ಉಡುಪಿ: ಬಾಂಗ್ಲಾದೇಶದ ಹಿಂಸೆ ಖಂಡಿಸಿ ಜನಾಂದೋಲನ ಸಭೆ
ಉಡುಪಿ, ಡಿ.4: ಶ್ರೀಕೃಷ್ಣ ಗೀತೆಯಲ್ಲಿ ಹಿಂಸೆಯನ್ನು ಬೋಧಿಸಿಲ್ಲ. ಆದರೆ ಶಾಂತಿ ಮಂತ್ರ ನಮ್ಮ ದೌರ್ಬಲ್ಯವಾಗಬಾರದು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಉಡುಪಿ ಜಿಲ್ಲೆಯ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಬೃಹತ್ ಜನಾಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಶಾಂತಿಯ ಮೌಲ್ಯ ಹೆಚ್ಚಿಸುವುದಕ್ಕಾಗಿ, ಶಾಂತಿ ಭಂಗವಾದರೆ, ಹಿಂಸೆಗೆ ಪ್ರಚೋದನೆ ಕೊಟ್ಟರೆ, ಅದಕ್ಕೆ ತಕ್ಕಶಾಸ್ತಿ ಮಾಡಬೇಕೆನ್ನುವ ಕಾಲ ಸನ್ನಿಹಿತ ವಾಗಿದೆ. ಹಿಂದೂಗಳಿಗೆ ಭಾರತ ಬಿಟ್ಟು ಬೇರೆವೊಂದು ದೇಶವಿಲ್ಲ. ಹಿಂದೂಗಳ ಮೇಲೆ ಹಿಂಸೆ ನಡೆದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪುತ್ತಿಗೆ ಶ್ರೀಪಾದರು ಪ್ರಶ್ನಿಸಿದರು.
ಹಿಂದೂಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕಾಗಿದೆ. ಶಾಂತಿಗೆ ಭಂಗ ತಂದರೆ ಏನು ಮಾಡುವುದಕ್ಕೆ ಹಿಂಜರಿಯು ವುದಿಲ್ಲ ಎನ್ನುವುದನ್ನು ತೋರಿಸ ಬೇಕಾಗಿದೆ. ಹಿಂದೂಗಳ ಮೇಲೆ ಬಹುಮುಖ ಆಕ್ರಮಣಗಳು ನಡೆಯುತ್ತಿವೆ. ರಾಜ್ಯದಲ್ಲಿ ವಕ್ಫ್‌ಬೋರ್ಡ್ ಹೆಸರಿನಲ್ಲಿ ಭೂಮಿಯನ್ನು ಅಪಹರಿಸುವ ಕುತಂತ್ರ ನಡೆಯುತ್ತಿದೆ. ನಮ್ಮ ಆಸ್ತಿಗೂ ಭದ್ರತೆ ಇಲ್ಲವಾಗಿದೆ ಎಂದರು.
ಶ್ರೀಮತ್ ಜಗದ್ಗುರು ಆನೆಗುಂದಿ ಸಂಸ್ಥಾನದ ಸರಸ್ವತೀ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಹಿಂದೂಗಳು ಎಚ್ಚೆತ್ತುಕೊಳ್ಳದೇ ಹೋದರೆ ಭಾರತವೂ ಬಾಂಗ್ಲಾ ದೇಶವಾಗುವುದಕ್ಕೆ ಹೆಚ್ಚು ದಿನ ಬೇಕಿಲ್ಲ. ಪಕ್ಷ, ಜಾತಿ ರಹಿತವಾಗಿ ಸಮಸ್ತ ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕಾಗಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುವ ತನಕವೂ ವ್ಯಾಪಾರ ವಹಿವಾಟು ನಿಲ್ಲಿಸುವ ನಿರ್ಧಾರಕ್ಕೆ ಸರಕಾರಗಳು ಬರಬೇಕು ಎಂದು ಆಗ್ರಹಿಸಿದರು.
ಕನಿಷ್ಠ ನಾಲ್ಕು ಮಕ್ಕಳು ಇರಲಿ: ಹಿಂದೂಗಳು ಜನಸಂಖ್ಯೆ ಇಳಿಯುವುದಕ್ಕೆ ಬಿಡಬಾರದು. ನಮ್ಮ ಸಂಖ್ಯೆ ಇಳಿಮುಖ ವಾದರೆ ಅನ್ಯರು ನಮ್ಮ ಮೇಲೆ ದೌರ್ಜನ್ಯಕ್ಕೆ ಮುಂದಾಗುತ್ತಾರೆ. ಹೀಗಾಗಿ ಮನೆ, ಸಮಾಜ, ದೇಶ ಹಾಗೂ ಧರ್ಮಕ್ಕಾಗಿ ತಲಾ ಒಂದೊಂದು ಮಕ್ಕಳನ್ನು ಮೀಸಲಿಡುವಂತೆ ನೋಡಿ ಕೊಳ್ಳಲು ಪ್ರತಿಯೊಂದು ಕುಟುಂಬವೂ ನಾಲ್ಕು ಮಕ್ಕಳನ್ನು ಹೊಂದಬೇಕು. ಈ ಬಗ್ಗೆ ಪ್ರತಿ ಮನೆಯಲ್ಲೂ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಕಾಳಹಸ್ತೇಂದ್ರ ಸರಸ್ವತಿಶ್ರೀ ಕರೆ ಕೊಟ್ಟರು.
ಮಾತಾ ಅಮೃತಾನಂದ ಮಯಿ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್ ಮಾತನಾಡಿದರು. ಇಸ್ಕಾನ್‌ನ ಉಡುಪಿ ಅಧ್ಯಕ್ಷ ಗೋವಿಂದದಾಸ್, ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಗುರುಸ್ವಾಮಿ ಗೋಪಾಲ ಉಪಸ್ಥಿತರಿದ್ದರು.
ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಮಂಗಳೂರು ವಿಭಾಗ ಸಾಮರಸ್ಯ ವೇದಿಕೆಯ ರವೀಂದ್ರ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿ ಪತ್ರವನ್ನು ಶ್ರೀನಿಧಿ ಹೆಗ್ಡೆ ವಾಚಿಸಿದರು.
ಜೋಡುಕಟ್ಟೆಯಿಂದ ಜಾಥಾ
ಸಭೆಗೂ ಮುನ್ನ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾ ತನಕ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು. ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಘೋಷಣೆಗಳು ಮೊಳಗಿದವು. ಜೈಕಾರ ಮೊಳಗಿಸಿ ಸರಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲಾಯಿತು.
ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕೆ. ಉದಯ ಕುಮಾರ್ ಶೆಟ್ಟಿ ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು.