ಅ.26ರಿಂದ ಪಾರಂಪರಿಕ ವೈದ್ಯರ 14ನೇ ರಾಜ್ಯ ಸಮ್ಮೇಳನ

Update: 2023-10-16 16:14 GMT

ಉಡುಪಿ, ಅ.16: ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಮತ್ತು ಶ್ರೀ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಅ.26ರಿಂದ 28ರವರೆಗೆ ಮಂಡ್ಯದ ಶ್ರೀ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ರಾಜ್ಯ ಸಮಿತಿ ಸದಸ್ಯ ಪಿ.ಜಯರಾಮ್ ರಾವ್ ಬಾರ್ಕೂರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದ್ಗುರು ಶ್ರೀಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಮ್ಮೇಳನದ ಸಾನಿಧ್ಯ ವಹಿಸಲಿರುವರು. ಪರಿಷತ್‌ನ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸಲಿರುವರು. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಉದ್ಘಾಟಿಸಲಿರು ವರು. ಕೃಷಿ ಸಚಿವ ಚಲುವರಾಯಸ್ವಾಮಿ 3000 ಪಾರಂಪರಿಕ ವೈದ್ಯರ ಮಾಹಿತಿ ಕೋಶವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

3 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ಮತ್ತು ಜ್ವರ, ಸ್ತ್ರೀರೋಗ, ಸಂಧಿವಾತ, ಚರ್ಮರೋಗ, ಪಶುವೈದ್ಯ, ಮಧುಮೇಹ ರೋಗ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಹಿರಿಯ ಅನುಭವಿ 5 ಮಂದಿ ಪಾರಂಪರಿಕ ವೈದ್ಯರಿಗೆ ‘ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ’ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರಶಸ್ತಿಯು ಪಂಚಲೋಹದ ಧನ್ವಂತರಿ ವಿಗ್ರಹ, 10,000 ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಸಮ್ಮೇಳನದಲ್ಲಿ ಹೊರರಾಜ್ಯಗಳಿಂದ 500 ಮಂದಿ ವೈದ್ಯರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 2,500 ಮಂದಿ ಸೇರಿದಂತೆ ಒಟ್ಟು 3000 ಮಂದಿ ವೈದ್ಯರು ಭಾಗವಹಿಸಲಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ತಾಲೂಕು ಅಧ್ಯಕ್ಷ, ವೈದ್ಯರಾದ ಹರೀಶ್ ಸಾಮಗ, ಶ್ರೀನಿವಾಸ್ ಪ್ರಸಾದ್ ಮಯ್ಯ, ಮುರಳೀಧರ ರಾವ್, ಗಣೇಶ್ ಭಟ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News