ಬಿಜೆಪಿ ರಾಮನ ಪಕ್ಷವಲ್ಲ,‘ಸಡಕ್ ಛಾಪ್ ’ಪಕ್ಷ ಎನ್ನುವುದನ್ನು ಆದಿಪುರುಷ್ ಸಾಬೀತುಗೊಳಿಸಿದೆ: ಆಪ್ ಸಂಸದ
ಹೊಸದಿಲ್ಲಿ: ಪ್ರಭಾಸ ರಾಮನಾಗಿ ಮತ್ತು ಕೃತಿ ಸನೋನ್ ಸೀತೆಯಾಗಿ ನಟಿಸಿರುವ ‘ಆದಿಪುರುಷ ’ ಚಿತ್ರದ ಕುರಿತು ಭಾರೀ ರಾಜಕೀಯ ವಿವಾದದ ನಡುವೆಯೇ ಆಪ್ ಶನಿವಾರ ಬಿಜೆಪಿಯ ಹಲವಾರು ನಾಯಕರು ಈ ಚಿತ್ರವನ್ನು ಹೊಗಳಿರುವುದರಿಂದ ಬಿಜೆಪಿಯು ಅಗ್ಗದ ‘ಸಡಕ್ ಛಾಪ್ ’ ಪಕ್ಷ ಎನ್ನುವುದನ್ನು ಚಿತ್ರವು ಮತ್ತೊಮ್ಮೆ ಸಾಬೀತುಗೊಳಿಸಿದೆ ಎಂದು ಹೇಳಿದೆ.
ಆದಿತ್ಯನಾಥ, ಶಿವರಾಜ್ ಸಿಂಗ್ ಚೌಹಾಣ್, ಏಕನಾಥ ಶಿಂದೆ, ದೇವೇಂದ್ರ ಫಡ್ನವೀಸ್, ಮನೋಹರ ಲಾಲ್ ಖಟ್ಟರ್, ಹಿಮಂತ ಬಿಸ್ವ ಶರ್ಮಾ, ಪುಷ್ಕರ ಸಿಂಗ್ ಧಾಮಿ ಮತ್ತು ನರೋತ್ತಮ ಮಿಶ್ರಾ ಸೇರಿದಂತೆ ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರು ಚಿತ್ರಕ್ಕೆ ಶುಭ ಹಾರೈಸಿರುವುದನ್ನು ಅದು ಬೆಟ್ಟು ಮಾಡಿದೆ.
ಬಿಜೆಪಿ ರಾಮನದಲ್ಲ, ಅದು ಶ್ರೀಸಾಮಾನ್ಯನದ್ದೂ ಅಲ್ಲ,ಅದು ಕೆಲಸಕ್ಕೆ ಬರುವ ಪಕ್ಷವೂ ಅಲ್ಲ. ಅದು ಕೊಳಕು ರಾಜಕೀಯವನ್ನಷ್ಟೇ ಮಾಡುತ್ತದೆ ಎಂದು ಹೇಳಿದ ಆಪ್ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರು, ಚಿತ್ರದಲ್ಲಿಯ ಸಂಭಾಷಣೆಗಳು ತೀರ ಕೀಳುಮಟ್ಟದ್ದಾಗಿವೆ,ಅವಹೇಳನಕಾರಿಯಾಗಿವೆ. ಸಂಭಾಷಣೆಯನ್ನು ಬರೆದಿರುವ ಮನೋಜ್ ಮುಂತಾಶಿರ್ ಅವರು ತನಗೆ ಸೂಚಿಸಿದ್ದನ್ನೇ ಬರೆದಿದ್ದಾರೆ ಎಂದರು.
ಜನರು ಮಾತನಾಡುವ ರೀತಿಯಲ್ಲಿಯೇ ತಾನು ಸರಳ ಸಂಭಾಷಣೆಗಳನ್ನು ಬರೆದಿದ್ದೇನೆ ಎಂಬ ಮುಂತಾಶಿರ್ ಸಮರ್ಥನೆಯ ಕುರಿತಂತೆ ಸಿಂಗ್,ಜನರು ನಿಂದನೆಗಳನ್ನೂ ಮಾಡುತ್ತಾರೆ. ಹೀಗಾಗಿ ದೇವರನ್ನೂ ಈಗ ನಿಂದನೆಗಳನ್ನು ಮಾಡುವಂತೆ ತೋರಿಸಲಾಗುವುದೇ ಎಂದು ಪ್ರಶ್ನಿಸಿದರು.
ಆದಿಪುರುಷ ಚಿತ್ರದ ಸಂಭಾಷಣೆಗಳನ್ನು ಟೀಕಿಸಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು,ಮುಂತಾಶಿರ್ ಮತ್ತು ಚಿತ್ರ ನಿರ್ದೇಶಕ ಓಂ ರಾವುತ್ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಮನರಂಜನೆಯ ಹೆಸರಿನಲ್ಲಿ ನಮ್ಮ ಪೂಜ್ಯ ದೇವರುಗಳ ಬಾಯಿಯಿಂದ ಇಂತಹ ಕೀಳುಮಟ್ಟದ ಭಾಷೆಯನ್ನು ನುಡಿಸಿರುವುದು ಪ್ರತಿಯೊಬ್ಬ ಭಾರತೀಯನ ಸಂವೇದನೆಗೆ ನೋವನ್ನುಂಟು ಮಾಡಿದೆ. ಮರ್ಯಾದಾ ಪುರುಷೋತ್ತಮ ರಾಮನ ಕುರಿತು ನೀವು ಚಿತ್ರವನ್ನು ನಿರ್ಮಿಸುತ್ತೀರಿ ಮತ್ತು ತ್ವರಿತ ಬಾಕ್ಸ್ಆಫೀಸ್ ಯಶಸ್ಸಿಗಾಗಿ ಮರ್ಯಾದಾದ ಎಲ್ಲ ಗಡಿಗಳನ್ನು ಮೀರುವುದು ಸ್ವೀಕಾರಾರ್ಹವಲ್ಲ ’ ಎಂದರು.
ಆದಿಪುರುಷ ಮತ್ತು ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯನ್ನು ಪರಸ್ಪರ ಹೋಲಿಸಿ ಟ್ವೀಟಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಅವರು,ಸಾಗರ್ ಟಪೋರಿ ಭಾಷೆಯನ್ನು ಬಳಸಿ ಕೋಟ್ಯಂತರ ಜನರ ನಂಬಿಕೆಗೆ ನೋವನ್ನುಂಟು ಮಾಡಿರಲಿಲ್ಲ, ಆದರೆ ಸಮಾಜದ ಮನಸ್ಸು ಮತ್ತು ಹೃದಯಗಳಲ್ಲಿ ಸಿಯಾರಾಮನ ಆಹ್ಲಾದಕರ, ಸೌಮ್ಯ ಮತ್ತು ಆಕರ್ಷಕ ಚಿತ್ರವನ್ನು ಅಚ್ಚೊತ್ತಿದ್ದರು ಎಂದಿದ್ದಾರೆ.