ಕಲೆ, ಕಲಾವಿದರಿಗೆ ಸ್ಫೂರ್ತಿ ತುಂಬಿ: ಡಾ.ಬಲ್ಲಾಳ್
ಉಡುಪಿ, ಡಿ.4: ನಾಟಕವೂ ಸೇರಿದಂತೆ ವಿವಿಧ ಕಲೆಗಳ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯವಾಗಿದ್ದು, ಇದರೊಂದಿಗೆ ಕಲಾವಿದರಿಗೂ ಸ್ಫೂರ್ತಿ ತುಂಬಬೇಕು ಎಂದು ಮಣಿಪಾಲದ ಮಾಹೆ ವಿವಿ ಪ್ರೊ ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.
ಉಡುಪಿ ರಂಗಭೂಮಿ ಸಂಸ್ಥೆಯ ವತಿಯಿಂದ ಇಂದಿನಿಂದ ಪ್ರಾರಂಭಗೊಂಡಿರುವ 45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಲವು ಟೇಕ್‌ಗಳಿರುವ ಸಿನಿಮಾಕ್ಕಿಂತ, ರಂಗದ ಮೇಲೆ ನೇರವಾಗಿ ಮಾಡುವ ನಟನೆ ಕಷ್ಟಕರ. ಹೀಗಾಗಿ ರಂಗಭೂಮಿ ಕಲಾವಿದರು ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ ಎಂದರು.
ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಭಾಸ್ಕರ ರಾವ್, ಎನ್. ರಾಜಗೋಪಾಲ ಬಲ್ಲಾಳ್, ಮಲ್ಪೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ.ಬಂಗೇರ, ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಉಪಸ್ಥಿತರಿದ್ದರು.
ಗೀತಮ್ ಗಿರೀಶ್ ತಂತ್ರಿ ಪ್ರಾರ್ಥಿಸಿದರು. ಶ್ರೀಪಾದ ಹೆಗಡೆ ಸ್ವಾಗತಿಸಿದರು. ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ತೀರ್ಪುಗಾರರನ್ನು ಪರಿಚಯಿಸಿದರು. ವಿವೇಕಾನಂದ ಎನ್. ವಂದಿಸಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಪರ್ಧೆಯ ಮೊದಲ ದಿನ ಬೆಂಗಳೂರಿನ ಕಲ್ಪವೃಕ್ಷ ಟ್ರಸ್ಟ್‌ನಿಂದ ಭಾಷ್ ರಾಘವೇಂದ್ರ ನಿರ್ದೇಶನದಲ್ಲಿ ‘ಮಿ. ರಾವ್ ಅಸೋಸಿಯೇಟ್’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಡಿ.15ರವರೆಗೆ ಪ್ರತಿದಿನ ಸಂಜೆ 6:30ಕ್ಕೆ 12 ನಾಟಕಗಳು ಪ್ರದರ್ಶನಗೊಳ್ಳಲಿವೆ.