ಆರೆಸೆಸ್ಸ್ ಭಾಗವತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಎಸ್.ಮನೋಹರ್

Update: 2025-01-16 16:34 GMT

ಬೆಂಗಳೂರು : ರಾಮ ಮಂದಿರ ನಿರ್ಮಾಣದ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹೇಳಿಕೆ ನೀಡುವ ಮೂಲಕ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಮಡಿದ ಯೋಧರನ್ನು ಅಪಮಾನಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‍ರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಆಗ್ರಹಿಸಿದ್ದಾರೆ.

ಗುರುವಾರ ನಗರದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಗವತ್ ಮತ್ತು ಬಿಜೆಪಿಗರು ಮೊದಲಿನಿಂದಲೂ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಯೋಧರನ್ನು ಅಪಮಾನಿಸುತ್ತಾ ಬಂದಿದ್ದಾರೆ. ಅವರಿಗೆ ದೇಶದ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ಕಾಂಗ್ರೆಸ್ ಮೊದಲಿನಿಂದಲೂ ಆರೋಪ ಮಾಡುತ್ತಾ ಬಂದಿದೆ. ಇದೀಗ ಅವರ ಹೇಳಿಕೆಯಿಂದ ಬಿಜೆಪಿ ಮತ್ತು ಆರೆಸ್ಸೆಸ್‍ನವರ ಕೀಳು ಮನಸ್ಥಿತಿ ಬಹಿರಂಗಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾಗವತ್ ಹೇಳಿಕೆನ್ನು ಬಿಜೆಪಿಯ ಯಾವ ಒಬ್ಬ ನಾಯಕನೂ ಖಂಡಿಸಿಲ್ಲ. ಹಾಗಾದರೇ ಭಾಗವತ್‍ರ ಹೇಳಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೇಯೇ? ಈಗ ನಿಜವಾದ ದೇಶದ್ರೋಹಿಗಳು ಯಾರು ಎಂಬುದನ್ನು ಬಿಜೆಪಿ ನಾಯಕರು ಬಹಿರಂಗಪಡಿಸಬೇಕು. ದುರಂತವೆಂದರೆ ಬಿಜೆಪಿ, ಆರೆಸ್ಸೆಸ್‍ನವರು ಎಂದು ಹೋರಾಟ ನಡೆಸಿಲ್ಲ. ಸ್ವಾತಂತ್ರ ಹೋರಾಟಗಾರರ ಬಗ್ಗೆ ಕಿಂಚಿತ್ತು ಕಾಳಜಿಯನ್ನ ತೋರದೆ, ಸ್ವಾತಂತ್ರ ಹೋರಾಟಗಾರರನ್ನು ಅಪಮಾನಿಸುತ್ತಾ ಬಂದಿದೆ ಎಂದು ಮನೋಹರ್ ಕಿಡಿಕಾರಿದರು.

ಮಹಾತ್ಮ ಗಾಂಧಿಯನ್ನು ಹಾಗೂ ಡಾ.ಅಂಬೇಡ್ಕರ್‌ ರನ್ನು ಅವಮಾನಿಸುವ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಬಿಜೆಪಿ ನಾಯಕರು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲ. ಇಂತಹ ಕೆಟ್ಟ ಮನಸ್ಥಿತಿಯನ್ನು ಹೊಂದಿರುವ ಬಿಜೆಪಿ ನಾಯಕರು ದೇಶಪ್ರೇಮಿಗಳು ಎಂದು ಸ್ವಯಂ ಘೋಷಿತವಾಗಿ ಘೋಷಣೆ ಮಾಡಿಕೊಳ್ಳುತ್ತರೆ. ಈಗ ಸ್ವಯಂ ಪ್ರೇರಿತ ದೇಶಪ್ರೇಮಿಗಳ ಬಣ್ಣ ಬಹಿರಂಗವಾಗಿದೆ ಎಂದು ಅವರು ತಿಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಮಡಿದ ಯೋಧರನ್ನು ಅಪಮಾನಿಸಿರುವ ಆರೆಸ್ಸೆಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಭಾಗವತ್ ಈ ಕೂಡಲೇ ದೇಶದ ಜನತೆಗೆ ಕ್ಷಮೆ ಕೋರಿ, ಭಾರತದಿಂದ ತೋಲಗಬೇಕು ಎಂದು ಎಸ್.ಮನೋಹರ್ ಆಗ್ರಹಿಸಿದರು. ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಪ್ರಕಾಶ್, ಹೇಮರಾಜ್, ಕೆ.ಟಿ.ನವೀನ್ ಚಂದ್ರ, ಓಬಳೇಶ್, ಚಿನ್ನಿ ಪ್ರಕಾಶ್, ಚಂದ್ರಶೇಖರ, ಉಮೇಶ್, ರಂಜಿತ್, ಸುಂಕದಕಟ್ಟೆ ನವೀನ್, ಕುಶಾಲ್ ಹರುವೆ ಗೌಡ, ಪುಟ್ಟರಾಜು, ನವೀನ್ ಸಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News