ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನ ಹೆಸರಿನಲ್ಲಿ 30 ಲಕ್ಷ ರೂ. ವಂಚನೆ

Update: 2023-11-02 16:30 GMT

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎಂಬುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ದಿಲ್ನಾ(45) ಎಂಬವರು ಕಳೆದ ವರ್ಷ ತನ್ನ ಕುಟುಂಬದೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದು, ಅಲ್ಲಿ ಸುಧೀರ ಕುಮಾರ ಎಂಬಾತನ ಪರಿಚಯವಾಗಿತ್ತು. ಈತ ತಾನು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎಂಬುದಾಗಿ ದಿಲ್ನಾ ಅವರನ್ನು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಕೇಳಿದ್ದನು.

ವಿದೇಶದಲ್ಲಿರುವ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್ ಅವರಿಂದ ಹಲವು ಭಾರಿ ಸುಧೀರ ಕುಮಾರ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದನು. ಅಲ್ಲದೇ ದಿಲ್ನಾ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿ ಖಾತೆಗೆ ಹಣ ಹಾಕಿಸಿಕೊಂಡಿದ್ದನು ಎಂದು ದೂರಲಾಗಿದೆ.

ದಿಲ್ನಾ ತಾಯಿ ಬಳಿ ಜಾಗದ ಖಾತೆ ಬದಲಾವಣೆ ಬಗ್ಗೆ ಕೆಲವು ಸಹಿಯನ್ನು ಹಾಕಿ ಕೊಡುವಂತೆ ಹೇಳಿ ಸಹಿ ಹಾಕಿಸಿಕೊಂಡಿ ದ್ದನು. ಆದರೆ ಸುಧೀರ ಕುಮಾರ್ ಹಣವನ್ನು ಪಡೆದು ದೇವಸ್ಥಾನದಲ್ಲಿ ಯಾವುದೇ ಪೂಜೆ ಮಾಡಿಸದೇ ಅಲ್ಲದೇ ಜಾಗದ ಖಾತೆ ಬದಲಾವಣೆಯನ್ನು ಮಾಡಿರಲಿಲ್ಲ. ಈ ಬಗ್ಗೆ ದಿಲ್ನಾ ಅನುಮಾನಗೊಂಡು ದೇವಸ್ಥಾನಕ್ಕೆ ಬಂದು ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಸುಧೀರ್ ಕುಮಾರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನು ಆಗಿರದೇ ದೇವಸ್ಥಾನಕ್ಕೆ ಯಾವುದೇ ರೀತಿಯೂ ಸಂಬಂಧ ಇಲ್ಲದ ವ್ಯಕ್ತಿ ಎಂಬುದಾಗಿ ತಿಳಿದುಬಂತು. ಈತ ದಿಲ್ನಾ ಮತ್ತು ಅವರ ಅಣ್ಣ ಅವರಿಂದ ಒಟ್ಟು 30,73,600ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿ ರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News