ಮುಂಬೈ: ಅಸೆಂಬ್ಲಿ ವೇಳೆ ‘ಆಝಾನ್’ ಹಾಕಿದ್ದಕ್ಕಾಗಿ ಶಿಕ್ಷಕಿ ಅಮಾನತು
ಮುಂಬೈ: ಮುಂಬೈಯಲ್ಲಿ ಶಾಲೆಯೊಂದರ ಬೆಳಗ್ಗಿನ ಅಸೆಂಬ್ಲಿ ವೇಳೆ ‘ಆಝಾನ್’ ಮೊಳಗಿಸುವ ವಿರುದ್ಧ ಕೆಲವು ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಕರೊಬ್ಬರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಪ್ರಾರ್ಥನೆಗಾಗಿ ಇಸ್ಲಾಮಿಕ್ ವಿಧಾನಗಳಿಗೆ ಅನುಸಾರವಾಗಿ ನೀಡುವ ಕರೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ, ನಗರದ ಕಾಂಡಿವಲಿಯಲ್ಲಿರುವ ಕಪೋಲ್ ವಿದ್ಯಾನಿಧಿ ಇಂಟರ್ನ್ಯಾಶನಲ್ ಸ್ಕೂಲ್ ಹೊರಗಡೆ ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆ ನಡೆಸಿದರು.
ವಿವಿಧ ಧರ್ಮಗಳ ಪ್ರಾರ್ಥನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಉಪಕ್ರಮವೊಂದರ ಭಾಗವಾಗಿ ಆಝಾನ್ ನೀಡಲಾಗಿತ್ತು ಎಂದು ಶಾಲೆಯ ಪ್ರಿನ್ಸಿಪಾಲ್ ರಶ್ಮಿ ಹೆಗ್ಡೆ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ದೂರೊಂದು ದಾಖಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪ ಕಮಿಶನರ್ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹೆತ್ತವರ ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಶಾಸಕ ಯೋಗೇಶ್ ಸಾಗರ್ ವಹಿಸಿದ್ದರು. ಆಝಾನ್ನಿಂದಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ದೂರನ್ನು ಸ್ಥಳೀಯ ಶಿವಸೇನಾ ನಾಯಕ ಸಂಜಯ್ ಸಾವಂತ್ ಪೊಲೀಸರಿಗೆ ನೀಡಿದ್ದಾರೆ.
‘‘ಶುಕ್ರವಾರದಂದು ಬೆಳಗ್ಗಿನ ಅಸೆಂಬ್ಲಿ ವೇಳೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಕಿಯೊಬ್ಬರು ಆಝಾನನ್ನು ತನ್ನ ಫೋನ್‌ನಿಂದ ಲೌಡ್ ಸ್ಪೀಕರ್ ಮೂಲಕ ಮೊಳಗಿಸುವುದು ಸಣ್ಣ ತಪ್ಪಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಗರ್ ಹೇಳಿದರು.
ಈ ನಡುವೆ, ಪ್ರಕರಣದ ಬಗ್ಗೆ ಶಾಲಾ ಆಡಳಿತ ಮಂಡಳಿಯೂ ತನಿಖೆ ನಡೆಸುತ್ತಿದೆ ಎಂದು ಪ್ರಿನ್ಸಿಪಾಲರು ಹೆತ್ತವರಿಗೆ ತಿಳಿಸಿದ್ದಾರೆ. ‘‘ಇದು ಹಿಂದೂ ಶಾಲೆ. ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನೆ ನಮ್ಮ ಪ್ರಾರ್ಥನೆಗಳು. ಇಂಥ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ’’ ಎಂದು ಅವರು ಹೇಳಿದ್ದಾರೆ.