ರೂ. 500 ರ ಖೋಟಾ ನೋಟು ಕೊಟ್ಟ ರೋಗಿ: ತಾನು ಮೋಸ ಹೋದ ಬಗ್ಗೆ ಡಾಕ್ಟರ್ ಹೇಳಿದ್ದೇನು?
ಹೊಸದಿಲ್ಲಿ: ಪೇಟಿಎಂ, ಜಿಪೇ ಹಾಗೂ ಫೋನ್‌ಪೇಯಂಥ ಡಿಜಿಟಲ್ ಪಾವತಿ ತಂತ್ರಾಂಶಗಳು ಬಂದ ನಂತರ ಗ್ರಾಹಕರು ನೋಟುಗಳನ್ನು ನೀಡಿ ಚಿಲ್ಲರೆ ಪಡೆಯುವ ತೊಂದರೆಯನ್ನು ತಪ್ಪಿಸಲು ಬಹುತೇಕ ಈ ಡಿಜಿಟಲ್ ಪಾವತಿ ತಂತ್ರಾಂಶಗಳ ಮೂಲಕವೇ ಪಾವತಿ ಮಾಡುತ್ತಿದ್ದಾರೆ. ಹೀಗಿದ್ದೂ ಕೆಲವೊಮ್ಮೆ ನಗದು ನೀಡುವ ರೂಢಿಯೂ ಉಳಿದುಕೊಂಡಿದೆ. ಇಂತಹ ಒಂದು ಘಟನೆಯಲ್ಲಿ ವೈದ್ಯರೊಬ್ಬರು ತನ್ನ ರೋಗಿಯಿಂದ ಹೇಗೆ ಮೋಸ ಹೋದೆ ಹಾಗೂ ಆ ಘಟನೆ ಹೇಗೆ ಇನ್ನೂ ತಮಾಷೆಯ ನೆನಪಾಗಿ ಉಳಿದಿದೆ ಎಂಬ ಸಂಗತಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.
ಮೂಳೆ ತಜ್ಞ ವೈದ್ಯರಾದ ಮಾನವ್ ಅರೋರಾ ಎಂಬವರು ಈ ವಿಷಯವನ್ನು ಹಂಚಿಕೊಳ್ಳಲು ಮೆಟಾ ಸಂಸ್ಥೆ ಇತ್ತೀಚೆಗಷ್ಟೆ ಪ್ರಾರಂಭಿಸಿರುವ ಥ್ರೆಡ್ಸ್ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ, "ಇತ್ತೀಚೆಗೆ ರೋಗಿಯೊಬ್ಬರು ಈ ನೋಟನ್ನು ಬಳಸಿ ನನಗೆ ನಗದು ಪಾವತಿ ಮಾಡಿದರು. ತನ್ನ ಸ್ವಾಗತಕಾರ್ತಿ ( receptionist ) ಅದನ್ನು ಪರಿಶೀಲಿಸಲಿಲ್ಲ (ಯಾಕೆಂದರೆ, ಮುಕ್ತವಾಗಿ ಹೇಳುವುದಾದರೆ ನೀವದನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಅಲ್ಲವೆ?) ಆದರೆ, ಈ ಘಟನೆಯಿಂದ ಜನ ಮೋಸ ಮಾಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ - ವೈದ್ಯರಿಗೂ ಎಂಬುದನ್ನು ತೋರಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
"ರೋಗಿಗೆ ಅದರ ಅರಿವಿಲ್ಲದೆ ಅದನ್ನು ವರ್ಗಾಯಿಸಿದ್ದಾರೆ ಎಂದು ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ಅವರಿಗೆ ಈ ಸಂಗತಿ ತಿಳಿದಿರಲಿಲ್ಲ ಹಾಗೂ ಅವರು ತರಾತುರಿಯಲ್ಲಿ ಅದನ್ನು ವರ್ಗಾಯಿಸಿದ್ದಾರೆ ಎಂದು ನಂಬಲು ನಾನು ನಿರಾಕರಿಸುತ್ತೇನೆ" ಎಂದು ಮುಂದುವರಿಸಿದ್ದಾರೆ. "ಏನೇ ಆಗಲಿ, ನಾನು ರೂ. 500 ದರೋಡೆಗೆ ಒಳಗಾದರೂ, ಅದನ್ನು ಕಂಡು ನಾನು ಮನಸಾರೆ ನಕ್ಕೆ ಹಾಗೂ ಆ ಘಟನೆಯು ನನ್ನ ಪಾಲಿಗೆ ತಮಾಷೆಯ ನೆನಪಾಗಿರುವುದರಿಂದ ಆ ನೋಟನ್ನು ರಕ್ಷಿಸಿಟ್ಟುಕೊಂಡಿದ್ದೇನೆ" ಎಂದೂ ಬರೆದುಕೊಂಡಿದ್ದಾರೆ.
ಡಾ. ಅರೋರಾ ಆ ನೋಟಿನ ಚಿತ್ರವನ್ನೂ ಹಂಚಿಕೊಂಡಿದ್ದು, ಆ ನೋಟಿನ ಮೇಲೆ "ಶಾಲೆಗಳ ಪ್ರಾಯೋಗಿಕ ಬಳಕೆಗೆ ಮಾತ್ರ" ಎಂದು ಬರೆಯಲಾಗಿದೆ.
ಈ ಸಂಗತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದರಿಂದ ಆ ಪೋಸ್ಟ್‌ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
"ಅವರು ಫರ್ಝಿ ಧಾರಾವಾಹಿಯಿಂದ ಸಾಕಷ್ಟು ಪ್ರೇರಿತರಾಗಿರುವಂತಿದೆ. ಈಗ ಆ ಎಲ್ಲ ಹಣ ಯಾಕೆ ಅಮಾನ್ಯೀಕರಣವಾಯಿತು ಎಂಬುದು ನಮಗೆ ತಿಳಿಯುತ್ತಿದೆ" ಎಂದು #demonitization, #doctorskolootnewale ಎಂಬ ಹ್ಯಾಶ್‌ಟ್ಯಾಗ್ ಬಳಸಿ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, "ಆ ವ್ಯಕ್ತಿ ಯಾರೇ ಆಗಿರಲಿ ಆತ ಅಸಾಧಾರಣ ಬುದ್ಧಿವಂತನಾಗಿದ್ದಾನೆ ಅಥವಾ ಚಾಣಾಕ್ಷನಾಗಿದ್ದಾನೆ" ಎಂದು ಪ್ರತಿಕ್ರಿಯಿಸಿದ್ದಾರೆ.
"ನನಗೆ ಇಂತಹ ಅನುಭವ ಪದೇ ಪದೇ ಆಗಿದೆ. ವೈದ್ಯರಿಗಾದರೂ ರಿಯಾಯಿತಿ ತೋರಿ ಜನಗಳೆ" ಎಂದು ಮತ್ತೊಬ್ಬ ಬಳಕೆದಾರರು ಹಾಸ್ಯ ಮಾಡಿದ್ದಾರೆ.