ಕರುಳಿನ ಕಥೆ ಹೇಳುವ ಕಲ್ಲಳ್ಳಿ ಕವಿತೆಗಳು
ಬಾ ಇಲ್ಲಿ ಕುಳಿತುಕೋ ಒಂದಿಷ್ಟು ಮಾತಾಗುವಾ
ನಗುವಾಗುವಾ ಮತ್ತೆ ಮಗುವಾಗುವಾ
ನೆಲವಾಗುವ ಹತ್ತಿಯ ಹೂವಾಗುವ
ಕಾಡಾಗುವ ಕೂಡಿ ಕಡಲಾಗುವಾ
ಬೆಳಕಾಗುವಾ ಬೆಂದು ಬಯಲಾಗುವಾ
ವರ್ತಮಾನದ ತಲ್ಲಣಗಳಿಂದ ಬಸವಳಿದ ಜೀವಗಳಿಗೆ, ಜಾಗತೀಕರಣದ ಆರ್ಭಟದಲ್ಲಿ ಸೋತ ಮನಸ್ಸುಗಳಿಗೆ ಬಾ ಇಲ್ಲಿ ಕುಳಿತುಕೋ ಒಂದಿಷ್ಟು ಮಾತಾಗುವಾ ಎನ್ನುವ ಕರುಳಿನ ಮಾತನ್ನು ಅಭಿವ್ಯಕ್ತಿಸುತ್ತಾ, ಮನುಷ್ಯರೆನಿಸಿಕೊಂಡವರು ಮನುಷ್ಯತ್ವದ ಅಂತಃಕರಣದ ಕನ್ನಡಿಯಲ್ಲಿ ಕವಿತೆಯ ಮೂಲಕ ಕರುಳಿನ ಕಥೆ ಕೇಳುವ ಪ್ರಸ್ತುತ ಅಗತ್ಯವನ್ನು ಕಟ್ಟಿಕೊಡುತ್ತದೆ. ವರ್ತಮಾನದ ಕನ್ನಡ ಕಾವ್ಯದ ದಾರಿ ಯಾವುದಾಗಬೇಕು? ಎಂಬ ಅಗತ್ಯವನ್ನು ಕಲ್ಲಳ್ಳಿಯ ನಾರಾಣಪ್ಪ ಅವರ ಕವಿತೆಯ ಸಾಲುಗಳು ಹೂವು ಅರಳಿ ನಮ್ಮನ್ನು ತಾಕುವ ಹಾಗೆ ಮೆಲುದನಿಯಲ್ಲಿ ಹೇಳುತ್ತಿವೆ.
ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ನಾರಾಯಣಪ್ಪ ಅವರು ಸರಕಾರಿ ಪ್ರಾಥಮಿಕ ಶಾಲೆಯ ಮೇಷ್ಟ್ರು ಅದಕ್ಕಿಂತಲೂ ಹೆಚ್ಚಾಗಿ ನೆಲಮೂಲ ಸಂಸ್ಕೃತಿಗೆ ಸದಾ ತನ್ನ ಅಂತಃಕರಣವನ್ನು ತೆರೆದಿಟ್ಟ ಕನ್ನಡದ ಕವಿ. ಕೋಲಾರದ ಟೇಕಲ್ಲಿನ ಬಂಡೆಕಲ್ಲುಗಳ ನೋಡಿ ಅವರ ಮನಸ್ಸು ಜಡ್ಡುಗಟ್ಟಿಲ್ಲ ಬದಲಾಗಿ ಅವರ ಮನಸ್ಸು ಮಾನ್ಸೂನ್ ಋತುಮಾನವನ್ನು ಮಾತನಾಡಿಸುತ್ತದೆ. ‘‘ಕಂಬನಿಯ ಬಗ್ಗೆ ಹೇಳಲು ನನ್ನಲ್ಲಿ ಯಾವ ಪ್ರತಿಮೆಗಳೂ ಉಳಿದಿಲ್ಲ’’ ಎಂದು ಹೇಳುತ್ತಾ ಕವಿಯ ಆಂತರ್ಯವು ತನ್ನ ಎದೆಯದನಿಯನ್ನು ಪ್ರತಿಮಿಸುವಾಗ ಹೊರಗಿನ ಪ್ರತಿಮೆಗಳನ್ನು ಬಳಸುವುದಿಲ್ಲ. ಕಂಬನಿಯನ್ನೇ ಪ್ರತಿಮೆಯಾಗಿಸುವ ಕಸುವನ್ನು ಒಳಗೊಂಡಿದೆ, ಬಂಡೆಗಲ್ಲುಗಳಿಗೆ ಕಡಲಿನ ಕಥೆಯನ್ನು ಹೇಳಿಬಿಡು ಎನ್ನುವ ಮಾತಿನಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಕಡಲಿನ ವಿಶಾಲತೆಯನ್ನು, ಅಗಾಧವಾದರೂ ರಮ್ಯತೆಯನ್ನು ನೀಡುವ ಸರಳತೆಯನ್ನು ಕಲಿಸುವ ಕಡಲು ಇಲ್ಲಿ ಮನುಷ್ಯರಾಗಬೇಕಾದ ನರರಿಗೆ ಮನುಷ್ಯತ್ವದ ಪಾಠವನ್ನು ಕಲಿಸುತ್ತದೆ.
