ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಜ.20ಕ್ಕೆ ಹೋರಾಟ : ಅಹಿಂದ ಸಂಘಟನೆ ಬೆಂಬಲ
ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರನ್ನು ಸಂಸತ್ತಿನ ಅಧಿವೇಶನದಲ್ಲಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ಜ.20ರಂದು ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಹೋರಾಟಕ್ಕೆ ಅಹಿಂದ ಸಂಘಟನೆ ಬೆಂಬಲ ನೀಡುತ್ತದೆ ಎಂದು ಸಂಘಟನೆಯ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆರ್.ಕೇಶವಮೂರ್ತಿ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಮತ್ತು ಬಿಜೆಪಿಗರು ಅಂಬೇಡ್ಕರ್‌ಗೆ ಅವಮಾನಿಸುವುದನ್ನು ಈ ಹಿಂದಿನಿಂದಲೂ ಮಾಡುತ್ತಲೇ ಬರುತ್ತಿದ್ದಾರೆ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರಿ ಇಲ್ಲ, ಅದನ್ನು ಬದಲಾಯಿಸುತ್ತೇವೆ ಎನ್ನುವ ಕುಚೋದ್ಯದ ಮಾತುಗಳನ್ನು ಹೇಳುತ್ತಲೇ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಸುಖ ದುಃಖಗಳನ್ನೆಲ್ಲಾ ಬದಿಗಿಟ್ಟು, ದೇಶದ ಏಳಿಗೆಗಾಗಿ ಸಂವಿಧಾನ ನೀಡಿದಂತಹ ಮಹಾ ನಾಯಕ. ಅಂತಹ ನಾಯಕನ ಬಗ್ಗೆ ಅಮಿತ್ ಶಾ ಸಂಸತ್ತಿನಲ್ಲಿ ಅಪಮಾನ ಮಾಡಿರುವ ಹೇಳಿಕೆಯಿಂದ ದೇಶದ ಕೋಟ್ಯಾಂತರ ಅಂಬೇಡ್ಕರ್ ಅನುಯಾಯಿ ಮತ್ತು ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಬಗೆಗಿನ ತನ್ನ ವಿರೋಧಿ ಮನಸ್ಥಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರೊಂದಿಗೆ ಅಮಿತ್ ಶಾ ತಪ್ಪು ಮಾಡಿದ್ದಾರೆ. ಇದು ಉದ್ದೇಶಿತ ಕೃತ್ಯವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ, ಗೆದ್ದು, ಗೃಹ ಮಂತ್ರಿ ಆಗಿದ್ದೇನೆಂಬ ಕೃತಜ್ಞತಾ ಭಾವವಿಲ್ಲದೆ ನಾಲಿಗೆ ಹರಿಬಿಟ್ಟಿದ್ದು ಅಕ್ಷಮ್ಯ ಅಪರಾಧ. ಈ ವ್ಯಕ್ತಿ ಈ ದೇಶದ ಗೃಹ ಮಂತ್ರಿಯಾಗಿರುವುದು ದೌರ್ಭಾಗ್ಯ ಎಂದು ಕೇಶವಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಾಧ್ಯಕ್ಷ ಕೆ.ಎಸ್.ಮಾಲೇಗೌಡ, ರೈತ ಘಟಕದ ರಾಜ್ಯಾಧ್ಯಕ್ಷ ಎ.ಎಮ್.ಲಿಂಗರಾಜು, ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.