ಬೈಂದೂರು: ವಿದ್ಯುತ್ ಸಂಪರ್ಕ ಕಡಿತಕ್ಕಾಗಿ ಲಂಚ; ಲೈನ್ ಮೆನ್ ಲೋಕಾಯುಕ್ತ ಬಲೆಗೆ
ಉಡುಪಿ, ಜು.4: ವಿದ್ಯುತ್ ಕಂಬದ ಸಂಪರ್ಕ ಕಡಿತಗೊಳಿಸಲು ಲಂಚ ಸ್ವೀಕರಿಸುತ್ತಿದ್ದ ಲೈನ್ ಮೆನ್ ನನ್ನು ಲೋಕಾಯುಕ್ತ ಪೊಲೀಸರು ಇಂದು ಬೈಂದೂರಿನಲ್ಲಿ ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತ ಆರೋಪಿಯನ್ನು ಬೈಂದೂರು ಮೆಸ್ಕಾಂ ಲೈನ್ ಮೆನ್ ರಮೇಶ್ ಬಡಿಗೇರ್(28) ಎಂದು ಗುರುತಿಸಲಾಗಿದೆ. ಬೈಂದೂರಿನ ನಿವಾಸಿಯೊಬ್ಬರು ತನ್ನ ಮನೆಯ ಸಮೀಪದ ಮರವನ್ನು ಕಡಿಯವುದಕ್ಕಾಗಿ ಅಲ್ಲೇ ಹಾದು ಹೋಗಿರುವ ವಿದ್ಯುತ್ ಕಂಬದ ಲೈನ್ನ ಸಂಪರ್ಕ ಕಡಿತ ಗೊಳಿಸಲು ಲೈನ್ ಮೆನ್ ಗೆ ತಿಳಿಸಿದ್ದರು. ಅದಕ್ಕೆ ಆತ 2000ರೂ. ಲಂಚದ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
ಲಂಚ ನೀಡಲು ಒಪ್ಪದ ಮನೆಯವರು ಈ ಬಗ್ಗೆ ಉಡುಪಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮನೆಯವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೈನ್ ಮೆನ್ ನನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮಾನ್, ಡಿವೈಎಸ್ಪಿ ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಜಯರಾಮ್ ಗೌಡ, ರಫೀಕ್ ಎಂ., ಸಿಬಂದಿ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ಮಲ್ಲಿಕಾ, ರೋಹಿತ್, ರಾಘವೇಂದ್ರ, ಪ್ರಸನ್ನ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸತೀಶ್ ಆಚಾರಿ, ರಾಘವೇಂದ್ರ ಹೊಸಕೋಟೆ, ಸೂರಜ್, ಸುಧೀರ್ ಪಾಲ್ಗೊಂಡಿದ್ದರು.