ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ.ಅವ್ಯವಹಾರ: 25 ದಿನಗಳನ್ನು ಪೂರ್ಣಗೊಳಿಸಿದ ರೈತ ಸಂಘದ ಧರಣಿ

Update: 2025-03-18 21:41 IST
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ.ಅವ್ಯವಹಾರ: 25 ದಿನಗಳನ್ನು ಪೂರ್ಣಗೊಳಿಸಿದ ರೈತ ಸಂಘದ ಧರಣಿ
  • whatsapp icon

ಬ್ರಹ್ಮಾವರ, ಮಾ.10: ಕರ್ನಾಟಕ ಕರಾವಳಿಯ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಬಳಿ ನಡೆದಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು 25ನೇ ದಿನವನ್ನು ಪೂರ್ಣಗೊಳಿಸಿತು.

2021-22ನೇ ಸಾಲಿನಲ್ಲಿ ಕಾರ್ಖಾನೆಯ ಗುಜರಿ ಮಾರಾಟದ ಹೆಸರಿನಲ್ಲಿ ನಡೆದಿದೆ ಎನ್ನಲಾದ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಹಾಗೂ ಹಗರಣದ ತನಿಖೆಯ ಪ್ರತಿ ಹಂತದಲ್ಲೂ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮಾಜಿ ಶಾಸಕ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಫೆ.22ರಿಂದ ಅಹೋರಾತ್ರಿ ಧರಣಿ ನಡೆಸುತ್ತಿವೆ.

ಇಂದಿನ ಧರಣಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ಶಾಖೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಕುಂದಾಪುರ ಸಮಿತಿಯ ಸಂಚಾಲಕರಾದ ಸಂಪತ್‌ಕುಮಾರ್ ಶೆಟ್ಟಿ ಕಾವ್ರಾಡಿ, ನಿರ್ದೇಶಕ ರಾದ ಚಿತ್ತರಂಜನ್ ಹೆಗ್ಡೆ, ಅಂಪಾರು ಕಿರಣ್ ಹೆಗ್ಡೆ, ಸುಧಾಕರ ಶೆಟ್ಟಿ, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ರೇವತಿ ಶೆಟ್ಟಿ, ವಾಣಿ ಮೊಳಹಳ್ಳಿ, ಸಂಪಿಗೇಡಿ ಸಂಜೀವ ಶೆಟ್ಟಿ, ರಮೇಶ ಶೆಟ್ಟಿ ಗುಲ್ವಾಡಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಾಪ್‌ಚಂದ್ರ ಶೆಟ್ಟಿ ಅವರೊಂದಿಗೆ ರೈತ ಸಂಘದ ಪ್ರಮುಖರಾದ ಅಶೋಕ್ ಶೆಟ್ಟಿ ಚೊರಾಡಿ, ಬಿ.ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಪ್ರದೀಪ್ ಬಲ್ಲಾಳ್ ಶಿರಿಯಾರ ಮುಂತಾದವರೂ ಧರಣಿಯಲ್ಲಿ ಉಪಸ್ಥಿತರಿದ್ದರು.

ಈ ನಡುವೆ ಪೊಲೀಸ್ ಇಲಾಖೆ ನೀಡಿದ ವರದಿಯಲ್ಲಿ ಕೇವಲ ಒಬ್ಬ ಸಹಕಾರಿ ಇಲಾಖೆ ಹಿರಿಯ ಅಧಿಕಾರಿಯ ಹೆಸರನ್ನು ಮಾತ್ರ ಉಲ್ಲೇಖಿ ಸಿದ್ದನ್ನು ಧರಣಿನಿರತರ ಬೇಡಿಕೆಯಂತೆ ಸರಿಪಡಿಸಿ ಇಬ್ಬರು ಅಧಿಕಾರಿಗಳ ಹೆಸರುಗಳನ್ನು ಸೇರಿಸಲಾಗಿದೆ. ಸರಕಾರಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೇರಿದಂತೆ ಹಗರಣದಲ್ಲಿ ಶಾಮೀಲಾಗಿರುವ ಎಲ್ಲರ ಬಗ್ಗೆ ತನಿಖೆ ನಡೆಸಲು ಹೊಸದಾಗಿ ಪ್ರಾಸಿಕ್ಯುಷನ್‌ನ ಅನುಮತಿಯನ್ನು ಕೇಳಲಾಗಿದೆ ಎಂದು ರೈತರ ಸಂಘದ ಮೂಲವೊಂದು ತಿಳಿಸಿದ್ದು, ಇದಕ್ಕೆ ಆದಷ್ಟು ಬೇಗ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News