ರಾಮನಗರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ: ಸಿದ್ದರಾಮಯ್ಯ

ರಾಜ್ಯದ ಸಾವಿರಾರು ಬಡಜನರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಕಲಬುರಗಿ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯಗಳ ಸುಧಾರಣೆಗೆ 20 ಕೋಟಿ ರೂ. ಒದಗಿಸಲಾಗುವುದು.

Update: 2023-07-07 08:24 GMT

ಬೆಂಗಳಗೂರು: ರಾಜ್ಯದಲ್ಲಿ ಈಗಾಗಲೇ ಆರಂಭಿಸಲಾಗಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 450 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ ಮತ್ತು ಕೊಡಗು ಜಿಲ್ಲೆಗಳಲ್ಲಿ 450 ಬೆಡ್ ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಘೋಷಿಸಿದರು.

ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯಾರಂಭ ಹಾಗೂ ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂ.ಗಳನ್ನು ಒದಗಿಸಲಾಗುವುದು. NIMHANS ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ.ಗಳ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಜೊತೆಯಲ್ಲಿ ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಖಾಯಿಲೆಯ (NAFLD) ರೋಗಿಗಳಲ್ಲಿ ಸಿರೋಸಿಸ್ ಮತ್ತು ಕ್ಯಾನ್ಸರ್ ಪತ್ತೆ ಹಚ್ಚಲು ಒಂದು FibroScan ಅನ್ನು ಒದಗಿಸಲಾಗುವುದು ಎಂದರು.

ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (GIMS) 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 70 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (Allied Health Sciences) ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಮೈಸೂರು ಮತ್ತು ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್ಗಳ ಕಾರ್ಯಾಚರಣೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದರು.

ರಾಜ್ಯದ ಸಾವಿರಾರು ಬಡಜನರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಕಲಬುರಗಿ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯಗಳ ಸುಧಾರಣೆಗೆ 20 ಕೋಟಿ ರೂ. ಒದಗಿಸಲಾಗುವುದು.

ಚಿತ್ರದುರ್ಗದ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News