ಕುಂದಾಪುರ: ದಸಂಸ ಅಂಬೇಡ್ಕರ್ ವಾದದಿಂದ ‘ಭೀಮೋತ್ಸವ-2025’

ಕುಂದಾಪುರ, ಎ.14: ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶ ಗಳನ್ನು ಪ್ರತಿಯೊಬ್ಬರೂ ಬೆಳೆಸಿ ಕೊಳ್ಳಬೇಕು. ಶಾಂತಿ, ಸೌಹಾರ್ದತೆ, ಸಹೋದರತೆಯನ್ನು ಮೈಗೂಡಿಸಿಕೊಂಡು ಸಂಘಟಿತ ಹೋರಾ ಟದ ಮೂಲಕ ಜಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನೆ ಅಂಬೇಡ್ಕರ್ ಹಾಕಿಕೊಟ್ಟ ಹೆಜ್ಜೆಯಲ್ಲಿ ಸಾಗಿ ನಿರಂತರವಾಗಿ ಸಕ್ರೀಯವಾಗಿದ್ದುಕೊಂಡು ಸರಕಾರ ಹಾಗೂ ಜನಪ್ರತಿನಿಧಿ ಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್‌ರ 134ನೇ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಲಯನ್ಸ್ ಸ್ಕ್ವೇರ್‌ನಲ್ಲಿ ನಡೆದ ‘ಭೀಮೋತ್ಸವ-2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರ್ನಾಟಕ ದಸಂಸ ಅಂಬೇಡ್ಕರ್‌ವಾದ ಇದರ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಪ್ರಧಾನ ಭಾಷಣ ಮಾಡಿ, ಶೋಷಿತ ಸಮುದಾಯ ನೆಮ್ಮದಿಯ ಬದುಕು ಸಾಗಿಸಲು, ಮಹಿಳೆಯರು ತಮ್ಮ ಹಕ್ಕು ಪಡೆಯಲು ಶತಮಾನಗಳ ಹಿಂದೆ ನೂರಾರು ದಾರ್ಶನಿಕರು ಕಾಲಕಾಲಕ್ಕೆ ಅಗತ್ಯ ಹೋರಾಟ ನಡೆಸಿ ಸಮಾಜ ತಿದ್ದುವ ಕೆಲಸ ಮಾಡಿದ್ದರಿಂದ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಯಿತು. ಅವರ ಕೊಡುಗೆಗಳನ್ನು ಮರೆಯಬಾರದು ಎಂದರು.
ಜ್ಞಾನಕ್ಕೆ ಪ್ರತಿ ಹೆಸರಾಗಿರುವ ಅಂಬೇಡ್ಕರ್ ಪ್ರತಿಭಾನ್ವಿತ ಮಹಾಶಿಖರ. ಅವರೊಬ್ಬ ಅಪ್ರತಿಮ ದೇಶಭಕ್ತ. ಆದರೆ ಇಂದು ಸಮಾನತೆ, ಪ್ರಜಾಪ್ರಭುತ್ವ ವಿರೋಧಿಸುವ ಮನಸ್ಸುಗಳು ಅಂಬೇಡ್ಕರ್‌ರನ್ನು ಒಪ್ಪದೆ ಟೀಕೆ ಮಾಡುತ್ತಿವೆ. ಆದರೆ ನಾವುಗಳು ಸಂಘಟಿತರಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಮೂಲಕ ಟೀಕಾಕಾರರಿಗೆ ಅಂಬೇಡ್ಕರ್ ನಿಜದರ್ಶನ ಮಾಡಿಸಬೇಕು. ಸಂವಿಧಾನ ಶಿಲ್ಪಿ ಎನಿಸಿಕೊಂಡ ಅವರ ಚಿಂತನೆಗಳು ಯುವ ಪೀಳಿಗೆಗೆ ತಲುಪಬೇಕು ಎಂದರು.
ದಸಂಸ ಜಿಲ್ಲಾ ಸಮಿತಿ ಈ ವರ್ಷದಿಂದ ಅಂಬೇಡ್ಕರ್ ಹೆಸರಿನಲ್ಲಿ ಪ್ರಾರಂಭಿಸಿದ ‘ಭೀಮ ಸಾರಥಿ ಪ್ರಶಸ್ತಿ’ ಯನ್ನು ಕೊರಗ ಸಮುದಾಯದ ಪರವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಶೋಕ್ ಕುಮಾರ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು.
