ಮಣಿಪಾಲ ಟ್ಯಾಪ್ಮಿಯ 39ನೇ ಪದವಿ ಪ್ರದಾನ ಸಮಾರಂಭ

Update: 2025-04-13 21:21 IST
ಮಣಿಪಾಲ ಟ್ಯಾಪ್ಮಿಯ 39ನೇ ಪದವಿ ಪ್ರದಾನ ಸಮಾರಂಭ
  • whatsapp icon

ಮಣಿಪಾಲ, ಎ.13: ಮಣಿಪಾಲ ಮಾಹೆಯ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್(ಟ್ಯಾಪ್ಮಿ)ನಲ್ಲಿ 32ನೇ ಘಟಿಕೋತ್ಸವದ ಅಂಗವಾಗಿ 39ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಶನಿವಾರ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಆಂಧ್ರ ಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಸಚಿವ ಹಾಗೂ ಟ್ಯಾಪ್ಮಿಯ ಹಿರಿಯ ವಿದ್ಯಾರ್ಥಿ ಪಯ್ಯವುಲ ಕೇಶವ, ಅವಕಾಶಗಳನ್ನು ಪಡೆದುಕೊಳ್ಳಲು ಸಂವಹನ ಅತ್ಯಂತ ಮಹತ್ವದ್ದು. ಉತ್ತಮ ಸಂವಹನ ಕೌಶಲ್ಯ, ತಾಳ್ಮೆಯಿಂದ ಸಮಸ್ಯೆ ಬಗೆಹರಿಸುವುದನ್ನು ಮೈಗೂಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ಮುಂಬೈನ ಕ್ಲಾಸಿಕ್ ಲೆಜೆಂಡ್ಸ್‌ನ ಮುಖ್ಯ ವಹಿವಾಟು ಅಧಿಕಾರಿ ಶರದ್ ಅಗರವಾಲ್ ಮಾತನಾಡಿ, ವಿದ್ಯಾರ್ಥಿಗಳು ಅಂತ್ಯವಿಲ್ಲದ ಸಾಧ್ಯತೆಗಳ ಜಗತ್ತಿಗೆ ಕಾಲಿಡುತ್ತಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳ ಸಾಲಿಗೂ ಅವರು ಸೇರುತ್ತಿದ್ದಾರೆ. ಆದುದರಿಂದ ಮೊದಲು ನಮ್ಮಲ್ಲಿ ನಾವು ನಂಬಿಕೆ ಇಡಬೇಕು. ಕೈಯಲ್ಲಿರುವ ಅವಕಾಶವನ್ನು ಬಳಸಿಕೊಳ್ಳಬೇಕು. ಸಾಮರ್ಥ್ಯದ ಮೇಲೆ ಗಮನಹರಿಸಿ ಬೆಳವಣಿಗೆ ಸಾಧಿಸಬೇಕು ಎಂದರು.

ಐದು ವಿಭಾಗದ ಎಂಬಿಎ ಪದವಿಗಳಲ್ಲಿ ಅತ್ಯುನ್ನತ ಸ್ಥಾನ ಪಡೆದವರಿಗೆ ಚಿನ್ನದ ಪದಕ, 2.5 ಲಕ್ಷ ರೂ. ನಗದು ಮತ್ತು ಪದವಿ ಪತ್ರ ನೀಡಿ ಗೌರವಿಸಲಾಯಿತು. ಇಶಿತಾ, ದೇಸಾಯಿ ಚಿರಸ್ವಿ, ಶ್ರೀನಿಧಿ ಎಸ್., ಉಪ್ಪಾಳ ಮೀನ ಶ್ರೀಶ, ಪ್ರಣವ್ ಎಸ್. ಈ ಪ್ರಶಸ್ತಿಗೆ ಭಾಜನರಾದರು. ಟೈಟಾನ್ ಟ್ಯಾಪ್ಮಿ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿದ್ಯಾರ್ಥಿನಿ ಅಪೂರ್ವ ಅವರಿಗೆ ನೀಡಲಾಯಿತು. 2023- 25ನೇ ಸಾಲಿನ ಒಟ್ಟು 524 ವಿದ್ಯಾರ್ಥಿಗಳು ಪದವಿ ಪಡೆದರು.

ಮಾಹೆ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.)ಎಂ ಡಿ ವೆಂಕಟೇಶ್, ಮಾಹೆಯ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಸಂಸ್ಥೆಯ ಪ್ರಮುಖರು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News