ಸೈಫ್ ಅಲಿಖಾನ್‌ಗೆ ಚೂರಿ ಇರಿತ | ಮಹಾರಾಷ್ಟ್ರದಲ್ಲಿ ಸುರಕ್ಷತೆಯನ್ನು ಪ್ರಶ್ನಿಸಿದ ಪ್ರತಿಪಕ್ಷಗಳು
ಮುಂಬೈ : ಮುಂಬೈನ ಬಾಂದ್ರಾದಲ್ಲಿಯ ಐಷಾರಾಮಿ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಮಹಾ ವಿಕಾಸ ಅಘಾಡಿ(ಎಂವಿಎ)ಯು ಮಹಾರಾಷ್ಟ್ರದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕುರಿತು ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಪರ್ಭನಿಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಕೆಳಗಿದ್ದ ಸಾಂಕೇತಿಕ ಸಂವಿಧಾನವನ್ನು ವಿರೂಪಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಕಾನೂನು ವಿದ್ಯಾರ್ಥಿ ಸೋಮನಾಥ ಸೂರ್ಯವಂಶಿಯ ಲಾಕಪ್ ಸಾವು ಮತ್ತು ಬೀಡ್‌ನಲ್ಲಿ ಸರಪಂಚ ಸಂತೋಷ್ ದೇಶ್ಮುಖ್ ಅಪಹರಣ, ಚಿತ್ರಹಿಂಸೆ ಮತ್ತು ಹತ್ಯೆ ಪ್ರಕರಣಗಳನ್ನೂ ಪ್ರತಿಪಕ್ಷಗಳು ಉಲ್ಲೇಖಿಸಿವೆ.
ಎನ್‌ಸಿಪಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಬಾ ಸಿದ್ದೀಕಿ ಹತ್ಯೆ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಪ್ರಕರಣಗಳನ್ನೂ ಎತ್ತಿ ತೋರಿಸಿರುವ ಪ್ರತಿಪಕ್ಷಗಳು ಗೃಹಸಚಿವರೂ ಆಗಿರುವ ಫಡ್ನವೀಸ್ ರನ್ನು ತರಾಟೆಗೆತ್ತಿಕೊಂಡಿವೆ.
ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ(ಯುಬಿಟಿ)ಯ ಮುಖ್ಯ ವಕ್ತಾರ ಸಂಜಯ ರಾವುತ್ ಅವರು,ಇನ್ನೊಂದು ಹೈ ಪ್ರೊಫೈಲ್ ಕೊಲೆ ಯತ್ನಕ್ಕೆ ಮುಂಬೈ ಸಾಕ್ಷಿಯಾಗಿದ್ದು ಎಂತಹ ನಾಚಿಕೆಗೇಡು? ಸೈಫ್ ಅಲಿ ಖಾನ್ ಮೇಲಿನ ದಾಳಿಯು ಮುಂಬೈ ಪೋಲಿಸರು ಮತ್ತು ಗೃಹಸಚಿವರ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರಣಿ ಘಟನೆಗಳ ಬಳಿಕ ನಡೆದಿರುವ ಈ ದಾಳಿಯು ಗಣ್ಯರನ್ನು ಗುರಿಯಾಗಿಸಿಕೊಂಡು ಮುಂಬೈಯನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎನ್ನುವುದನ್ನು ತೋರಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಖಾನ್ ಮೇಲಿನ ದಾಳಿಯು ಕಳವಳಕ್ಕೆ ಕಾರಣವಾಗಿದೆ. ಭಾರೀ ಭದ್ರತೆಯನ್ನು ಹೊಂದಿರುವ ಖ್ಯಾತನಾಮರ ಮೇಲೆ ಅವರ ನಿವಾಸಗಳಲ್ಲಿ ದಾಳಿ ನಡೆಸಬಹುದಾದರೆ ಜನಸಾಮಾನ್ಯರ ಸ್ಥಿತಿಯೇನು? ಕಳೆದೆರಡು ವರ್ಷಗಳಲ್ಲಿ ಸಡಿಲ ಧೋರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ಕಾನೂನಿನ ಭಯ ಕಡಿಮೆಯಾಗಿರುವಂತಿದೆ ಎಂದು ಶರದ ಪವಾರ್ ನೇತೃತ್ವದ ಎನ್‌ಪಿಸಿಯ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೋ ಹೇಳಿದರು.
ಬಾಂದ್ರಾದಂತಹ ಸುರಕ್ಷಿತ ಪ್ರದೇಶದಲ್ಲಿ ವಾಸವಾಗಿರುವ ಪದ್ಮಶ್ರೀ ಪುರಸ್ಕೃತ ನಟ(ಸೈಫ್ ಅಲಿ ಖಾನ್)ನ ನಿವಾಸಕ್ಕೆ ಯಾರೋ ನುಗ್ಗಿ ಅವರನ್ನು ಚೂರಿಯಿಂದ ಇರಿದು ಹೋಗುತ್ತಾರೆ. ಎಂತಹ ಭೀಕರ ಘಟನೆ! ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನೇದಿನೇ ಹದಗೆಡುತ್ತಿದೆ. ಬಾಂದ್ರಾದಲ್ಲಿ ರಾಜಕಾರಣಿ(ಬಾಬಾ ಸಿದ್ದೀಕಿ)ಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ನಟ(ಸಲ್ಮಾನ್ ಖಾನ್)ನೋರ್ವನ ಮನೆಯ ಮೇಲೆ ಗುಂಡುಗಳನ್ನು ಹಾರಿಸಲಾಗಿದೆ ಮತ್ತು ಈಗ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿದೆ. ಈ ಎಲ್ಲ ಘಟನೆಗಳು ಅವರ ನಿವಾಸಗಳು ಮತ್ತು ಕಚೇರಿಗಳ ಬಳಿಯೇ ನಡೆದಿವೆ. ಇಂತಹ ಖ್ಯಾತನಾಮರು ತಮ್ಮ ಮನೆಗಳು ಮತ್ತು ಕಚೇರಿಗಳಲ್ಲಿ ಸುರಕ್ಷಿತರಾಗಿಲ್ಲದಾಗ ಸಾಮಾನ್ಯ ಮನುಷ್ಯ ಹೇಗೆ ಸುರಕ್ಷಿತವಾಗಿರಬಲ್ಲ ಎಂದು ಕಾಂಗ್ರೆಸ್ ನಾಯಕಿ ಹಾಗೂ ಮುಂಬೈ ನಾರ್ಥ್ ಸೆಂಟ್ರಲ್ ಸಂಸದೆ ಪ್ರೊ.ವರ್ಷಾ ಗಾಯಕ್ವಾಡ್ ಪ್ರಶ್ನಿಸಿದರು.