ಶೇ.14-17ರಷ್ಟು ಮಳೆ ಕೊರತೆ: ಕೃಷಿ ಕಾರ್ಯಕ್ಕೆ ಹಿನ್ನಡೆ
ಉಡುಪಿ, ಆ.28: ಕಾಪು, ಉಡುಪಿ, ಬ್ರಹ್ಮಾವರ ತಾಲೂಕಿನಲ್ಲಿ ಈ ಬಾರಿ ಶೇ.14ರಿಂದ 17ರಷ್ಟು ಮಳೆ ಕೊರತೆಯಿಂದಾಗಿ ಕೃಷಿ ಕಾರ್ಯಕ್ಕೆ ಬಹಳಷ್ಟು ಹಿನ್ನಡೆಯಾಗಿದೆ. ಮಳೆಯ ಕೊರತೆಯಿಂದ ಭೂಮಿಗೆ ರಸ ಗೊಬ್ಬರ ನೀಡಲು ಸಾಧ್ಯವಾ ಗುತ್ತಿಲ್ಲ. ಇದರಿಂದ ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ ಎಂದು ಉಡುಪಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಆಹಾರ ಇಲಾಖೆ ಉಪ ನಿರ್ದೇಶಕ ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡು ತ್ತಿದ್ದರು. ಮುಂಗಾರು ಮಳೆಯಿಂದಾಗಿ ಕಾಪು, ಬ್ರಹ್ಮಾವರ, ಉಡುಪಿ ವ್ಯಾಪ್ತಿಯಲ್ಲಿನ 153 ರೈತರ 53 ಹೆಕ್ಟೇರ್ ಭತ್ತ ಕೃಷಿ ಹಾನಿಯಾಗಿದೆ. ಭತ್ತ ಬೆಳೆಗೆ ನೀಡಲು ರಸಗೊಬ್ಬರ ನಮ್ಮ ಬಳಿ ತಯಾರಿ ಆಗಿದೆ ಎಂದರು.
ಉಡುಪಿ, ಬ್ರಹ್ಮಾವರ, ಕಾಪು ಭಾಗದಲ್ಲಿ ಇ-ಕೆವೈಸಿ 1.53 ಲಕ್ಷ ನೋಂದಣಿ ಮಾಡುವ ಮೂಲಕ ಶೇ.88 ಪ್ರಗತಿಯಾಗಿದೆ. ಕೆಲವು ರೈತರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇ-ಕೆವೈಸಿ ನೋಂದಣಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪಿಎಂ ಕಿಸಾನ್ ಕಂತು ಬರುವುದಿಲ್ಲ. ಆದುದರಿಂದ ನೋಂದಣಿ ಆಗದ ರೈತರು ಕಚೇರಿಗೆ ಬಂದರೆ ನೋಂದಣಿ ಮಾಡಿಸಲಾಗು ವುದು ಎಂದರು.
38ಸಾವಿರ ಫಲಾನುಭವಿಗಳು
ಮೆಸ್ಕಾಂ ಮಣಿಪಾಲ ಸಬ್‌ಸ್ಟೇಶನ್ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆ ಯಡಿ ಒಟ್ಟು 38 ಸಾವಿರ ಮಂದಿ ಫಲಾನುಭವಿ ಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಾರಿ ಮಳೆ, ಗಾಳಿಯಿಂದಾಗಿ ಮೆಸ್ಕಾಂಗೆ 38.5 ಲಕ್ಷ ರೂ. ನಷ್ಟ ಉಂಟಾ ಗಿದೆ ಎಂದು ಮೆಸ್ಕಾಂ ಎಇಇ ಕೃಷ್ಣಾ ಸಭೆಗೆ ಮಾಹಿತಿ ನೀಡಿದರು.
ವಲಯ ಅರಣ್ಯಾಧಿಕಾರಿ ಅನುಷಾ ಭಟ್ ಮಾತನಾಡಿ, ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗದಿಂದ 20 ಕಿ.ಮೀ. ನೆಡುತೋಪು ನಿರ್ಮಿಸಲಾಗಿದೆ. ನರೇಗಾ ಯೋಜನೆಯಡಿ ಕೃಷಿಕರಿಗೆ 2800 ಸಸಿಗಳನ್ನು ಉಚಿತವಾಗಿ ವಿತರಿಸ ಲಾಗಿದೆ ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಲೈಫ್ ಜಾಕೆಟ್ ವಿತರಿಸುವ ಕೆಲಸ ಪ್ರಗತಿಯಲ್ಲಿದೆ. ಜಾನುವಾರುಗಳಿಗೆ ಚರ್ಮಗಂಟು ರೋಗ, ಕಾಲು ಬಾಯಿ ರೋಗಕ್ಕೆ ಲಸಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಲೇರಿಯಾ, ಡೆಂಗ್ಯೂ ನಿಯಂತ್ರಣ
ತಾಲೂಕಿನಲ್ಲಿ ಮಲೇರಿಯ ಹಾಗೂ ಡೆಂಗ್ಯೂ ನಿಯಂತ್ರಣದಲ್ಲಿದ್ದು, ರೋಗ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್ ತಿಳಿಸಿದರು.
ಕ್ಷಯರೋಗಕ್ಕೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗಳಲ್ಲಿ 70 ಸಾವಿರ ರೂ.ನಿಂದ 1 ಲಕ್ಷವರೆಗೆ ಖರ್ಚಾಗುವ ಚಿಕಿತ್ಸೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ನೀಡಲಾಗುತ್ತದೆ. 6ರಿಂದ 12 ದಿನ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸ ಲಾಗುತ್ತದೆ ಎಂದು ಅವರು ಹೇಳಿದರು.
ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯಾನಿರ್ವಹಿಸುತ್ತಿದ್ದು, 40 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಸಮುದಾಯ ವೈದ್ಯಾಧಿಕಾರಿ, ಸಿಬಂದಿ ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
"ಉಡುಪಿ ತಾಲೂಕಿನ ಎಲ್ಲ ಅಂಗನವಾಡಿ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು. ಹಳೆಯ ಕಟ್ಟಡ, ಗೋಡೆ, ಹೆಂಚು ದುಸ್ಥಿತಿ ಯಲ್ಲಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಪರಿಶೀಲಿಸಿ ಕಟ್ಟಡ ನವೀಕರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ಮಕ್ಕಳು ಇರುವಲ್ಲಿ ಹಳೆಯ ಕಟ್ಟಡದಿಂದ ಎಲ್ಲಿಯೂ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕು"
-ರವೀಂದ್ರ, ಆಡಳಿತಾಧಿಕಾರಿ, ತಾಪಂ