ಅ.28-29: ಉಡುಪಿಯಲ್ಲಿ ವಿಶ್ವ ಬಂಟರ ಕ್ರೀಡಾ, ಸಾಂಸ್ಕೃತಿಕ ಸಮ್ಮಿಲನ

Update: 2023-08-11 14:57 GMT

ಉಡುಪಿ, ಆ.11: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ವತಿಯಿಂದ ಅ.28 ಮತ್ತು 29ರಂದು ಉಡುಪಿ ಅಜ್ಜರಕಾಡು ಯಲ್ಲಿ ವಿಶ್ವ ಬಂಟರ ಸಮ್ಮಿಲನ, ಕ್ರೀಡಾ ಸಂಗಮ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ಹಮ್ಮಿಕೊ ಳ್ಳಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಅಂಬಾಗಿಲು ಅಮೃತಾ ಗಾರ್ಡನ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ಸು ಗೊಳಿಸುವ ನಿಟ್ಟಿನಲ್ಲಿ ಪೂರ್ವ ಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಜಗತ್ತಿನಾದ್ಯಂತ ಇರುವ 150 ಬಂಟರ ಸಂಘಗಳ ಪ್ರತಿನಿಧಿಗಳು ಭಾಗವಹಿಸಲಿರುವರು. ಮುಂಬೈ, ಬೆಂಗಳೂರು, ಯುಎಇ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 10-15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಕ್ರೀಡಾ ಸಂಗಮದಲ್ಲಿ ಥ್ರೋಬಾಲ್, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ವನ್ನು ಏರ್ಪಡಿಸಲಾಗುತ್ತದೆ. ಅದೇ ರೀತಿ ಸಾಂಸ್ಕೃತಿಕ ಸಂಭ್ರಮದಲ್ಲಿ ತಂಡಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ ಹಲವು ದಾನಿಗಳು ಸಂಪೂರ್ಣ ನೆರವು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಾಂಸ್ಕೃತಿಕ ಸಂಭ್ರಮದ ಸಂಚಾಲಕ ಚಂದ್ರಹಾಸ ಶೆಟ್ಟಿ, ಕ್ರೀಡಾ ಸಂಗಮ ಸಂಚಾಲಕರಾಗಿ ಗಿರೀಶ್ ಶೆಟ್ಟಿ ತೆಳ್ಳಾರ್, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

‘ಈ ಹಿಂದಿನ ಬಿಜೆಪಿ ಸರಕಾರಕ್ಕೆ ಬಂಟರ ಅಭಿವೃದ್ಧಿ ನಿಗಮ ರಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ನಂತರ ಚುನಾವಣೆ ಅವಧಿಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೂ ಬಂಟರ ಅಭಿವೃದ್ದಿ ನಿಗಮ ರಚಿಸುವುದಾಗಿ ಘೋಷಿಸಿತ್ತು, ಈ ಸಂಬಂಧ ಮತ್ತೆ ಸರಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು’

-ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News