ಏರ್ ಇಂಡಿಯಾ ವಿಮಾನದಲ್ಲಿ ಮಲ, ಮೂತ್ರ ವಿಸರ್ಜಿಸಿದ ಪ್ರಯಾಣಿಕನ ಬಂಧನ
ಹೊಸದಿಲ್ಲಿ: ಮುಂಬೈ-ದಿಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ತಾನಿರುವ ಸ್ಥಳದಲ್ಲಿ ಮಲ ಹಾಗೂ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನದಲ್ಲಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಜೂನ್ 24 ರಂದು ಎಐಸಿ 866 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ಸಿಂಗ್ ಎಂದು ಗುರುತಿಸಲಾದ ಪ್ರಯಾಣಿಕನು 17F ನಲ್ಲಿ ಕುಳಿತಿದ್ದನು. ಸಿಂಗ್ ವಿರುದ್ಧ ದಾಖಲಾಗಿರುವ ಪ್ರಕರಣದ ಪ್ರಕಾರ ಆತ ವಿಮಾನದ 9 ನೇ ಸಾಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿ, ಉಗುಳಿದ್ದಾನೆ.
ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕನಿಗೆ ಮೌಖಿಕ ಎಚ್ಚರಿಕೆ ನೀಡಿದರು. ದುರ್ವರ್ತನೆಯನ್ನು ಮೊದಲು ಗಮನಿಸಿದಾಗ ಆತನನ್ನು ಇತರ ಪ್ರಯಾಣಿಕರಿಂದ ಪ್ರತ್ಯೇಕಿಸಿದರು.
ಪೈಲಟ್-ಇನ್-ಕಮಾಂಡ್ ಗೆ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಲಾಯಿತು. ವಿಮಾನ ಆಗಮನದ ನಂತರ ಭದ್ರತಾ ಸಹಾಯಕ್ಕಾಗಿ ವಿನಂತಿಯನ್ನು ಕಂಪನಿಗೆ ಕಳುಹಿಸಲಾಯಿತು. ಈ ಕೃತ್ಯವು ಹಲವಾರು ಪ್ರಯಾಣಿಕರನ್ನು ಕೆರಳಿಸಿತು.
ವಿಮಾನ ಇಳಿದ ನಂತರ, ಆರೋಪಿ ಪ್ರಯಾಣಿಕನನ್ನು ಏರ್ ಇಂಡಿಯಾದ ಭದ್ರತಾ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 510 (ಕುಡಿತದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಏರ್ ಇಂಡಿಯಾ ಕೂಡ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಅಂತಹ "ಅಶಿಸ್ತಿನ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆ"ಗಾಗಿ ವಿಮಾನಯಾನವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿದೆ ಎಂದು ಹೇಳಿದೆ.
ಇದೇ ರೀತಿಯ ಘಟನೆಯು ನವೆಂಬರ್ 26, 2022 ರಂದು ವರದಿಯಾಗಿದೆ, ಆಗ ಅಮಲೇರಿದ ವ್ಯಕ್ತಿಯೊಬ್ಬ ನ್ಯೂಯಾರ್ಕ್ ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದನು.
ಕೇವಲ 10 ದಿನಗಳ ನಂತರ ಡಿಸೆಂಬರ್ 6 ರಂದು ಪ್ಯಾರಿಸ್-ಹೊಸದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತನಾಗಿದ್ದ ಪುರುಷ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಇನ್ನೊಂದು ಘಟನೆಯು ವರದಿಯಾಗಿತ್ತು