ಬಜೆಯಲ್ಲಿ 4.77ಮೀ. ನೀರಿನ ಸಂಗ್ರಹ: ವಾರಾಹಿಯಿಂದ ಪ್ರಾಯೋಗಿಕ ನೀರು ಪೂರೈಕೆ

ಉಡುಪಿ, ಎ.13: ಬೇಸಿಗೆಯ ಸುಡು ಬಿಸಿಲಿನ ಪರಿಣಾಮ ಹಲವೆಡೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ ಸದ್ಯ ಉಡುಪಿ ನಗರಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಕಾರಣ ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಉತ್ತಮ ನೀರಿನ ಸಂಗ್ರಹ ಹಾಗೂ ವಾರಾಹಿ ಯೋಜನೆಯಲ್ಲಿ ಪ್ರಾಯೋಗಿಕ ನೀರು ಸರಬರಾಜು.
ಸದ್ಯ ಬಜೆ ಅಣೆಕಟ್ಟಿನಲ್ಲಿ 4.77 ಮೀಟರ್ ನೀರಿನ ಸಂಗ್ರಹ ಇದೆ. ಕಳೆದ ಬಾರಿ ಇದೇ ದಿನಕ್ಕೆ ನೀರಿನ ಸಂಗ್ರಹ 4.45ಮೀಟರ್ ಇತ್ತು. ಇದೀಗ ಶಿರೂರು ಅಣೆಕಟ್ಟನ್ನು ತೆರವುಗೊಳಿಸಿರುವುದರಿಂದ ಬಜೆಯಲ್ಲಿ ನೀರಿನ ಸಂಗ್ರಹ ಉತ್ತಮ ವಾಗಿದೆ. ಹಾಗಾಗಿ ಈ ಬಾರಿ ಬೇಸಿಗೆಯಲ್ಲಿ ಉಡುಪಿ ನಗರದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬುದು ಅಧಿಕಾರಿಗಳ ಆಶಾಭಾವನೆ.
ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಗೆ ಈಗಾಗಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಅಲ್ಲಿಂದಲೂ ನೀರು ಪೂರೈಸುವ ಕಾರ್ಯ ನಡೆಯುತ್ತಿದೆ. ವಾರಾಹಿ ನೀರು ಸರಬರಾಜಿಗೆ ಮೊದಲು ಬಜೆ ಅಣೆಕಟ್ಟಿನಿಂದ ಪ್ರತಿದಿನ 24 ಗಂಟೆಗಳ ಕಾಲ ಪಂಪಿಂಗ್ ಮಾಡಲಾಗು ತ್ತಿತ್ತು. ಆದರೆ ಈಗ 20 ಗಂಟೆಗಳ ಕಾಲ ಪಂಪಿಂಗ್ ಮೂಲಕ ನೀರು ಪೂರೈಸಲಾಗುತ್ತಿದೆ.
ಸದ್ಯ ವಾರಾಹಿಯಿಂದ ನಗರಕ್ಕೆ 25 ಎಂಎಲ್‌ಡಿ ಹಾಗೂ ಬಜೆಯಿಂದ 26 ಎಂಎಲ್‌ಡಿ ನೀರು ಪೂರೈಸ ಲಾಗುತ್ತಿದೆ. ಹಾಗಾಗಿ ಎತ್ತರ ಪ್ರದೇಶ ಸೇರಿದಂತೆ ನಗರದ ಯಾವುದೇ ಭಾಗದಲ್ಲೂ ನೀರಿನ ಸಮಸ್ಯೆ ಕಂಡುಬಂದಿಲ್ಲ. ಅದೇ ರೀತಿ ಈ ವರ್ಷದಲ್ಲಿ ರೇಷನಿಂಗ್ ನಡೆಸುವ ಅಗತ್ಯ ಕೂಡ ಬರುವುದಿಲ್ಲ. ಅದೇ ರೀತಿ ಟ್ಯಾಂಕರ್ ನೀರು ಕೂಡ ಬೇಕಾಗಿಲ್ಲ ಎನ್ನುತ್ತಾರೆ ಪೌರಾಯುಕ್ತ ಡಾ.ಉದಯ ಶೆಟ್ಟಿ.
ವಾರಾಹಿಯಿಂದ ಬರುವ ನೀರನ್ನು ಮಣಿಪಾಲದ ಜಿಎಲ್‌ಎಸ್‌ಆರ್ ಘಟಕದಲ್ಲಿ ಮತ್ತೊಮ್ಮೆ ಶುದ್ಧೀಕರಣ ಮಾಡಲಾಗುತ್ತದೆ. ಬಳಿಕ ಹೊಸದಾಗಿ ನಿರ್ಮಿಸಲಾಗಿರುವ ಏಳು ಒಎಚ್‌ಟಿಗಳಿಗೆ ನೀರು ಪೂರೈಕೆ ಯಾಗಲಿದೆ. ಸಂತೆಕಟ್ಟೆಯಲ್ಲಿ 16 ಲಕ್ಷ ಲೀಟರ್, ಕಕ್ಕುಂಜೆಯಲ್ಲಿ 10 ಲಕ್ಷ ಲೀಟರ್, ಇಂದ್ರಾಳಿಯಲ್ಲಿ 9.9 ಲಕ್ಷ ಲೀಟರ್, ಅಮ್ಮಣ್ಣಿ ರಾಮಣ್ಣ ಸಭಾಂಗಣ ಸಮೀಪ 7.5 ಲಕ್ಷ ಲೀಟರ್, ಮಂಚಿ 12.5 ಲಕ್ಷ ಲೀಟರ್, ಮಣಿಪಾಲ ಅನಂತನಗರ 16 ಲಕ್ಷ ಲೀಟರ್, ಮಣಿಪಾಲ ಜಿಎಲ್‌ಎಸ್‌ಆರ್ 7,50 ಲಕ್ಷ ಲೀಟರ್ ಸಾಮರ್ಥ್ಯದ ಶೇಖರಣಾ ಟ್ಯಾಂಕ್‌ಗಳ ನಿರ್ಮಾಣವಾಗಿದೆ.
