ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ: ವಿಪಕ್ಷ ನಾಯಕ ಆರ್. ಅಶೋಕ್

Update: 2023-11-18 13:42 GMT

ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಸೇರಿ ಜನರ ಸಮಸ್ಯೆ ನಿವಾರಣೆಗೆ ಮತ್ತು ಪಕ್ಷ ಸಂಘಟನೆಗೆ ಜೋಡೆತ್ತಿನಂತೆ ದುಡಿಯುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಶನಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ಕಾಂಗ್ರೆಸ್ ದುರಾಡಳಿತ, ಮೋಸದ ಯೋಜನೆಗಳ ಕುರಿತು ತಿಳಿಸಿ ಜನಜಾಗೃತಿ ಮೂಡಿಸುತ್ತೇವೆ. ಸಚಿವ ಝಮೀರ್ ಅಹ್ಮದ್ ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರ ಹತ್ತಾರು ತಪ್ಪುಗಳನ್ನು ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ನಾವು ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಈ ಸಾರಿ ಇನ್ನೂ ಹೆಚ್ಚು ಹೋರಾಟ ಮಾಡಲಿದ್ದೇವೆ. ಮಂಗಳೂರು- ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಗಡೀಪಾರು ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 30-40 ಹಿಂದೂ ಕಾರ್ಯಕರ್ತರ ಕೊಲೆ ಆಗಿತ್ತು. ಟಿಪ್ಪುವಿನ ವೈಭವೀಕರಣ ನಡೆದಿತ್ತು ಎಂದು ಅವರು ತಿಳಿಸಿದರು.

ಸಂಕಷ್ಟದಲ್ಲಿರುವ ರೈತರಿಗೆ ಅವರ ಪರಿಹಾರ ಕೊಡಬೇಕು. ಆದರೆ, ಈಗಿನ ಸರಕಾರ ನಯಾಪೈಸೆ ಕೊಟ್ಟಿಲ್ಲ. ಈ ಸರಕಾರದ ಕಿವಿ ಹಿಂಡುವ ಕಾರ್ಯ ಮಾಡುತ್ತೇವೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರ ನೇಮಕಾತಿಯಿಂದ ಕಾಂಗ್ರೆಸ್ಸಿಗರಿಗೆ ನಡುಕ ಉಂಟಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ ಎಂಬ ಮಾತು ಕೇಳಿಬರಲಾರಂಭಿಸಿದೆ. ಸರಕಾರದ ಕಿವಿ ಹಿಂಡಲು ನನ್ನನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ಯುವ ನಾಯಕತ್ವಕ್ಕೆ ಅವಕಾಶ ಕೊಟ್ಟಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಮತ್ತೆ ಬಿಜೆಪಿಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಕಟ್ಟುವ ದೃಷ್ಟಿಯಿಂದ ಕೇಂದ್ರದ ನಾಯಕರು, ಲೋಕಸಭಾ ಸದಸ್ಯರು, ಶಾಸಕರು, ಕಾರ್ಯಕರ್ತರು ತೀರ್ಮಾನ ಮಾಡಿ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಸಂಚಲನ ಉಂಟಾಗಿದೆ ಎಂದು ವಿಶ್ಲೇಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News