ಸಿಪಿಐಎಂ 24ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

Update: 2024-12-27 12:52 GMT

ಉಡುಪಿ, ಡಿ.27: ಸಮಗ್ರ, ಸಮ್ರದ್ಧ ಸೌಹಾರ್ದ ಕರ್ನಾಟಕ್ಕಾಗಿ ಡಿ.29-31ವರೆಗೆ ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಸಿಪಿಎಂ ಪಕ್ಷದ 24ನೇ ರಾಜ್ಯ ಸಮ್ಮೇಳನದ ಪೋಸ್ಟರ್‌ನ್ನು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಉಡುಪಿ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸಮ್ಮೇಳನದ ಮೊದಲ ದಿನ ನಗರದಲ್ಲಿ ಮೆರವಣಿಗೆ, ಬಹಿರಂಗ ಸಭೆ ನಡೆಯಲಿದ್ದು ಕೇರಳದ ಮಾಜಿ ಶಿಕ್ಷಣ ಸಚಿವೆ, ಪಾಲಿಟ್ ಬ್ಯುರೋ ಸದಸ್ಯೆ ಎಂ.ಎ.ಬೇಬಿ, ರಾಘುವಲು, ಪಾಲಿಟ್ ಬ್ಯುರೋ ಸದಸ್ಯ ವಿಜಯ ರಾಘವನ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಈ ಮೂರು ವರ್ಷಗಳ ಅವಧಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಅದರ ಆಧಾರದಲ್ಲಿ ಮುಂದಿನ ಮೂರು ವರ್ಷಗಳಿಗೆ ಸಿಪಿಎಂ ಪಕ್ಷದ ರಾಜಕೀಯ ನಿಲುಮೆಗಳು, ನವ ಉದಾರವಾದಿ ನೀತಿಗಳಿಂದ ಬಾಧಿತರಾದ ಜನಸಾಮಾನ್ಯರನ್ನು ರಕ್ಷಿಸಲು ನಡೆಸಬೇಕಾದ ಹೋರಾಟಗಳ ಕುರಿತು ಪ್ರತಿನಿಧಿಗಳು ಚರ್ಚಿಸಿ ರಾಜಕೀಯ ನಿರ್ಣಯ ಗಳನ್ನು ಅಂಗೀಕರಿಸ ಲಾಗುತ್ತದೆ. ಪಕ್ಷದ 24ನೇ ಮಹಾಧಿವೇಶನ ಎ.2-6ವರೆಗೆ ತಮಿಳು ನಾಡಿನ ಮದುರೈಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಕೈಗೊಳ್ಳಬೇಕಾದ ರಾಜಕೀಯ, ಸಾಮಾಜಿಕ, ಆರ್ಥಿಕ ನಿರ್ಣಯಗಳ ಕರಡನ್ನು ಪಕ್ಷದ ಕೇಂದ್ರ ಸಮಿತಿ ಸಿದ್ದ ಪಡಿಸಿ ಪಕ್ಷದ ಶಾಖಾ ಮಟ್ಟದ ಪ್ರತಿಯೊಬ್ಬ ಸದಸ್ಯರಿಗೂ ಕಳುಹಿಸಿ ಅವರ ಅಭಿಪ್ರಾಯ, ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ. ಈ ಎರಡೂ ಕರಡನ್ನೂ ಮಹಾ ಧಿವೇಶನದಲ್ಲಿ ಮಂಡಿಸಿ ಚರ್ಚಿಸಿ ಅಂಗೀಕರಿಸಲಾಗುತ್ತದೆ. ಅಲ್ಲದೇ ಪ್ರಸ್ತುತ ದೇಶದ ಕಾರ್ಪೋರೇಟ್ -ಹಿಂದುತ್ವ ಕೂಟ ಹಾಗೂ ಸರ್ವಾಧಿಕಾರಿ ಮತ್ತು ವಿಭಜಕ ರಾಜಕೀಯ ನೀತಿ ಗಳನ್ನು ಸೋಲಿಸಿ ಜನತೆಯ ಹಿತ ಕಾಪಾಡಲು ಸಿಪಿಎಂ ಮುಂದಿನ ಹೋರಾಟಗಳನ್ನು ರೂಪಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ನರಸಿಂಹ, ಚಂದ್ರಶೇಖರ ವಿ., ನಾಗರತ್ನ ನಾಡ, ರಾಜೀವ ಪಡುಕೋಣೆ, ಶೀಲಾವತಿ, ಫಿಲಿಪ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News