ವಿಶ್ವಪ್ರಭಾ ಪುರಸ್ಕಾರಕ್ಕೆ ನವೀನ್ ಡಿ.ಪಡೀಲ್ ಆಯ್ಕೆ
ಉಡುಪಿ, ಡಿ.27: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪ್ರಭಾವತಿ ಹಾಗೂ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ-2025ಕ್ಕೆ ರಂಗಭೂಮಿ ಕಲಾವಿದ ನವೀನ್ ಡಿ.ಪಡೀಲ್ ಆಯ್ಕೆ ಯಾಗಿದ್ದಾರೆ ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪುರಸ್ಕಾರವು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಫೆಬ್ರವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ನವೀನ್ ಡಿ ಪಡೀಲ್ ಅವರು ರಂಗಭೂಮಿ, ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ವಿಘ್ನೇಶರ ಅಡಿಗ, ಸಂಚಾಲಕ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.