2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಬಿಜೆಪಿ ಹಿರಿಯ ನಾಯಕರಿಂದ ತಡರಾತ್ರಿ ಸಭೆ

Update: 2023-06-29 07:13 GMT

ಫೋಟೋ: Twitter@NDTV

ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಬಿಜೆಪಿ ಹಿರಿಯ ನಾಯಕರು ಕಳೆದ ರಾತ್ರಿ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.

ಪಿಎಂ ಮೋದಿ ಅಮೆರಿಕದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿದೆ. ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಮುಖ ಪುನರ್ರಚನೆಯನ್ನು ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಶಾ,ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರ ಸಾಂಸ್ಥಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆ ಮ್ಯಾರಥಾನ್ ಚರ್ಚೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ನಡೆದ ಈ ಸಭೆಯ ಬಗ್ಗೆ ಪಕ್ಷವು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಬಿಜೆಪಿ ಕಾರ್ಯಕರ್ತರೊಂದಿಗೆ ಮಾಡಿರುದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಈಗಾಗಲೇ ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿರುವ ಕಾರ್ಯಸೂಚಿಯಾಗಿರುವ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರಕಾರ ಮುಂದಾಗಲಿದೆ ಎಂದು ಘೋಷಿಸಿದ್ದಾರೆ.

ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಸಜ್ಜುಗೊಳಿಸಲು ಹೈಕಮಾಂಡ್ ಮುಂದಾಗಿದೆ. ನಾಲ್ಕು ನಿರ್ಣಾಯಕ ರಾಜ್ಯಗಳಾದ - ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್ ಗಡಗಳಲ್ಲಿ ಚುನಾವಣೆ ನಡೆಯಲಿದೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ನ ಬಂಡಾಯ ಹಾಗೂ ತೆಲಂಗಾಣ ಹಾಗೂ ಛತ್ತೀಸ್ ಗಡದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವ ವಿಶ್ವಾಸದಲ್ಲಿದೆ.

ಕಳೆದ ತಿಂಗಳು, ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿಯ ಹಿರಿಯ ಸಾಂಸ್ಥಿಕ ಸದಸ್ಯರು ನರೇಂದ್ರ ಮೋದಿ ಸರಕಾರದ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸಲು ಒಂದು ತಿಂಗಳ ಅವಧಿಯ ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ನಡೆಸಿತ್ತು. ಇದು 2024 ಲೋಕಸಭೆ ಚುನಾವಣೆಗಿಂತ ಮುಂಚಿತವಾಗಿ ಬೆಂಬಲವನ್ನು ಹೆಚ್ಚಿಸಲು ಆಡಳಿತ ಪಕ್ಷದ ಮೆಗಾ ಯೋಜನೆ ಆಗಿ ಕಂಡುಬಂದಿದೆ

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News