ವರ್ತಮಾನದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕಥೆಗಳಿಗೆ ಸಿಗುವಷ್ಟು ಸ್ಪಂದನೆ ಕಾವ್ಯಕ್ಕೆ ಸಿಗುತ್ತಿಲ್ಲ ಎನ್ನುವ ವಾದವಿದೆ, ಅದು ನಿಜವೂ ಕೂಡ. ಪ್ರಸಕ್ತ ಕನ್ನಡ ಕಾವ್ಯವು ತನ್ನ ವಿಪುಲವಾದ ಬೆಳವಣಿಗೆಯನ್ನು ದಾಖಲಿಸುತ್ತಿರುವುದು ಸುಳ್ಳಲ್ಲ, ಆದರೆ ಪರಿಣಾಮಕಾರಿಯಾದ ಓದಿನ ಅರಹು ಬಲ್ಲವರಿಗೆ, ಬರೆಯುವವರಿಗೆ ಮತ್ತು ಕಾವ್ಯದ ಜಾಡು ಇಂದು ದಕ್ಕದಿರುವುದೂ ಕಾವ್ಯಕ್ಕೆ ಸಲ್ಲಬೇಕಾದ ಗೌರವವನ್ನು ಕಸಿಯುತ್ತಿದೆ. ಒಂದು ಶಾಲು ಮತ್ತು ವೇದಿಕೆಗಳಿಗೆ ಸೀಮಿತವಾಗುತ್ತಿರುವುದು ಕಂಡುಬರುತ್ತಿದೆ, ನಿಚ್ಚಂ ಪೊಸತು ಆಗುವ ಕಾವ್ಯಕ್ಕೆ ಬನಿ ಬೇಕಿರುವುದು ಕವಿಯ ಅನುಭವದಿಂದ. ಅನುಭವ ರಹಿತವಾದ ಕಾವ್ಯ ಯಾವತ್ತೂ ಒಳ್ಳೆಯ ದಾರಿಯನ್ನು ಕಾಣಿಸುವುದಿಲ್ಲ.
ಯಾವುದೇ ಪ್ರಶಸ್ತಿ ಮತ್ತು ಪುರಸ್ಕಾರಗಳ ವಸೂಲಿಬಾಜಿಗೆ ಎಡತಾಕದ ಟೇಕಲ್ಲಿನ ಬಂಡೆಗಳಂತಹ ಕಾಠಿಣ್ಯವನ್ನು ಮತ್ತು ಬಂಡೆಗಳೊಳಗೂ ಜಿನುಗುವಂತಹ ಅಂತರ್ಜಲದಂತಹ ಮಮಕಾರವನ್ನು ಕಲ್ಲಹಳ್ಳಿ ಕವಿತೆಗಳು ಮತ್ತು ಕವಿ ರೂಢಿಸಿಕೊಂಡಿದ್ದಾರೆ. ಆದುದರಿಂದ ದೊಡ್ಡಕಲ್ಲಹಳ್ಳಿ ನಾರಾಯಣಪ್ಪನಂತಹವರ ಕಾವ್ಯವು ಪರಿಣಾಮಕಾರಿಯಾದ ಅನುಭವ ನೀಡುವುದಕ್ಕೆ ಸಾಧ್ಯವಾಗಿದೆ. ಅವರ ಅನುಭವ, ಆ ಅನುಭವ ಕಟ್ಟಿಕೊಡುವ ಕಾವ್ಯದ ಮಾರ್ಗವಿದೆಯಲ್ಲ ಅದು ಈ ವರ್ತಮಾನದ ಬದುಕಿಗೆ ಬೇಕಾದ ಜೀವದ್ರವ್ಯವಾಗಿದೆ. ಕಲ್ಲಳ್ಳಿ ಕವಿತೆಗಳು ಎಲ್ಲಿಯೂ ಆರ್ಭಟಿಸುವುದಿಲ್ಲ, ಪ್ರತಿಕ್ರಿಯಿಸುವುದಿಲ್ಲ ಬದಲಾಗಿ ಬುದ್ಧನ ಧ್ಯಾನದಂತೆ ಸ್ಪಂದಿಸುತ್ತವೆ. ಆನಂದ ಎನ್ನುವ ಕವಿತೆಯಲ್ಲಿ ಕವಿಯು ಬುದ್ಧನ ಶಿಷ್ಯನಾದ ಆನಂದನ ಆತುರತೆ ಮತ್ತು ತಾಳ್ಮೆಯ ಕಲಿಸುವ ಬುದ್ಧನ ಧ್ಯಾನಕ್ಕೆ ತೆರೆದುಕೊಳ್ಳಬೇಕಾದ ಮಾನಸಿಕ ಸಿದ್ಧತೆಯನ್ನು ಕುರಿತು ಹೇಳುತ್ತಾರೆ.
