ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ಸಾರಥ್ಯ, ಪೃಥ್ವಿ ಶಾ ವಾಪಸ್

Update: 2024-11-17 16:52 GMT

 ಶ್ರೇಯಸ್ ಅಯ್ಯರ್‌ | PC : X 

ಮುಂಬೈ : ಕಳೆದ ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಐಪಿಎಲ್ ಪ್ರಶಸ್ತಿ ಗೆಲ್ಲಲು ನೇತೃತ್ವವಹಿಸಿದ್ದ ಶ್ರೇಯಸ್ ಅಯ್ಯರ್‌ರನ್ನು ನವೆಂಬರ್ 23ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮುಂಬೈ ಕ್ರಿಕೆಟ್ ತಂಡದ ನೂತನ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಮುಂಬೈ ತಂಡವು ತನ್ನ ಲೀಗ್ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಆಡಲಿದೆ. ತನ್ನ ಮೊದಲ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ.

ಈಗ ನಡೆಯುತ್ತಿರುವ ರಣಜಿ ಋತುವಿನಲ್ಲಿ ಮುಂಬೈ ಕ್ರಿಕೆಟ್ ತಂಡದ ನಾಯಕತ್ವವಹಿಸಿರುವ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರು ಅಯ್ಯರ್ ನಾಯಕತ್ವದಲ್ಲಿ ಆಡಲಿದ್ದಾರೆ ಎಂದು ರವಿವಾರ ಮುಂಬೈ ಕ್ರಿಕೆಟ್ ಸಂಸ್ಥೆಯ(ಎಂಸಿಎ)ಹಿರಿಯರ ಅಯ್ಕೆ ಸಮಿತಿಯು ನಿರ್ಧರಿಸಿದೆ.

ಅಯ್ಯರ್ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊದಲ 6 ಸುತ್ತುಗಳ ನಂತರ ಮುಂಬೈ ತಂಡದ ಅಗ್ರ ರನ್ ಸ್ಕೋರರ್ ಆಗಿದ್ದಾರೆ. ಅಯ್ಯರ್ 4 ಪಂದ್ಯಗಳಲ್ಲಿ ಮಹಾರಾಷ್ಟ್ರ ವಿರುದ್ಧ ದ್ವಿಶತಕ(233 ರನ್)ಸಹಿತ ಒಟ್ಟು 452 ರನ್ ಗಳಿಸಿದ್ದಾರೆ.

2022-23ರಲ್ಲಿ ಮುಂಬೈ ತಂಡವು ಮೊದಲ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಲು ತಂಡದ ನಾಯಕತ್ವ ವಹಿಸಿದ್ದ ರಹಾನೆ ಪ್ರಸಕ್ತ ರಣಜಿಯಲ್ಲಿ 5 ಪಂದ್ಯಗಳಲ್ಲಿ 174 ರನ್ ಗಳಿಸಿದ್ದಾರೆ.

ಮತ್ತೊಂದು ಮಹತ್ವದ ಹೆಜ್ಜೆಯೊಂದರಲ್ಲಿ ಆಯ್ಕೆ ಸಮಿತಿಯು 17 ಸದಸ್ಯರ ಮುಂಬೈ ತಂಡದಲ್ಲಿ ಆರಂಭಿಕ ಆಟಗಾರ ಪ್ರಥ್ವಿ ಶಾರನ್ನು ಸೇರಿಸಿಕೊಂಡಿದೆ. ಫಿಟ್ನೆಸ್ ಹಾಗೂ ಅಶಿಸ್ತಿನ ಕಾರಣಕ್ಕೆ ಶಾರನ್ನು ರಣಜಿ ಟ್ರೋಫಿ ಟೂರ್ನಿಯಿಂದ ಕೈಬಿಡಲಾಗಿತ್ತು.

ಗಾಯದ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಿರುವ ಆಲ್‌ ರೌಂಡರ್ ಶಿವಂ ದುಬೆ, 3ನೇ ಕ್ರಮಾಂಕದ ಬ್ಯಾಟರ್ ಮುಶೀರ್ ಖಾನ್ ಹಾಗೂ ವೇಗದ ಬೌಲರ್ ತುಷಾರ್ ದೇಶಪಾಂಡೆ ಜನವರಿ 23ರಿಂದ ಆರಂಭವಾಗಲಿರುವ ಎರಡನೇ ಹಂತದ ರಣಜಿ ಟ್ರೋಫಿ ಟೂರ್ನಿಗೆ ಫಿಟ್ ಆಗುವ ಸಾಧ್ಯತೆಯಿದೆ.

ಮುಂಬೈ ತಂಡ: ಶ್ರೇಯಸ್ ಅಯ್ಯರ್(ನಾಯಕ), ಪೃಥ್ವಿ ಶಾ, ರಘುವಂಶಿ, ಜಯ್ ಬಿಸ್ಟಾ, ಅಜಿಂಕ್ಯ ರಹಾನೆ, ಸಿದ್ದೇಶ್ ಲಾಡ್, ಸೂರ್ಯಾಂಶ್ ಶೆಡ್ಗೆ, ಸಾಯಿರಾಜ್ ಪಾಟೀಲ್, ಹಾರ್ದಿಕ್ ಟಾಮೋರ್(ವಿಕೆಟ್‌ ಕೀಪರ್), ಆಕಾಶ್ ಆನಂದ್(ವಿಕೆಟ್‌ ಕೀಪರ್), ಶಮ್ಸ್ ಮುಲಾನಿ, ಹಿಮಾಂಶು ಸಿಂಗ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ಥಿ, ರಾಯ್‌ಸ್ಟನ್ ಡಯಾಸ್, ಜುನೇದ್ ಖಾನ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News