‘ಮಹರ್ಷಿ ವಾಲ್ಮೀಕಿ’ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದರಾಮಯ್ಯ ಚಾಲನೆ

Update: 2025-01-16 14:08 GMT

ಬೆಂಗಳೂರು : ಪ್ರಸಕ್ತ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ 217ನೆ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರದಂದು ಚಾಲನೆ ನೀಡಿದರು.

ಇದೇ ವೇಳೆ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುವ ಬೃಹತ್ ಹುತ್ತ ಸೇರಿ ವಾಲ್ಮೀಕಿ ಪ್ರತಿಮೆಯ ಅಸುಪಾಸಿನ ಭಿನ್ನ ಪುಷ್ಪಗಳಲ್ಲಿ ಮಾಡಿರುವ ಅಲಂಕಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು. ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಸಿದ್ದರಾಮಯ್ಯ ಸೇರಿ ವಿವಿಧ ಇಲಾಖೆ ಸಚಿವರನ್ನು ಸನ್ಮಾನಿಸಿದರು.

ಸಾರಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ರೇಷ್ಮೆ ಮತ್ತು ತೋಟಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಬಾಲ್, ತೋಟಗಾರಿಕಾ ನಿರ್ದೇಶಕ ರಮೇಶ್ ಡಿ.ಎಸ್. ಜಂಟಿ ನಿರ್ದೇಶಕರಾದ ಡಾ.ಎಂ.ಜಗದೀಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಲಾಲ್‍ಬಾಗ್‍ನಲ್ಲಿ ಆಯೋಜಿಸಿರುವ ಈ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ -2025 ಜ.16 ರಿಂದ ಜ.27ರವರೆಗೆ 12 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನ 80 ರೂ. ಹಾಗೂ ರಜಾ, ವಾರಾಂತ್ಯಗಳಲ್ಲಿ 100 ರೂ.ನಿಗಧಿಪಡಿಸಲಾಗಿದೆ.

12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನ 30 ರೂ., ಸಮವಸ್ತ್ರ ಧರಿಸಿ ಬರುವ 1 ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ ರಜಾ ದಿನ ಹೊರತುಪಡಿಸಿ ಉಚಿತ ಪ್ರವೇಶವಿರುತ್ತದೆ. ಮುಂಗಡ ಬುಕ್ಕಿಂಗ್‍ಗಾಗಿ ವೆಬ್‍ಸೈಟ್ https://hasiru.karnataka.gov.in/floweshow/login.aspx ಭೇಟಿ ನೀಡಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News