ಜಾರ್ಖಂಡ್‌ನಲ್ಲಿ ಬಿಜೆಪಿಯ ದ್ವೇಷ ಪ್ರಚಾರಕ್ಕೆ ಭಾರೀ ಸೋಲು

Update: 2024-11-23 14:26 GMT

ಹೇಮಂತ್ ಸೊರೇನ್

ಹೊಸದಿಲ್ಲಿ : ಮಹಾರಾಷ್ಟ್ರದಲ್ಲಿ ಬಿಜೆಪಿ ಭಾರೀ ಗೆಲುವು ಪಡೆಯುತ್ತಿದೆ. ಆದರೆ ಜಾರ್ಖಂಡ್‌ನಲ್ಲಿ ಬಿಜೆಪಿಯ ದ್ವೇಷ ಪ್ರಚಾರಕ್ಕೆ ದೊಡ್ಡ ಸೋಲಾಗಿದೆ.

ಅಲ್ಲಿನ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಎಲ್ಲ ಅಪಪ್ರಚಾರ ಹಾಗು ದ್ವೇಷ ಪ್ರಚಾರವನ್ನು ಮೆಟ್ಟಿ ನಿಂತು ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ಘಟಾನುಘಟಿ ಪ್ರಮುಖ ನಾಯಕರು ಜಾರ್ಖಂಡ್ ನಲ್ಲಿ ದ್ವೇಷ ಹಾಗು ಸುಳ್ಳಿನ ಪ್ರಚಾರ ನಡೆಸಿದ್ದರು. ʼನಿಮ್ಮ ಊಟ ಕಸಿದುಕೊಳ್ಳುತ್ತಾರೆ, ನಿಮ್ಮ ಪುತ್ರಿಯರನ್ನು ರಕ್ಷಿಸಿಕೊಳ್ಳಿ, ನಿಮ್ಮ ಭೂಮಿಯನ್ನು ಉಳಿಸಿಕೊಳ್ಳಿ , ನುಸಳುಕೋರರು ಬರ್ತಾರೆ, ಮುಸ್ಲಿಮರು ಎಲ್ಲವನ್ನೂ ನಿಮ್ಮಿಂದ ಕಿತ್ತು ಕೊಳ್ಳುತ್ತಾರೆʼ ಎಂಬ ದ್ವೇಷ ಹಾಗೂ ಸುಳ್ಳನ್ನು ಬಿಜೆಪಿ ಜಾರ್ಖಂಡಿನಲ್ಲಿ ಹರಡಿತ್ತು.

ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಷಾ ಮತ್ತು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ನೇತೃತ್ವ ನೀಡಿದ್ದರು. ಆದರೆ ಜಾರ್ಖಂಡಿನ ಜನರಿಗೆ ಈ ದ್ವೇಷ ಬೇಡ ಎಂದಿರುವುದನ್ನು ಫಲಿತಾಂಶ ತೋರಿಸುತ್ತಿದೆ. ಬುಡಕಟ್ಟು ಜನರ ನೆಲವನ್ನು ಕೋಟ್ಯಾಧಿಪತಿ ಉದ್ಯಮಿಗಳಿಗೆ ಬಿಟ್ಟು ಕೊಡುವಂತಹ ಸರಕಾರ ನಮಗೆ ಬೇಡ ಎಂಬ ಸ್ಪಷ್ಟ ಸಂದೇಶವನ್ನು ಜಾರ್ಖಂಡಿನ ಜನರು ಬಿಜೆಪಿಗೆ ನೀಡಿದಂತಿದೆ ಅಲ್ಲಿಂದ ಬರುತ್ತಿರುವ ಫಲಿತಾಂಶ .

ಅಲ್ಲಿನ ಸಿಎಂ ಹೇಮಂತ್ ಸೋರೆನ್ ಬಿಜೆಪಿಯ ಎಲ್ಲಾ ದಾಳಿಗಳನ್ನು ದಿಟ್ಟವಾಗಿ ಎದುರಿಸಿ ವಿಜಯಿಯಾಗಿದ್ದಾರೆ. ಹೇಮಂತ್ ಸೋರೆನ್ ಅವರನ್ನು ಬಿಜೆಪಿ ಭ್ರಷ್ಟಾಚಾರ ಆರೋಪ ಹೊರಿಸಿ ಜೈಲಿಗೆ ಕಳುಹಿಸಿತ್ತು. ಸುಮಾರು 5 ತಿಂಗಳು ಜೈಲಿನಲ್ಲಿದ್ದ ಅವರು ಜೈಲಿನಿಂದ ಹೊರಬಂದಾಗ ಪಕ್ಷವನ್ನು ಉಳಿಸಿ ಕೊಳ್ಳುವ ದೊಡ್ಡ ಸವಾಲು ಎದುರಿಸಿದರು. ಅವರ ಪಕ್ಷದ ಹಿರಿಯ ನಾಯಕ ಚಂಪೈ ಸೋರೆನ್ ಕೈಕೊಟ್ಟು ಬಿಜೆಪಿ ಸೇರಿಕೊಂಡರು.