ಇಂದು ಕಾವ್ಯವನ್ನು ಕೇಳಿಸಿಕೊಳ್ಳಿ ಎಂದು ಯಾರಿಗಾದರೂ ಹೇಳಿದರೆ ನಿಮ್ಮ ಕಾವ್ಯ ಅನ್ನ ಕೊಡುವುದಿಲ್ಲ ಎನ್ನುವವರು ಹೆಚ್ಚುಜನರಿದ್ದಾರೆ. ಖಾಲಿ ನೋಟು ಕೊಡುವ ಆನಂದ ಕವಿತೆ ನೀಡುವುದಿಲ್ಲ ಎನ್ನುವುದು ಆಧುನಿಕರ ಮಾತು. ಆದರೆ ಕವಿತೆ ಭಾವಾನ್ನ ಎನ್ನುವ ಹೊಚ್ಚ ಹೊಸತು ಮತ್ತು ಅತಿ ಪುರಾತನವಾದ ಮಾತನ್ನು ಈ ಜಗತ್ತಿಗೆ ಸಾರಿ ಹೇಳಬೇಕಾಗಿದೆ.
ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರ ಮಾನ್ಸೂನ್ ಸಂಕಲನದಲ್ಲಿ ಒಟ್ಟು 45 ಕವಿತೆಗಳಿವೆ. ಈ ಸಂಕಲನವನ್ನು ಅಲಂಪು ಪ್ರಕಾಶನ ಪ್ರಕಟಿಸಿದೆ. ಈ ಸಂಕಲನದ ಎಲ್ಲಾ ಕವಿತೆಗಳು ಅತ್ಯುತ್ತಮ ಎಂದು ಹೇಳುವ ದಾರ್ಷ್ಟ್ಯವನ್ನೂ ನಾನು ತೋರಿಸಲಾರೆ ಮತ್ತು ಹಸಿದವನಿಗೆ, ನೊಂದವನಿಗೆ, ತಲ್ಲಣದಲ್ಲಿ ನಲುಗುವವರಿಗೆ ಈ ಕವಿತೆಗಳು ನೀಡುವ ಭಾವಾನ್ನವನ್ನು ಮತ್ತು ಅದರ ಅಗಾಧವಾದ ತಾಯ್ತನವನ್ನು ಹೇಳುವುದಕ್ಕೆಅಂಜಲಾರೆ. ಪರಿಚಯಿಸುವ ಅಗತ್ಯವಿರದ ಈ ಕವಿತೆಗಳು ಕಲ್ಲಳ್ಳಿ ನಾರಾಯಣಪ್ಪ ಅವರ ಗಝಲ್ ಮತ್ತು ಮುಕ್ತಕಗಳಲ್ಲಿ ಸಾಧಾರಣವಾದ ಸರಳತೆಯ ಪದಗಳಲ್ಲಿ ಮಹತ್ತಾದ್ದನ್ನು ಹೇಳುವ ಕವಿತೆಗಳಾಗಿವೆ.
ನಾರಾಯಣಪ್ಪನವರ ಕಾವ್ಯ ಹತ್ತಿಯ ಹಣ್ಣು ಹಣ್ಣಾಗಿ ಹೂವಾಗುವ ಔದುಂಬರ ಎಂದರೆ ತಪ್ಪಾಗಲಾರದು. ಹದವಾದ ಅನುಭವದಿಂದ ಕರುಳಿನ ಕಥೆಗಳನ್ನು ಕಾವ್ಯಮಾಡುವ ನೆಲಮೂಲದ ಕವಿಯ ಲೇಖನಿಯಿಂದ ಮತ್ತಷ್ಟು ಕವಿತೆ ಮತ್ತು ಕಂಬನಿಗಳ ತೂಕ ತಿಳಿಯುವ ಹಂಬಲದಿಂದ ಕಲ್ಲಳ್ಳಿ ನಾರಾಯಣಪ್ಪನವರ ಮತ್ತಷ್ಟೂ ಹೂವಿನಂತಹ ಕವಿತೆಗಳಿಗಾಗಿ ನಾನೂ ಕಾಯುತ್ತೇನೆ.