ಹಿಂದಿನ ಸರ್ಕಾರದ ತಪ್ಪನ್ನು ಸರಿಪಡಿಸಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಉಳಿಸುವ ಕೆಲಸ ಮಾಡಿದ್ದೇವೆ: ಪ್ರಿಯಾಂಕ್ ಖರ್ಗೆ

Update: 2023-06-17 06:22 GMT

Photo(facebook.com/PriyankMKharge)

ಬೆಂಗಳೂರು: ಜಿಜೆಪಿಯ ಆಡಳಿತಾವಧಿಯಲ್ಲಿ ಕೇಸರೀಕರಣಗೊಂಡಿದ್ದ ಪಠ್ಯವನ್ನು ರಾಜ್ಯ ಸರ್ಕಾರ ಪುನಃ ಪರಿಷ್ಕರಿಸಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದಿನ BJP ಸರ್ಕಾರ ಶಿಕ್ಷಣವನ್ನು ಕೇಸರೀಕರಣಗೊಳಿಸಿ ಸಾಂವಿಧಾನಿಕ ಭಾರತ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿತ್ತು. ನಾವು ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಇಂದು ಹಿಂದಿನ ಸರ್ಕಾರದ ತಪ್ಪನ್ನು ಸರಿಪಡಿಸಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಉಳಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

6ನೇ ತರಗತಿಯಲ್ಲಿ ಕಲ್ಯಾಣ ಕರ್ನಾಟಕದ ಪ್ರಸಿದ್ದ ಕವಿಗಳಾದ ಶ್ರೀ ಚೆನ್ನಣ್ಣ ವಾಲೀಕಾರ ಡಾ. ಅಂಬೇಡ್ಕರ್ ಬಗ್ಗೆ ಬರೆದಿದ್ದ ‘ನೀ ಹೋದ ಮರುದಿನ’ ಪದ್ಯ ಪುನರ್ಸ್ಥಾಪಿಸಲಾಗಿದೆ. ಸಾವಿತ್ರಿಬಾಯಿಯವರ ಪಠ್ಯ, ಸಾರಾ ಅಬೂಬಕರ್ ಅವರ ಕತೆ, ಕನ್ನಡದ ಮೊದಲ ಗದ್ಯಗ್ರಂಥವಾದ ವಡ್ಡಾರಾಧನೆಯ ಸುಕುಮಾರ ಸ್ವಾಮಿಯ ಕಥೆ ಗಳನ್ನು ಪುನರ್ಸ್ಥಾಪಿಸಲಾಗಿದೆ. ಮಹರ್ಷಿ ವಾಲ್ಮೀಕಿಯವರನ್ನಿ “ದಾರಿಗಳ್ಳನಾಗಿದ್ದ” ಎಂಬ ಉಲ್ಲೇಖವನ್ನು ಕೈಬಿಡಲಾಗಿದ್ದು, ಜಾತಿ ಮತ ಧರ್ಮಗಳ ಕಟ್ಟಳೆಗಳಿಲ್ಲವೆಂದು ಸಾರುವ “ಬ್ಲಡ್ ಗ್ರೂಪ್” ಗದ್ಯ, ರಾಷ್ಟ್ರೀಯ ಭಾವೈಕ್ಯತೆ ಸಾರುವ ‘ಉರುಸುಗಳಲ್ಲಿ ಭಾವೈಕ್ಯತೆ’ ಗದ್ಯ ವನ್ನು ಪಠ್ಯಪುಸ್ತಕದಲ್ಲಿ ಮರುಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.


ಸಮಾಜ ವಿಜ್ಞಾನದ ಇತಿಹಾಸ ಪಠ್ಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒದಗಿಸಿರುವ 371(J) ವಿಶೇಷ ಸ್ಥಾನಮಾನವನ್ನು ಸಾಂವಿಧಾನಿಕ ಅನುಚ್ಛೇಧ ವೆಂದು ಬೋಧಿಸುವುದು, ಜೈನ, ಭೌದ್ಧ ಧರ್ಮಗಳ ಉದಯದ ಪಠ್ಯ, ಮಹಾವೀರ ಮತ್ತು ಬುದ್ಧಗುರುಗಳ ವಿಚಾರಗಳ ಮರು ಸೇರ್ಪಡೆ, ಮಾನವ ಹಕ್ಕುಗಳ ಪಠ್ಯ, ಮೈಸೂರು ರಾಜರ ಕೊಡುಗೆಗಳ ಉಲ್ಲೇಖ ಸೇರ್ಪಡೆ ಮಾಡಲಾಗಿದೆ.

ಮಹಿಳಾ ಸಮಾಜ ಸುಧಾರಕಿಯರ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ಸೇರ್ಪಡೆ, ‘ಭಾಷಾಭಿಮಾನದಿಂದ ದೇಶದ ಏಕತೆಗೆ ಧಕ್ಕೆಯಾಗಲಿದೆ’ ಎಂದಿದ್ದ ಭಾಗ ತೆರವು ಮಾಡಲಾಗಿದೆ. ಈ ನಿರ್ಣಯಗಳು, ಹಿಂದಿನ ಬಿಜೆಪಿ ಸರ್ಕಾರದಂತೆ ರಾಜಕೀಯ ಗುಣದ್ದಲ್ಲ. ಬದಲಿಗೆ ವಿವಿಧ ವಿಷಯ ತಜ್ಞರಿಂದ ಪರಿಶೀಲನೆ ನಡೆಸಿ 6-10ನೇ ತರಗತಿಗಳ ಪಠ್ಯ ತಿದ್ದುಪಡಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News