ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಖಾಲಿಯಾಗುತ್ತಿರುವ ಆಮ್ಲಜನಕ; ರಕ್ಷಣಾ ಪಡೆಗಳಿಂದ ಕೊನೆ ಕ್ಷಣದ ಪ್ರಯತ್ನ

Update: 2023-06-22 13:13 GMT

Photo Credit- Twitter@OceanGate

ದುಬೈ: ಟೈಟಾನಿಕ್ ಅವಶೇಷಗಳಿರುವ ಪ್ರದೇಶದ ಭೇಟಿಗೆ ತೆರಳಿ, ಕಣ್ಮರೆಯಾಗಿದ್ದ ಜಲಾಂತರ್ಗಾಮಿ ನೌಕೆ ಟೈಟನ್ ನಲ್ಲಿನ ಆಮ್ಲಜನಕ ಖಾಲಿಯಾಗುವ ಹಂತ ತಲುಪಿದ್ದು, ಗುರುವಾರ ಬೆಳಗ್ಗೆ ವೇಳೆಗೆ ಕೈಮೀರುವ ಹಂತ ಸಮೀಪಿಸಿದೆ. ಸಮಯದ ವಿರುದ್ಧ ಹೋರಾಡುತ್ತಿರುವ ರಕ್ಷಣಾ ಪಡೆಗಳು ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ತಮ್ಮ ಕೈಲಾದಷ್ಟೂ ಪ್ರಯತ್ನ ಮುಂದುವರಿಸಿದ್ದಾರೆ.

ತುರ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆ ಎಂದೇ ಕರೆಸಿಕೊಂಡಿರುವ ಈ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿರುವ ರಕ್ಷಣಾ ತಜ್ಞರು, ಸತತ ಎರಡನೇ ದಿನ ಸಮುದ್ರದಾಳದಲ್ಲಿ ಶಬ್ಧವನ್ನು ಪತ್ತೆ ಹಚ್ಚಿದ್ದು, ಈ ಶಬ್ಧವನ್ನು ಅನುಸರಿಸಿ ತಮ್ಮ ಕಾರ್ಯಾಚರಣೆಯ ಅವಧಿ ಕಡಿತಗೊಳ್ಳಬಹುದು ಎಂಬ ಆಶಾವಾದದೊಂದಿಗೆ ಜಲಾಂತರ್ಗಾಮಿ ಕಣ್ಮರೆಯಾಗಿರುವ ಪ್ರದೇಶಕ್ಕೆ ಇನ್ನಷ್ಟು ಹಡಗು ಹಾಗೂ ನೌಕೆಗಳನ್ನು ರವಾನಿಸಿದ್ದಾರೆ. ಆದರೆ, ರವಿವಾರ ಬೆಳಗ್ಗೆ ಆರು ಗಂಟೆಗೆ ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿದ್ದ ಪ್ರಯಾಣಿಕರ ತಂಡಕ್ಕೆ ಕೇವಲ ನಾಲ್ಕು ದಿನಕ್ಕಾಗುವಷ್ಟು ಆಮ್ಲಜನಕ ಮಾತ್ರ ಲಭ್ಯವಿತ್ತು ಎಂದು ಹೇಳಲಾಗಿದೆ.

ಜಲಾಂತರ್ಗಾಮಿ ಪ್ರಯಾಣಿಕರನ್ನು ರಕ್ಷಿಸಬಹುದು ಎಂಬ ಆಶಾವಾದ ಹೊಂದಿರುವವರೂ ಕೂಡಾ ಕೆಲವು ಅಡಚಣೆಗಳ ಬಗ್ಗೆ ಎಚ್ಚರಿಸುತ್ತಿದ್ದಾರೆ. ಮೊದಲಿಗೆ ಜಲಾಂತರ್ಗಾಮಿ ನೌಕೆಯಿರುವ ಸ್ಥಳವನ್ನು ಗುರುತಿಸುವುದು, ಅದನ್ನು ರಕ್ಷಣಾ ಸಾಧನಗಳೊಂದಿಗೆ ತಲುಪುವುದು, ಅದಿನ್ನೂ ಸುರಕ್ಷಿತವಾಗಿದೆ ಎಂದು ಭಾವಿಸಿ ಸಮುದ್ರದ ಮೇಲಕ್ಕೆ ತರುವುದು ಹಾಗೂ ಇವೆಲ್ಲವೂ ಜಲಾಂತರ್ಗಾಮಿ ಪ್ರಯಾಣಿಕರಿಗೆ ಲಭ್ಯವಿರುವ ಆಮ್ಲಜನಕ ಖಾಲಿಯಾಗುವ ಮುನ್ನ ನಡೆಯಬೇಕಿದೆ ಎಂಬುದು ಅವರ ಎಚ್ಚರಿಕೆಯಾಗಿದೆ.

ಈವರೆಗೆ ಸಮುದ್ರದಾಳದೊಂದಿಗೆ ಸಂಪರ್ಕ ಹೊಂದಿರುವ ಪ್ರದೇಶದ ಎರಡು ಪಟ್ಟಿನಷ್ಟು ಶೋಧ ಕಾರ್ಯ ನಡೆಸಲಾಗಿದ್ದು, ಸಮುದ್ರದಾಳದಲ್ಲಿ ಸುಮಾರು 13,200 ಅಡಿ(4,020 ಮೀಟರ್)ಯಷ್ಟು ಶೋಧಿಸಲಾಗಿದೆ. ನೌಕೆಯಲ್ಲಿ ತೆರಳಿದ್ದ ಎಲ್ಲ ಐವರು ಪ್ರಯಾಣಿಕರನ್ನು ರಕ್ಷಿಸಬಹುದಾಗಿದೆ ಎಂಬ ಆಶಾವಾದವನ್ನು ಪ್ರಾಧಿಕಾರಗಳು ಹೊಂದಿವೆ ಎಂದು ಫಸ್ಟ್ ಕೋಸ್ಟ್ ಗಾರ್ಡ್ ಡಿಸ್ಟ್ರಿಕ್ಟ್‌ನ ಕ್ಯಾಪ್ಟನ್ ಜೇಮಿ ಫ್ರೆಡರಿಕ್ ತಿಳಿಸಿದ್ದಾರೆ.

"ಇದು ಶೇ 100ರಷ್ಟು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ" ಎಂದು ಅವರು ಬುಧವಾರ ಹೇಳಿದ್ದಾರೆ.

ರವಿವಾರ ಟೈಟನ್ ಜಲಾಂತರ್ಗಾಮಿ ನೌಕೆ ಕಾಣೆಯಾಗಿರುವ ಉತ್ತರ ಅಟ್ಲಾಂಟಿಕ್ ಪ್ರದೇಶವು ಹೊಗೆ ಹಾಗೂ ಚಂಡಮಾರುತದಂಥ ಪರಿಸ್ಥಿತಿಗೆ ತೀರಾ ದುರ್ಬಲವಾಗಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲು ತೀವ್ರ ಸವಾಲಿನ ಪರಿಸರವಾಗಿ ಪರಿಣಮಿಸಿದೆ ಎಂದು ಕೋಸ್ಟ್ ಗಾರ್ಡ್ಸ್ ಇಂಟರ್‌ನ್ಯಾಷನಲ್ ಐಸ್ ಪ್ಯಾಟ್ರೋಲ್‌ನ ಮುಖ್ಯ ವಿಜ್ಞಾನಿಯಾಗಿರುವ ಸಾಗರತಜ್ಞ ಡೊನಾಲ್ಡ್ ಮರ್ಫಿ ಅಭಿಪ್ರಾಯ ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News