ಕರ್ನಾಟಕ ದಸಂಸ ಅಂಬೇಡ್ಕರ್‌ವಾದ ರಾಜ್ಯ ಸಂಘಟನಾ ಸಂಚಾಲಕ ಸುಂರ್ದ ಮಾರ್ಸ್ತ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಅಶಕ್ತರಿಗೆ ನೆರವು, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ‘ಅರಿವೆ ಅಂಬೇಡ್ಕರ್’ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ, ಕುಂದಾಪುರ ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಮಾಜಿ ಪುರಸಭಾಧ್ಯಕ್ಷೆ ಕಲಾವತಿ ರವಿಶಂಕರ್, ಸಮುದಾಯ ಸಂಘಟನೆ ಕುಂದಾಪುರದ ಸದಾನಂದ ಬೈಂದೂರು, ಕರ್ನಾಟಕ ದಸಂಸ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾ ಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನೆ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ರಾಜೇಂದ್ರನಾಥ್, ಅಣ್ಣಪ್ಪ ನಕ್ರೆ, ದೇವಣ್ಣ ಹೆಬ್ರಿ, ಭಾಸ್ಕರ ನಿಟ್ಟೂರು, ಕೊರಗ ಸಂಘಟನೆ ಮುಖಂಡರಾದ ಸುಶೀಲಾ ನಾಡ, ಕುಮಾರದಾಸ್ ಹಾಲಾಡಿ, ದಸಂಸ ಸಂಘಟನೆ ವಿವಿಧ ತಾಲೂಕು ಸಂಚಾಲಕರುಗಳು, ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದಸಂಸ ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ ಸ್ವಾಗತಿಸಿದರು. ರವಿ ಬನ್ನಾಡಿ ಸಂವಿಧಾನ ಪೀಠಿಕೆ ಬೋಧಿಸಿದರು. ಸಮೀಕ್ಷಾ ಹಕ್ಲಾಡಿ ಹೋರಾಟ ಗೀತೆ ಹಾಡಿದರು. ಶಂಭು ಗುಡ್ಡಮ್ಮಾಡಿ, ಚೈತ್ರಾ ಯಡ್ತರೆ ಕಾರ್ಯಕ್ರಮ ನಿರೂಪಿಸಿ, ಸುರೇಶ್ ಹಕ್ಲಾಡಿ ವಂದಿಸಿದರು.
ದೇಶದಲ್ಲಿ ಮನುಸ್ಮತಿ ದಹಿಸಿದ ಅಂಬೇಡ್ಕರ್ ಅವರು ವಿಶ್ವದಲ್ಲೇ ಪ್ರಚಲಿತದಲ್ಲಿರುವ ಅಸಾಮಾನ್ಯ ವ್ಯಕ್ತಿ. ಅವರು ಹಾಕಿಕೊಟ್ಟ ದಾರಿಯನ್ನು ಅನುಸರಿಸಬೇಕು. ಬಾಬಾ ಸಾಹೇಬರ 134ನೇ ಜನ್ಮದಿನಾಚರಣೆ ಪ್ರಯುಕ್ತ ದಸಂಸ ಉಡುಪಿ ಜಿಲ್ಲಾ ಸಮಿತಿಯಿಂದ ನಡೆಸಲಾದ ಭೀಮೋತ್ಸವ ಯಶಸ್ವಿಯಾಗಿದೆ. ಮುಂದೆಯೂ ಭೂಮಿ ಹಕ್ಕು, ಸ್ಮಶಾನ ನಿರ್ಮಾಣದ ಹೋರಾಟ ಸಹಿತ ದಲಿತ-ದಮನಿತರ ಶ್ರೇಯೋಭಿವೃದ್ಧಿಗೆ ಸಂಘಟನೆ ಹೋರಾಟ ನಡೆಸಲಿದೆ.
- ಸುಂದರ್ ಮಾಸ್ತರ್, ಕರ್ನಾಟಕ ದಸಂಸ ಅಂಬೇಡ್ಕರ್‌ವಾದದ ರಾಜ್ಯ ಸಂಘಟನಾ ಸಂಚಾಲಕ.