ಮಣಿಪಾಲ: ಡಿ.7ಕ್ಕೆ ‘ಹರ್ ಘರ್ ಸೂರ್ಯ’ ಕಾರ್ಯಾಗಾರ
ಮಣಿಪಾಲ, ಡಿ.4: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹರ್ ಘರ್ ಸೂರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಡಿ.7ರ ಶನಿವಾರ ಬೆಳಗ್ಗೆ 10:30ಕ್ಕೆ ಉಡುಪಿ ಜಿಲ್ಲಾಡಳಿತ ಕಚೇರಿಯ ಅಟಲ್ ಸಭಾಂಗಣ ದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿ ಪ್ರಕಟನೆ ತಿಳಿಸಿದೆ.
ಹರ್ ಘರ್ ಸೂರ್ಯ ಯೋಜನೆಯಲ್ಲಿ ಮಾಸಿಕ 3ಕೆವಿ ವಿದ್ಯುತ್ ಉತ್ಪಾದಿಸುವ ಸೌರ ಘಟಕ ಅಳವಡಿಕೆಯಾಗಲಿದ್ದು, ಈ ಯೋಜನೆಗೆ ರಾಷ್ಟ್ರೀಕೃತ ಬ್ಯಾಂಕುಗಳು 2 ಲಕ್ಷದ 6 ಸಾವಿರ ರೂ. ಸಾಲವನ್ನು ನೀಡಲಿವೆ. ಈ ಪೈಕಿ 78 ಸಾವಿರ ರೂ ಸಬ್ಸಿಡಿ ಆಗಿರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ಪ್ರತಿ ಕುಟುಂಬಗಳು ತಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿಕೊಂಡು ವಿದ್ಯುತ್ ವೆಚ್ಚದ ಹೊರೆಯನ್ನು ತಗ್ಗಿಸಿಕೊಳ್ಳಲು ಕೇಂದ್ರ ಸರ್ಕಾರದ ಹರ್ ಘರ್ ಸೂರ್ಯ ಯೋಜನೆ ಮಹತ್ವದ್ದಾಗಿದೆ.
ಡಿ.7ರಂದು ನಡೆಯುವ ಕಾರ್ಯಕ್ರಮದಲ್ಲಿ ನೋಂದಾಯಿತ ಸೌರ ವಿದ್ಯುತ್ ಸಂಸ್ಥೆಗಳು ಭಾಗವಹಿಸಲಿದ್ದು, ಕೇಂದ್ರ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಓ, ಗ್ರಾಮಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೌರಾಯುಕ್ತರು ಭಾಗವಹಿಸಲಿದ್ದಾರೆ.
ಅದೇ ದಿನ ಆಸಕ್ತ ಫಲಾನುಭವಿಗಳಿಂದ ಅರ್ಜಿ ಸ್ವೀಕಾರದ ಬಗ್ಗೆ ನೊಂದಾಯಿತ ಸಂಸ್ಥೆಗಳು ಮಾಹಿತಿ ನೀಡಲಿವೆ ಎಂದು ಸಂಸದರ ಕಚೇರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.