‘ಒಳ ಮೀಸಲಾತಿ’ ಅಲೆಮಾರಿ ಸಮುದಾಯವನ್ನು ಪರಿಗಣಿಸಿ: ಅಲೆಮಾರಿ ಬುಡಕಟ್ಟು ಮಹಾಸಭಾ
ಬೆಂಗಳೂರು : ಒಳ ಮೀಸಲಾತಿಯಲ್ಲಿರುವ ಜಾತಿಗಳ ವರ್ಗೀಕರಣದ ಕುರಿತು ಸರಕಾರಕ್ಕೆ ಸಲಹೆ ನೀಡುವ ವೇಳೆ ಪರಿಶಿಷ್ಟ ಜಾತಿಯಲ್ಲಿನ ಅಲೆಮಾರಿ ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್.ಹನುಮಂತಪ್ಪ ಒಳ ಮೀಸಲಾತಿ ಕುರಿತ ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್‍ಗೆ ಮನವಿ ಮಾಡಿದ್ದಾರೆ.
ಗುರುವಾರ ನಗರದ ಯವನಿಕದಲ್ಲಿರುವ ಒಳ ಮೀಸಲಾತಿ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಇಂದಿಗೂ ಶಿಕ್ಷಣ, ಆರೋಗ್ಯ ವಸತಿ ಮತ್ತು ಯಾವುದೇ ಸರಕಾರಿ ಸೌಲಭ್ಯಗಳನ್ನು ಪಡೆಯದೆ ಟೆಂಟ್ ಮತ್ತು ಗುಡಿಸಲುಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯ ಸಮಾಜದ ಕಟ್ಟಕಡೆಯ ಸಮುದಾಯವಾಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಲ್ಲಿ 49 ಸಮುದಾಯಗಳು ಅಲೆಮಾರಿಗಳ ಆಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸರಕಾರದ ಬಳಿ ಯಾವುದೇ ಸಮುದಾಯದ ಅಧಿಕೃತ ದತ್ತಾಂಶವಿಲ್ಲ ಮತ್ತು ಈ ಸಮುದಾಯದ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನವೂ ಇಲ್ಲ. ಸದ್ಯಕ್ಕೆ ಕೇಂದ್ರ ಸರಕಾರ ಅಲೆಮಾರಿಗಳ ಕುರಿತಂತೆ 2008ರಲ್ಲಿ ನೇಮಿಸಿದ ಬಾಲಕೃಷ್ಣ ರೇಣುಕೆ ರಾಷ್ಟ್ರೀಯ ಆಯೋಗ ಹಾಗೂ 2015ರಲ್ಲಿ ಕಂಡುಬಂದ ಬಿಕ್ಕು ರಾಮ್ ಜೀ ಇದಾರೆ ನೇತೃತ್ವದ ಈ ಎರಡೂ ಆಯೋಗಗಳು ಪ್ರಕಾರ ಕರ್ನಾಟಕದಲ್ಲಿ ಶೇ.10ರಷ್ಟು ಅಲೆಮಾರಿ ಸಮುದಾಯಗಳಿರುವುದು ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಇಡೀ ಅಲೆಮಾರಿಗಳನ್ನು ಒಂದೇ ಸೂರಿನಡಿ ತರಬೇಕು ಎಂಬುದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ‘ಮಹಾಸಭಾ'ದ ಆಶಯ. ಆದ್ದರಿಂದ ಎಸ್.ಸಿ/ಎಸ್.ಟಿ. ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿಗಳ ಅಸ್ಮಿತೆಗಾಗಿ ‘ಅಲೆಮಾರಿ ಬುಡಕಟ್ಟು ಆಯೋಗ'ವನ್ನು ರಚಿಸುವಂತೆ ಸರಕಾರವನ್ನು ಮನವಿ ಮಾಡಿದ್ದೇವೆ. ಸರಕಾರ ಕೂಡ ನಮ್ಮ ಮನವಿಗೆ ಓಗೊಟ್ಟು ಇಡೀ ಅಲೆಮಾರಿಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನದಲ್ಲಿದೆ. ಈ ಕಾರಣಕ್ಕೆ ನಾವು ಶೇ.7ರಷ್ಟು ಮೀಸಲಾತಿ ಕೇಳಿದ್ದೇವೆ. ಹಾಗೇನಾದರು ಎಸ್.ಸಿ ಅಲೆಮಾರಿಗಳನ್ನು ಮಾತ್ರ ತಾವು ಪರಿಗಣಿಸುವುದಾದರೆ ಕನಿಷ್ಠ ಶೇ.3ರಷ್ಟು ಮೀಸಲಾತಿ ನೀಡಬೇಕು ಎಂದು ತಿಳಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಪಟ್ಟಿಯನ್ನು ಕಲ್ಪಿಸಿ ಕನಿಷ್ಠ ಶೇ.3ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಅತ್ಯಂತ ಕೆಳದರ್ಜೆಯಲ್ಲಿರುವ ಅತಿಸೂಕ್ಷ್ಮ ಜಾತಿಗಳಾದ ವರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಿಗೆ ಈವರೆಗೆ ಯಾವುದೇ ಸೌಲಭ್ಯ ದೊರಕದಿರುವುದರಿಂದ ಸದರಿ ಸಮುದಾಯಗಳ ಸ್ಥಿತಿಗತಿಗಳನ್ನು ಗಮನಿಸಿ ತಾವು ಈ ಸಮುದಾಯಗಳ ಶ್ರೇಯೋಭಿವೃದ್ಧಿಗೆ ನ್ಯಾಯ ಒದಗಿಸಬೇಕು ಎಂದು ನಾಗಮೋಹನ್‍ದಾಸ್‍ಗೆ ಮನವಿ ಮಾಡಿದರು.
ಸಭೆಯಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯದ ಮುಖಂಡರಾದ ರಂಗಮುನಿದಾಸ್, ಮುತ್ತುರಾಜ್, ಧನಂಜಯ್, ಮಾತಾಂಡಪ್ಪ ಮತ್ತಿತರರು ಹಾಜರಿದ್ದರು.