ಇನ್ನೂ ಬಿಜೆಪಿ , ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ದ್ವೇಷ ಪ್ರಚಾರ ನಡೆಸಿತು. ತೀರಾ ಕೀಳು ಮಟ್ಟದ ಹಸಿ ಹಸಿ ಸುಳ್ಳಿನ ವಿಡಿಯೋಗಳನ್ನು, ಪೋಸ್ಟರ್ ಗಳನ್ನೂ ಬಿಜೆಪಿ ಹರಿಬಿಟ್ಟಿತು. ಆ ಮೂಲಕವೇ ಬಿಜೆಪಿ ಗೆದ್ದು ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈ ಎಲ್ಲಾ ದಾಳಿಗಳನ್ನು ಎದುರಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಹೇಮಂತ್ ಸೊರೇನ್ ನಡೆದಿದ್ದಾರೆ. ಅವರ ನೇತೃತ್ವದಲ್ಲಿ ಇಂಡಿಯಾ ಒಕ್ಕೊಟ ಸ್ಪಷ್ಟ ಬಹುಮತವನ್ನು ಪಡೆಯುತ್ತಿದೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷಗಳಿಗಿಂತ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟವು ದೊಡ್ಡ ಮುನ್ನಡೆಯಲ್ಲಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

81 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಇಂಡಿಯಾ ಮೈತ್ರಿಕೋಟ 5೦ ಸೀಟ್ ಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ ಡಿ ಎ 3೦ ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ. ಆದರೆ ಈ ಟ್ರೆಂಡ್ ಇನ್ನು ಬದಲಾಗುವ ಸಾಧ್ಯತೆ ತೀರಾ ಕಡಿಮೆ. ಹೇಮಂತ್ ಸೋರೆನ್ ಮೂರನೇ ಬಾರಿಗೆ ಜಾರ್ಖಂಡ್ ನಲ್ಲಿ ಸರಕಾರ ರಚಿಸುವ ಹಾದಿಯಲ್ಲಿದ್ದು ಎನ್ಡಿಎ ಗೆಲುವಿನ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಗಳು ತಪ್ಪು ಎಂದು ಸಾಬೀತಾಗಿವೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ 81 ಸ್ಥಾನಗಳ ಅಸೆಂಬ್ಲಿಯಲ್ಲಿ 41 ಸ್ಥಾನಗಳಲ್ಲಿ ಸ್ಪರ್ಧೆಸಿತ್ತು. ತನ್ನ ಮಿತ್ರಪಕ್ಷಗಳಾದ ಕಾಂಗ್ರೆಸ್ ಗೆ 30 ಸ್ಥಾನಗಳು, ರಾಷ್ಟ್ರೀಯ ಜನತಾ ದಳ 6 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ಗೆ 4 ಸ್ಥಾನಗಳನ್ನು ಕೊಟ್ಟಿತ್ತು.

ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಅದರ ಮಿತ್ರಪಕ್ಷಗಳಾದ ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್ಯು) 10, ಜನತಾ ದಳ (ಯುನೈಟೆಡ್) ಎರಡರಲ್ಲಿ ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದರಲ್ಲಿ ಸ್ಪರ್ಧಿಸಿದ್ದವು. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಬರ್ಹೈತ್ನಲ್ಲಿ ಗೆಲ್ಲುತ್ತಿದ್ದಾರೆ.

ಜಾರ್ಖಂಡ್ ಎರಡು ಹಂತಗಳಲ್ಲಿ, ನ.13 ರಂದು 43 ಸ್ಥಾನಗಳಿಗೆ ಮತ್ತು ನ.20 ರಂದು 38 ಸ್ಥಾನಗಳಿಗೆ ಮತದಾನ ನಡೆದಿತ್ತು. ಶೇಕಡಾ 67.74 ರಷ್ಟು ಮತದಾನವಾಗಿತ್ತು.ಇದು 2019 ರ ಮತದಾನಕ್ಕಿಂತ 1.65 ಶೇಕಡಾ ಹೆಚ್ಚಾಗಿತ್ತು.

2019 ರಲ್ಲಿ, ಜೆಎಂಎಂ ನೇತೃತ್ವದ ಮೈತ್ರಿಕೂಟ 47 ಸ್ಥಾನಗಳಲ್ಲಿ ಜಯಗಳಿಸಿ ಬಹುಮತ ಪಡೆದಿತ್ತು. ಬಿಜೆಪಿ 2019 ರಲ್ಲಿ 25 ಸ್ಥಾನಗಳನ್ನು ಗಳಿಸಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News