ಕಂಗನಾ ರಣಾವತ್ ರ ‘ಎಮರ್ಜೆನ್ಸಿ’ಗೆ ಪಂಜಾಬ್ ನಲ್ಲಿ ನಿಷೇಧಿಸುವಂತೆ ಮಾನ್ ಗೆ ಪತ್ರ ಬರೆದ ಶಿರೋಮಣಿ ಗುರುದ್ವಾರ ಪ್ರಬಂಧ ಸಮಿತಿ
ಅಮೃತಸರ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನಟಿಸಿರುವ ‘ಎಮರ್ಜೆನ್ಸಿ’ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಚಿತ್ರವು ಸಿಖ್ಖರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತದೆ ಹಾಗೂ ಇತಿಹಾಸವನ್ನು ತಪ್ಪಾಗಿ ಮಂಡಿಸಿದೆ ಎಂದು ಆರೋಪಿಸಿ, ಈ ಚಿತ್ರವನ್ನು ಪಂಜಾಬ್ ನಲ್ಲಿ ಬಿಡುಗಡೆಯಾಗದಂತೆ ನಿಷೇಧಿಸಬೇಕು ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರಿಗೆ ಪತ್ರ ಬರೆದಿದೆ.
ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರಿಗೆ ಬರೆದಿರುವ ಪತ್ರದಲ್ಲಿ ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’ ಚಿತ್ರದ ಬಗ್ಗೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಈ ಚಿತ್ರವೇನಾದರೂ ಪಂಜಾಬ್ ನಲ್ಲಿ ಬಿಡುಗಡೆಯಾದರೆ, ಸಿಖ್ ಸಮುದಾಯದಲ್ಲಿ ಆಕ್ರೋಶ ಮತ್ತು ಸಿಟ್ಟಿಗೆ ಕಾರಣವಾಗಲಿದೆ. ಹೀಗಾಗಿ, ಈ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಧಾಮಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಉನ್ನತ ಗುರುದ್ವಾರ ಸಮಿತಿಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು ಈ ಮುನ್ನ ಕೂಡಾ ‘ಎಮರ್ಜೆನ್ಸಿ’ ಚಿತ್ರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿತ್ತು.