ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿ: ಡಾ.ವಿದ್ಯಾಕುಮಾರಿ
ಉಡುಪಿ, ಡಿ.4: ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ನೀಡುವ ಸಾರ್ವತ್ರಿಕ ಲಸಿಕೆಗಳನ್ನು ತಪ್ಪದೇ ಹಾಕಿಸಲು ತಾಯಂದಿರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ. ಅವರು ತಮ್ಮ ಮಕ್ಕಳಿಗೆ ಎಲ್ಲಾ ನಿಗದಿತ ಲಸಿಕೆಗಳನ್ನು ತಪ್ಪದೇ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಾಯಿ ಮರಣ ತನಿಖಾ ಸಮಿತಿ ಸಭೆ, ಜಿಲ್ಲಾ ಲಸಿಕಾ ಕಾರ್ಯಪಡೆ ಸಮಿತಿ ಸಭೆ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ನಿಗದಿತ ಲಸಿಕೆ ನೀಡುವ ಪ್ರಮಾಣ ತೀರಾ ಕಡಿಮೆ ಇದೆ. 5 ವರ್ಷದವರೆಗಿನ ಮಕ್ಕಳಿಗೆ ಶೇ.87.24ರಷ್ಟು, 10 ವರ್ಷದ ವರೆಗಿನ ಮಕ್ಕಳಿಗೆ ಶೇ. 62.16ರಷ್ಟು ಹಾಗೂ 16 ವರ್ಷದವರೆಗಿನ ಮಕ್ಕಳಿಗೆ ಶೇ.55.43 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಇದು ತೀರಾ ಕಡಿಮೆ ಪ್ರಮಾಣ ಆಗಿದ್ದು, ಇದರಲ್ಲಿ ಪ್ರತಿಶತಃ ನೂರರಷ್ಟು ಸಾಧನೆ ಆಗಬೇಕಾಗಿದೆ ಎಂದವರು ಹೇಳಿದರು.
ಗರ್ಭಿಣಿ ಮಹಿಳೆಯರಿಗೆ ಆರಂಭದಲ್ಲಿಯೇ ತಾಯಿಕಾರ್ಡ್ನ್ನು ನೀಡುವುದ ರೊಂದಿಗೆ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸಬೇಕು. ಜೊತೆಗೆ ಪೌಷ್ಠಿಕ ಆಹಾರಗಳ ಸೇವನೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಅವರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ತಾಯಿ ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಎಲ್ಲಾ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸ ಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಇವುಗಳ ಜೊತೆಗೆ ತಮ್ಮ ಮಗುವಿನ ಆರೈಕೆ ಕೈಗೊಳ್ಳುವ ಕುರಿತು ಮಾಹಿತಿಗಳನ್ನು ಒದಗಿಸಬೇಕು ಎಂದರು.
ಬಾಲ ಸುರಕ್ಷತಾ ಕಾರ್ಯಕ್ರಮದಡಿ ಶಾಲೆಗಳಲ್ಲಿ ಹಾಗೂ ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಅವರ ಪೋಷಕರಿಗೆ ವಿಷಯ ತಿಳಿಸುವ ಜೊತೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು, ಸರಕಾರದ ಯೋಜನೆಗಳ ಮಾಹಿತಿಗಳನ್ನು ಅವರಿಗೆ ನೀಡಬೇಕು. ಅಲ್ಲದೇ ಅಂತಹ ಮಕ್ಕಳು ಚಿಕಿತ್ಸೆ ಪಡೆದುಕೊಂಡ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಜಂತುಹುಳು ನಿವಾರಣಾ ದಿನಾಚರಣೆ ಡಿ.9ರಂದು ನಡೆಯಲಿದೆ. ಜಿಲ್ಲೆಯ ಎಲ್ಲಾ 1ರಿಂದ 19 ವರ್ಷದ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಯನ್ನು ಅಂಗನವಾಡಿ, ಶಾಲೆ, ಕಾಲೇಜು ಹಾಗೂ ಕೈಗಾರಿಕಾ ತರಬೇತಿ ಹಾಗೂ ವೃತ್ತಿ ತರ ಬೇತಿ ಸಂಸ್ಥೆಗಳಲ್ಲಿ ನೀಡಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಂತುಹುಳು ನಿವಾರಣಾ ಉಚಿತ ಮಾತ್ರೆ ವಿತರಣೆಯನ್ನು ಯಶಸ್ವಿ ಗೊಳಿಸಲು ಆರೋಗ್ಯ ಇಲಾಖೆ ಜೊತೆಗೆ ಇತರ ಎಲ್ಲಾ ಇಲಾಖೆಗಳು ಕೈಜೋಡಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿಎಸ್ಓ ಡಾ.ನಾಗರತ್ನ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.