ಸುಳ್ಯ ರಂಗಮನೆಯಲ್ಲಿ ಬಣ್ಣದ ಮಾಲಿಂಗ ಯಕ್ಷ ಪ್ರತಿಮೆ ಅನಾವರಣ

Update: 2024-10-07 16:10 GMT

ಸುಳ್ಯ: ಬಣ್ಣದ ಮಾಲಿಂಗ ಅವರು ಚೌಕಿಗೆ ಬಂದು ತಪಸ್ಸಿನಂತೆ ವೇಷ ಹಾಕುವುದನ್ನು ಕಂಡಿದ್ದೇನೆ. ಅವರು ಬದುಕಿ ದ್ದಾಗಲೇ ದಂತಕತೆ ಯಾಗಿದ್ದವರು. ಈ ದಂತಕಥೆಯನ್ನು ಅವರ ಪ್ರತಿಮೆ ಮೂಲಕ ಇತಿಹಾಸ ಮಾಡಿದ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಸಾಧನೆ ಪ್ರಶಂಸನೀಯ, ಇದು ರಂಗಮನೆಯ ಹೆಗ್ಗಳಿಕೆಯಾಗಿದೆ ಎಂದು ಮೂಡಬಿದರೆಯ ಡಾ.ಮೋಹನ್ ಆಳ್ವ ಹೇಳಿದ್ದಾರೆ.

ರವಿವಾರ ಸಂಜೆ ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಹಮ್ಮಿಕೊಂಡ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜೀವನ್‌ರಾಮ್ ಸುಳ್ಯ ಅವರೊಂದಿಗೆ 32 ವರ್ಷಗಳಿಂದ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಸಂಬಂಧವನ್ನು ಹೊಂದಿದ್ದೇನೆ. ಬಣ್ಣದ ಮಾಲಿಂಗರ ಈ ಪ್ರತಿಮೆ ಪುನಃ ನಿರ್ಮಾಣ ಮಾಡಿರುವುದು ಕಲೆಯ ಮೇಲಿನ ಅವರ ಪ್ರೀತಿಗೆ ಸಾಕ್ಷಿ ಎಂದರು.

ಸ್ತ್ರೀ ವೇಷ, ಪುಂಡು ವೇಷ ಹಾಕಿಯೇ ಮೇಲೆ ಬಂದವರು ಬಣ್ಣದ ಮಾಲಿಂಗ. ಗಾಣಿಗ, ಪಾಟಾಳಿ ಜನಾಂಗಕ್ಕೆ ಈ ಬಣ್ಣದ ವೇಷ ಒಲಿದಿದೆ ಎಂದು ನನ್ನ ಅಂಬೋಣ. ಅನೇಕ ಪ್ರಸಿದ್ಧ ಕಲಾವಿದರು ಈ ಸಮುದಾಯ ದಿಂದ ಬಂದಿದ್ದಾರೆ. ಈ ಬಗ್ಗೆ ದಾಖಲಿಕರಣ ನಡೆದಿರುವುದು ಸಂತೋಷ ತಂದಿದೆ. ತಾಳಮದ್ದಲೆ ಕಿವಿ-ಮೂಗಿಗೆ ತಂಪು. ಬಯಲಾಟ ಕಣ್ಣಿಗೆ ತಂಪು. ಇದು ಯಕ್ಷಗಾನ ಪ್ರೇಮಿಗಳ ಎರಡು ಕಣ್ಣುಗಳಿದ್ದಂತೆ ಎಂದು ಡಾ. ಮೋಹನ್ ಆಳ್ವ ಬಣ್ಣಿಸಿದರು.

ಯಕ್ಷಗಾನದ ಹಿರಿಮೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರು ಯಕ್ಷಗಾನದ ದಂತಕಥೆ ಬಣ್ಣದ ಮಾಲಿಂಗ ಅವರ ಪುತ್ಥಳಿಯನ್ನು ಸ್ಥಾಪಿಸುವುದರ ಮೂಲಕ ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ಕಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.

ಜೀವನರಾಮ್ ಅವರಿಗೆ ಕಲೆ ರಕ್ತಗತವಾಗಿ ಬಂದಿರುವಂತಾಹುದ್ದು. ಅವರ ತಂದೆ ಸುಜನಾ ಸುಳ್ಯ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದಾರೆ. ತಾಯಿ ಕೂಡ ಕಲಾಪೋಷಕರಾಗಿದ್ದರು. ಜೀವನರಾಮ್ ಅವರ ಕುಟುಂಬವೇ ಕಲಾ ಸೇವೆಗೆ ಟೊಂಕ ಕಟ್ಟಿ ನಿಂತಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗಮನೆ ಅಮ್ಮ ವನಜಾಕ್ಷಿ ಜಯರಾಮ ನೆನಪಿನ ವನಜ ರಂಗಮನೆ ಪ್ರಶಸ್ತಿ-2024ನ್ನು ತೆಂಕತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಮನೆಯ ಅಧ್ಯಕ್ಷ ಜೀವನ್ ರಾಮ್ ಸುಳ್ಯ ಹಾಗೂ ಕಲಾ ನಿರ್ದೇಶಕ, ಬಿಗ್ಬಾಸ್ ಖ್ಯಾತಿಯ ಅರುಣ್ ಸಾಗರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News