‘ದಿಲ್ಲಿ ರೈತರ ಹೋರಾಟ ಬೆಂಬಲಿಸಿ’ ಕೇಂದ್ರ ಸರಕಾರದ ವಿರುದ್ಧ ಟ್ರ್ಯಾಕ್ಟರ್ ರ್‍ಯಾಲಿ : ಕುರುಬೂರು ಶಾಂತಕುಮಾರ್
ಬೆಂಗಳೂರು : ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಹಾಗೂ ದಲೈವಾಲಾ ಅವರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ, ಜ.26ರಂದು ರಾಜ್ಯದ ಎಲ್ಲ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಗಾಂಧಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬುಧವಾರದಿಂದ 111 ರೈತರು ದಲೈವಾಲಾ ಅವರ ಪ್ರಾಣದ ಜೊತೆ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದು ಸತ್ಯಾಗ್ರಹ ಆರಂಭಿಸಿದ್ದಾರೆ. ಕೇಂದ್ರ ಸರಕಾರ ರೈತ ಚಳವಳಿಯನ್ನು ದುರ್ಬಲಗೊಳಿಸಿ, ದಿಕ್ಕು ತಪ್ಪಿಸಲು ಪ್ರಯತ್ನಿಸಿ ಹೋರಾಟಗಾರರ ಬಗ್ಗೆ ತಪ್ಪು ಕಲ್ಪನೆ ಮೂಡಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಚಳವಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಶುಭಕರಣಸಿಂಗ್ ಕುಟುಂಬಕ್ಕೆ ಸರಕಾರ ಒಂದು ಕೂಟಿ ರೂ ಪರಿಹಾರ ನೀಡಲು ಹೋಗಿತ್ತು, ಆದರೆ ಅವರ ಕುಟುಂಬ ಪರಿಹಾರ ಬೇಡ ಎಂದು ತಿರಸ್ಕಾರ ಮಾಡಿ ರೈತರ ಸಮಸ್ಯೆ ಬಗೆಹರಿಸಿ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ. ಇದು ರೈತರ ಚಳವಳಿಯ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ದೇಶಾದ್ಯಂತ ಭಾಷಣ ಮಾಡಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದರೂ ಕೂಡ ಸಮಸ್ಯೆಯನ್ನು ಬಗೆಹರಿಸಲಿಲ್ಲ. 2011ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ಕೃಷಿಕರ ಸಮಿತಿಯ ಅಧ್ಯಕ್ಷರಾಗಿ ರೈತರ ಉತ್ಪನ್ನಗಳಿಗೆ ಎಂಎಸ್‍ಪಿ ಖಾತ್ರಿ ಕಾನೂನು ಜಾರಿ ಆಗತ್ಯವಿದೆ ಎಂದು ವರದಿ ಕೂಟ್ಟರು. ಇಂದು ಪ್ರಧಾನಿಯಾಗಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಾಧೀಶ ನವಾಬಸಿಂಗ್ ಸಮಿತಿಯು ಮದ್ಯಂತರ ವರದಿಯನ್ನು ನವಂಬರ್ 22ರಂದು ನೀಡಿದೆ. ರೈತರ ಕೃಷಿ ಉತ್ಪನ್ನಗಳಿಗೆ ಎಂಎಸ್‍ಪಿ ಖಾತ್ರಿ ವ್ಯವಸ್ಥೆ ಜಾರಿ ಮಾಡುವುದು ಅತ್ಯವಶ್ಯಕ ಎಂದು ಈ ಸಮಿತಿ ವರದಿ ನೀಡಿದ್ದರು ಕೂಡ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರರ್ಥ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಸಿರು ಸೇನೆ ರಾಜ್ಯಾಧ್ಯಕ್ಷ ಕರಬಸಪ್ಪಗೌಡ, ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಕಾರ್ಯದರ್ಶಿಗುರುದೇವ್ ನಾರಾಯಣಕುಮಾರ್, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.