಕ್ಕೀಡಾಗುತ್ತಿದೆ. ಮಾಧ್ಯಮಗಳು ತಮ್ಮ ಜನಪ್ರಿಯತೆಗಾಗಿ ಮಾತಿನ ಘನತೆಯನ್ನೇ ಗಾಳಿಗೆ ತೂರುತ್ತಿವೆ. ಇಂತಹ ಸಂದರ್ಭದಲ್ಲಿ ನಿಜವನ್ನು ನುಡಿಯುವುದೇ ಅಪರಾಧವಾಗಿದೆ. ಜಾತಿ, ಧರ್ಮಗಳು ದ್ವೇಷದ ದ್ವೀಪಗಳಾಗುತ್ತಿವೆ. ಜಾತಿ, ಮತ, ಧರ್ಮಗಳು ದುಷ್ಟ ಶಕ್ತಿಗಳ ಕೈವಶವಾಗಿ, ಮುಗ್ಧ ಜನರನ್ನು ದಾಳವಾಗಿಸಿ, ಬಳಸಿಕೊಳ್ಳುತ್ತಿವೆ. ಧರ್ಮದ ಹಾದಿ ತಪ್ಪಿಸುವ ಕೆಲಸಗಳು ಅವ್ಯಾಹತವಾಗಿ ನಡೆಯುತ್ತಿವೆ. ನಮಗಿಂದು ಜಾತಿಯೊಳಗಿದ್ದೂ ಜಾತಿ ಮೀರುವ, ಧರ್ಮದೊಳಗಿದ್ದೂ ಧರ್ಮ ಮೀರುವ ಮತ್ತು ಪಕ್ಷದೊಳಗಿದ್ದೂ ಪಕ್ಷಮೀರಿದ ರಾಜಕೀಯ ನಾಯಕತ್ವ ಬೇಕಾಗಿದೆ. ನಾವಿಂದು ಪಕ್ಷಾತೀತ, ಧರ್ಮಾತೀತ ನಾಯಕತ್ವದ ಹುಡುಕಾಟದಲ್ಲಿದ್ದೇವೆ.

ಮತ್ತೆ ಮತ್ತೆ ಸಾಹಿತ್ಯವು ಚಳವಳಿಗಳಿಂದ ಪಡೆದುಕೊಳ್ಳುತ್ತಿದ್ದ ಅಂತಃಶಕ್ತಿಯಿಂದು ಗೊಂದಲಕ್ಕೀಡಾಗಿದೆ. ಕನ್ನಡದ ಬರಹ ಲೋಕವು ನವೋದಯ ಕಾಲದಿಂದ ಪಡೆಯುತ್ತ ಬಂದಿದ್ದ ತಾತ್ವಿಕ ಬೆಂಬಲ ಇಂದು ಇಲ್ಲವಾಗುತ್ತಿದೆ. ಇದೇ ಕಾಲದಲ್ಲಿ ಬರಹಕ್ಕೊಂದು ಜವಾಬ್ದಾರಿಯೂ ಬಂದಿತು. ಬರಹಗಾರರು ತಮಗೆ ತೋಚಿದಂತೆ ಬರೆಯಲಾಗದು. ಬರಹಕ್ಕೂ ತನ್ನದೇ ಆದ ಸಾಮಾಜಿಕ ಜವಾಬ್ದಾರಿಗಳಿವೆ ಎಂಬ ಸಿದ್ಧಾಂತಕ್ಕೆ ಒತ್ತು ಬಂದಿತು. ರಶ್ಯನ್ ತತ್ವಶಾಸ್ತ್ರಜ್ಞ ಪ್ಲೇಖ್‌ನೋವ್: ‘‘ಸಾಹಿತಿಯಾದವನು ತನ್ನ ಬರಹಕ್ಕೆ ಸನ್ಮಾನವನ್ನು ಬಯಸುವಂತೆ ಸಮಾಜವು ಸಾಹಿತಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ಬಯಸುತ್ತದೆ’’ ಎನ್ನುತ್ತಾರೆ. ಬರಹಗಾರರಿಗಿರಬೇಕಾದ ಜವಾಬ್ದಾರಿಗೆ ಒಂದು ಮಾದರಿಯಾಗಿರುವ ಬರಹಗಳು ಗಿರಿಜಾರವರ ಈ ಪುಸ್ತಕದಲ್ಲಿವೆ. ಸಮಾಜದ ಸುಡುಸತ್ಯಗಳಿಗೆ ಗಿರಿಜಾರವರ ಬರಹಗಳು ಮುಖಾಮುಖಿಯಾಗಿವೆ.

ಗಿರಿಜಾರವರ ಬರಹಗಳಲ್ಲಿ ಬಹಳ ವಿಸ್ತೃತವಾದ ಓದನ್ನು ಕಾಣಬಹುದಾಗಿದೆ. ಅವರ ಬರಹದಲ್ಲಿ ನಾವು ಒಂದು ಮಹತ್ವದ ತಿರುವನ್ನು ಕಾಣುತ್ತಿದ್ದೇವೆ. ಅದೇನೆಂದರೆ ಒಂದು ಕಡೆ ಸೂಕ್ಷ್ಮವಾದ ಗ್ರಹಿಕೆ, ಪ್ರಖರ ವೈಚಾರಿಕತೆ ಹಾಗೂ ಹದವಾಗಿ ಬೆರೆತ ಭಾವುಕತೆಯ ಕಾರಣ ಬರಹಗಳು ಕರ್ಕಶವಾಗಿ ಅನಿಸುವುದಿಲ್ಲ. ವೈಚಾರಿಕತೆ ಮತ್ತು ಭಾವುಕತೆಗಳ ಬೆರಕೆ ಸೊಪ್ಪನ್ನು ಹದವಾಗಿ ಗಿರಿಜಾರವರು ಬಡಿಸುತ್ತಿರುವುದು ಒಂದು ನೂತನವಾದ ವಿಧಾನವಾಗಿದೆ. ಇವರು ಕೇವಲ ವಿಮರ್ಶಾತ್ಮಕವಾದ ಬರಹಗಳನ್ನು ಮಾತ್ರ ಬರೆಯಲಿಲ್ಲ. ಇವರು ಕವಯಿತ್ರಿಯೂ ಆಗಿರುವುದೊಂದು ವಿಶೇಷತೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಕೆ. ಷರೀಫಾ

contributor

Similar News