ಚಿಕ್ಕಮಗಳೂರು | ಪರಿಶಿಷ್ಟರ ಜಮೀನು ಕಬಳಿಸಲು ಗ್ರಾಪಂ ಸದಸ್ಯ, ಪತ್ನಿಯಿಂದ ದೌರ್ಜನ್ಯ :ಆರೋಪ
ಚಿಕ್ಕಮಗಳೂರು : ಜಮೀನು ಕಬಳಿಸಲು ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಮೇಲ್ವರ್ಗದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ನೀಡಬೇಕೆಂದು ಆಗ್ರಹಿಸಿ ಕೊಪ್ಪ ತಾಲೂಕಿನ ಅಡಿಗೆಬೈಲು ಗ್ರಾಮದ ಪರಿಶಿಷ್ಟರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕೊಪ್ಪ ತಾಲೂಕಿನ ಅಡಿಗೆಬೈಲು ಗ್ರಾಮದ ಪರಿಶಿಷ್ಟರು, 1981ರಲ್ಲಿ ಗ್ರಾಮದ ನಾಗಯ್ಯ, ರಂಗಯ್ಯ ಸೇರಿದಂತೆ 9 ಪರಿಶಿಷ್ಟರಿಗೆ ತಲಾ 3 ಎಕರೆ ದರಖಾಸ್ತು ಜಮೀನು ಹಾಗೂ ಸಾಗುವಳಿ ಚೀಟಿಯನ್ನು ಜಿಲ್ಲಾಡಳಿತ ನೀಡಿದೆ. ಈ ಜಮೀನುಗಳು 1983-94ರಲ್ಲಿ ಪೋಡಿಯಾಗಿರುತ್ತದೆ. ಪೋಡಿ ನಕಾಶೆಯಂತೆ ಪರಿಶಿಷ್ಟರು ಈ ಜಮೀನಿನ ಸ್ವಾಧೀನಾನುಭವದಲ್ಲಿದ್ದು, ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇದೇ ಗ್ರಾಮದ ನಿವಾಸಿ ಹಾಗೂ ಹಿರೇಗದ್ದೆ ಗ್ರಾಪಂ ಸದಸ್ಯ ಎ.ಸಿ.ಸುರೇಶ್‌ಗೌಡ ಹಾಗೂ ಆತನ ಪತ್ನಿ ಭಾರತಿ ಸುರೇಶ್ ಎಂಬವರು ಪರಿಶಿಷ್ಟರ ಜಮೀನು ಕಬಳಿಸುವ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಾ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.
ಪರಿಶಿಷ್ಟರನ್ನು ಸರಕಾರ ಮಂಜೂರು ಮಾಡಿರುವ ಜಮೀನಿನಿಂದ ಒಕ್ಕಲೆಬ್ಬಿಸುವ ಉದ್ದೇಶದಿಂದ ವಸ್ತಾರೆ ಹೋಬಳಿಯ ವಳಗೇರಹಳ್ಳಿಯಲ್ಲಿರುವ ಭೂತಪ್ಪ ಎಂಬ ದೇವಾಲಯದ ಆಡಳಿತ ಮಂಡಳಿ ಮೇಲೆ ಒತ್ತಡ ಹೇರಿ ನೋಟಿಸ್ ಕಳುಹಿಸುವ ಮೂಲಕ ದೇವರ ಭಯ ಹುಟ್ಟಿಸಿ ಜಮೀನು ತೊರೆಯುವಂತೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಅಲ್ಲದೇ ನಮ್ಮ ತೋಟಗಳಿಗೆ ಹೋಗದಂತೆ ನಮ್ಮದೇ ತೋಟದ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ಬೇಲಿ ದಾಟುವ ಪರಿಶಿಷ್ಟರನ್ನು ಕೊಲ್ಲಲು ಸಂಚು ಮಾಡಿದ್ದಾರೆ ಎಂದು ದೂರಿದರು.
ಈ ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ, ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದ ಅವರು, ಪೊಲೀಸರಿಗೆ ದೂರು ನೀಡಿದ್ದಕ್ಕೆ ಕುಪಿತರಾದ ಸುರೇಶ್ ಹಾಗೂ ಆತನ ಪತ್ನಿ ಸಂತ್ರಸ್ತ ಉಮೇಶ್ ಎಂಬವರ ತಾಯಿ ಗೌರಮ್ಮ ಹಾಗೂ ಮಗನ ಮೇಲೂ ಹಲ್ಲೆ ಮಾಡಿದ್ದು, ಈ ಬಗ್ಗೆಯೂ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ, ಆದರೆ ಪೊಲೀಸರು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಪರಿಣಾಮ ದೌರ್ಜನ್ಯವನ್ನು ಮತ್ತೆ ಮುಂದುವರಿಸಿದ್ದಾರೆ. ಬಾಳೆಹೊನ್ನೂರು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಎಸ್ಪಿಗೂ ದೂರು ನೀಡಲಾಗಿದೆ ಎಂದ ಸಂತ್ರಸ್ತರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗ್ರಾಪಂ ಸದಸ್ಯ ಸುರೇಶ್ ಹಾಗೂ ಆತನ ಪತ್ನಿ ಭಾರತಿ ಅವರಿಂದಾಗುತ್ತಿರುವ ಕಿರುಕುಳದಿಂದ ರಕ್ಷಣೆ ನೀಡಿ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ದೇವರ ಹೆಸರಿನಲ್ಲಿ ನೋಟಿಸ್ ನೀಡಿ ಮಾನಸಿಕವಾಗಿ ಕಿರುಕುಳ ನೀಡಿರುವ ಭೂತಪ್ಪ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಕಾನೂನು ವೇದಿಕೆ ಸಂಚಾಲಕ ಕೃಷ್ಣಮೂರ್ತಿ, ಅಡಿಗೆಬೈಲು ಗ್ರಾಮದ ಸಂತ್ರಸ್ತರಾದ ಸುನಿಲ್, ಉಮೇಶ್ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.