ಬೆಂಗಳೂರು | ಕೂಲಿ ಕಾರ್ಮಿಕನ ಹತ್ಯೆ ಪ್ರಕರಣ : ಡಿಜಿಟಲ್ ಮಾಧ್ಯಮದ ವರದಿಗಾರ ಸೆರೆ

Update: 2025-01-16 16:18 GMT

ಬೆಂಗಳೂರು : ಬೆಂಗಳೂರು ಹೊರವಲಯದ ಹುರುಳಿಹಳ್ಳಿಯ ತೋಟದಲ್ಲಿ ನಡೆದಿದ್ದ ಕೂಲಿ ಕಾರ್ಮಿನ ಕೊಲೆ ಪ್ರಕರಣದ ಸಂಬಂಧ ಡಿಜಿಟಲ್ ಮಾಧ್ಯಮವೊಂದರ ವರದಿಗಾರ ಸೇರಿ ಇಬ್ಬರನ್ನು ಇಲ್ಲಿನ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಡಿಜಿಟಲ್ ಮಾಧ್ಯಮದ ವರದಿಗಾರ ರವಿಕುಮಾರ್, ಈತನ ಸಹೋದರ ಮಂಜುನಾಥ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?: ಜ.10ರಂದು ಹುರುಳಿಹಳ್ಳಿ ಗ್ರಾಮದ ಮಂಜುನಾಥ್ ಅವರ ತೋಟದಲ್ಲಿ ಸಿದ್ದರಾಜು(45) ಕೆಲಸ ಮಾಡಿಕೊಂಡಿದ್ದರು. ಮೇಲಿಂದ ಮೇಲೆ ಕೂಲಿ ಕೇಳುತ್ತಿದ್ದಾನೆ ಎಂದು ಕೋಪಗೊಂಡು ಮಂಜುನಾಥ್ ಹಾಗೂ ರವಿಕುಮಾರ್ ಅವರು ಸಿದ್ದರಾಜುಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇನ್ನೂ, ಕೃತ್ಯವನ್ನು ಮರೆಮಾಚಲು ತೆಂಗಿನಕಾಯಿ ಕದಿಯಲು ಸಿದ್ದರಾಜು ಬಂದಿದ್ದರು ಎಂದು ಆರೋಪಿಗಳು ಕತೆ ಕಟ್ಟಿದ್ದರು. ದೊಣ್ಣೆಯಿಂದ ಹೊಡೆದ ನಂತರ ನಿತ್ರಾಣರಾಗಿದ್ದ ಸಿದ್ದರಾಜು ಅವರನ್ನು ಕರೆದುಕೊಂಡು ಹೋಗಲು ಅವರ ಪುತ್ರ ಚೇತನ್‍ಗೆ ಕರೆ ಮಾಡಿ ತಿಳಿಸಿದ್ದರು. ಸ್ಥಳಕ್ಕೆ ಬಂದ ಚೇತನ್, ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News