ಮಣಿಪಾಲ: ಅ.10ಕ್ಕೆ ಮಾನಸಿಕ ಆರೋಗ್ಯ ಜಾಗೃತಿಗಾಗಿ ‘ಮ್ಯಾರಥಾನ್’

Update: 2024-10-07 15:22 GMT

ಉಡುಪಿ: ಅ.10ರಂದು ವಿಶ್ವದಾದ್ಯಂತ ಆಚರಿಸಲಾಗುವ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯ ಅಂಗವಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ಅ.7ರಿಂದ 12ರವರೆಗೆ ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹವನ್ನು ಆಚರಿಸುತ್ತಿದೆ ಎಂದು ಮಾಹೆಯ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ತಿಳಿಸಿದ್ದಾರೆ.

ಮಣಿಪಾಲದ ಮಾಹೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹದಲ್ಲಿ ಉದ್ಯೋಗ ಸ್ಥಳಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸಲಾ ಗುತ್ತದೆ ಎಂದರು.

ಈ ಸಪ್ತಾಹದಲ್ಲಿ ಮಾಹೆಯ ವಿದ್ಯಾರ್ಥಿ ಸಮೂಹ, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ಕೇಂದ್ರೀಕರಿಸಿಕೊಂಡು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಇದರ ಅಂಗವಾಗಿ ಅ.10ರಂದು ಮಣಿಪಾಲದಲ್ಲಿ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ. ಉಡುಪಿ ಆಸುಪಾಸಿನ ಶಾಲಾ-ಕಾಲೇಜು ಗಳ ವಿದ್ಯಾರ್ಥಿಗಳಿಗೆ, ಪ್ರಾದ್ಯಾಪಕರು, ಮಾಹೆ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ 1000ಕ್ಕೂ ಅಧಿಕ ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಎಂಐಟಿಯ ಸಿಎಸ್‌ಇ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಡಾ.ಗೀತಾ ಮಯ್ಯ ತಿಳಿಸಿದರು.

ಎರಡು ವಿಭಾಗಗಳಲ್ಲಿ ಐದು ಕಿ.ಮೀ. ಹಾಗೂ 3 ಕಿ.ಮೀ. ದೂರದ ಈ ಮ್ಯಾರಥಾನ್ ಸ್ಪರ್ಧೆಗಳು ಸಂಜೆ 5ಗಂಟೆಗೆ ಪ್ರಾರಂಭಗೊಳ್ಳಲಿದೆ. ಮಾಹೆ ಎಜ್ಯು ಎದುರು ಪ್ರಾರಂಭಗೊಳ್ಳುವ ಈ ಮ್ಯಾರಥಾನ್ ಮಣಿಪಾಲದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಲ್ಲೇ ಮುಕ್ತಾಯಗೊಳ್ಳಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದರು.

ಮರುದಿನ ಅ.11ರಂದು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ. ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಾಗಾರದಲ್ಲಿ ತಜ್ಞ ವೈದ್ಯರು, ಮಾನಸಿಕ ತಜ್ಞರು ಮಾನಸಿಕ ಆರೋಗ್ಯದ ಕುರಿತಂತೆ ಜಾಗೃತಿ ಮೂಡಿಸುವ ಅಂಶಗಳನ್ನು ತಿಳಿಸಲಿದ್ದಾರೆ ಎಂದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಅವರು ಕಾರ್ಯಕ್ರಮದ ಅಗತ್ಯತೆ ಕುರಿತು ಮಾತನಾಡಿ, ಮಾನ ಸಿಕ ಆರೋಗ್ಯ ಜಾಗೃತಿ ಆರೋಗ್ಯಕರ ಸಮಾಜದ ಮೂಲಾಧಾರವಾಗಿದೆ. ನಮ್ಮ ಸಂಸ್ಥೆಯಲ್ಲಿ ನಾವು ಸಿಬ್ಬಂದಿಗಳ ಮಾನಸಿಕ ಆರೋಗ್ಯಕ್ಕೆ ವಿಶೇಷ ಒತ್ತು ನೀಡುತಿದ್ದೇವೆ. ಕೆಲಸದ ಸ್ಥಳ ಮಾತ್ರವಲ್ಲದೇ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಮಾನಸಿಕ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲು ನಾವು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುತಿದ್ದೇವೆ ಎಂದರು.

ಮಾಹೆ ಮಣಿಪಾಲದ ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಡಾ.ರವಿರಾಜ ಎನ್.ಎಸ್., ಹಣಕಾಸು ನಿರ್ದೇಶಕಿ ಸರಸ್ವತಿ ಕೆ.ಭಟ್, ಡಾ.ರಾಘವೇಂದ್ರ, ಡಾ.ಅರವಿಂದ ಪಾಂಡೆ ಮುಂತಾದವರು ಉಪಸ್ಥಿತರಿದ್ದರು.

ಕೋವಿಡ್ ಬಳಿಕ ಮಾನಸಿಕ ಸ್ವಾಸ್ಥ್ಯ ಸಮಸ್ಯೆ ಉಲ್ಬಣ

ಸುಮಾರು ಎರಡು ವರ್ಷಗಳ ಕಾಲ ವಿಶ್ವವನ್ನೇ ಕಾಡಿದ ಕೋವಿಡ್ ಸಾಂಕ್ರಾಮಿಕದ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಉಲ್ಬಣಿಸಿರುವುದು ಕಂಡುಬಂದಿದೆ. ಇದು ಮಕ್ಕಳು, ವಿದ್ಯಾರ್ಥಿಗಳು, ಮದ್ಯವಯಸ್ಕರು ಹಾಗೂ ಹಿರಿಯರನ್ನು ಸಮಾನವಾಗಿ ಬಾಧಿಸುತ್ತಿದೆ ಎಂದು ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ತಿಳಿಸಿದರು.

ಅದರಲ್ಲೂ ಲಾಕ್‌ಡೌನ್ ಹಾಗೂ ಇತರ ಕಾರಣಗಳಿಂದ ಎರಡು ವರ್ಷಗಳಿಗೂ ಅದಿಕ ಸಮಯ ಮನೆಯಲ್ಲೇ ಇದ್ದು, ಮೊಬೈಲ್ ಮೂಲಕ ಶಿಕ್ಷಣವನ್ನು ಮುಂದುವರಿಸಿದ ಮಕ್ಕಳು ಇದೀಗ ಶಾಲೆಗೆ ಹೋಗಲು ಪ್ರಾರಂಭಿಸಿದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಇವುಗಳಲ್ಲಿ ಸಹಪಾಠಿಗಳೊಂದಿಗೆ ಹೊಂದಾಣಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿವೆ.

ಅದೇ ರೀತಿ ಮೊದಲ ಬಾರಿ ಶಾಲೆ ಪ್ರವೇಶಿಸುತ್ತಿರುವ ಮಕ್ಕಳಲ್ಲೂ ಹಲವು ಸಮಸ್ಯೆಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಸಂಶೋಧನೆಯನ್ನು ನಡೆಸಲಾ ಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News