ಬಲ್ಲಾಡಿಯಲ್ಲಿ ಜಲಪ್ರವಾಹ| ವೃದ್ಧೆಯ ಮೃತದೇಹ ಪತ್ತೆ: 5 ಎಕರೆ ಕೃಷಿ, ತೋಟಗಳಿಗೆ ಹಾನಿ

Update: 2024-10-07 15:33 GMT

ಹೆಬ್ರಿ, ಅ.7: ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ರವಿವಾರ ಸಂಭವಿಸಿದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹವು ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಮುದ್ರಾಡಿ ಗ್ರಾಮದ ನೆಕ್ಕರೆಬೆಟ್ಟು ಎಂಬಲ್ಲಿರುವ ಬಲ್ಲಾಡಿ ಹೊಳೆಯಲ್ಲಿ ಪತ್ತೆಯಾಗಿದೆ.

ಮುದ್ರಾಡಿ ಗ್ರಾಮದ ಚಂದ್ರು ಗೌಡ್ತಿ(80) ಎಂಬವರು ರವಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ತಿಳಿಸದೆ ತನ್ನ ಮೂಲ ಮನೆಗೆ ಹೋಗುವಾಗ ಅಕಾಲಿಕವಾಗಿ ಸುರಿದ ವಿಪರೀತ ಮಳೆಯಿಂದ ಉಂಟಾದ ಪ್ರವಾಹಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಚಂದ್ರು ಗೌಡ್ತಿ ಅವರ ಮೃತದೇಹವು ನೆಕ್ಕರೆಬೆಟ್ಟು ಬಲ್ಲಾಡಿ ಹೊಳೆಯಲ್ಲಿ ಮರವೊಂದಕ್ಕೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೃಷಿ ತೋಟಗಳಿಗೆ ಅಪಾರ ನಷ್ಟ: ಜಲ ಪ್ರವಾಹದಿಂದ ಬಲ್ಲಾಡಿ ಪರಿಸರದ ಕೃಷಿ ಭೂಮಿ ಹಾಗೂ ತೋಟಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬಲ್ಲಾಡಿ, ಕಾಂತಾರಬೈಲು, ಕಾಪೋಳಿ, ಬಮ್ಮಗುಂಡಿ, ಹೊಸಕಂಬ್ಲ ಪರಿಸರದ ಸುಮಾರು ಐದು ಎಕರೆ ಭತ್ತದ ಕೃಷಿ ಹಾಗೂ ಅಡಿಕೆ ತೋಟಗಳಿಗೆ ಹಾನಿಯಾಗಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ಬಲ್ಲಾಡಿ, ಕಾಂತಾರಬೈಲುವಿನ ಸುಮಾರು ಐದಾರು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್ ತಿಳಿಸಿದ್ದಾರೆ.

ಪ್ರವಾಹದಿಂದ ಮನೆಯ ಬೇಲಿ, ಮನೆಯೊಳಗಿನ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಸೊತ್ತುಗಳಿಗೆ ಹಾನಿಯಾಗಿವೆ. ಒಂದು ಮನೆಯ ಕೊಟ್ಟಿಗೆಗೆ ಹಾನಿ ಯಾಗಿದ್ದು, ಎರಡು ಬೈಕು ಹಾಗೂ ಒಂದು ಕಾರಿಗೆ ಹಾನಿಯಾಗಿದೆ. ಪ್ರವಾಹದಲ್ಲಿ ಹಲವು ಜಾನು ವಾರುಗಳು ಕೊಚ್ಚಿ ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಇದುವರೆಗೆ ಯಾವುದೇ ಜಾನುವಾರು ಅಥವಾ ಅದರ ಕಳೇಬರ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಥಳೀಯರಲ್ಲಿ ಆತಂಕ: ರವಿವಾರ ಮಧ್ಯಾಹ್ನ ಬಿಲ್ಲಾಡಿಯಲ್ಲಿ ಸುಮಾರು 8 ಸೆ.ಮೀ. ಮಳೆಯಾಗಿದೆ ಎಂದು ತಿಳಿದುಬಂದಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಪ್ರವಾಹದ ನೀರು ಕಪ್ಪು ಹಾಗೂ ಕೆಂಪು ಮಿಶ್ರಿತ ಬಣ್ಣದಿಂದ ಕೂಡಿದ್ದು, ನೆರೆ ಇಳಿದು ಹೋದ ಜಾಗದಲ್ಲಿ ಶೇಡಿ ಮಣ್ಣಿನ ರೀತಿಯಲ್ಲಿ ಕೆಸರು ಕಂಡುಬಂದಿದೆ. ಈ ಮಣ್ಣು ಎಲ್ಲಿಂದ ಬಂತು ಎಂಬುದು ಸ್ಥಳೀಯರ ಆತಂಕದ ಪ್ರಶ್ನೆಯಾಗಿದೆ. ಕಬ್ಬಿ ನಾಲೆ ಕೊಂಕಣಾರುಬೆಟ್ಟು ಎಂಬಲ್ಲಿ ಬೆಟ್ಟದಿಂದ ಪ್ರವಾಹದೊಂದಿಗೆ ಬೃಹತ್ ಆಕಾರದ ಕಲ್ಲುಗಳು ಕೂಡ ಬಂದು ರಸ್ತೆಗೆ ಬಿದ್ದಿತ್ತು. ಇದನ್ನು ರಾತ್ರಿ ವೇಳೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಾಸಕರು, ಅಧಿಕಾರಿಗಳ ಭೇಟಿ: ಪ್ರವಾಹ ಪೀಡಿತ ಸ್ಥಳಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಂದಾಪುರ ಉಪ ವಿಭಾಗದ ಆಯುಕ್ತ ಮಹೇಶ್ಚಂದ್ರ, ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರ್ತಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಲ್ಲಾಡಿ ಹೊಳೆಯ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗದಂತೆ ತಡೆ ಗೋಡೆ ನಿರ್ಮಿಸಬೇಕು. ಅಲ್ಲದೆ ಇಲ್ಲಿರುವ ಕಿರು ಸೇತುವೆಗಳಿಗೆ ಅಗತ್ಯವಾಗಿ ತಡೆಗೋಡೆಗಳನ್ನು ಕೂಡಲೇ ನಿರ್ಮಿಸಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News