ಬೆಂಗಳೂರು | ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರನ್ನು ವಜಾಗೊಳಿಸಲು ಆಗ್ರಹಿಸಿ ಧರಣಿ

Update: 2025-01-16 12:22 GMT

ಬೆಂಗಳೂರು : ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ತಪ್ಪು ಎಸಗುತ್ತಿರುವ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ‘ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಶನ್’ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.

2024ರ ಡಿ.29ರಂದು ನಡೆದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಲ್ಲಿ ಭಾಷಾಂತರ ಲೋಪವಾಗಿರುವ ಕಾರಣ ಕೂಡಲೇ, ಮರುಪರೀಕ್ಷೆ ನಡೆಸಬೇಕು. ಇಲ್ಲವಾದರೆ ಪೂರ್ವಭಾವಿ ಪರೀಕ್ಷೆ ಎದುರಿಸಿದ ಎಲ್ಲ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಮುಂದಿನ ಎಲ್ಲ ನೇಮಕಾತಿಗಳನ್ನು ಅಧಿಸೂಚನೆ ಹೊರಡಿಸಿದ ವರ್ಷದಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಬೇಕು. ಆಯೋಗ ನಡೆಸುವ ಎಲ್ಲ ಪರೀಕ್ಷೆಗಳನ್ನು ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ನಂತರ ಆಂಗ್ಲಭಾಷೆಗೆ ಅನುವಾದ ಮಾಡಬೇಕು. ಈಗಾಗಲೇ ಬಾಕಿ ಉಳಿದಿರುವಂತಹ ಸಿಟಿಐ, ಎಎಒ, ಎಒ, ಮತ್ತು ಜೆಟಿಒ ಅಂತಿಮ ಆಯ್ಕೆ ಪಟ್ಟಿಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಅವರುಗಳು ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಕಠಿಣ ಪರಿಶ್ರಮದಿಂದ ಉದ್ಯೋಗವನ್ನರಸಿ ಪರೀಕ್ಷೆಗಳನ್ನು ಬರೆಯುವ ಲಕ್ಷಾಂತರ ಆಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ, ಕೆಎಎಸ್ ಪರೀಕ್ಷೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವಲ್ಲಿಯೂ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರಕಾರ, ಕೆಪಿಎಸ್ಸಿಯ ಹುಳುಕುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಆಮ್ ಆದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷÀ ಕೋಡಿಹಳ್ಳಿ ಚಂದ್ರಶೇಖರ್, ದಲಿತ ಮುಖಂಡ ವೆಂಕಟಸ್ವಾಮಿ, ಮಾರಸಂದ್ರ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸಿಎಂಗೆ ಗೊ.ರು.ಚ, ಮೂಡ್ನಾಕೂಡು ಪತ್ರ: ಹಿರಿಯ ಸಾಹಿತಿಗಳಾದ ಗೊ.ರು.ಚನ್ನಬಸಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹಾಗೂ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದೇ ಪದೇ ಲೋಪ ಎಸಗುತ್ತಿದ್ದು, ಇದರಿಂದ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ಯುವಜನರಿಗೆ ಅನ್ಯಾಯವಾಗುತ್ತಿದೆ. ಅದರಿಂದ ದೋಷರಹಿತ ಪ್ರಶ್ನೆ ಪತ್ರಿಕೆಯುಳ್ಳ ಮರು ಪರೀಕ್ಷೆ ಮಾಡಬೇಕು ಹಾಗೂ ಆಯೋಗದ ವಿರುದ್ಧ ಅಗತ್ಯ ಶಿಸ್ತು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತರೆ ಒತ್ತಾಯಗಳು: ‘ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ಹೈದ್ರಾಬಾದ್ ಕರ್ನಾಟಕ ವೃಂದದ ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಂಧನೂರಿನ ಪರೀಕ್ಷಾ ಕೇಂದ್ರದಲ್ಲಿ ವಿಳಂಭವಾಗಿ ಪ್ರಶ್ನೆಪತ್ರಿಕೆ ನೀಡಿರುವುದರಿಂದ ಅದನ್ನೂ ಮರುಪರೀಕ್ಷೆ ಮಾಡಬೇಕು. ಅದನ್ನು ಆಕ್ಷೇಪಿಸಿದ 12 ಅಭ್ಯರ್ಥಿಗಳ ವಿರುದ್ಧ ದಾಖಲಾದ ಎಫ್‍ಐಆರ್‌ ಅನ್ನು ರದ್ದುಗೊಳಿಸಬೇಕು. ಕೆಪಿಎಸ್ಸಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಲತಾ ಕುಮಾರಿ ಅವರಲ್ಲಿ ಒಬ್ಬರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕು’ ಎಂದು ಸ್ಪರ್ಧಾರ್ಥಿಗಳು ಒತ್ತಾಯಿಸಿದರು.

‘ಒಂದು ಕಡೆ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾದರೆ ಮತ್ತೊಂದು ಹೊಣೆಗಾರಿಕೆಯ ಪ್ರಶ್ನೆ. ಎರಡೆರಡು ಬಾರಿ ಪರೀಕ್ಷೆ ನಡೆಸಿದ್ದರಿಂದ ಸರಕಾರದ ಬೊಕ್ಕಸಕ್ಕೆ 25ಕೋಟಿ ರೂ.ಗೂ ಹೆಚ್ಚು ಹಣ ವೆಚ್ಚವಾಗಿದೆ. ಆದರೂ ಪರೀಕ್ಷೆ ದೋಷಮುಕ್ತವಾಗಿಲ್ಲವೆಂದರೆ ಇದಕ್ಕೆ ಯಾರು ಹೊಣೆ? ಇದಕ್ಕೆ ಹೊಣೆಯಾದವರ ವಿರುದ್ಧ ಸರಕಾರ ಶಿಸ್ತು ಕ್ರಮ ಜರುಗಿಸಬೇಕಿತ್ತು?. ಒಟ್ಟು 384 ಹುದ್ದೆಗಳ ಪೈಕಿ 40 ಎಸಿ ಹುದ್ದೆ ಇದೆ. ಇದು ಇದುವರೆಗಿನ ಅತಿಹೆಚ್ಚು ಎಂಬ ದಾಖಲೆಯಿದೆ. ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ಪ್ರಕ್ರಿಯೆಯಲ್ಲಿ ಇರಬೇಕಾದ ಗಂಭೀರತೆ, ಜವಾಬ್ದಾರಿಯಾಗಲೀ, ಈ ಸರಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಗೆಜೆಟೆಡ್ ಪ್ರೊ ಬೇಷನರ್ಸ್ ಪರೀಕ್ಷೆಯ ಒಟ್ಟಾರೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ನ್ಯಾಯ ಸಮ್ಮತವಾಗಿರಬೇಕು ಮತ್ತು ಅರ್ಹರಿಗೆ ಮಾತ್ರ ಅವಕಾಶ ಸಿಗುವಂತಿರಬೇಕು ಎನ್ನುವುದು ನಮ್ಮ ಆಗ್ರಹ’

-ಆರ್.ಅಶೋಕ್, ಪ್ರತಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News