ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಾನಕ್ಕೆ ಅಜಿತ್ ಪವಾರ್: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪ್ರತಿಕ್ರಿಯೆ
ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಲ್ಲಿಗೆ ಹೋಗಿಲ್ಲ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆಯ ಬಂಡಾಯ ಶಾಸಕರನ್ನು ಶೀಘ್ರದಲ್ಲೇ ಅನರ್ಹಗೊಳಿಸಲಾಗುವುದು ಹಾಗೂ ಪವಾರ್ ಪಟ್ಟಾಭಿಷೇಕ ಮಾಡಲಾಗುತ್ತದೆ: ಸಾಮ್ನಾ
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎನ್ ಸಿಪಿ ನಾಯಕ ಅಜಿತ್ ಪವಾರ್ ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಇಂದು ಪ್ರತಿಕ್ರಿಯಿಸಿದೆ.
24 ವರ್ಷಗಳ ಹಿಂದೆ ಪಕ್ಷವನ್ನು ಸ್ಥಾಪಿಸಿದ್ದ ಚಿಕ್ಕಪ್ಪ ಶರದ್ ಪವಾರ್ ಗೆ ಶಾಕ್ ನೀಡಿರುವ ಅಜಿತ್ ಪವಾರ್ ಅವರು ರವಿವಾರ ಎನ್ ಸಿಪಿ ವಿಭಜಿಸಿ ಶಿಂಧೆ-ಬಿಜೆಪಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಮೈತ್ರಿ ಸರಕಾರದಲ್ಲಿ ಎಂಟು ಎನ್ ಸಿಪಿ ನಾಯಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರದ ರಾಜಕೀಯವನ್ನು ಮಾತ್ರವಲ್ಲದೆ ದೇಶದ ರಾಜಕೀಯವನ್ನು "ಕೆಸರುಮಯ" ಮಾಡಿದೆ ಎಂದು ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ' ಸಂಪಾದಕೀಯ ಹೇಳಿದೆ.
ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಬರೆದಿದ್ದಾರೆ. ಈ ಬಾರಿ 'ಡೀಲ್' ಬಲವಾಗಿದೆ," ಎಂದು ಅದು ಹೇಳಿದೆ.
"ಪವಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಲ್ಲಿಗೆ ಹೋಗಿಲ್ಲ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆಯ ಬಂಡಾಯ ಶಾಸಕರನ್ನು ಶೀಘ್ರದಲ್ಲೇ ಅನರ್ಹಗೊಳಿಸಲಾಗುವುದು ಹಾಗೂ ಪವಾರ್ ಪಟ್ಟಾಭಿಷೇಕ ಮಾಡಲಾಗುತ್ತದೆ" ಎಂದು ಸಾಮ್ನಾ ಸಂಪಾದಕೀಯ ಹೇಳಿಕೊಂಡಿದೆ.
ಈ ಹೊಸ ಬೆಳವಣಿಗೆ ರಾಜ್ಯದ ಜನತೆಗೆ ಸರಿ ಹೋಗುವುದಿಲ್ಲ. ರಾಜ್ಯವು ಅಂತಹ ಯಾವುದೇ ರಾಜಕೀಯ ಸಂಪ್ರದಾಯವನ್ನು ಹೊಂದಿಲ್ಲ ಹಾಗೂ ಅದನ್ನು ಎಂದಿಗೂ ಜನರು ಬೆಂಬಲಿಸುವುದಿಲ್ಲ ಎಂದು ಸಾಮ್ನಾ ಹೇಳಿದೆ.
ಅಜಿತ್ ಪವಾರ್ ಅವರ ಮುಖ್ಯಮಂತ್ರಿ ಶಿಂಧೆ ಅವರಿಗೆ ನಿಜವಾಗಿಯೂ ಅಪಾಯಕಾರಿ. ಶಿಂಧೆ ಮತ್ತು ಇತರ ಶಾಸಕರು ಶಿವಸೇನೆಯನ್ನು ತೊರೆದಾಗ, ಪಕ್ಷದ ಅಧ್ಯಕ್ಷ ಹಾಗೂ (ಅಂದಿನ) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಿಧಿ ವಿತರಣೆ ಹಾಗೂ ಕೆಲಸದ ಆದೇಶಗಳನ್ನು ಮಂಜೂರು ಮಾಡುವಲ್ಲಿ ಅಪಾರ ಹಿಡಿತವನ್ನು ಹೊಂದಿದ್ದ ಅಂದಿನ ಹಣಕಾಸು ಸಚಿವ ಅಜಿತ್ ಪವಾರ್ ಅವರನ್ನು ಠಾಕ್ರೆ ನಿಯಂತ್ರಿಸಲಿಲ್ಲ ಎಂದು ಆರೋಪಿಸಿದ್ದರು. ನಾವು ಎನ್ ಸಿಪಿಯಿಂದಾಗಿ ಶಿವಸೇನೆಯನ್ನು ತೊರೆದಿದ್ದೇವೆ' ಎಂದು ಬಂಡಾಯ ಶಾಸಕರು ಹೇಳಿದ್ದರು ಎಂದು ಸಂಪಾದಕೀಯದಲ್ಲಿ ಹೇಳಿದೆ.
"ಶಿವಸೇನೆ ಬಂಡಾಯ ಶಾಸಕರು ಈಗ ಏನು ಮಾಡುತ್ತಾರೆ? ರವಿವಾರ ಅಜಿತ್ ಪವಾರ್ ಅವರ ಪ್ರಮಾಣ ವಚನ ಸಮಾರಂಭದ ಸಂದರ್ಭದಲ್ಲಿ ಶಿಂಧೆ ಬಣದ ಸದಸ್ಯರ ಮುಖಭಾವಗಳು ಭವಿಷ್ಯವು ಕತ್ತಲೆಯಾಗಿದೆ ಎಂದು ಸ್ಪಷ್ಟಪಡಿಸಿದೆ" ಎಂದು ಮರಾಠಿ ದಿನಪತ್ರಿಕೆ ಬರದಿದೆ.