ಪ್ರಸ್ತುತ ವಾರಾಹಿ ನೀರು ನಗರಕ್ಕೆ ಪೂರೈಕೆಯಾಗುತ್ತಿದ್ದರೂ ದಿನದ 24 ಗಂಟೆ ಸಿಗುತ್ತಿಲ್ಲ. ಕೆಲವೊಂದು ತಾಂತ್ರಿಕ ಪ್ರಕ್ರಿಯೆಗಳು ಬಾಕಿ ಇರುವ ಕಾರಣ ವಿಳಂಬವಾಗಿದೆ. ಆದರೂ ಮೇ 15ರ ಅನಂತರ ದಿನದ 24ಗಂಟೆ ನೀರು ಪೂರೈಸಲು ನಗರಸಭೆ ನಿರ್ಧರಿಸಿದೆ. ಅದಕ್ಕೂ ಮುನ್ನ ಮಣಿಪಾಲ ಭಾಗದಲ್ಲಿ ಎರಡು ರೆನ್ ಮಾಡಿ 24 ಗಂಟೆ ನೀರು ಪೂರೈಸುವ ಯೋಜನೆಯನ್ನು ನಗರಸಭೆ ಹೊಂದಿದೆ.
‘ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಮೇ ಅಂತ್ಯದವರೆಗೆ ಯಾವುದೇ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಈ ಮಧ್ಯೆ ವಾರಾಹಿ ಯಿಂದಲೂ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಎತ್ತರ ಪ್ರದೇಶ ಸೇರಿದಂತೆ ಎಲ್ಲೂ ಯಾವುದೇ ದೂರುಗಳು ಬರುತ್ತಿಲ್ಲ. ಪೈಪು ಸೋರಿಕೆ, ಮುರಿದು ಇಂತಹ ದೂರುಗಳು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಟ್ಯಾಂಕರ್ ನೀರಿನ ಅಗತ್ಯ ಕೂಡ ಬಂದಿಲ್ಲ’
-ಡಾ.ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ
ನಾಯರ್‌ಕೆರೆ ಹೂಳೆತ್ತುವ ಕಾಮಗಾರಿ

ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಉಡುಪಿ ನಗರಸಭೆ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಬ್ರಹ್ಮಗಿರಿಯ ನಾಯರ್‌ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಕೆರೆಯಲ್ಲಿ ತುಂಬಿರುವ ಹೂಳನ್ನು ತೆರವು ಗೊಳಿಸಲಾಗುತ್ತಿದೆ. ಈ ಮೂಲಕ ಜಲ ಮೂಲವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದೇ ರೀತಿ ಕೊಡ ವೂರು, ಗೋಪಾಲಪುರ, ಕಿನ್ನಿಮುಲ್ಕಿ ವಾರ್ಡ್‌ಗಳಲ್ಲಿರುವ ಕೆರೆಯನ್ನು ಕೂಡ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ 15ನೇ ಹಣಕಾಸು ಯೋಜನೆ ಮತ್ತು ನಗರಸಭೆ ಅನುದಾನವನ್ನು ಬಳಸಲಾಗುತ್ತಿದೆ ಎಂದು ಪೌರಾಯುಕ್ತ ಡಾ. ಉದಯ ಶೆಟ್ಟಿ ತಿಳಿಸಿದರು.
‘ನಾಯರ್‌ಕೆರೆ ಹೂಳೆತ್ತುವ ಕಾರ್ಯವನ್ನು ನಗರಸಭೆ ಮಾಡುತ್ತಿರುವುದು ಸ್ವಾಗಾರ್ತಹ. ಆದರೆ ಅದಕ್ಕೆ ಶಾಶ್ವತ ಪರಿಹಾರವನ್ನು ನಗರಸಭೆ ಕಂಡುಕೊಳ್ಳ ಬೇಕು. ಮತ್ತೆ 6 ತಿಂಗಳಲ್ಲಿ ಈ ಕೆರೆಯಲ್ಲಿ ಹೂಳು ತುಂಬಿರುತ್ತದೆ ಮತ್ತು ಹುಲ್ಲುಗಳನ್ನು ಬೆಳೆದಿರುತ್ತದೆ. ಆದುದರಿಂದ ಈ ಕೆರೆಯನ್ನು ಅಭಿವೃದ್ಧಿ ಪಡಿಸಲು ನಗರಸಭೆ ವಿಶೇಷ ಯೋಜನೆ ಹಾಕಬೇಕು ಎಂದು ಸಮಾಜ ಸೇವಕ ಇಕ್ಬಾಲ್ ಮನ್ನಾ ಆಗ್ರಹಿಸಿದ್ದಾರೆ.
